ಡಾ. ಜಿ. ಪರಮೇಶ್ವರ ಅವರನ್ನು ಸಿಎಂ ಆಗಿಸಲು ಇದು ಸಕಾಲ: ಕೃಷ್ಣ ಇಟ್ಟಂಗಿ

Get real time updates directly on you device, subscribe now.

ರಾಜ್ಯದ ಬಹುಸಂಖ್ಯಾತ ದಲಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಕಾಲ ಬಂದಿದೆ

ಕೊಪ್ಪಳ, ಡಿ. 03: ರಾಜ್ಯದ ಜನಸಂಖ್ಯೆಯಲ್ಲಿ ಶೇ.25ಕ್ಕೂ ಹೆಚ್ಚಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಂದ ಈವರೆಗೆ ಒಬ್ಬರೂ ಮುಖ್ಯಮಂತ್ರಿಯಾಗಿಲ್ಲ. ಈ ಹಿನ್ನೆಲೆಯಲ್ಲಿ, ಹಿಂದುಳಿದ ವರ್ಗಗಳ ಪೈಕಿ ಅತ್ಯಂತ ಹಿರಿಯರೂ, ಆಡಳಿತದ ಅನುಭವ ಹೊಂದಿದವರೂ ಆಗಿರುವ ಡಾ. ಜಿ. ಪರಮೇಶ್ವರ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ ಆಗ್ರಹಿಸಿದ್ದಾರೆ.

ಸದ್ಯ ರಾಜ್ಯದಲ್ಲಿ ಅತಿ ಹೆಚ್ಚು ಆಡಳಿತಾತ್ಮಕ ಅನುಭವ ಹೊಂದಿದವರ ಪೈಕಿ ಮಲ್ಲಿಕಾರ್ಜುನ ಖರ್ಗೆ ಅವರು ಅತ್ಯಂತ ಹಿರಿಯಾಗಿದ್ದು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಒಂದೊಮ್ಮೆ ಅವರು ಸಿಎಂ ಹುದ್ದೆಗೆ ಆಸಕ್ತಿ ತೋರದಿದ್ದರೆ, ಅನುಭವ ಮತ್ತು ಹಿರಿತನದಲ್ಲಿ ಅವರ ನಂತರದ ಸ್ಥಾನದಲ್ಲಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಪರಿಗಣಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಹೆಚ್ಚು ಜನಸಂಖ್ಯೆ ಹೊಂದಿದ್ದರೂ ದಲಿತರಿಗೆ ರಾಜ್ಯದ ಮಹತ್ವದ ಹುದ್ದೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ಈವರೆಗೆ ಸಿಕ್ಕಿಲ್ಲ. ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಪ್ರಬಲವಾಗಿರುವ ಜಾತಿಗಳವರಿಗೇ ಮಹತ್ವದ ಹುದ್ದೆಗಳು ಹೋಗುತ್ತಿವೆ. ಈ ಅಸಮಾನತೆಯನ್ನು ಸರಿಪಡಿಸುವ ಅವಕಾಶ ಈಗ ಒದಗಿ ಬಂದಿದ್ದು, ಕಾಂಗ್ರೆಸ್ ಹೈಕಮಾಂಡ್ ಅದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಕೃಷ್ಣ ಇಟ್ಟಂಗಿ ಹೇಳಿದ್ದಾರೆ.

ಹಲವಾರು ಸಚಿವ ಸ್ಥಾನಗಳು, ಕೆಪಿಸಿಸಿ ಅಧ್ಯಕ್ಷತೆ ಸಹಿತಿ ಪಕ್ಷದಲ್ಲಿ ಡಾ. ಜಿ ಪರಮೇಶ್ವರ ಅವರು ಮಹತ್ವದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ, ೨೦೧೩ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವುದನ್ನು ನಾವು ಮರೆಯಬಾರದು ಎಂದು ಅವರು ನೆನಪಿಸಿದ್ದಾರೆ.

ದುರದೃಷ್ಟವಶಾತ್ ಆ ಸಂದರ್ಭದಲ್ಲಿ, ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ರಾಜ್ಯಾದ್ಯಂತ ಓಡಾಡುತ್ತಿದ್ದ ಡಾ. ಪರಮೇಶ್ವರ ಅವರಿಗೆ ತಮ್ಮ ಸ್ವಂತ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೆಚ್ಚು ಸಮಯ ಕೊಡಲು ಸಾಧ್ಯವಾಗಲಿಲ್ಲ. ಹೀಗಾಗಿ, ಅವರು ಸೋತಿದ್ದನ್ನೇ ನೆಪ ಮಾಡಿಕೊಂಡು, ಮುಖ್ಯಮಂತ್ರಿ ಹುದ್ದೆಯನ್ನು ಅವರಿಗೆ ನಿರಾಕರಿಸಲಾಯಿತು. ಪಕ್ಷ ಮನಸ್ಸು ಮಾಡಿದ್ದರೆ, ಡಾ ಜಿ ಪರಮೇಶ್ವರ ಅವರನ್ನೇ ಮುಖ್ಯಮಂತ್ರಿಯಾಗಿಸಿ, ಉಪಚುನಾವಣೆ ಮೂಲಕ ಅವರು ಆಯ್ಕೆಯಾಗುವಂತೆ ಮಾಡಲು ಸಾಧ್ಯವಿತ್ತು. ಆದರೆ, ಅಂತಹ ಇಚ್ಛಾಶಕ್ತಿಯನ್ನು ಪ್ರದರ್ಶಿಸದೇ ಅವರಿಗೆ ಅವಕಾಶ ತಪ್ಪಿತ್ತು ಎಂಬುದನ್ನು ಕೃಷ್ಣ ಇಟ್ಟಂಗಿ ಪ್ರಸ್ತಾಪಿಸಿದ್ದಾರೆ.

ಈಗ ಅಂತಹ ಇಚ್ಛಾಶಕ್ತಿ ಪ್ರದರ್ಶಿಸುವ ಸಮಯ ಬಂದಿದ್ದು, ರಾಜ್ಯದ ಮೊದಲ ದಲಿತ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ವಾತಾವರಣ ಉಂಟಾಗಿದೆ. ಈಗಲಾದರೂ ಪಕ್ಷದ ಹಿರಿಯರು ಮನಸ್ಸು ಮಾಡಿ, ದಶಕಗಳಿಂದ ನಿರಾಕರಿಸಲ್ಪಟ್ಟಿರುವ ಅವಕಾಶವನ್ನು ನೀಡಬೇಕು. ರಾಜ್ಯದ ಬಹುಸಂಖ್ಯಾತ ಸಮುದಾಯದ ಆಶಯವನ್ನು ಈಡೇರಿಸಲು ಡಾ. ಜಿ. ಪರಮೇಶ್ವರ ಅವರನ್ನು ಮುಖ್ಯಮಂತ್ರಿಯಾಗಿಸಬೇಕು ಎಂದು ಕೃಷ್ಣ ಇಟ್ಟಂಗಿ ಮನವಿ ಮಾಡಿಕೊಂಡಿದ್ದಾರೆ.

ಫೊಟೊ: ಕೃಷ್ಣ ಇಟ್ಟಂಗಿ

Get real time updates directly on you device, subscribe now.

Comments are closed.

error: Content is protected !!