ಸಿ ವಿ ಚಂದ್ರಶೇಖರ್ ಶಾಸಕರಾಗಿ ಆಯ್ಕೆಯಾಗುವುದು ನಿಶ್ಚಿತ -ನಿಖಿಲ್ ಕುಮಾರಸ್ವಾಮಿ

CV Chandrashekhar will definitely be elected as MLA – Nikhil Kumaraswamy
ಕೊಪ್ಪಳ: ಕೊಪ್ಪಳದಲ್ಲಿ ಕೈಗಾರಿಕೆಗಳು ಸೃಷ್ಟಿಸಿರುವ ಸಮಸ್ಯೆಗಳಿಗೆ ಕೇಂದ್ರ ಸರಕಾರವನ್ನು ದೂರುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುವುದನ್ನು ಕಾಂಗ್ರೆಸ್ ಪಕ್ಷ ಈ ಕೂಡಲೇ ನಿಲ್ಲಿಸಬೇಕೆಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಭಾನುವಾರ ಪಕ್ಷದ ರಜತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ‘ಜನರೊಂದಿಗೆ ಜನತಾದಳ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


“ರಾಜ್ಯದಲ್ಲಿ 2.85 ಲಕ್ಷ ಸರಕಾರಿ ಹುದ್ದೆಗಳು ಖಾಲಿ ಇವೆ. ದಲಿತ ಸಮುದಾಯಗಳ ಅಭಿವೃದ್ಧಿಗಾಗಿ ಮೀಸಲಿಟ್ಟ 37,0000 ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗಿದೆ. ಈ ಯೋಜನೆಗಳ ಹೆಸರಿನಲ್ಲಿ ಮಹಿಳೆಯರಿಗೆ ಮತ್ತು ಯುವಕರಿಗೆ ಮೋಸ ಮಾಡಲಾಗುತ್ತಿದೆ. ಪ್ರತಿ ವರ್ಷ ಒಂದು ಲಕ್ಷ ಕೋಟಿ ರೂಪಾಯಿಗಳನ್ನು ಸಾಲ ಮಾಡುತ್ತಿದೆ.
ಕಳೆದ 25 ವರ್ಷಗಳಲ್ಲಿ ನಮ್ಮ ಪಕ್ಷದಿಂದ ಆಯ್ಕೆಯಾಗಿ ಪಕ್ಷ ಬಿಟ್ಟು ಹೋದ ಶಾಸಕರ ಸಂಖ್ಯೆ 54. ನಾಯಕರು ಪಕ್ಷ ಬಿಟ್ಟರೂ ಕಾರ್ಯಕರ್ತರು ಪಕ್ಷ ಬಿಟ್ಟಿಲ್ಲ. ಈಗಾಗಲೇ 61 ವಿಧಾನಸಭಾ ಕ್ಷೇತ್ರಗಳಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ರಜತ ಮಹೋತ್ಸವದ ಅಂಗವಾಗಿ ಎರಡೂ ಬೃಹತ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿನ ಪಕ್ಷದ ಸಾಧನೆ ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಕನ್ನು ನಿರ್ಧರಿಸುತ್ತದೆ. ಮುಂದಿನ ಚುನಾವಣೆಯಲ್ಲಿ ಕೊಪ್ಪಳದಲ್ಲಿ ಸಿ ವಿ ಚಂದ್ರಶೇಖರ್ ಶಾಸಕರಾಗಿ ಆಯ್ಕೆಯಾಗುವುದು ನಿಶ್ಚಿತ ಎಂದು ಹೇಳಿದರು.
“ಮುಖ್ಯಮಂತ್ರಿ ಆಗಿದ್ದಾಗ ಕುಮಾರಸ್ವಾಮಿಯವರು 27, 000 ಕೋಟಿ ರೂಪಾಯಿ ಬೆಳೆ ಸಾಲ ಮನ್ನಾ ಮಾಡಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ಒದಗಿಸಿದ್ದು, ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಿದ್ದು ಜೆಡಿಎಸ್ ಸರಕಾರ. ಜೆಡಿಎಸ್ ಪಕ್ಷ ಅಲ್ಪಸಂಖ್ಯಾತ ಸಮುದಾಯದ ಹಿತ ಕಾಪಾಡಿದೆ. ಆದರೆ ಆ ಸಮುದಾಯವನ್ನು ಕಾಂಗ್ರೆಸ್ ಪಕ್ಷ ವೋಟ್ ಬ್ಯಾಂಕ್ ಆಗಿ ಪರಿವರ್ತಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬದುಕಿದೆಯೋ ಅಥವಾ ಸತ್ತಿದೆಯೋ ಎಂಬುದು ಯಾರಿಗೂ ಗೊತ್ತಿಲ್ಲ. ಕಾರ್ಖಾನೆಗಳಿಗೆ ಶರಣಾಗಿರುವ ಕೊಪ್ಪಳದ ಶಾಸಕ ಮತ್ತು ಸಂಸದರನ್ನು ಮನೆಗೆ ಕಳುಹಿಸಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಒಕ್ಕೂಟ ಕರ್ನಾಟಕದಲ್ಲಿ 150ಕ್ಕೂ ಹೆಚ್ಚು ಸೀಟ್ ಗೆಲ್ಲುವುದು ಶತಸಿದ್ಧಃ,” ಎಂದು ಮಾಜಿ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.
ಕೊಪ್ಪಳದಲ್ಲಿ ಪಕ್ಷ ಬಲಿಷ್ಠವಾಗಿದೆ. ಅಲ್ಪಸಂಖ್ಯಾತ ವರ್ಗದವರು ಜೆಡಿಎಸ್ ಪಕ್ಷವನ್ನು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸುತ್ತಿದ್ದಾರೆ. ಬೂತ್ ಮಟ್ಟದಲ್ಲಿ ನಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಿದೆ. ಗ್ಯಾರೆಂಟಿ ಯೋಜನೆಗಳಿಗಾಗಿ ಬೆಲೆ ಏರಿಕೆಯಲ್ಲಿ ತೊಡಗಿರುವ ಕಾಂಗ್ರೆಸ್ ಸರಕಾರ ನಮಗೆ ಬೇಡ ಎಂದು ಜಿಲ್ಲಾಧ್ಯಕ್ಷ ಸುರೇಶ್ ಭೂಮರೆಡ್ಡಿ ಹೇಳಿದರು.
“ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 60,000 ಸದಸ್ಯತ್ವ ಗುರಿ ಹಮ್ಮಿಕೊಳ್ಳಲಾಗಿದೆ. ಪ್ರಮುಖ ನಾಯಕರು ಕಾರ್ಖಾನೆಗಳಿಂದ ಸಮಸ್ಯೆಗೀಡಾಗಿರುವ ಹಳ್ಳಿಗಳಿಗೆ ಶೀಘ್ರವೇ ಭೇಟಿ ನೀಡಲಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರು ಕೊಪ್ಪಳದ ಸಮಸ್ಯೆಯನ್ನು ತಮ್ಮ ತಂದೆಯವರ ಗಮನಕ್ಕೆ ಮತ್ತೊಮ್ಮೆ ತರಬೇಕು,” ಎಂದು ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಹೇಳಿದರು.
ಹಗರಿಬೊಮ್ಮನಹಳ್ಳಿ ಶಾಸಕ ನೀಮಿರಾಜ್ ನಾಯಕ್ ಹಾಗೂ ರೈತರ ಸಾಲ ಮನ್ನಾ ಯೋಜನೆಯ ಫಲಾನುಭವಿ ರೈತ ವಸಂತ್ ಕರಿಗಾರ್ ಮಾತನಾಡಿದರು.
ಅಲ್ಪಸಂಖ್ಯಾತ ಸಮುದಾಯದ ನೂರಾರು ಯುವಕರು ನಿಖಿಲ್ ಕುಮಾರಸ್ವಾಮಿ ಅವರಿಂದ ಧ್ವಜ ಪಡೆಯುವ ಮೂಲಕ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.
ತಾಲೂಕ ಜೆಡಿಎಸ್ ಗೌರವಾಧ್ಯಕ್ಷ ಈಶಪ್ಪ ಮಾದಿನೂರು, ರಾಜ್ಯ ಘಟಕದ ಕಾರ್ಯಾಧ್ಯಕ್ಷ ರಾಜು ನಾಯಕ, ಜಿಲ್ಲಾ ವಕ್ತಾರ ಮಲ್ಲನಗೌಡ ಕೋನಗೌಡ್ರ, ಜಿಲ್ಲಾ ಉಪಾಧ್ಯಕ್ಷ ಮೂರ್ತೆಪ್ಪ ಗಿಣಿಗೇರಿ, ಜಿಲ್ಲಾ ಸಂಸ್ಕೃತಿ ವಿಭಾಗದ ಅಧ್ಯಕ್ಷ ಮಂಜುನಾಥ ಸೊರಟೂರ್, ಜಿಲ್ಲಾ ಎಸ್ ಟಿ ಘಟಕ ಅಧ್ಯಕ್ಷ
ರಮೇಶ ಡಂಬ್ರಳ್ಳಿ, ಜಿಲ್ಲಾ ಎಸ್ ಸಿ ಘಟಕ ಅಧ್ಯಕ್ಷ ಶಾಂತಪ್ಪ ದೊಡ್ಡಮನಿ, ಯಲಬುರ್ಗ ತಾಲೂಕು ಜೆಡಿಎಸ್ ಅಧ್ಯಕ್ಷ ಬಸವರಾಜ ಗುಳಗುಳಿ, ಕುಷ್ಟಗಿ ತಾಲೂಕು ಅಧ್ಯಕ್ಷರ ಶರಣಪ್ಪ ಕುಂಬಾರ, ಕೊಪ್ಪಳ ತಾಲೂಕು ಅಧ್ಯಕ್ಷ ವಿರೇಶಗೌಡ್ರ ದಳಪತಿ, ಕೂಕನೂರು ತಾಲೂಕು ಅಧ್ಯಕ್ಷ
ಕೆಂಚಪ್ಪ ಹಳ್ಳಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.