ನೈಜ ಘಟನೆ ಆಧಾರಿತ ಕಾದಂಬರಿ ‘ಸಂಬಳಿಗೋಲು’ ಫೆ 16ಕ್ಕೆ ಬಿಡುಗಡೆ

ಹಿರಿಯ ಪತ್ರಕರ್ತ, ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಅವರು ಬರೆದಿರುವ ಮುನ್ನುಡಿಯ ಆಯ್ದ ಭಾಗ
ನೈಜ ಘಟನೆಗಳು ಎಳೆಯ ಮನಸ್ಸಿನ ಮೇಲೆ ಭಾರೀ ಪರಿಣಾಮ ಬೀರಬಲ್ಲವು. ಅವು ಆಗಾಗ ಮುಗ್ಥ ಮನವನ್ನು ಅಲುಗಾಡಿಸಬಲ್ಲವು. ಅಷ್ಟೆ ಅಲ್ಲ, ಸದಾ ಕಾಲ ಕಾಡುತ್ತಾ ಆಲೋಚನೆಯ ದಿಕ್ಕನ್ನು ಬದಲಿಸಬಲ್ಲವು. ಅದರ ಜೊತೆಗೆ ಮನುಷ್ಯನನ್ನು ಪ್ರಭಾವಿಸುತ್ತಾ ಹೊಸದೊಂದು ನಿರ್ಧಾರಕ್ಕೆ ಕೊಂಡೊಯ್ಯಬಲ್ಲವು ಎಂಬುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ ಸಂಬಳಿಗೋಲು ಕಥಾವಸ್ತು. ಇದು ವಾಸ್ತವ ಸತ್ಯ.
ಎಡಪಂಥೀಯ ಚಿಂತನೆಯ ಹೋರಾಟಗಾರ, ಪತ್ರಕರ್ತ ಮಿತ್ರ ಗುರುರಾಜ ದೇಸಾಯಿಯವರು ಇಂದು ಅದರ ಪ್ರಭಾವಳಿಯಿಂದ ಲೇಖಕರಾಗಿಯೂ ರೂಪುಗೊಂಡಿರುವುದಕ್ಕೆ ಉದಾಹರಣೆಯಾಗಿದ್ದಾರೆ.
ಬಾಲಕರಾಗಿದ್ದಾಗ ಸ್ವಂತ ಚಿಕ್ಕಪ್ಪ ಜಮೀನ್ದಾರಿಕೆ, ಶೋಷಕ ಮನಸ್ಥಿತಿಯಿಂದ ರೂಢಿಸಿಕೊಂಡಿದ್ದ ದಬ್ಬಾಳಿಕೆ-ಅಟ್ಟಹಾಸಗಳನ್ನು ತನ್ನಲ್ಲಿ ದುಡಿಯುತ್ತಿದ್ದ ಅಮಾಯಕ ಶ್ರಮಜೀವಿಗಳು ಮಾಡಿದ ಸಣ್ಣ ಕಳವು ಪ್ರಸಂಗವನ್ನು ಮುಂದಿಟ್ಟುಕೊಂಡು ಅವರ ಮೇಲೆ ನಡೆಸಿದ ಕ್ರೌರ್ಯ ಮತ್ತು ಹತ್ಯಾಕಾಂಡಗಳು ಹಲವಾರು ವರ್ಷ ಕಾಲವೂ ಮರೆಯಲಾಗದೆ, ಅದನ್ನು ಬರವಣಿಗೆ ಮೂಲಕ ದಾಖಲಿಸುವಂತಾಗಿರುವುದನ್ನು ಕಂಡಾಗ ವಿಸ್ಮಯವಾಗದಿರದು.
ಸಂಬಳಿಗೋಲು ಹೆಸರಲ್ಲಿ ನೀಳ್ಗತೆ ಮಾಡಲು ಹೊರಟ ಗುರುರಾಜರು ಅದನ್ನು ಅನಿವಾರ್ಯವೆಂಬಂತೆ ಕಿರು ಕಾದಂಬರಿಯಾಗಿ ರೂಪಿಸಿರುವುದನ್ನು ಕಾಣಬಹುದು. ಆ ಘಟನೆ ಆ ಊರನ್ನು ಅನೇಕ ವರ್ಷ ಕಾಲ ಹೇಗೆ ಕಾಡಿಬಿಟ್ಟಿತು, ಕಾಲಾನಂತರದಲ್ಲಿ ಒಳಿತು ಭಾವದ ಕೆಲ ಹಿರಿಯರ ಪ್ರಯತ್ನದಿಂದಾಗಿ ಎಷ್ಟರಮಟ್ಟಿಗೆ ಸೌಹಾರ್ದಭಾವ ಮೂಡಿತು, ಜೊತೆಗೆ ಏನೆಲ್ಲಾ ಬದಲಾವಣೆಗೆ-ಸುಧಾರಣೆಗೆ ಅದು ಕಾರಣವಾಯಿತು ಎಂಬುದನ್ನು ಕಥನ ರೂಪದಲ್ಲಿ ಹೇಳುವ ಮೂಲಕ ಮಾದರಿಯೊಂದನ್ನು ಹಾಕಿಕೊಟ್ಟಿದ್ದಾರೆ.
ಗೆಲ್ಲಾಕೊಂದು ಜಗತ್ತೈತಿ
ಅದಕ್ಕಾಗಿ ನಮಗ ದಾರಿ ಐತಿ
ನಾವೆಲ್ಲ ಒಗ್ಗೂಡಬೇಕು
ಗುರಿಯನು ಮುಟ್ಟಬೇಕು
ಛಲವನು ಹೊಂದಬೇಕು
ಕೆಂಪು-ನೀಲಿ ಉಸಿರಾಗಬೇಕು
ಅದಕಾಗಿ ನಾವು ದುಡೀಬೇಕು
-ಎಂಬ ಕ್ರಾಂತಿಗೀತೆಯು ಅಂತ್ಯದಲ್ಲಿ ಮೊಳಗಿದೆ. ಅದರಲ್ಲಿ ಎರಡು ಸಿದ್ಧಾಂತಗಳು ಒಗ್ಗೂಡಿವೆ. ಜಗತ್ತಿನ ಮಾನವರಿಗೆ ಮಾನವೀಯತೆಯ ಬೋಧನೆ ಮಾಡಿದ, ಹೋರಾಟದ ಮಾರ್ಗ ತೋರಿಸಿದ ಮಹಾನ್ ನಾಯಕರಾದ ಕಾರ್ಲ್ಮಾರ್ಕ್ಸ್ ಮತ್ತು ಬಿ.ಆರ್. ಅಂಬೇಡ್ಕರ್‌ರಿಂದಾದ ಪ್ರೇರಣೆ-ಪ್ರಭಾವವನ್ನು ಕಥಾನಕದಲ್ಲಿ ಜೀವಾಮೃತವಾಗಿ ಬಳಸಿಕೊಂಡಿರುವುದರಿಂದ ಕೃತಿಗೆ ಮೌಲ್ಯವು ಲಭಿಸಿದೆ. ಆ ಮಹಾನುಭಾವರ ತತ್ವಗಳನ್ನು ಹೇಳಲು ಸಂಕೇತವಾಗಿರುವ ಕೆಂಪು ಮತ್ತು ನೀಲಿ ಬಾವುಟಗಳನ್ನು ಒಗ್ಗೂಡಿಸುವ ಪ್ರಯತ್ನ ಕೂಡ ಹೊಸದೊಂದು ಸಂದೇಶ ನೀಡುವ ಕ್ರಿಯೆಯಾಗಿದೆ.
ತಪಗಲೂರು ಎಂಬ ಹಳ್ಳಿಯಲ್ಲಿನ ಶೋಷಿತ ಸಮುದಾಯದ ಮಾದರ ಕೆಂಚ ಮತ್ತು ಕುರುಬರ ಬಸ್ಯ ತಾವು ದುಡಿಯುತ್ತಿದ್ದ ತೋಟದಲ್ಲಿ ಸಣ್ಣ ಕಳ್ಳತನ ಮಾಡಿದ್ದನ್ನೇ ದೊಡ್ಡ ಪ್ರತಿಷ್ಠೆಯಾಗಿ ತೆಗೆದುಕೊಂಡ ಧಣಿ ತನಗೆ ಬೆಂಬಲವಾಗಿದ್ದ ಗೌಡ-ದಳಪತಿ-ಶಾನುಭೋಗರ ಕುಮ್ಮಕ್ಕಿನಿಂದ ಮಾರಣಾಂತಿಕ ದೌರ್ಜನ್ಯ ನಡೆಸಿದ್ದಲ್ಲದೆ, ತಪ್ಪು ಒಪ್ಪಿಕೊಂಡು ದಂಡ ಕಟ್ಟಲು ಸಿದ್ಧವಾದರೂ ಒಪ್ಪದೆ ಅವರನ್ನು ದೂರದ ಠಾಣೆಗೆ ತನ್ನ ವಾಹನಕ್ಕೆ ಕಟ್ಟಿ ದರದರನೆ ಎಳೆದೊಯ್ದು ಪೋಲಿಸರಿಗೆ ಒಪ್ಪಿಸುವುದರಿಂದ ಪ್ರಾರಂಭವಾದ ಕಥನ, ಅದೇ ನಾಲ್ವರು ಶೋಷಕರು ಹನ್ನೆರಡು ವರ್ಷ ಜೈಲುವಾಸ ಅನುಭವಿಸಿ ಬಿಡುಗಡೆಯಾಗಿ ಅದೇ ಊರಿಗೆ ಅಪರಿಚಿತರಂತೆ ವಾಪಸ್ಸಾಗಲು ತನ್ನ ಬಂಡಿಯಲ್ಲಿ ನೆರವಾಗುವ ಕೆಂಚ ಆಗ ಮಾದರ ಕೆಂಚ ಆಗಿದ್ದೆ. ಈಗ ಬರಿ ಕೆಂಚ. ಊರು ಬದಲಾಗೈತ್ರಿ! ಎನ್ನುವ ಹೊಸ ಸಂದೇಶದ ಮೂಲಕ ಅಂತ್ಯಗೊಳ್ಳುತ್ತದೆ. ಅದಲ್ಲದೆ, ಊರ ಸಂಬಳಿಗೋಳದ ಮೇಲೆ ನಾವಿನ್ನು ದೌರ್ಜನ್ಯ ಮಾಡಲ್ಲ, ಜಾತಿ ತಾರತಮ್ಯ ನಡೆಸಲ್ಲ ಎಂಬ ಪ್ರಮಾಣ ವಚನವನ್ನೂ ತೆಗೆದುಕೊಳ್ಳುವ ಮಹತ್ವದ ಪ್ರಕ್ರಿಯೆ ನಡೆಯುತ್ತದೆ.
ಈ ನಡುವೆ ಪೋಲಿಸ್ ಸಾಹೇಬ ನಡೆಸುವ ಷಡ್ಯಂತ್ರ, ಶೋಷಕರನ್ನು ರಕ್ಷಿಸಲು ಹೂಡುವ ತಂತ್ರಗಾರಿಕೆ, ಪತ್ರಕರ್ತ ರಾಜಣ್ಣನ ಪ್ರಯತ್ನರಿಂದ ಸದರಿ ದೌರ್ಜನ್ಯ ಪತ್ರಿಕೆಯಲ್ಲಿ ಪ್ರಕಟವಾಗುವ, ಖುದ್ದು ಜಿಲ್ಲಾಧಿಕಾರಿ ಠಾಣೆಗೆ ಬಂದು ಪೋಲಿಸ್ ಸಾಹೇಬ ಮತ್ತು ಶೋಷಕರಿಗೆ ತೆಗೆದುಕೊಳ್ಳುವ ತರಾಟೆ, ಅಮಾಯಕರ ರಕ್ಷಣೆಗೆ ನಿಲ್ಲುವ ಪರಿಯೆಲ್ಲ ರೋಚಕವಾಗಿ ಮೂಡಿ ಬಂದಿವೆ. ಆದಾಗ್ಯೂ ದರ್ಪಿಷ್ಟರು ತಮ್ಮ ಎಂದಿನ ಪಾಳೇಗಾರಿಕೆಯ ಉಳಿವಿಗಾಗಿ ಸೆಡ್ಡು ಹೊಡೆಯುವ, ಹೋರಾಟಕ್ಕೆ ಸಂಘಟಿತರಾಗುವ ಶೋಷಿತ ಸಮುದಾಯದ ಮೇಲೆ ದೌರ್ಜನ್ಯ ನಡೆಸುವ, ದುರುಗಪ್ಪ-ಚೂರಿ ಪರ್ಸ್ಯ-ರಾಜಣ್ಣ-ಮಲ್ಯ-ದೇವ್ಯರ ಹತ್ಯಾಕಾಂಡವನ್ನೇ ನಡೆಸುವ ಕ್ರೌರ‍್ಯವು ಓದುಗರನ್ನು ಬೆಚ್ಚಿ ಬೀಳಿಸುವಂತೆ ಚಿತ್ರಿತವಾಗಿರುವುದು ರೋಮಾಂಚನಕಾರಿಯಾಗಿದೆ.
ಪತ್ರಕರ್ತ ರಾಜಣ್ಣನ ಪಾತ್ರ ಅಪೂರ್ವ ರೀತಿಯಲ್ಲಿ ಮೂಡಿ ಬಂದಿದ್ದರೂ, ಅದರ ಹೊರತಾಗಿ ಮಿಕ್ಕೆಲ್ಲವೂ, ವಾಸ್ತವ ನೆಲೆಗಟ್ಟಿನವು ಎಂದು ಹೇಳುವ ಲೇಖಕರಿಗೆ ಆ ಪಾತ್ರ ಸೃಷ್ಟಿಯಾಗದಿದ್ದರೆ ಸಂಬಳಿಗೋಳು ಸಾಧಾರಣ ಕೃತಿಯಾಗಿಬಿಡುತ್ತಿತ್ತು ಎಂದು ಹೇಳಬೇಕಾಗಿದೆ. ಅದನ್ನೆ ಲೇಖಕರ ಕ್ರಿಯಾಶೀಲತೆ ಅನ್ನಬಹುದಾಗಿದೆ. ವಾಸ್ತವದ ಜೊತೆಗೆ ಸೃಷ್ಟಿ ಕ್ರಿಯೆಯೂ ಸೇರಿಕೊಂಡಲ್ಲಿ ಮಾತ್ರವೇ ಅಪರೂಪದ ಸೃಜನಶೀಲ ಕ್ರಿಯೆ ಸಾಧ್ಯ ಎನ್ನಲಡ್ಡಿಯಿಲ್ಲ.
ಕಥನದಲ್ಲಿ ಆರಂಭಕ್ಕೇ ಇಣುಕುವ ಶ್ರೀಧರ ಎಂಬ ಬಾಲಕನೇ ಲೇಖಕ ಗುರುರಾಜ ದೇಸಾಯಿಯಾಗಿದ್ದಾರೆನ್ನಿಸುತ್ತದೆ. ಶಾಲೆಗೆ ಹೋಗುವಾಗಲೇ ಮಾದರ ನಾಗ್ಯನೊಡನೆ ಸ್ನೇಹ ಬೆಳೆಸಿದ್ದು, ಘಟಿಸುವ ದುರಂತ ಸರಮಾಲೆಗೆ ಸಾಕ್ಷಿಯಾಗುಳಿಯುವ, ಅಂತ್ಯದಲ್ಲಿ ಅದೇ ಗೆಳೆಯರು ಕೂಡಿ ಸೈಕಲಿನಲ್ಲಿ ಕೆಂಪು-ನೀಲಿ ಬಾವುಟ ಕಟ್ಟಿಕೊಂಡು ಹೊರಡುವ ದೃಶ್ಯ ಶ್ರಮ ಮತ್ತು ಕ್ರಾಂತಿಯ ಸಂಕೇತವಾಗಿ ಬೆಳಗುತ್ತದೆ.
ಮಕ್ಕಳು ಬೆಳಿತಾ ಬೆಳಿತಾ ದೊಡ್ಡವರಾಗ್ತಾರ. ಅವ್ರ ತಿಳವಳಿಕೆನೂ ದೊಡ್ಡದಾಗ್ತದ. ಶ್ರೀಯಾ (ಶ್ರೀಧರ) ಕೇಳುವ ಪ್ರಶ್ನೆಗೆ ಉತ್ರಕೊಡದವ್ರು ಊರ ಆಳಿ ಏನ ಬಂತು? ನಿಮ್ಮ ತಮ್ಮನ ಕಾಲಕ್ಕ ಎಲ್ಲಾ ನಿಂತು ಹೋಗ್ಲಿ! ಎಂದು ಪದ್ಮಾವತಿ ಪತಿ ಭೀಮರಾಮನಿಗೆ ತಾಕೀತು ಮಾಡುವ ಸಂದರ್ಭ, ಭೀಮರಾಯನ ತಮ್ಮ ಊರ ಧಣಿ ನಡೆಸುವ ಅತಿರೇಕದ ಕ್ರೌರ್ಯವನ್ನು ಪ್ರತಿಧ್ವನಿಸುತ್ತದೆ. ತಮ್ಮನನ್ನು ನಿಯಂತ್ರಿಸುವ ಶಕ್ತಿಯಿಲ್ಲದೆ ಅಸಹಾಯಕರಾಗಿದ್ದ ಆತ ಊರಲ್ಲಿ ಶೋಷಿತರ ಹತ್ಯಾಕಾಂಡವೇ ಜರುಗಿಬಿಟ್ಟಾಗ ಸ್ಫೋಟಗೊಳ್ಳುವ, ಜಿಲ್ಲಾಧಿಕಾರಿ ಎದುರೇ ಊರೆಲ್ಲ ಒಂದಾಗಿ ಬಾಳುವ ನಿರ್ಧಾರ ಕೈಗೊಳ್ಳುವ ಕ್ಷಣ ಅಪೂರ್ವವಾಗಿ ಮೂಡಿ ಬಂದಿದೆ.
ಮಿತ್ರ ಗುರುರಾಜ ದೇಸಾಯಿಯವರು ತುಂಬಾ ದಿನಗಳಿಂದ ಎದೆಯಲ್ಲಿ ಅಡಗಿಕೊಂಡು ಪೀಡಿಸುತ್ತಿದ್ದ ಘಟನೆಗೆ ಕಥನ ರೂಪ ಕೊಡುವ ಮೂಲಕ ನಿರಾಳರಾಗಿದ್ದಾರೆ. ಹಾಗೇ ಯಶಸ್ವಿ ಹೋರಾಟ ಭೂಮಿಕೆಯ ಕಥನ ಕೃತಿಯೊಂದನ್ನು ಕನ್ನಡಕ್ಕೆ ನೀಡಿದ್ದಾರೆ. ಅವರು ಹೋರಾಟಗಾರರಾಗಿಯೂ, ಲೇಖಕರಾಗಿಯೂ ಹೊರ ಹೊಮ್ಮಿರುವುದಕ್ಕೆ ಅಭಿನಂದನೆ ಹೇಳಬಯಸುತ್ತೇನೆ. ಮುಂದೆಯೂ ತಾವು ಕಂಡಿರುವ ಹಲವಾರು ಹೋರಾಟದ ಘಟನೆಗಳಿಗೆ ಕಥನ ರೂಪವನ್ನು ಕೊಡುವ ಪ್ರಯತ್ನ ಮುಂದುವರಿಸಲಿ ಎಂದು ಆಶಿಸುತ್ತೇನೆ.
-ಜಾಣಗೆರೆ ವೆಂಕಟರಾಮಯ್ಯ
Comments are closed.