ಕೃತಕ ಬುದ್ಧಿಮತ್ತೆಗಿಂತ ನೈಜ ಬುದ್ದಿ ಮತ್ತೆ ಬಳಸಬೇಕಿದೆ – ಡಾ. ಆರ್ ಸಿ ಹಿರೇಮಠ್

Get real time updates directly on you device, subscribe now.

ಕುಷ್ಟಗಿ: ಕೃತಕ ಬುದ್ಧಿಮತ್ತೆಗಿಂತ ನೈಜ ಬುದ್ದಿಮತ್ತೆಯ ಬಳಕೆಯಿಂದ ಅರ್ಥಪೂರ್ಣ ಬದಲಾವಣೆ ಸಾಧ್ಯ ಎಂದು ಬೆಂಗಳೂರಿನ ವಿಜ್ಞಾನಿ
ಡಾ. ಆರ್ ಸಿ ಹಿರೇಮಠ್ ಹೇಳಿದರು.
ಅವರು ಬುಧವಾರ ಎಸ್ ವಿ ಸಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಎರಡು ದಿನಗಳ ‘ಗ್ರಾವಿಟಿ!: 2025-26’
ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
“ಕೃತಕ ಬುದ್ಧಿಮತ್ತೆಯಿಂದ ಭಾರಿ ಬದಲಾವಣೆ ಸಂಭವಿಸುತ್ತದೆ ಎಂಬ ಚರ್ಚೆ ವ್ಯಾಪಕವಾಗಿದೆ. ಕೃತಕ ಬುದ್ಧಿಮತ್ತೆ ತರಬಹುದಾದ ಬದಲಾವಣೆಗಳ ಬಗ್ಗೆ ಯಾರಿಗೂ ಸ್ಪಷ್ಟತೆ ಇಲ್ಲ. ಕೃತಕ ಬುದ್ಧಿಮತ್ತೆ ಸಾಮಾಜಿಕ ವ್ಯವಸ್ಥೆಯ ಸಮಸ್ಯೆಗಳನ್ನು ಪರಿಹರಿಸಬಹುದು. ಮನುಕುಲದ ಮೂಲಭೂತ ಸಮಸ್ಯೆಗಳನ್ನು
ಪರಿಹರಿಸಿ ಅರ್ಥಪೂರ್ಣ ಬದಲಾವಣೆ ತರುವ ಸಾಮರ್ಥ್ಯ ಇರುವುದು ಕೇವಲ ನೈಜ ಬುದ್ದಿಮತ್ತೆಗೆ ಮಾತ್ರ. ಆದ್ದರಿಂದ ನೈಜ ಬುದ್ದಿಮತ್ತೆಯ ಬಳಕೆಯ ಬಗ್ಗೆ ಗಮನಹರಿಸಬೇಕು,”ಎಂದು ಹೇಳಿದರು.
ಸರಿ ಮತ್ತು ತಪ್ಪುಗಳ ಅರಿವು ಹಾಗೂ ಬಳಕೆ ಕಡಿಮೆಯಾಗಿರುವುದು ಭಾರತ ಇಂದು ಎದುರಿಸುತ್ತಿರುವ ಬಿಕ್ಕಟ್ಟಿಗೆ ಕಾರಣ. ಮನುಷ್ಯನಲ್ಲಿರುವ ನೈಜ ಬುದ್ಧಿಮತ್ತೆಯನ್ನು ಬಳಸಿಕೊಂಡರೆ ಇದಕ್ಕೆ ಪರಿಹಾರ ಸಾಧ್ಯ. ನೈಜ ಬುದ್ಧಿಮತ್ತೆಯ ಬಳಕೆ ಭಾರಿ ಕಡಿಮೆಯಾಗುತ್ತಿರುವುದು ದುರಂತದ ಸಂಕೇತ ಎಂದರು.
ಶಿಕ್ಷಣ ಸಂಸ್ಥೆಗಳು, ಪೋಷಕರು ಹಾಗೂ ಸರಕಾರಗಳು ಅನ್ವಯಿಕ ವಿಜ್ಞಾನಕ್ಕೆ ಹೆಚ್ಚು ಒತ್ತು ಕೊಡುತ್ತಿರುವುದು ಕಳವಳದ ವಿಷಯ. ಮೂಲ ವಿಜ್ಞಾನದ ವಿಷಯಗಳಿಗೆ ಪರ್ಯಾಯವಿಲ್ಲ. ಬಾಹ್ಯಾಕಾಶ, ಆರೋಗ್ಯ, ಪರಿಸರ ಕ್ಷೇತ್ರಗಳಲ್ಲಿ ಸಂಶೋಧನೆಗೆ ವಿಫುಲ ಅವಕಾಶಗಳಿವೆ. ಇದು ಅರ್ಥವಾಗದ ಹೊರತು ನೀಟ್, ಸಿಇಟಿ, ಜೆಇಇ ಹಾಗೂ ಐಐಟಿ ಮಾತ್ರ ಉತ್ತಮ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತವೆ ಎಂಬ ಭ್ರಮೆಯಿಂದ ಹೊರಗಡೆ ಬರಲು ಸಾಧ್ಯವಿಲ್ಲ ಎಂದರು.
ಸಾವಯವ ಹಾಗೂ ಸುಸ್ಥಿರ ಕೃಷಿ ತಜ್ಞ ಶ್ರೀಪಾದರಾಜ್ ಮುರಡಿ ಮಾತನಾಡಿ ಕೃಷಿ, ತೋಟಗಾರಿಕೆ ಮತ್ತು ಹೈನುಗಾರಿಕೆ ಕ್ಷೇತ್ರಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪರಿಣಾಮಕಾರಿ ಬಳಕೆ ಕ್ರಾಂತಿಕಾರಿ ಬದಲಾವಣೆ ತರಲು ಸಾಧ್ಯ. ಈ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಶೋಧನೆ ನಡೆಯದೇ ಇರುವುದು ಹಾಗೂ ವೈಜ್ಞಾನಿಕ ಆವಿಷ್ಕಾರಗಳ ಬಳಕೆಯಾಗದಿರುವುದು ಎಲ್ಲಾ ಕೃಷಿ ಸಮಸ್ಯೆಗಳ ಮೂಲ. ಈ ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳಿವೆ. ವಿದ್ಯಾರ್ಥಿಗಳು ಇದರ ಕಡೆ ಗಮನಹರಿಸಬೇಕು ಎಂದರು.
“ಮಾರ್ಗದರ್ಶನ ಮತ್ತು ವೇದಿಕೆ ಒದಗಿಸಿದರೆ ವಿದ್ಯಾರ್ಥಿಗಳು ಉನ್ನತ ಹುದ್ದೆಗೆ ಏರಲು ಸಾಧ್ಯ. ಇಂದಿನ ಶೈಕ್ಷಣಿಕ ವ್ಯವಸ್ಥೆಯ ಸಮಸ್ಯೆಗಳಿಗೆ ಬಹುತೇಕ ಪೋಷಕರ ಮನಸ್ಥಿತಿ ಮತ್ತು ವೃತ್ತಿಪರತೆರಹಿತ ಶಿಕ್ಷಕರು ಕಾರಣ. ಮಕ್ಕಳಿಗೆ ವೇದಿಕೆ ಒದಗಿಸಲು ವಿಜ್ಞಾನ ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಇದರಲ್ಲಿ ಒಟ್ಟು 586 ವಿವಿಧ ಮಾದರಿಗಳನ್ನು ವಿದ್ಯಾರ್ಥಿಗಳು ಸಿದ್ಧಪಡಿಸಿದ್ದಾರೆ. ಮಕ್ಕಳಿಗೆ ಕೃಷಿ ಮತ್ತು ಪರಿಸರ ಕ್ಷೇತ್ರಗಳ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ದೇಸಿ ಭತ್ತ, ತರಕಾರಿ ಬೀಜಗಳ ತಳಿ, ನೈಸರ್ಗಿಕ ಬೆಲ್ಲ ಹಾಗೂ ಸಿರಿಧಾನ್ಯಗಳ ಪ್ರದರ್ಶನ ಏರ್ಪಡಿಸಲಾಗಿದೆ. ಬೆಳಗಾವಿಯ ಖಾನಾಪುರದ ಕೃಷಿಕ ಡಾ. ಶಂಕರ್ ಲಂಗಟಿ ಅವರೊಂದಿಗೆ ರೈತರಿಗಾಗಿ ಸಂವಾದ ಏರ್ಪಡಿಸಲಾಗಿದೆ,” ಎಂದು ಎಸ್ ವಿ ಸಿ ಸಂಸ್ಥೆಯ
ಸಿ ಇ ಓ ಡಾ. ಜಗದೀಶ್ ಅಂಗಡಿ ಹೇಳಿದರು.
ಎಸ್ ವಿ ಸಿ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಬಸವರಾಜ್ ಚಂದ್ರಶೇಖರ್,
ಎಸ್ ವಿ ಸಿ ಮೆಮೋರಿಯಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಮಹದೇವ್ ಮಧಾಳೆ, ಎಸ್ ವಿ ಸಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಮುಖ್ಯೋಪಾಧ್ಯಾಯ ಭೀಮರಾವ್ ಕುಲಕರ್ಣಿ,
ಎಸ್ ವಿ ಸಿ ಪಿ ಯು ಕಾಲೇಜಿನ ಪ್ರಾಂಶುಪಾಲ ಭೀಮಸೇನ್ ಆಚಾರ್, ಡಾ ಶಂಕರ್ ಲಂಗಟಿ, ಲೇಖಕ – ಪತ್ರಕರ್ತ ಆನಂದ ತೀರ್ಥ ಪ್ಯಾಟಿ ಹಾಗೂ ಹಣಕಾಸು ಅಧಿಕಾರಿ ಅರುಣ್ ಕರ್ಮಾಕರ್ ಉಪಸ್ಥಿತರಿದ್ದರು.

ಶೀರ್ಷಿಕೆಗಳು:

SVC1: ಎಸ್ ವಿ ಸಿ ಸಂಸ್ಥೆಯಲ್ಲಿ ಆಯೋಜಿಸಿರುವ ಎರಡು ದಿನಗಳ ವಿಜ್ಞಾನ ವಸ್ತು ಪ್ರದರ್ಶನವನ್ನು
ಬುಧವಾರ ಬೆಂಗಳೂರಿನ ವಿಜ್ಞಾನಿ ಡಾ. ಆರ್ ಹಿರೇಮಠ ಉದ್ಘಾಟಿಸಿದರು. ಎಸ್ ವಿ ಸಿ ಸಂಸ್ಥೆ ಕಾರ್ಯದರ್ಶಿ ಬಸವರಾಜ್ ಚಂದ್ರಶೇಖರ್, ಸಿಇಒ ಡಾ. ಜಗದೀಶ್ ಅಂಗಡಿ,
ಸಿಬಿಎಸ್‌ಇ ಪಠ್ಯಕ್ರಮ ಶಾಲೆಯ ಪ್ರಾಂಶುಪಾಲ ಮಹದೇವ್ ಮಧಾಳೆ, ರಾಜ್ಯ ಪಠ್ಯಕ್ರಮ
ಶಾಲೆ ಮುಖ್ಯೋಪಾಧ್ಯಾಯ ಭೀಮರಾವ್ ಕುಲಕರ್ಣಿ,
ಪಿ ಯು ಕಾಲೇಜಿನ ಪ್ರಾಂಶುಪಾಲ ಭೀಮಸೇನ್ ಆಚಾರ್, ದೇಸಿ ಭತ್ತ ತಳಿ ಸಂರಕ್ಷಕ ಡಾ. ಶಂಕರ್ ಲಂಗಟಿ, ಲೇಖಕ – ಪತ್ರಕರ್ತ ಆನಂದ ತೀರ್ಥ ಪ್ಯಾಟಿ ಹಾಗೂ ಹಣಕಾಸು ಅಧಿಕಾರಿ ಅರುಣ್ ಕರ್ಮಾಕರ್ ಉಪಸ್ಥಿತರಿದ್ದರು.

SVC2: ಎಸ್ ವಿ ಸಿ ಸಂಸ್ಥೆಯಲ್ಲಿ ಆಯೋಜಿಸಿರುವ ಎರಡು ದಿನಗಳ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಬುಧವಾರ ದೇಸಿ ಭತ್ತ ತಳಿ ಸಂರಕ್ಷಕ ಡಾ. ಶಂಕರ್ ಲಂಗಟಿ ಅಳಿವಿನಂಚಿನಲ್ಲಿರುವ ಅಕ್ಕಿ ತಳಿ ಕುರಿತು ಮಾಹಿತಿ ನೀಡಿದರು.

SVC3: ಎಸ್ ವಿ ಸಿ ಮೆಮೋರಿಯಲ್ ಪಬ್ಲಿಕ್ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳು ಸಿದ್ಧಪಡಿಸಿದ
ಇಸ್ರೇಲ್ ತಂತ್ರಜ್ಞಾನ ಆಧಾರಿತ ಹೈಡ್ರೋಫೋನಿಕ್ ಕೃಷಿ ಪದ್ಧತಿ ಎಲ್ಲರ ಗಮನ ಸೆಳೆಯಿತು.

SVC4, 5, 6: ಎಸ್ ವಿ ಸಿ ಸಂಸ್ಥೆಯಲ್ಲಿ ಆಯೋಜಿಸಿರುವ ಎರಡು ದಿನಗಳ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಬುಧವಾರ ಬೆಂಗಳೂರಿನ ವಿಜ್ಞಾನಿ ಡಾ. ಆರ್ ಸಿ ಹಿರೇಮಠ್, ಎಸ್ ವಿ ಸಿ ಸಂಸ್ಥೆ ಕಾರ್ಯದರ್ಶಿ ಬಸವರಾಜ್ ಚಂದ್ರಶೇಖರ್, ದೇಸಿ ಭತ್ತ ತಳಿಷ ಸಂರಕ್ಷಕ ಡಾ. ಶಂಕರ್ ಲಂಗಟಿ ಮಕ್ಕಳು ಸಿದ್ಧಪಡಿಸಿದ ಮಾದರಿಗಳನ್ನು ವೀಕ್ಷಿಸಿದರು.

Get real time updates directly on you device, subscribe now.

Comments are closed.

error: Content is protected !!