ಗ್ರಾಮೀಣ ಪ್ರದೇಶದಲ್ಲಿ ಜಿಲ್ಲಾಧಿಕಾರಿಗಳ ಸಂಚಾರ: ಬೆಳೆ ಸಮೀಕ್ಷೆ ಖುದ್ದು ಪರಿಶೀಲನೆ
ಕೊಪ್ಪಳ : ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಆಗಸ್ಟ್ 29ರಂದು ಗ್ರಾಮೀಣ ಪ್ರದೇಶದಲ್ಲಿ ಪ್ರವಾಸ ಕೈಗೊಂಡರು.
ಕುಷ್ಟಗಿ ತಾಲೂಕಿನ ಯರಗೇರಾ ಮತ್ತು ಡೊಣ್ಣೆಗುಡ್ಡ ಗ್ರಾಮಗಳಿಗೆ ತೆರಳಿ ಬೆಳೆ ಸಮೀಕ್ಷೆ ಕಾರ್ಯದ ಬಗ್ಗೆ ಖುದ್ದು ಪರಿಶೀಲನೆ ನಡೆಸಿದರು. ಡೊಣೇಗುಡ್ಡ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಜಿಲ್ಲಾಧಿಕಾರಿಗಳು, ಗ್ರಾಮದ ರೈತರೊಂದಿಗೆ ಬೆಳೆ ಸಮೀಕ್ಷೆ ಬಗ್ಗೆ ಚರ್ಚಿಸಿ ತಿಳಿವಳಿಕೆ ಮೂಡಿಸಿದರು. ಇದೆ ವೇಳೆ ಯರಗೇರಾ ಗ್ರಾಮದ ರಾಮಪ್ಪ ಅವರ ಜಮೀನಿಗೆ ತೆರಳಿ ಬೆಳೆ ಸಮೀಕ್ಷೆ ಬಗ್ಗೆ ಖುದ್ದು ಪರಿಶೀಲಿಸಿದರು.
ಈ ಬೆಳೆ ಸಮೀಕ್ಷೆ ಪ್ರಕ್ರಿಯೆಯಲ್ಲಿ ಸಕ್ರಿಯ ಭಾಗಿಯಾಗಿ ಸೂಕ್ತವಾಗಿ ಪರಿಶೀಲಿಸಿ ಅನುಮೋದನೆ ಕೊಡುವ ಕಾರ್ಯವನ್ನು ಅಚ್ಚುಕಟ್ಟಾಗಿ ನಡೆಸಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು, ಸೂಪರ್ ವೈಸರ್ ಎಂದು ನೇಮಕ ಮಾಡಿದ ಗ್ರಾಮಮಟ್ಟದ ಕಂದಾಯ, ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯ ರೈತರಲ್ಲಿ ಮನವಿ: ಈ ಬೆಳೆ ಸಮೀಕ್ಷೆ ಪ್ರಕ್ರಿಯೆಯಿಂದ ಬೆಳೆವಿಮೆ, ಬೆಳೆಹಾನಿ ಪರಿಹಾರ, ಬೆಳೆಸಾಲ ಪಡೆಯುವುದಕ್ಕೆ ಸಹ ರೈತರಿಗೆ ಅನುಕೂಲವಾಗಲಿದೆ. ಇದನ್ನರಿತು ರೈತರು ಬೆಳೆ ಸಮೀಕ್ಷೆ ಆಪ್ ನ್ನು ಡೌನಲೋಡ್ ಮಾಡಿಕೊಂಡು ತಾವೇ ಸ್ವತಃ ಬೆಳೆ ಸಮೀಕ್ಷೆ ವಿವರಗಳನ್ನು ದಾಖಲಿಸಬಹುದಾಗಿದೆ ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಜಿಲ್ಲೆಯ ರೈತರಲ್ಲಿ ಮನವಿ ಮಾಡಿದರು.
ಬೆಳೆ ಸಮೀಕ್ಷೆ ಪ್ರಕ್ರಿಯೆಯು ಜಿಲ್ಲೆಯಲ್ಲಿ ಆಗಸ್ಟ್ 15 ರಿಂದ ಆರಂಭವಾಗಿದ್ದು ಇದಕ್ಕಾಗಿ ಸೆಪ್ಟೆಂಬರ್ 10ರವರೆಗೆ ಅವಕಾಶ ಕಲ್ಪಿಸಲಾಗಿದೆ. ಈ ಬೆಳೆ ಸಮೀಕ್ಷೆಗೆ ತಾಲೂಕುವಾರು ನೇಮಕಗೊಂಡ ಪಿಆರ್ ಗಳು ಪ್ರತಿದಿನ ನಿಗದಿಪಡಿಸಿದಷ್ಟು ಪ್ಲಾಟಗಳ ಸಮೀಕ್ಷೆಯನ್ನು ಕ್ರಮಬದ್ಧವಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಕನಕಗಿರಿ ತಾಲೂಕಿನಲ್ಲಿ 29, ಕುಕನೂರ ತಾಲೂಕಿನಲ್ಲಿ 66, ಯಲಬುರ್ಗಾ ತಾಲೂಕಿನಲ್ಲಿ 95, ಕುಷ್ಟಗಿ ತಾಲೂಕಿನಲ್ಲಿ 51, ಕೊಪ್ಪಳ ತಾಲೂಕಿನಲ್ಲಿ 89, ಗಂಗಾವತಿ ತಾಲೂಕಿನಲ್ಲಿ 39 ಮತ್ತು ಕಾರಟಗಿ ತಾಲೂಕಿನಲ್ಲಿ 44 ಸೇರಿ ಒಟ್ಟು 413 ಪಿಆರ್ ಗಳನ್ನು ನೇಮಿಸಲಾಗಿದೆ. ಒಟ್ಟು ಏಳು ತಾಲೂಕುಗಳು ಒಳಗೊಂಡು 3,26,082 ಪ್ಲಾಟಗಳ ಸಮೀಕ್ಷೆಯಾಗಬೇಕಿದ್ದು ತಲಾ ಒಬ್ಬ ಪಿಆರ್ ಗೆ ಕನಿಷ್ಟ ಒಂದು ಸಾವಿರ ಪ್ಲಾಟ್ ಸಮೀಕ್ಷೆ ಮಾಡಲು ಮತ್ತು ಪ್ರತಿ ದಿನ ಕಡ್ಡಾಯ 100 ಪ್ಲಾಟ ಮಾಡಲು
ತಿಳಿಸಲಾಗಿದೆ. ಇದುವರೆಗೆ 71,000 ಪ್ಲಾಟಗಳು ಪೂರ್ಣಗೊಂಡಿದ್ದು ಶೇ.22 ರಷ್ಟು ಪ್ರಗತಿಯಾಗಿದೆ ಎಂದು ಕೃಷಿ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಅಂಗನವಾಡಿಗೆ ಭೇಟಿ: ಗ್ರಾಮೀಣ ಪ್ರವಾಸದಲ್ಲಿದ್ದ ಜಿಲ್ಲಾಧಿಕಾರಿಗಳು ಇದೆ ವೇಳೆ ಡೊಣ್ಣೆಗುಡ್ಡ ಗ್ರಾಮದ
ಅಂಗನವಾಡಿ ಕೇಂದ್ರಕ್ಕು ಸಹ ಭೇಟಿ ನೀಡಿದರು. ಅಂಗನವಾಡಿಯಲ್ಲಿನ ಆಹಾರ ಧಾನ್ಯಗಳ ಗುಣಮಟ್ಟ, ಮಕ್ಕಳ ಹಾಜರಾತಿ, ಶಾಲಾ ಮಕ್ಕಳ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಕುಷ್ಟಗಿ ತಹಸೀಲ್ದಾರಾದ ಶ್ರುತಿ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಕೃಷ್ಣ ಉಕ್ಕುಂದ, ಕೃಷಿ ಸಹಾಯಕ ನಿರ್ದೇಶಕರಾದ ತಿಪ್ಪೇಸ್ವಾಮಿ ವಿ ಹಾಗೂ ಇತರರು ಇದ್ದರು.
Comments are closed.