ಸ್ಥಳೀಯ ಸಂಸ್ಥೆಗಳ ಚುನಾವಣೆ ಗಳಿಗೆ ಪ್ರತ್ಯೇಕ ಉಸ್ತುವಾರಿಗಳ ನೇಮಕಕ್ಕೆ ಜೆಡಿಎಸ್ ತೀರ್ಮಾನ

0

Get real time updates directly on you device, subscribe now.

fi 

ಕೊಪ್ಪಳ: ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಜಿಲ್ಲಾ ತಾಲೂಕು, ಹೋಬಳಿ, ಮತ್ತು ಗ್ರಾಮ ಮಟ್ಟಗಳಲ್ಲಿ ಪ್ರತ್ಯೇಕ ಉಸ್ತುವಾರಿಗಳನ್ನು ನೇಮಕ ಮಾಡಲು ಕೊಪ್ಪಳ ಜಿಲ್ಲಾ ಜೆಡಿಎಸ್ ಘಟಕ ನಿರ್ಧರಿಸಿದೆ.

ಪಕ್ಷದ ಜಿಲ್ಲಾ ಕಛೇರಿಯಲ್ಲಿ ಶುಕ್ರವಾರ ಸಂಜೆ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

“ಮುಂದಿನ ಕೆಲವು ತಿಂಗಳುಗಳಲ್ಲಿ  ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನ ಗಳಿಸಲು ಜಿಲ್ಲಾ, ತಾಲೂಕು, ಹೋಬಳಿ ಮತ್ತು ಗ್ರಾಮ ಮಟ್ಟಕ್ಕೆ ಪ್ರತ್ಯೇಕ ಉಸ್ತುವಾರಿಗಳನ್ನು ನೇಮಿಸಬೇಕೆಂಬ ಮುಖಂಡರ ಸಲಹೆಯನ್ನು ಒಪ್ಪಿಕೊಳ್ಳಲಾಗಿದೆ. ಗೆಲ್ಲಬಹುದಾದ ಅಭ್ಯರ್ಥಿಗಳನ್ನು ಗುರುತಿಸಿ ಈಗಿನಿಂದಲೇ ಪೂರ್ವ ಸಿದ್ಧತೆ ನಡೆಸಲು ತೀರ್ಮಾನಿಸಲಾಗಿದೆ,” ಎಂದು ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಸಭೆಗೆ ತಿಳಿಸಿದರು.

“ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ರಾಜ್ಯದಲ್ಲಿಯೇ ಕೊಪ್ಪಳ ಪ್ರಥಮ ಸ್ಥಾನದಲ್ಲಿರುವುದು ಪಕ್ಷದ ಹೈಕಮಾಂಡ್ ಗಮನದಲ್ಲಿದೆ. ಪದಾಧಿಕಾರಿಗಳು ಇನ್ನೂ ಹೆಚ್ಚಿನ ಸದಸ್ಯತ್ವ ಮಾಡಿಸಬೇಕು.
ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಅಕ್ರಮಗಳಾಗುತ್ತಿರುವ ವರದಿಗಳಿವೆ. ಆದ್ದರಿಂದ ಬಿ ಎಲ್ ಎ ಗಳು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸಿ ಪಕ್ಷಕ್ಕೆ ಆಗಬಹುದಾದ ಹಾನಿಯನ್ನು ತಡೆಗಟ್ಟಬೇಕು,” ಎಂದು ಹೇಳಿದರು.

“ಕೊಪ್ಪಳ ಸೇರಿದಂತೆ ಸುಮಾರು 136 ತಾಲೂಕುಗಳು ಬರಪೀಡಿತವಾಗಿವೆ ಎಂಬ ವರದಿಗಳಿವೆ. ಕೊಪ್ಪಳ ತಾಲೂಕಿನ ಕೃಷಿ ಭೂಮಿಯಲ್ಲಿ 50%ಕ್ಕಿಂತಲೂ ಕಡಿಮೆ ಬಿತ್ತನೆಯಾಗಿದೆ. ಮುಂದಿನ ಒಂದೆರಡು ತಿಂಗಳು ಮಳೆ ಯಾಗದಿದ್ದರೇ ಪರಿಸ್ಥಿತಿ ಭೀಕರವಾಗಲಿದೆ. ಕುಡಿಯುವ
ನೀರಿಗೂ ಆಹಾಕಾರವಾಗಲಿದೆ.
ಈಗಿರುವ ಏಕೈಕ ಪರಿಹಾರ ಎಂದರೆ ಮಳೆ. ಆದ್ದರಿಂದ ದೇವರಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲು ಎಂದು ಪಕ್ಷದ ಮುಖಂಡರು ತೀರ್ಮಾನಿಸಿದ್ದಾರೆ,” ಎಂದು ಹೇಳಿದರು.

ಮುಖ್ಯಮಂತ್ರಿಗಳಾಗಿದ್ದಾಗ
ಹೆಚ್ ಡಿ ಕುಮಾರಸ್ವಾಮಿಯವರು ಕೊಪ್ಪಳಕ್ಕೆ ನಾಲ್ಕು ಸರಕಾರಿ ಕಾಲೇಜುಗಳನ್ನು ಮತ್ತು ಕೆರೆಗೆ ಕಾಯಕಲ್ಪ ನೀಡುವ ಕಾಮಗಾರಿಗಳನ್ನು ಮಂಜೂರು ಮಾಡಿದರು. ಗ್ರಾಮ ವಾಸ್ತವದಲ್ಲಿ ಇಲ್ಲಿನ ರೈತರ ಬವಣೆ ತಿಳಿದ ನಂತರ ಕೃಷಿ ಸಾಲ ಮನ್ನಾ ಮಾಡಲು ತೀರ್ಮಾನಿಸಿದರು. ಕೊಪ್ಪಳ ಜನತೆ ಬಗ್ಗೆ ಅವರಿಗೆ ವಿಶೇಷ ಕಾಳಜಿ ಮತ್ತು ಪ್ರೀತಿ ಇದೆ. ರಾಜ್ಯದಲ್ಲಿ ದುರಾಡಳಿತದಲ್ಲಿ ತೊಡಗಿರುವ ಕಾಂಗ್ರೆಸ್ ಪಕ್ಷವನ್ನು ಕಿತ್ತೆಸೆಯುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಕೊಪ್ಪಳ ತಾಲೂಕು ಗೌರವಾಧ್ಯಕ್ಷ ಈಶಪ್ಪ ಮಾದಿನೂರು ಹೇಳಿದರು.

“ಕೊಪ್ಪಳದಲ್ಲಿ ಜೆಡಿಎಸ್ ಎಲ್ಲಿದೆ ಎಂದು ಪ್ರಶ್ನೆ ಕೇಳುವವರು ಮುಟ್ಟಿ ನೋಡಿಕೊಳ್ಳುವಂತೆ ಪಕ್ಷವನ್ನು ಸಂಘಟಿಸಲಾಗಿದೆ. ಜೆಡಿಎಸ್ ಬಿಜೆಪಿ ಜಂಟಿಯಾಗಿ ವಿಧಾನಸಭಾ ಚುನಾವಣೆ ಎದುರಿಸುವುದು ವಾಸ್ತವ. ಮುಂದಿನ ಚುನಾವಣೆಯಲ್ಲಿ
ಎನ್​ಡಿ ಎ ಅಭ್ಯರ್ಥಿ ಗೆಲುವನ್ನು ಕೊಪ್ಪಳದಲ್ಲಿ ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ. ಎಸ್ ಐ ಆರ್ ಅರ್ಜಿ ವಿತರಣೆಯಲ್ಲಿ ಕಾಂಗ್ರೆಸ್ ನಾಯಕರು ಸರಕಾರಿ ನೌಕರರೊಂದಿಗೆ ಶಾಮಿಲಾಗಿ ಅಕ್ರಮದಲ್ಲಿ ತೊಡಗಿದ್ದನ್ನು ನಾನೇ ಪತ್ತೆ ಹಚ್ಚಿದ್ದೇನೆ. ಅನೇಕ ಕಡೆಗಳಲ್ಲಿ ಇಂತಹ ಅಕ್ರಮಗಳನ್ನು ನಿಲ್ಲಿಸಿದ್ದೇನೆ. ಇಂತಹ ಅಕ್ರಮಗಳನ್ನು ಪಕ್ಷದ ಕಾರ್ಯಕರ್ತರು ತಡೆಗಟ್ಟಬೇಕು,” ಎಂದು ಜಿಲ್ಲಾ ಉಪಾಧ್ಯಕ್ಷ ಕರಿಯಪ್ಪ ಹಾಲವರ್ತಿ ಹೇಳಿದರು.

ಜಿಲ್ಲಾಡಳಿತ ಬರ ಪರಿಹಾರ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲು ಒತ್ತಡ ಹೇರಬೇಕು. ಆದಷ್ಟು ಹೆಚ್ಚಿನ ರೈತರು ಬೆಳೆ ವಿಮೆ ಮಾಡಿಸುವಂತೆ ಪ್ರೋತ್ಸಾಹಿಸಬೇಕು. ರೈತರು ಗುಳೆ ಹೋಗುವುದನ್ನು ತಡೆಯಬೇಕು.
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈಗಿನಿಂದಲೇ ಆರಂಭಿಸಬೇಕು
ಎಂದು ಜಿಲ್ಲಾ ಸಂಸ್ಕೃತಿ ವಿಭಾಗದ ಅಧ್ಯಕ್ಷ ಮಂಜುನಾಥ್ ಸೊರಟೂರ್ ಹೇಳಿದರು.

“ಅಲ್ಪಸಂಖ್ಯಾತರು ಜೆಡಿಎಸ್ ಪಕ್ಷದ ಜೊತೆಗೆ ಇಲ್ಲ ಎಂದು ಹುಸಿ ಸುದ್ದಿ ಹಬ್ಬಿಸಲಾಗುತ್ತಿದೆ. ಅಲ್ಪಸಂಖ್ಯಾತರಿಗೆ ಇಂದಿಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಬಗ್ಗೆ ಅಪಾರ ಗೌರವವಿದೆ ಎಂದು ಕ್ರೀಡಾ ವಿಭಾಗದ ಅಧ್ಯಕ್ಷ ಸೈಯದ್ ಮಹೇಮೂದ್ ಹುಸೇನಿ ಬಲ್ಲೆ ಹೇಳಿದರು.

ಪಕ್ಷ ಸಂಘಟನೆ, ನೇಮಕಾತಿ, ಬರ ಪರಿಸ್ಥಿತಿ, ಸ್ಥಳೀಯ ಸಂಸ್ಥೆಗಳ ಚುನಾವಣೆ, ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ, ಕೊಪ್ಪಳಕ್ಕೆ ಬರ ಅಧ್ಯಯನ ಕುರಿತು ಭೇಟಿ ನೀಡಲಿರುವ ರಾಜ್ಯ ನಾಯಕರ ತಂಡಗಳ ಕುರಿತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ ಮಾತನಾಡಿದರು.

ಜಿಲ್ಲಾ ಉಪಾಧ್ಯಕ್ಷ ಮೂರ್ತೆಪ್ಪ ಗಿಣಿಗೇರಿ, ಜಿಲ್ಲಾ ಎಸ್ ಟಿ ಘಟಕದ ಅಧ್ಯಕ್ಷ ರಮೇಶ
ಡಂಬ್ರಳ್ಳಿ, ಕೊಪ್ಪಳ ತಾಲೂಕು ಅಧ್ಯಕ್ಷ ವಿರೇಶಗೌಡ್ರ ದಳಪತಿ,
ನಗರ ಘಟಕ ಮಹಿಳಾ ಅಧ್ಯಕ್ಷೆ ನಿರ್ಮಾಲಾ ಮೇದಾರ, ಕೊಪ್ಪಳ ನಗರ ಘಟಕ ಮಹಿಳಾ ಗೌರವಾಧ್ಯಕ್ಷೆ ರತ್ನಮ್ಮ ಹಿರೇಮಠ, ಉಪಾಧ್ಯಕ್ಷೆ ಶರಣಮ್ಮ, ಮಹಿಳಾ ವಿದ್ಯಾರ್ಥಿ ಘಟಕದ ಅಧ್ಯಕ್ಷೆ ಜಯಶ್ರೀ, ಕಾರ್ಯದರ್ಶಿ ವಿಜಯಲಕ್ಷ್ಮಿ, ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ, ಉಪಾಧ್ಯಕ್ಷ ಗಂಗಾಧರ ವಸ್ತ್ರದ, ತಾಲೂಕು ಎಸ್ ಟಿ ಘಟಕದ ಅಧ್ಯಕ್ಷ ಸುರೇಶ ದದಗಲ್, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಏಣಿಗಿ, ಜಿಲ್ಲಾ ಕೈಗಾರಿಕಾ ಅಧ್ಯಕ್ಷ ಮಾರುತಿಗೌಡ ಪೊಲೀಸ್ ಪಾಟೀಲ್, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಸಿರಾಜ್ ಬಿಜಾಪುರ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಂಜುನಾಥ ಪಾಟೀಲ್, ಕೊಪ್ಪಳ ತಾಲೂಕು ಎಸ್ ಟಿ ಘಟಕದ ಅಧ್ಯಕ್ಷ ಮಲ್ಲಪ್ಪ ವಾಲ್ಮೀಕಿ, ಪರಿಸರ ಸಂರಕ್ಷಣೆ ಮತ್ತು ಕಾರ್ಯಕರ್ತರ ಕುಂದು ಕೊರತೆ ವಿಭಾಗದ ತಾಲೂಕ ಅಧ್ಯಕ್ಷ ಹುಚ್ಚಪ್ಪ ಚೌದ್ರಿ ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಶೀರ್ಷಿಕೆ: ಜೆಡಿಎಸ್ ಪಕ್ಷದ ಜಿಲ್ಲಾ ಕಛೇರಿಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಕೊಪ್ಪಳ ತಾಲೂಕ್ ಗೌರವಾಧ್ಯಕ್ಷ ಈಶಪ್ಪ ಮಾದಿನೂರು ಮಾತನಾಡಿದರು.

Get real time updates directly on you device, subscribe now.

Leave A Reply

Your email address will not be published.

error: Content is protected !!