ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗೆ ಶಿಕ್ಷಕರ ಜವಾಬ್ದಾರಿಯುತ ಕೆಲಸವೂ ಮುಖ್ಯ: ಸಚಿವ ಶಿವರಾಜ್ ತಂಗಡಗಿ

Get real time updates directly on you device, subscribe now.

 

*ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗೆ ಶಿಕ್ಷಕರ ಜವಾಬ್ದಾರಿಯುತ ಕೆಲಸವೂ ಮುಖ್ಯ: ಸಚಿವ ಶಿವರಾಜ್ ತಂಗಡಗ*

ಕೊಪ್ಪಳ: ಸೆ.05

ಕನ್ನಡ ಶಾಲೆಗಳ ಉಳಿವಿನಲ್ಲಿ ಸರ್ಕಾರದ ಜತೆಗೆ ಶಿಕ್ಷಕರ ಜವಾವ್ದಾರಿಯುತ ಕೆಲಸವೂ ಮುಖ್ಯವಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ‌ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು.

ಮಂಗಳವಾರ ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾ‌ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಕರ ಜವಾಬ್ದಾರಿ ದೊಡ್ಡದು. ಯಾವುದೇ ವ್ಯಕ್ತಿ ಎಷ್ಟೇ ದೊಡ್ಡ ಸ್ಥಾನಕ್ಕೇರಬಹುದು. ರಾಷ್ಟ್ರಪತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿ, ಮಂತ್ರಿಯಾಗಿ ಕೆಲಸ ಮಾಡಬಹುದು. ಆದರೆ, ಶಿಕ್ಷಕರ ಸ್ಥಾನ ಬಹುದೊಡ್ಡದು. ನಾನು ಎಂತಹ ಸ್ಥಾನಕ್ಕೆ ಹೋದರೂ ಕಲಿಸಿದ ಗುರುಗಳ ಹೆಸರು ಹೇಳಲು ಹೆಮ್ಮೆಯಾಗುತ್ತದೆ. ನಾನು ಮೊದಲ ಬಾರಿ ಮಂತ್ರಿಯಾಗಿ ವಿಧಾನಸೌಧ ಪ್ರವೇಶಿಸಿದಾಗ ನನ್ನ ಗುರುಗಳನ್ನು ಭೇಟಿಯಾಗಿ ಮಾತನಾಡಿದ್ದೆ. ನನ್ನ ಬೆಳವಣಿಗೆ ಕಂಡು ಹೆಮ್ಮೆ ವ್ಯಕ್ತಪಡಿಸಿದ್ದರು ಎಂದು ತಮ್ಮ ಗುರುಗಳನ್ನು ಸ್ಮರಿಸಿದರು.

ನಾನು ಶಿಕ್ಷಕರು ಮತ್ತು ವೈದ್ಯರನ್ನು ಹೆಚ್ಚು ಪ್ರೀತಿಸುತ್ತೇನೆ. ಜೀವನ ರೂಪಿಸುವವರು ಶಿಕ್ಷಕರಾದರೆ, ಜೀವ ಕಾಪಾಡುವವರು ವೈದ್ಯರು. ಅದರಲ್ಲೂ ಶಿಕ್ಷಕರು ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಿದರೆ ಸಾಕು ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತದೆ. ಕನ್ನಡ ಶಾಲೆಯ ಉಳಿವಿನಲ್ಲಿ ಸರ್ಕಾರದ ಜತೆಗೆ ಶಿಕ್ಷಕರ ಜವಾಬ್ದಾರಿಯೂ ಬಹಳ ಮುಖ್ಯವಾಗಿದೆ. ಸರ್ಕಾರದ ಕೆಲಸದ ಜತೆಗೆ ಶಿಕ್ಷಕರಾದವರೂ ತಮ್ಮ ಜವಾಬ್ದಾರಿ ಅರಿತು ಹೆಚ್ಚಿನ ಕೆಲಸ ಮಾಡಬೇಕು ಎಂದು ತಿಳಿಸಿದರು.

*ಶಿಕ್ಷಕರು ಅವಕಾಶ ಬಳಸಿಕೊಳ್ಳಿ:*
ನನ್ನ ಕ್ಷೇತ್ರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ರಾಜ್ಯ ಮಟ್ಟದ ಖಾಸಗಿ ಶಾಲೆಗಿಂತಲೂ ಚೆನ್ನಾಗಿ ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಮಾಡಿದ್ದಾರೆ. ಆ ಶಾಲೆಗೆ ನಾನು ಭೇಟಿ ನೀಡಿದ್ದೇನೆ. ಇಂತಹ ಶಿಕ್ಷಕರಿಗೆ ಪ್ರಶಸ್ತಿ ಕೊಟ್ಟರೆ ಆ ಪ್ರಶಸ್ತಿಗೂ ಬೆಲೆ ಸಿಗುತ್ತದೆ. ಸರ್ಕಾರದ ನೆರವು ಇಲ್ಲದೆ ಶಾಲೆಯಲ್ಲಿ ಅತ್ಯುತ್ತಮ ಗ್ರಂಥಾಲಯ ಮಾಡಿದ್ದಾರೆ. ಶಾಲೆಯ ಆವರಣದಲ್ಲಿ ತೋಟಗಾರಿಕೆ ಮಾಡಿ ಮಧ್ಯಾಹ್ನದ ಬಿಸಿಯೂಟಕ್ಕೆ ಅಲ್ಲಿನ ತರಕಾರಿಯನ್ನೇ ಬಳಸಲಾಗುತ್ತಿದೆ. ಊರಿನ ಹಿರಿಯರು ಹಾಗೂ ಪ್ರಜ್ಞಾವಂತರ ಸಹಕಾರದಿಂದ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯಾಗಿ ರೂಪಿಸಿದ್ದಾರೆ. ಹೀಗಾಗಿ ಸರ್ಕಾರಿ ಶಾಲೆಯ ಶಿಕ್ಷಕರಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಕಷ್ಟು ಅವಕಾಶಗಳು ಇವೆ. ಶಿಕ್ಷಕರು ಇಂತಹ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

*ಶಿಕ್ಷಕರ ಕೊರತೆ ನೀಗಿಸಲು ಕ್ರಮ*
ಶಿಕ್ಷಣ ಇಲಾಖೆ ದೊಡ್ಡ ಇಲಾಖೆ. ಶಿಕ್ಷಕರು ಪ್ರತಿ ವರ್ಷ ನಿವೃತ್ತರಾಗುವುದರಿಂದ ಶಿಕ್ಷಕರ ಕೊರತೆ ಇದೆ. ನಮ್ಮ ಜಿಲ್ಲೆಯೊಳಗೂ ಶಿಕ್ಷಕರ ಕೊರತೆ ಇದೆ. ಹೀಗಾಗಿ ನಮ್ಮ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳಿಗೆ ೧,೭೫೭ ಮಂದಿ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಜತೆಗೆ ಪ್ರೌಢಶಾಲೆಗಳಿಗೆ ೩೯೭ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಕಳೆದ ವರ್ಷ ನಮ್ಮ ಕೊಪ್ಪಳ ಜಿಲ್ಲೆ ಎಸ್ಸೆಸ್ಸೆಎಲ್ಸಿ ಫಲಿತಾಂಶದಲ್ಲಿ ೧೫ನೇ ಸ್ಥಾನ ಗಳಿಸಿದೆ. ಕಲ್ಯಾಣ ಕರ್ನಾಟಕ ಭಾಗದ ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ, ಉತ್ತಮ ಸ್ಥಾನದಲ್ಲಿದೆ. ಮುಂದಿನ ವರ್ಷಗಳಲ್ಲಿ ಮೊದಲ ೧೦ ಸ್ಥಾನಗಳಲ್ಲಿ ನಮ್ಮ ಜಿಲ್ಲೆ ಸ್ಥಾನ ಪಡೆಯಬೇಕು. ಇದರಿಂದ ಇಡೀ ಜಿಲ್ಲೆಯ ಶಿಕ್ಷಕರು ಹಾಗೂ ಅಧಿಕಾರಿಗಳಿಗೆ ಹೆಸರು ಬರುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಎಂದು ಸಚಿವರು ಹೇಳಿದರು.
ಇನ್ನು ಗುರುಭವನ ನಿರ್ಮಾಣ ಸಂಬಂಧ ಜಿಲ್ಲೆಯ ಶಾಸಕರು, ಸಂಸದರು, ಶಿಕ್ಷಣ ಮಂತ್ರಿಗಳೊಂದಿಗೆ ಚರ್ಚಿಸಿ ಸರ್ಕಾರದ ಮಟ್ಟದಲ್ಲಿ ಅನುದಾನ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ೭ನೇ ವೇತನ ಆಯೋಗದ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.
ಸಂಸದ ಕರಡಿ ಸಂಗಣ್ಣ, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಹೇಮಲತಾ ನಾಯಕ್, ಜಿಲ್ಲಾಧಿಕಾರಿ ನಳಿನ್ ಅತುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ‌‌ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!