ಬಲ್ಡೋಟಾ ಹಠಾವೋ ಕೊಪ್ಪಳ ಬಚಾವೋ ಧರಣಿಗೆ 77ನೇ ದಿನ ಪೂರ್ಣ

Get real time updates directly on you device, subscribe now.

ಕೊಪ್ಪಳ: ನಗರದ ಬಸವೇಶ್ವರ ವೃತ್ತದಲ್ಲಿ ಬರುವ ಶನಿವಾರ, ರವಿವಾರ ಕಾರ್ಖಾನೆ ವಿರೋಧಿ ಪರಿಸರ ಜಾಗೃತಿ ಮಾಡಲು ಬಿಳಿ ವಸ್ತ್ರದ ಮೇಲೆ ಸಹಿ ಸಂಗ್ರಹ ಆಂದೋಲನ ನಡೆಸಲಾಗುವುದು ಎಂದು ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಹೇಳಿದರು. ಕೊಪ್ಪಳ ಜನತೆ ಸಾವಿರಾರು ಸಂಖ್ಯೆಯಲ್ಲಿ ಈ ಆಂದೋಲನದಲ್ಲಿ ಭಾಗವಹಿಸಿ ಮುಂದಿನ ಪೀಳಿಗೆ ರಕ್ಷಿಸಲು ಮಾಲಿನ್ಯಕಾರಿ ಕಾರ್ಖಾನೆ ವಿರೋಧಿ ಹೋರಾಟಕ್ಕೆ ಬೆಂಬಲ ಮಾಡಬೇಕೆಂದು ವಿನಂತಿ ಮಾಡಿಕೊಂಡರು.

ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ನಡೆಸುತ್ತಿರುವ 77ನೇ ದಿನದ ಹೋರಾಟದಲ್ಲಿ ಕುಣಿಕೇರಿ ಗ್ರಾಮದ ರಮೇಶ ಡಂಬ್ರಳ್ಳಿ ಮಾತನಾಡಿ ‘ನಾನು ಈ ಹಿಂದೆ ನೋಡಿದ ನಮ್ಮ ಗ್ರಾಮದ ಸೊಬಗು ಈಗ ಉಳಿದಿಲ್ಲ. ಸ್ವತಃ ನನ್ನ ಲಕ್ಷಗಟ್ಟಲೆ ಲಾಭ ಮಾಡುತ್ತಿದ್ದ ಎಲೆಬಳ್ಳಿ ತೋಟ ನನ್ನ ಕೈಯಾರೆ ಕಿತ್ತು ಹಾಕಿದ್ದೇನೆ. ಈಗ ಕಾರ್ಖಾನೆ ಕಂದು ದೂಳು, ಹಾರು ಬೂದಿ, ಹೊಗೆ ಆವರಿಸಿ ಏನೂ ಬಿತ್ತಿ ಬೆಳೆಯಲು ಆಗದೆ, ಫಲವತ್ತಾದ ನಮ್ಮ ಪೂರ್ವಿಕರು ಸಾಗು ಮಾಡುತ್ತಾ ಬಂದ ಭೂಮಿ ಬೀಳು ಬಿಡಲಾಗಿದೆ. ಕಾರ್ಖಾನೆ ಕೊಡುವ ಬಿಡಿಗಾಸು ನಮಗೆ ಬೇಡ. ನಿರಾತಂಕವಾದ ಕೃಷಿ ಬದುಕು ಮಾಡಲು ಬಿಟ್ಟರೆ ನಾವು ಬದುಕುತ್ತೇವೆ. ನಮಗೆ ಈಗ ಗೊತ್ತಾಗಿದೆ ಕಾರ್ಖಾನೆ ಇಲ್ಲಿದ್ದರೆ ನಾವು ಗ್ರಾಮದಲ್ಲಿ ಬದುಕಲು ಸಾಧ್ಯವಿಲ್ಲ. ಇಲ್ಲಿನ ಜನಪ್ರತಿನಿಧಿಗಳು ಶೀಘ್ರವೇ ಕಾರ್ಖಾನೆ ಬಂದ್ ಮಾಡಬೇಕು ಎಂದರು.

ಧರಣಿಗೆ ಕುಣಿಕೇರಿ ಗ್ರಾಮದ ರೈತರಾದ ಗವಿಸಿದ್ದಪ್ಪ ಹಲಿಗಿ, ಉಮೇಶ ಗಣಪ, ನಾಗರಾಜ ದೊಡ್ಡಮನಿ, ಮುದ್ದುರಂಗಪ್ಪ ಸಾದರ ಬೆಂಬಲಿಸಿದರು. ಸಂಚಾಲಕರಾದ ಮಲ್ಲಿಕಾರ್ಜುನ ಬಿ.ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಪ್ರಕಾಶಕ ಡಿ.ಎಂ. ಬಡಿಗೇರ, ನಿವೃತ್ತ ಪ್ರಾಚಾರ್ಯರಾದ ಎಸ್.ಬಿ.ರಾಜೂರು, ಬಿ.ಜಿ. ಕರಿಗಾರ, ಮೂಕಪ್ಪ ಮೇಸ್ತ್ರಿ ಬಸಾಪುರ, ನಿವೃತ್ತ ಕಾರ್ಮಿಕ ನಿರೀಕ್ಷಕರು ಶಾಂತಯ್ಯ ಅಂಗಡಿ, ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ, ರತ್ನಮ್ಮ ದೊಡ್ಡಮನಿ, ಮಂಜುನಾಥ ಕವಲೂರು, ಶಿವಪ್ಪ ಜಲ್ಲಿ, ಯುವ ಸಂಘಟಕ ಸುಭಾನ್ ನೀರಲಗಿ, ಮಂಜುನಾಥ ಚಿತ್ರಗಾರ, ನಿವೃತ್ತ ಶಿಕ್ಷಕ ಶಿವಪ್ಪ ಪಾಲ್ಗೊಂಡರು.

Get real time updates directly on you device, subscribe now.

Comments are closed.

error: Content is protected !!