ಗೃಹ ಲಕ್ಷ್ಮಿ ಯೋಜನೆ: ಆಗಸ್ಟ್ 30ರಂದು ವಡ್ಡರಹಟ್ಟಿಯಲ್ಲಿ ಫಲಾನುಭವಿಗಳೊಂದಿಗೆ ಸಂವಾದ ಕಾರ್ಯಕ್ರಮ
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ “ಗೃಹ ಲಕ್ಷ್ಮಿ ಯೋಜನೆಯ” ಅನುಷ್ಠಾನ ಮತ್ತು ಫಲಾನುಭವಿಗಳೊಂದಿಗೆ ಸಂವಾದ ಕಾರ್ಯಕ್ರಮ ಆಗಸ್ಟ್ 30ರಂದು ಬೆಳಗ್ಗೆ 9:30ಕ್ಕೆ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮದ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಭಾಂಗಣದಲ್ಲಿ ನಡೆಯಲಿದೆ.
ಕರ್ನಾಟಕ ರಾಜ್ಯ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2000 ರೂ.ವನ್ನು ಅವರ ಖಾತೆಗೆ ವರ್ಗಾವಣೆಗೊಳಿಸುವ ಗೃಹ ಲಕ್ಷ್ಮಿ ಯೋಜನೆಯು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಂದ ಸಾಂಸ್ಕೃತೀಕ ನಗರವಾದ ಮೈಸೂರು ಮಹಾನಗರದಲ್ಲಿ ಉದ್ಘಾಟನೆಗೊಳ್ಳುತ್ತಿದ್ದು, ಕರ್ನಾಟಕ ರಾಜ್ಯದಾದ್ಯಂತ ಎಲ್ಲಾ ಜಿಲ್ಲೆ, ತಾಲೂಕು ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಏಕ ಕಾಲಕ್ಕೆ ಅನುಷ್ಠಾನಗೊಳ್ಳುತ್ತಿದೆ. ಕಾರ್ಯಕ್ರಮದ ಅಂಗವಾಗಿ ವಿವಿಧ ಜಿಲ್ಲೆಗಳ ಆಯ್ದ ಫಲಾನುಭವಿಗಳೊಂದಿಗೆ ಮುಖ್ಯಮಂತ್ರಿಗಳು ನೇರ ಸಂವಾದವನ್ನು (ವಿಡಿಯೋ ಕಾನ್ಪರೆನ್ಸ್) ನಡೆಸುವರು.
ಸಂವಾದ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲೆಯ ವಡ್ಡರಟ್ಟಿ ಗ್ರಾಮ ಪಂಚಾಯತ್ ಸಹ ಆಯ್ಕೆಯಾಗಿದ್ದು, ಈ ಕಾರ್ಯಕ್ರಮದ ಅಂಗವಾಗಿ ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನ ಮತ್ತು ಫಲಾನುಭವಿಗಳೊಂದಿಗೆ ಸಂವಾದ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಜನಾರ್ಧನರೆಡ್ಡಿ ಮತ್ತು ಗಂಗಾವತಿ ತಾಲೂಕು ಮಟ್ಟದ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಫಲಾನುಭವಿಗಳು ಭಾಗವಹಿಸುವರು ಎಂದು ಗಂಗಾವತಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.