ಗವಿಸಿದ್ದಪ್ಪ ನಾಯಕ ಕೊಲೆ ಪ್ರಕರಣ NIA ತನಿಖೆಗೆ ಆಗ್ರಹ
ಕೊಪ್ಪಳದಲ್ಲಿ ಕೆಲ ದಿನಗಳ ಹಿಂದೆ ಬರ್ಬರವಾಗಿ ಹತ್ಯೆಯಾದ ವಾಲ್ಮೀಕಿ ಸಮುದಾಯದ ಯುವಕ ಗವಿಸಿದ್ದಪ್ಪ ನಾಯಕ ಅವರ ಕುಟುಂಬದೊಂದಿಗೆ ಭಾಜಪ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರ ನಿಯೋಗವು ಇಂದು ಬೆಂಗಳೂರಿನಲ್ಲಿ ರಾಜಭವನಕ್ಕೆ ತೆರಳಿ ರಾಜ್ಯಪಾಲರಾದ ಡಾ. ಥಾವರ್ ಚಂದ್ ಗೆಲ್ಲೋಟ್ ಅವರನ್ನು ಭೇಟಿಯಾಗಿ, ಗವಿಸಿದ್ದಪ್ಪ ಹತ್ಯೆ ಪ್ರಕರಣದಲ್ಲಿ ಸರ್ಕಾರದ ಮೇಲೆ ಒತ್ತಡವನ್ನೇರಿ ಎನ್ ಐ ಎ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ, ಸಮಗ್ರ ಮತ್ತು ನ್ಯಾಯಸಮ್ಮತ ತನಿಖೆ ನಡೆಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ, ಯುವಕನ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಗವಿಸಿದ್ದಪ್ಪ ನಾಯಕ ಅವರು ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದ ಕಾರಣಕ್ಕಾಗಿ ಮತಾಂಧ ಕ್ರೂರಿಯಿಂದ ಅಮಾನುಷವಾಗಿ ಕೊಲೆಯಾಗಿರುವ ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಮತಬ್ಯಾಂಕ್ ಓಲೈಕೆಯ ರಾಜಕಾರಣ ಮಾಡುವ ಕಾಂಗ್ರೆಸ್ ನೇತೃತ್ವದ ಸರ್ಕಾರದಿಂದ ಯುವಕನ ಸಾವಿಗೆ ನ್ಯಾಯ ಸಿಗುವುದಿಲ್ಲ ಎನ್ನುವುದು ಮೃತನ ಕುಟುಂಬ, ಸ್ಥಳೀಯರು ಹಾಗೂ ವಾಲ್ಮೀಕಿ ಸಮುದಾಯದ ಅಭಿಪ್ರಾಯವಾಗಿದೆ. ಇದಕ್ಕೆ ಪೂರಕವೆಂಬಂತೆ ಪೊಲೀಸ್ ತನಿಖೆ ಮಂದಗತಿಯಲ್ಲಿ ಸಾಗುತ್ತಿದ್ದು, ಕೊಲೆಗಡುಕನನ್ನು ಬಂಧಿಸುವಲ್ಲಿಯೂ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿರುವುದು ತನಿಖೆಯನ್ನು ದುರ್ಬಲಗೊಳಿಸುವ ಉದ್ದೇಶದಿಂದ ಕೂಡಿದೆ ಎಂಬುದು ಸ್ಥಳೀಯರ ಬಲವಾದ ಶಂಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕಿದೆ. ಈ ಕೊಲೆಯ ಹಿಂದೆ ದೇಶವಿದ್ರೋಹಿ ಮನಸ್ಥಿತಿಯ ಜಾಲದ ಕೈವಾಡವಿರುವ ಅನುಮಾನವೂ ಇದೆ, ಆದ್ದರಿಂದ ರಾಷ್ಟ್ರೀಯ ತನಿಖಾ ದಳದಿಂದ (NIA) ತನಿಖೆ ನಡೆಸುವುದು ಅತ್ಯಾವಶ್ಯಕವಾಗಿದ್ದು, ರಾಜ್ಯಪಾಲರು ಮಧ್ಯ ಪ್ರವೇಶಿಸಿ NIA ತನಿಖೆ ಕೈಗೆತ್ತಿಕೊಳ್ಳುವಂತೆ ಕ್ರಮ ವಹಿಸುವಂತೆ ಮೃತ ಗವಿಸಿದ್ದಪ್ಪ ನಾಯಕ ಅವರ ಕುಟುಂಬಸ್ಥರೊಂದಿಗೆ ಮನವಿ ಸಲ್ಲಿಸಿದರು
ಇದೇ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್, ಶಾಸಕರಾದ ಗಾಲಿ ಜನಾರ್ಧನ ರೆಡ್ಡಿ, ಮಾಜಿ ಸಚಿವ ಬಿ ಶ್ರೀರಾಮುಲು, ವಿಧಾನ ಪರಿಷತ್ ಸದಸ್ಯರಾದ ಸಿಟಿ ರವಿ ಹಾಗೂ ಶ್ರೀಮತಿ ಹೇಮಲತಾ ನಾಯಕ್ , ಶಾಸಕರಾದ ಡಾ. ಸಿ ಎನ್ ಅಶ್ವಥ್ ನಾರಾಯಣ್, ಎಸ್ ಆರ್ ವಿಶ್ವನಾಥ್, ದೊಡ್ಡನಗೌಡ ಎಚ್ ಪಾಟೀಲ್, ಮುನಿರತ್ನ, ಬಿ.ಸುರೇಶ್ ಗೌಡ, ಶೈಲೇಂದ್ರ ಬೆಲ್ದಾಳೆ, ಮಾಜಿ ಸಚಿವರಾದ ಶಿವನಗೌಡ ನಾಯಕ್, ಪಕ್ಷದ ರಾಜ್ಯ ಉಪಾಧ್ಯಕ್ಷರಾದ ರಾಜುಗೌಡ ನಾಯಕ್, ಕಾರ್ಯದರ್ಶಿಗಳಾದ ಶರಣು ತಳ್ಳಿಕೆರಿ, ಕೊಪ್ಪಳ ಜಿಲ್ಲಾಧ್ಯಕ್ಷರಾದ ಬಸವರಾಜ್ ದಡೇಸೂಗೂರು, ಬಸವರಾಜ್ ಕ್ಯಾವಟರ್ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
Comments are closed.