ಮಾತನಾಡಿ ಸರಕಾರದ ಗಮನ ಸೆಳೆಯಿರಿ: ಶಾಸಕರಿಗೆ ಸಿವಿಸಿ ಕಿವಿಮಾತು

ಕೊಪ್ಪಳ: ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ವಿಧಾನಸಭೆಯಲ್ಲಿ ಈ ಸಲವಾದರೂ ಮಾತನಾಡಿ ಕೊಪ್ಪಳದ ಬೇಡಿಕೆಗಳ ಬಗ್ಗೆ ಸರಕಾರದ ಗಮನಸಳೆಯಬೇಕೆಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ.
ಕೊಪ್ಪಳ ವಿಧಾನಸಭಾ ಕ್ಷೇತ್ರದಾದ್ಯಂತ ರಸ್ತೆಗಳ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಜಿಲ್ಲೆಗೆ ಮಂಜೂರಾದ ಶ್ರಮಿಕ ವಸತಿ ಶಾಲೆ ಪಕ್ಕದ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾಗಿದೆ. ನಗರದ ಸುತ್ತಮುತ್ತಲು ಇರುವ ಕಾರ್ಖಾನೆಗಳ ಮಾಲಿನ್ಯದಿಂದ ಜನ ಬೇಸತ್ತು ಹೋಗಿದ್ದಾರೆ. ರಸಗೊಬ್ಬರ ಕೊರತೆಯಿಂದ ರೈತರು ಬೀದಿಗಿಳಿದಿದ್ದಾರೆ. ಕೊಲೆಗಳು ಹಾಗೂ ಮಾದಕ ಪದಾರ್ಥ ದಂಧೆ ಹೆಚ್ಚಾಗಿ ‘ಕೂಲ್ ಕೊಪ್ಪಳ ಕಿಲ್ಲರ್ ಕೊಪ್ಪಳ’ ಆಗುತ್ತಿದೆ. ಇವುಗಳ ಬಗ್ಗೆ ಸರಕಾರದ ಗಮನ ಸೆಳೆದು ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದು ಶಾಸಕರ ಕರ್ತವ್ಯ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂರು ಸಲ ಶಾಸಕರಾಗಿ ಆಯ್ಕೆಯಾದರೂ ಎಷ್ಟು ಸಲ ವಿಧಾನಸಭೆಯ ಕಲಾಪಗಳಲ್ಲಿ ಕೊಪ್ಪಳದ ಬಗ್ಗೆ ಮಾತನಾಡಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ನಮ್ಮ ಶಾಸಕರು ವಿಧಾನಸಭೆಯಲ್ಲಿ ಮಾತನಾಡಬೇಕೆಂದು ಜನರೇ ಒತ್ತಾಯಿಸುತ್ತಿದ್ದಾರೆ. ಬೇರೆ ಶಾಸಕರು ಮಾತನಾಡುವುದನ್ನು ಕೇಳುತ್ತಿದ್ದೇವೆ. ನಮ್ಮ ಶಾಸಕರು ಏಕೆ ಮಾತನಾಡುವುದಿಲ್ಲ ಎಂದು ಜನ ಕೇಳುವಂತಾಗಿದೆ. ಶಾಸಕರಾದವರು ಮಾತನಾಡದಿದ್ದರೆ ಸರಕಾರ ಅನುದಾನ ಮಂಜೂರು ಮಾಡುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ನೀವು ವಿಧಾನಸಭೆಯಲ್ಲಿ ನಮ್ಮ ಕ್ಷೇತ್ರದ ಪರವಾಗಿ ಮಾತನಾಡಿ ಎಂದು ದುಂಬಾಲು ಬೀಳುವ ಪರಿಸ್ಥಿತಿ ಬಂದಿರುವುದು ಕೊಪ್ಪಳದ ದುರಂತ. ಪಕ್ಕದ ಕ್ಷೇತ್ರಗಳಿಗೆ ನೂರಾರು ಕೋಟಿ ಅನುದಾನ ಬರುತ್ತಿದೆ. ಕೊಪ್ಪಳಕ್ಕೆ ಏಕೆ ಬರುತ್ತಿಲ್ಲ. ಅಲ್ಲಿನ ಶಾಸಕರು ಸರಕಾರದ ಕಿವಿ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಶಾಸಕರು ಜನತೆಯ ಬೇಡಿಕೆಗಳಿಗೆ ಕೊಪ್ಪಳದಲ್ಲಿ ಕಿವಿ ಮುಚ್ಚಿಕೊಂಡು,
ವಿಧಾನಸಭೆಯಲ್ಲಿ ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ ಎಂದು ಹರಿಹಾಯಿದಿದ್ದಾರೆ.
ಶಾಸಕರ ಮೌನದ ವಿರುದ್ಧ ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷ ಪ್ರತಿಭಟನೆ ಹಮ್ಮಿಕೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ.
Comments are closed.