ಎಳ್ಳು ಅಮಾವಾಸ್ಯೆ: ಭೂತಾಯಿಗೆ ಪೂಜೆ

Get real time updates directly on you device, subscribe now.

ಕುಷ್ಟಗಿ : ಎಳ್ಳು ಅಮಾವಾಸ್ಯೆ ದಕ್ಷಿಣಾಯನ ಮಾರ್ಗಶಿರ ಮಾಸದ ಅಮವಾಸ್ಯಯ ದಿನವಾಗಿದ್ದು, ಹಿಂಗಾರಿನ ಕೊನೆಯ ಬೆಳೆಯಾಗಿರುವ ಎಳ್ಳು ಸಮೃದ್ಧಿಯ ಸಂಕೇತವಾಗಿದೆ. ಹಾಗಾಗಿ ರೈತರು ಅನ್ನ ನೀಡುವ ಭೂತಾಯಿ ಹಾಗೂ ಹೊಲದಲ್ಲಿ ಸಮೃದ್ಧವಾಗಿ ಬೆಳೆದು ನಿಂತಿರುವ ಬೆಳೆಗೆ ಸಂಭ್ರಮದಿಂದ ಪೂಜೆ ಸಲ್ಲಿಸುತ್ತಾರೆ. ಶುಕ್ರವಾರ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ರೈತ ಕುಟುಂಬಗಳು ಎಳ್ಳು ಅಮವಾಸ್ಯೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಮಾಡಿಕೊಳ್ಳುತ್ತಿದ್ದಾರೆ.

ವಾರದ ಮೊದಲು ಎಳ್ಳು ಹೋಳಿಗೆ, ಎಣ್ಣಿ ಹೋಳಿಗೆ, ಶೇಂಗಾ ಹೋಳಿಗೆ, ಸಜ್ಜಿ ರೊಟ್ಟಿ, ಜೋಳದ ಖಡಕ್ ರೊಟ್ಟಿ, ಕರ್ಚಿಕಾಯಿ, ಕಾಳು ಪಲ್ಯೆ, ವಿವಿಧ ಬಗೆಯ ಚಟ್ನಿ, ಮೊಸರು ಬಗೆ ಬಗೆಯ ಸಿಹಿ ಖಾದ್ಯಗಳನ್ನು ತಯಾರಿಸಿದ್ದರು. ಇಂದು ಅಮವಾಸ್ಯೆ ದಿನ ಎತ್ತಿನ ಬಂಡಿ, ಟಂಟಂ, ಟ್ರ್ಯಾಕ್ಟರ್‌ಗಳಲ್ಲಿ ಮನೆಯ ಸದಸ್ಯರ ಜೊತೆಗೆ ಸ್ನೇಹಿತರು, ಬಂಧುಗಳನ್ನು ಕರೆದುಕೊಂಡು ಎರಿ ಹೊಲಕ್ಕೆ ಅಂದರೆ ಕಪ್ಪು ಭೂಮಿಗೆ ಹೋಗಿ, ಹೊಲದಲ್ಲಿ ಸಮೃದ್ದವಾಗಿ ಬೆಳೆದ ಬಿಳಿಜೋಳ, ಕಡಲೆ, ಕುಸುಬಿ, ಗೋಧಿ ಫೈರಿನ ಮಧ್ಯದಲ್ಲಿ ಬನ್ನಿ ಗಿಡದ ಹತ್ತಿರ ಕಲ್ಲಿನ ಪಂಚ ಪಾಂಡವರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು.

ಎಲ್ಲ ಬಗೆಯ ತಿನಿಸುಗಳ ತುಣುಕನ್ನು ಒಂದು ಪಾತ್ರೆಯಲ್ಲಿ ಹಾಕಿಕೊಂಡು ಮುಂದೆ ಒಬ್ಬರು ತಿನಿಸುಗಳ ತುಣುಕನ್ನು ಹುಲ್ಲುಲ್ಗೊ ಎಂದು ಹೊಲದಲ್ಲಿ ಸಮೃದ್ದವಾಗಿ ಬೆಳೆದಿರುವ ಪೈರಿನ ಮಧ್ಯದಲ್ಲಿ ಎರಚಿದರೆ ಹಿಂದೆ ಒಬ್ಬರು ಚಲಂಬ್ರಿಗೊ ಎಂದು ನೀರನ್ನು ಎರಚುತ್ತ ಭೂತಾಯಿಗೆ ಪೂಜೆ ಸಲ್ಲಿಸುತ್ತಾರೆ. ಈ ರೀತಿಯಾಗಿ ಎರಚುವ ತಿನಿಸುಗಳನ್ನು ತಿನ್ನಲು ಬರುವ ಪಕ್ಷಿಗಳು ತಿನಿಸುಗಳ ಜೊತೆಗೆ ಪೈರಿನಲ್ಲಿರುವ ಕೀಟಗಳನ್ನು ತಿನ್ನುತ್ತವೆ.

ಈ ಬಾರಿ ಮಳೆ ಬಿಡುವು ನೀಡದ ಹಿನ್ನಲೆಯಲ್ಲಿ ತಾಲ್ಲೂಕಿನಲ್ಲಿ ತಡವಾಗಿ ಬಿತ್ತನೆಯಾಗಿದ್ದು, ಕಾಳು ಕಟ್ಟಬೇಕಿದ್ದ ಕಡಲೆ ಹೂ, ಚಟ್ಟಿ ಇದೆ. ತೆನೆ ಹಾಕಬೇಕಿದ್ದ ಬಿಳಿಜೋಳ ಇನ್ನೂ ಬೆಳೆಯುತ್ತಿದೆ. ಈಗಾಗಲೇ ರೈತರು ಕೀಟಗಳ ನಿರ್ವಹಣೆಗೆ ಎರಡ್ಮೂರು ಬಾರಿ ಕೀಟನಾಶಕ ಸಿಂಪಡಿಸಿದ್ದು, ಬೆಳೆ ಸಮೃದ್ಧವಾಗಿದೆ. ರೈತರು ಉತ್ತಮ ಫಸಲು ಬರುತ್ತದೆಂಬ ಆಶಯದಲ್ಲಿದ್ದಾರೆ. ಹೀಗಾಗಿ ಕುಷ್ಟಗಿ ಪಟ್ಟಣ ಹಾಗೂ ಹನುಮನಾಳ, ಹನುಮಸಾಗರ, ದೋಟಿಹಾಳ, ತಾವರಗೇರಾ ಸೇರಿದಂತೆ ತಾಲೂಕಿನೆಲ್ಲೆಡೆ ಎಳ್ಳು ಅಮಾವಾಸ್ಯೆಯನ್ನು ಭಕ್ತಿ ಸಂಭ್ರಮದಿಂದ ಆಚರಿಸಿದರು.

ಕುಷ್ಟಗಿ ಪಟ್ಟಣದ ಹಳೇ ವಣಗೇರಿ ರಸ್ತೆ ಬಳಿಯ ಶಿಕ್ಷಕ ಕಿಶನರಾವ್ ಕುಲಕರ್ಣಿ ಅವರು ತಮ್ಮ ಎರೆ ಭೂಮಿಯಲ್ಲಿ ಕುಟುಂಬ ಹಾಗೂ ಸ್ನೇಹಿತರೊಂದಿಗೆ ತೆರಳಿ ಭೂಮಿ ಪೂಜೆಯೊಂದಿಗೆ ಎಳ್ಳ ಅಮಾವಾಸ್ಯೆ ಆಚರಿಸಿದರು.

Get real time updates directly on you device, subscribe now.

Comments are closed.

error: Content is protected !!