ವಿಶ್ವ ಆರೈಕೆದಾರರ ದಿನಾಚರಣೆ

0

Get real time updates directly on you device, subscribe now.

ಆರೈಕೆದಾರರ ಸೇವೆ ಸ್ಮರಣೀಯ
-ದಾಸ್ ಸೂರ್ಯವಂಶಿ

ಬೆಂಗಳೂರು ,ಅಕ್ಟೋಬರ್ :

ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ವಿಕಲಚೇತನರು ಮತ್ತು ಆರೈಕೆದಾರರೊಂದಿಗೆ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಇಂದು (ದಿನಾಂಕ 29.10.2025 ರಂದು) ಬಾಲ ಭವನ ಸಭಾಂಗಣದಲ್ಲಿ”ವಿಶ್ವ ಆರೈಕೆದಾರರ ದಿನಾಚರಣೆಯನ್ನು”
ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟಿಸಿದ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಆಯುಕ್ತರಾದ ದಾಸ್ ಸೂರ್ಯವಂಶಿ ಅವರು ಮಾತನಾಡಿ, ಶೇಕಡ 75 ಕ್ಕಿಂತಲೂ ಹೆಚ್ಚು ವಿಕಲತೆ ಹೊಂದಿರುವ ವ್ಯಕ್ತಿಗಳು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಲು ಕಷ್ಟವಾಗುತ್ತಿದ್ದು ಅವರುಗಳ ಆರೈಕೆ ಮಾಡಬೇಕಾಗಿರುತ್ತದೆ.ಇಂತಹ ಆರೈಕೆದಾರರಿಗೆ ಸರ್ಕಾರದ ವತಿಯಿಂದ ಪ್ರತಿ ತಿಂಗಳು ಒಂದು ಸಾವಿರದಂತೆ ಆರೈಕೆ ಭತ್ಯೆ ನೀಡಲಾಗುತ್ತಿದೆ.ಆರೈಕೆದಾರರ ಸೇವೆಯನ್ನು ಸ್ಮರಿಸಿ ಅವರನ್ನು ಉತ್ತೇಜಿಸಲು ಈ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಮಾಜಿ ಆಯುಕ್ತ ರಾಜಣ್ಣ ಮಾತನಾಡಿ, ವಿಕಲಚೇತನರ ಆರೈಕೆದಾರರು ಎಲೆ ಮರೆಯ ಕಾಯಿಯ ಹಾಗೆ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದು ದಿನದ ಪೂರ್ತಿ ವಿಕಲಚೇತನರೊಂದಿಗೆ ಇರಬೇಕಾಗಿರುವುದರಿಂದ ಇವರಿಗೆ ಯಾವುದೇ ಉದ್ಯೋಗವಿಲ್ಲದೆ ಆರ್ಥಿಕವಾಗಿ ಹಿಂದುಳಿದಿರುತ್ತಾರೆ ಯಾವುದೇ ಸಭೆ ಸಮಾರಂಭಗಳಿಗೆ ಸಾಮಾಜಿಕ ಕಾರ್ಯಗಳಿಗೆ ಹೋಗಲು ಸಾಧ್ಯವಾಗದೆ ಮನೆಯಲ್ಲೇ ಇದ್ದು ಮಾನಸಿಕವಾಗಿ ದೈಹಿಕವಾಗಿ ಕುಗ್ಗಿ ಹೋಗಿರುತ್ತಾರೆ. ಇಂತಹ ಆರೈಕೆದಾರರನ್ನು ಗುರುತಿಸಿ ಅವರೊಂದಿಗೆ ಸರ್ಕಾರ, ಸಮಾಜ ,ಸಂಘ ಸಂಸ್ಥೆಗಳು ಇದ್ದೇವೆ ಎಂಬ ಭರವಸೆ ನೀಡಿ ಪ್ರೋತ್ಸಾಹಿಸಬೇಕು.ಕರ್ನಾಟಕ ಸರ್ಕಾರ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಆರೈಕೆದಾರರಿಗೆ ಮಾಸಿಕ ಪ್ರೋತ್ಸಾಹ ಧನ ನೀಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯದ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ 10 ಜನ ಆರೈಕೆದಾರರಿಗೆ ತಲಾ 5 ಸಾವಿರ ರೂ.ಗಳ ನಗದು ನೀಡಿ ಸನ್ಮಾನಿಸಲಾಯಿತು .

ಆರೈಕೆದಾರರ ಪ್ರತಿನಿಧಿಗಳು ಮಾತನಾಡಿ, ನಮ್ಮ ಸೇವೆಯನ್ನ ಗುರುತಿಸಿ ಪ್ರೋತ್ಸಾಹ ನೀಡುತ್ತಿರುವ ಸರ್ಕಾರದ ಕಾರ್ಯ ಅಭಿನಂದನೀಯ,ಆರೈಕೆ ಭತ್ಯೆಯನ್ನು ಕನಿಷ್ಠ 3000ಗಳಿಗೆ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

ಬಾಲ ಭವನ ಸೊಸೈಟಿ ಅಧ್ಯಕ್ಷ ಬಿ.ಆರ್.ನಾಯ್ಡು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಂಟಿ ನಿರ್ದೇಶಕ ಎಸ್‌.ನಟರಾಜ್, ಹಿರಿಯ ಮನೋವೈದ್ಯ ಡಾ. ಸಿ. ಆರ್ .ಚಂದ್ರಶೇಖರ್ ಡಾ.ಎಂ ಕೆ.ಶ್ರೀಧರ , ಡಾ. ಜಗದೀಶ್ ತೀರ್ಥಹಳ್ಳಿ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ.ರಜನಿ ಮತ್ತಿತರರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸುಮಾರು ಸಾವಿರಕ್ಕೂ ಅಧಿಕ ಆರೈಕೆದಾರರು, ವಿಕಲಚೇತನರು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು .

ಸಂಪೂರ್ಣ ಅಂಧತ್ವವುಳ್ಳ ಕುಮಾರಿ ಪ್ರೀತ ಹಾಗೂ ಪುಷ್ಪ ಇವರು ನಿರೂಪಣೆ ಮಾಡಿದ್ದು ವಿಶೇಷವಾಗಿತ್ತು. ಅಶ್ವತ್ಥಮ್ಮ ಸ್ವಾಗತಿಸಿದರು, ನಾಗವೇಣಿ ವಂದಿಸಿದರು.

Get real time updates directly on you device, subscribe now.

Leave A Reply

Your email address will not be published.

error: Content is protected !!