ಉಪಲೋಕಾಯುಕ್ತರಿಂದ ಕೊಪ್ಪಳ ನಗರದ ವಿವಿಧ ಕಚೇರಿಗಳಿಗೆ ಭೇಟಿ: ಪರಿಶೀಲನೆ

0

Get real time updates directly on you device, subscribe now.

ಜನರ ಸೇವೆಯೇ ನಮ್ಮ ಆದ್ಯ ಕರ್ತವ್ಯವಾಗಿದೆ – ಉಪಲೋಕಾಯುಕ್ತ ನ್ಯಾ. ಬಿ.ವೀರಪ್ಪ


ಕೊಪ್ಪಳ ಅಕ್ಟೋಬರ್ : ಸರ್ಕಾರದ ಸೇವೆ ಮತ್ತು ಸೌಲಭ್ಯಗಳು ಜನರಿಗೆ ಸರಿಯಾದ ರೀತಿಯಲ್ಲಿ ದೊರೆಯುತ್ತಿವೆಯೇ ಅಥವಾ ಇಲ್ಲವೋ ಎಂಬುದನ್ನು ಗಮನಿಸಲು ಲೋಕಾಯುಕ್ತ ಸಂಸ್ಥೆಯಿದ್ದು, ಜನರ ಸೇವೆಯೇ ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಗೌರವಾನ್ವಿತ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದರು. 

 ಅವರು ಬುಧವಾರ ಕೊಪ್ಪಳ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಪ್ರವಾಸ ಕಾರ್ಯಕ್ರಮ ನಿಮಿತ್ತ ಕೊಪ್ಪಳ ಜಿಲ್ಲಾ ಆಸ್ಪತ್ರೆ ಹಾಗೂ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಿಢೀರ ಭೇಟಿ ನೀಡಿ ಪರಿಶೀಲನೆ ಕೈಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಮಾತನಾಡಿದರು. 

 ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿನ ಬೆಡ್‌ಗಳು ತುಂಬಾ ಹಳೆಯದ್ದಾಗಿವೆ. ತಲೆ ದಿಂಬುಗಳು ಕೂಡ ಸರಿಯಾಗಿಲ್ಲ. ತಕ್ಷಣ ಅವುಗಳನ್ನು ಬದಲಾಯಿಸಬೇಕು. ಔಷಧಿಗಳನ್ನು ಹೊರಗಡೆಯಿಂದ ತರಲು ವೈದರು ಬರೆದುಕೊಡುತ್ತಿದ್ದಾರೆಂದು ಜನರು ಹೇಳುತ್ತಿದ್ದಾರೆ. ಔಷಧಗಳನ್ನು ಹೊರಗಡೆ ಬರೆದುಕೊಡಲು ಸರ್ಕಾರಿ ಆಸ್ಪತ್ರೆಗಳಲ್ಲಿ ಅವಕಾಶವಿಲ್ಲ. ಪ್ರತಿ ದಿನ ಸರ್ಕಾರದಿಂದ ಜಿಲ್ಲಾ ಆಸ್ಪತ್ರೆಗೆ 25 ಸಾವಿರ ರೂಪಾಯಿ ಮತ್ತು ತಾಲ್ಲೂಕು ಆಸ್ಪತ್ರೆಗಳಿಗೆ 10 ಸಾವಿರ ರೂ.ಗಳನ್ನು ನೀಡುತ್ತಾರೆ. ಯಾವುದೇ ಔಷಧಿಗಳು ಲಭ್ಯವಿಲ್ಲದಿದ್ದರೂ ಸಹ ಆಸ್ಪತ್ರೆಯವರೇ ಹೊರಗಡೆಯಿಂದ ತಂದು ಕೊಡಬೇಕಾಗುತ್ತದೆ. ಜಿಲ್ಲಾ ಆಸ್ಪತ್ರೆ ಮತ್ತು ಜಿಲ್ಲಾ ಎಂ.ಸಿ.ಹೆಚ್. ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಸರಿಯಾದ ರೀತಿಯ ಕುಡಿಯುವ ನೀರಿನ ಸೌಲಭ್ಯಗಳಿಲ್ಲ. ಕೆಲವು ಫಿಲ್ಟರ್‌ಗಳಲ್ಲಿ ನೀರಿಲ್ಲ ಮತ್ತು ಕೆಲವು ನೀರಿನ ಫಿಲ್ಟರ್‌ಗಳಲ್ಲಿ ತುಕ್ಕು ಹಿಡಿದಿವೆ. ಶೌಚಾಲಯಗಳು ಚಾಮ್ ಆಗಿವೆ. ಅವುಗಳನ್ನು ಸರಿಪಡಿಸದಿದ್ದರೆ ಜಿಲ್ಲಾ ಆಸ್ಪತ್ರೆ ಮತ್ತು ಜಿಲ್ಲಾ ಎಂ.ಸಿ.ಹೆಚ್. ಆಸ್ಪತ್ರೆಯ ಮೇಲೆ ಸುಮೊಟೊ ಕೇಸ್ ದಾಖಲಿಸಲಾಗುವುದು ಎಂದರು. 

 ಎಲ್ಲಾ ಸರ್ಕಾರದಲ್ಲೂ ಆಸ್ಪತ್ರೆ ಮತ್ತು ಹಾಸ್ಟೆಲ್‌ಗಳಿಗೆ ಸಾಕಷ್ಟು ಅನುದಾನವನ್ನು ನೀಡಲಾಗುತ್ತದೆ. ಇದರ ಮುಖ್ಯ ಉದ್ದೇಶ ಬಡ ಜನರಿಗೆ ಸೇವೆಗಳು ಸಿಗಬೇಕು ಮತ್ತು ಅವರಿಗೆ ಅನುಕೂಲವಾಗಬೇಕೆಂಬುವಾಗಿದೆ. ಆದರೆ, ಸಂಬಂಧಿಸಿದ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡದೇ ಇರುವುದರಿಂದ ಜನರಿಗೆ ಸರಿಯಾದ ರೀತಿಯಲ್ಲಿ ಸೌಲಭ್ಯಗಳು ತಲುಪುತ್ತಿಲ್ಲ. ಇದರಿಂದ ಮಾನವೀಯತೆಯನ್ನು ಕಳೆದುಕೊಂಡಂತಾಗುತ್ತಿದೆ. ಆತ್ಮವಂಚನೆ ಮಾಡಿಕೊಳ್ಳದೇ ಪ್ರತಿಯೊಬ್ಬ ನೌಕರರು ತಮ್ಮ ಕಾಯಕವನ್ನರಿತು ಕಾರ್ಯನಿರ್ವಹಿಸಬೇಕು. ಸಾರ್ವಜನಿಕರಿಗೆ ಸಮಯಕ್ಕೆ ಸರಿಯಾಗಿ ಸೇವೆಗಳನ್ನು ನೀಡಬೇಕು. ಜನಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಇದನ್ನು ಅಧಿಕಾರಿಗಳು ಅರ್ಥೈಸಿಕೊಳ್ಳಬೇಕು. ಸರ್ಕಾರದ ಕೆಲಸವನ್ನು ದೇವರ ಕೆಲಸ ಎಂದು ಭಾವಿಸಬೇಕು. ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ವೈದ್ಯರು ಕೇಂದ್ರ ಸ್ಥಾನದಲ್ಲಿದ್ದು ಕೆಲಸ ಮಾಡಬೇಕು. ಈ ಕುರಿತು ಆದೇಶ ಹೊರಡಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಉಪಲೋಕಾಯುಕ್ತರು ಸೂಚನೆ ನೀಡಿದರು. 

 ಕೊಪ್ಪಳದ ಕೇಂದ್ರೀಯ ಬಸ್ ನಿಲ್ದಾಣದಲ್ಲಿನ ಕಸದ ತೊಟ್ಟಿಗಳನ್ನು ಬದಲಾಯಿಸಬೇಕು ಹಾಗೂ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ಮಾಡಬೇಕೆಂದು ಸೂಚಿಸಲಾಗಿದೆ. ಇದಲ್ಲದೆ ಶೌಚಾಲಯ ಮತ್ತು ಆಹಾರ ಅಂಗಡಿಗಳನ್ನು ಪರೀಶೀಲಿಸಿದ್ದು, ಅಲ್ಲಿ ಸ್ವಚ್ಛತೆ ಕಂಡುಬಂದಿರುವುದಿಲ್ಲ. ಈ ಎಲ್ಲಾ ಕೆಲಸಗಳನ್ನು ಇಂದು ಸಾಯಂಕಾಲದೊಳಗೆ ಮಾಡುವುದಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವೇಳೆ ಈ ಎಲ್ಲಾ ಕೆಲಸಗಳು ಆಗದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಸುಮೊಟೊ ಕೇಸ್ ದಾಖಲಿಸಲಾಗುವುದು ಎಂದರು ಹೇಳಿದರು.

 *ಜಿಲ್ಲಾ ಆಸ್ಪತ್ರೆ ಮತ್ತು ವಿವಿಧ ಕಚೇರಿಗಳಿಗೆ ಅನಿರಿಕ್ಷೀತ ಭೇಟಿ:* ಗೌರವಾನ್ವಿತ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಮೊದಲಿಗೆ ಕೊಪ್ಪಳ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ಬಸ್ ನಿಲ್ದಾಣದ ಸಾರ್ವಜನಿಕರ ಆಸನಗಳ ವ್ಯವಸ್ಥೆ, ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮತ್ತು ಬೇಕರಿ ಅಂಗಡಿಗಳ ವಸ್ತುಗಳನ್ನು ಪರಿಶೀಲಿಸಿದರು. ಇದೇ ವೇಳೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕ ಪ್ರಯಾಣಿಕರ ಕುಂದು ಕೊರತೆಯನ್ನು ಆಲಿಸಿ ಪ್ರಯಾಣಿಕರಿಗೆ ಯಾವುದೇ ರೀತಿ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ನಂತರ ಉಪ ಲೋಕಾಯುಕ್ತರು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ತುರ್ತು ಚಿಕಿತ್ಸಾ ವಿಭಾಗ, ಎಸ್.ಐ.ಸಿ.ಯು, ಎಂ.ಐ.ಸಿ.ಯು, ಪಿ.ಐ.ಸಿ.ಯು, ಇಸಿಜಿ ಎಕೋ ವಿಭಾಗ, ಮಹಿಳೆಯರ ಮೆಡಿಸಿನ್ ವಾರ್ಡ್, ಐಸಿಯು ವಿಭಾಗ ಹಾಗೂ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಹೆರಿಗೆ ಕೊಠಡಿ, ವಿವಿಧ ವಾರ್ಡ್, ಮಕ್ಕಳ ವಿಭಾಗ, ಜನರಲ್ ವಾರ್ಡ್ ಸೇರಿದಂತೆ ಆಸ್ಪತ್ರೆಗಳಲ್ಲಿನ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಗಳ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿ, ಸ್ವತಃ ರೋಗಿಗಳ ಆರೋಗ್ಯವನ್ನು ವಿಚಾರಿಸಿದರು. 

ಬಳಿಕ ಕೊಪ್ಪಳ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿ, ಆಧಾರ್ ಕೇಂದ್ರ, ಅಭಿಲೇಖಾಲಯ, ತಹಶೀಲ್ದಾರ ಕಚೇರಿಯ ಅಧಿಕಾರಿ ಮತ್ತು ಸಿಬ್ಬದಿಯ ಹಾಜರಾತಿ ಹಾಗೂ ಅವರ ಮೊಬೈಲ್‌ಗಳ ಪರಿಶೀಲನೆ, ಕ್ಯಾಶ ರಿಜಿಸ್ಟರ್, ಆರ್.ಟಿ.ಸಿ ಕೇಸ್ ಪೆಂಡಿಂಗ್ ಸೇರಿದಂತೆ ಇತರೆ ದಾಖಲೆಗಳ ಪರಿಶೀಲನೆ ನಡೆಸಿದರು.

ನಂತರ ಕೊಪ್ಪಳ ಉಪ ನೋಂದಣಾಧಿಕಾರಿಗಳ ಕಚೇರಿ, ಕೊಪ್ಪಳ ನಗರಸಭೆ, ತೋಟಗಾರಿಕೆ ಇಲಾಖೆ, ಗಾಂಧಿ ನಗರದ ಅಂಗನವಾಡಿ ಕೇಂದ್ರ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಪ್ಪಳ ತಾಲ್ಲೂಕು ಪಂಚಾಯತ್ ಕಚೇರಿ ಹಾಗೂ ಜಿಲ್ಲಾಡಳಿತ ಭವನದಲ್ಲಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿ, ವಯಸ್ಕರ ಶಿಕ್ಷಣ ಇಲಾಖೆ, ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಸೇರಿದಂತೆ ಇತರೆ ವಿವಿಧ ಇಲಾಖೆಗಳಿಗೆ ಅನಿರಿಕ್ಷೀತವಾಗಿ ಭೇಟಿ ನೀಡಿ, ಸಂಬಂಧಿಸಿದ ಇಲಾಖೆಗಳ ದಾಖಲೆ, ಹಾಜರಾತಿ ಮತ್ತು ಇತರೆ ಕಾರ್ಯಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಕರ್ನಾಟಕ ಲೋಕಾಯುಕ್ತದ ವಿಚಾರಣೆ ಅಪರ ನಿಬಂಧಕರಾದ ಡಾ. ಕಸನಪ್ಪ ನಾಯ್ಕ, ರಮಾಕಾಂತ್ ಚವ್ಹಾಣ ಹಾಗೂ ಅರವಿಂದ ಎನ್.ವಿ., ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ್ ಎಸ್. ದರಗದ, ರಾಯಚೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಸತೀಶ್ ಎಸ್. ಚಿಟಾಗುಬ್ಬಿ, ಕೊಪ್ಪಳ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಹೇಮಂತಕುಮಾರ್, ಉಪವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ, ಪ್ರಭಾರಿ ಲೋಕಾಯುಕ್ತ ಡಿವೈಎಸ್ಪಿ ಚಂದ್ರಪ್ಪ ಇ.ಟಿ. ಸೇರಿದಂತೆ ವಿವಿಧ ಇಲಾಖೆಗಳ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಲೋಕಾಯಕ್ತ ಇಲಾಖೆಯ ಪೊಲೀಸ್ ಇನ್ಸಪೆಕ್ಟರಗಳು, ಲೋಕಾಯುಕ್ತದ ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

****

Get real time updates directly on you device, subscribe now.

Leave A Reply

Your email address will not be published.

error: Content is protected !!