ಕುಷ್ಟಗಿ ಹಿರಿಯ ಪತ್ರಕರ್ತ ಮಂಜುನಾಥ್ ಮಹಾಲಿಂಗಪೂರಗೆ ಮೀಡಿಯಾ ಕ್ಲಬ್ ‘ಗೌರವ’

Get real time updates directly on you device, subscribe now.

ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಘೋಷಣೆ

ಕುಷ್ಟಗಿ : ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿಯಿಂದ ಪ್ರತಿವರ್ಷ ಕೊಡುವ ಪ್ರಶಸ್ತಿಗೆ ಭಾಜನಾರಾದ ಕುಷ್ಟಗಿ ನಗರದ ಹಿರಿಯ ಪತ್ರಕರ್ತ ಮಂಜುನಾಥ ಮಹಲಿಂಗಪುರ ಅವರನ್ನು ಕುಷ್ಟಗಿ ಮೀಡಿಯಾ ಕ್ಲಬ್ ವತಿಯಿಂದ ಇತ್ತೀಚೆಗೆ ಗೌರವಿಸಲಾಯಿತು.

ಕುಷ್ಟಗಿ ಪಟ್ಟಣದ ಸರ್ಕ್ಯೂಟ್ ಹೌಸದಲ್ಲಿ ಮದ್ಧಾನಿ ಹಿರೇಮಠ ಪೀಠಾಧಿಪತಿ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಮೀಡಿಯಾ ಕ್ಲಬ್’ನ ಸರ್ವ ಸದಸ್ಯರು ಮಹಲಿಂಗಪುರ ಅವರಿಗೆ ಫಲಪುಷ್ಪ ನೀಡಿ ಗೌರವಿಸಿ ಅಭಿನಂದನೆಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಧಾನಸಭಾ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಮಾತನಾಡಿ, ಮಂಜುನಾಥ ಮಹಲಿಂಗಪೂರ ಅವರು ಮಿತ ಭಾಷಿಕ, ಪ್ರಾಮಾಣಿಕ ಹಾಗೂ ಸರಳ ವ್ಯಕ್ತಿಯಾಗಿದ್ದಾರೆ. ಅವರು ತಾಲೂಕಿನಲ್ಲಿ ವಸ್ತು ನಿಷ್ಠೆ ವರದಿಗಾರಿಕೆ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮೂಲಕ ಗಮನಸೆಳೆದಿದ್ದಾರೆ. ಅವರ ಬರವಣಿಗೆ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇದು ತಾಲೂಕಿನ ಮಾಧ್ಯಮ ಕ್ಷೇತ್ರಕ್ಕೆ ಸಂದ ಗೌರವ ಆಗಿದೆ. ಈ ಬಗ್ಗೆ ತಮಗಷ್ಟೇ ಅಲ್ಲದೆ ತಾಲೂಕಿನ ಜನತೆಗೆ ತುಂಬಾ ಸಂತಸ ಆಗಿದೆ. ಇವರಂಥ ಪತ್ರಕರ್ತರು ಇಲ್ಲಿ ಇನ್ನು ಹಲವರಿದ್ದು ಅವರಿಗೂ ಪ್ರಶಸ್ತಿಗಳು ಲಭಿಸಬೇಕು. ಇಲ್ಲಿನ ಮಾಧ್ಯಮ ಮಿತ್ರರು ಒಗ್ಗಟ್ಟಾಗಿ ತಮಗೆನೇ ಪ್ರಶಸ್ತಿ ಬಂದಿದೆ ಎಂಬಷ್ಟು ಖುಷಿಯಿಂದ ತಮ್ಮ ಮಿತ್ರನನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಮಾಜಿ ಶಾಸಕ ಕೆ. ಶರಣಪ್ಪ ವಕೀಲರು ಮಾತನಾಡಿ, ಪತ್ರಕರ್ತರನ್ನು ಸಂವಿಧಾನದ ನಾಲ್ಕನೇ ಅಂಗವೆಂದು ಕರೆಯಲಾಗುತ್ತದೆ. ಅವರು ಸಮಾಜದಲ್ಲಿನ ಸರಿತಪ್ಪುಗಳ ವಸ್ತುಸ್ಥಿತಿ ಬಗ್ಗೆ ತಿಳಿದು ರಾಜಕಾರಣಿಗಳ ಕಣ್ತೆರೆಸುವ ಕಾರ್ಯಮಾಡಬೇಕು ಎಂದರು.

ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ ಮಾತನಾಡಿ, ವಸ್ತುನಿಷ್ಠ ವರದಿಗಳ ಮೂಲಕ ಪತ್ರಿಕಾ ಧರ್ಮ ಕಾಪಾಡಿಕೊಂಡು ಹೊರಟಿರುವ ಇಲ್ಲಿನ ಪತ್ರಕರ್ತರು ಸುದ್ದಿಗಳ ಜೊತೆಗೆ ಹೆಚ್ಚು ಹೆಚ್ಚು ಜ್ವಲಂತ ಸಮಸ್ಯೆಗಳ ಕುರಿತು ಬರೆಯಬೇಕು. ಜನಪ್ರತಿನಿಧಿಗಳು ಇರಲಿ ಅಥವಾ ಅಧಿಕಾರಿಗಳೇ ಇರಲಿ ಅವರ ಕಾರ್ಯ ವೈಫಲ್ಯಗಳನ್ನು ಎತ್ತಿ ಹಿಡಿದು ಸರಿ ದಾರಿಗೆ ಬರುವಂಥ ವಿಶೇಷ ವರದಿಗಳನ್ನು ಬರೆದು ಕಣ್ತೆರೆಸುವ ಕಾರ್ಯಮಾಡಬೇಕು ಎಂದರು.

ಮಾಜಿ ಶಾಸಕ, ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ,
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಶರಣಪ್ಪ ಬಾಚಲಾಪೂರ, ಮತ್ತೊಬ್ಬ ಹಿರಿಯ ಪರ್ತಕರ್ತ ನಾರಾಯಣರಾವ್ ಕುಲಕರ್ಣಿ ಮತ್ತು ಕರಿಬಸವ ಶಿವಾಚಾರ್ಯ ಸ್ವಾಮೀಜಿ, ಪ್ರಗತಿಪರ ಕೃಷಿಕ ಡಾ.ದೇವೇಂದ್ರಪ್ಪ ಬಳೂಟಗಿ,
ನಿವೃತ್ತ ಡಿಡಿಪಿಐ ಡಿ.ಬಿ. ಗಡೇದ, ನಿವೃತ್ತ ಬ್ಯಾಂಕ್ ಅಧಿಕಾರಿ ಎಂ.ದೇವಪ್ಪ ಇತರರು ಮಂಜುನಾಥ ಮಹಲಿಂಗಪುರ ಅವರನ್ನು ಅಭಿನಂದಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ವೇಳೆ ರಾಜಕಾರಣಿಗಳು, ಸಂಘ-ಸಂಸ್ಥೆಗಳ ಪ್ರಮುಖರು, ವರ್ತಕರು ಪತ್ರಕರ್ತ ಮಂಜುನಾಥ ಮಹಲಿಂಗಪುರ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ಫಕೀರಪ್ಪ ಚಳಗೇರಿ, ತಾಲೂಕು ಪಂಚಾಯಿತಿ ಇಒ ಪಂಪಾಪತಿ ಹಿರೇಮಠ, ಗ್ರೇಡ್ 2 ತಹಸೀಲ್ದಾರ ರಜನಿಕಾಂತ ಕೆಂಗಾರಿ, ಬಿಇಒ ಉಮಾದೇವಿ ಬಿ. ಬಸಾಪೂರ, ಬಸವ ಸಮಿತಿ ಪ್ರಮುಖ ಎಂ.ಎಂ. ಮಹಲಿಂಗಪುರ, ಪುರಸಭೆ ಮಾಜಿ ಅಧ್ಯಕ್ಷ ಕಲ್ಲೇಶ ತಾಳದ, ನಾಗರಿಕರ ರಕ್ಷಣಾ ವೇದಿಕೆ ಗೌರವಾಧ್ಯಕ್ಷ ಪರಸಪ್ಪ ಅಮರಾವತಿ, ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಮಹಾಂತಯ್ಯ ಅರಳೆಲೆಮಠ, ರೈಲು ಹೋರಾಟ ಸಮಿತಿ ಪ್ರಮುಖರಾದ ಬಾಬು ಘೋರ್ಪಡೆ, ಭರತೇಶ ಜೋಷಿ , ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕು ಮಾಜಿ ಅಧ್ಯಕ್ಷ ಶರಣಪ್ಪ ಅಡೂರು ಸೇರಿದಂತೆ ವರ್ತಕರು, ಸಂಘ-ಸಂಸ್ಥೆಗಳ ಪ್ರಮುಖರು, ಕುಷ್ಟಗಿ ಮೀಡಿಯಾ ಕ್ಲಬ್ ಸದಸ್ಯರಾದ ಶ್ರೀಕಾಂತ ಸರಗಣಾಚಾರಿ, ಮಲ್ಲಿಕಾರ್ಜುನ ಮೆದಿಕೇರಿ, ಕಳಕಪ್ಪ ಗೌಡರ, ತಿರುಪತಿ ಎಲಿಗಾರ, ಸಂಗಮೇಶ ಮುಶಿಗೇರಿ ಇತರರು ಪಾಲ್ಗೊಂಡಿದ್ದರು.

ಪತ್ರಕರ್ತ ವಿಶ್ವನಾಥ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಪತ್ರಕರ್ತ ಮುಖೇಶ ನಿಲೋಗಲ್ ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!