ತುಂಗಭದ್ರಾ ಜಲಾಶಯದಿಂದ ನ.30ರ ತನಕ ಕಾಲುವೆಗೆ ನೀರು: ಸಚಿವ ಶಿವರಾಜ್ ತಂಗಡಗಿ

Get real time updates directly on you device, subscribe now.

ಬೆಂಗಳೂರು: ಜೂ.27

ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ 57 ಟಿಎಂಸಿ ನೀರಿನ ಸಂಗ್ರಹ ಇದ್ದು, ಜು.2 ರಿಂದ ನ.30ರವರೆಗೆ ಕಾಲುವೆಗಳಿಗೆ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಅವರು ಹೇಳಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ತುಂಗಭದ್ರಾ ಯೋಜನೆ ಹಾಗೂ ವಿಜಯನಗರ ಕಾಲುವೆಗಳ 124ನೇ ನೀರಾವರಿ ಸಲಹಾ ಸಮಿತಿ ಸಭೆಯ ಬಳಿಕ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಜಲಾಶಯದಲ್ಲಿನ‌ ನೀರಿನ ಸಂಗ್ರಹ ಲಭ್ಯತೆಯ ಮೇರೆಗೆ ನೀರಿನ ಬಳಕೆ ಮಾಡಲಾಗುತ್ತಿದೆ.
ತುಂಗಭದ್ರ ಎಡದಂಡೆ ಮುಖ್ಯ ಕಾಲುವೆಗೆ ಜು. 2 ರಿಂದ ಜು. 15 ರವರೆಗೆ 2000 ಕ್ಯೂಸೆಕ್ ನಂತೆ, ಜು.16 ರಿಂದ ನ.31ರವರೆಗೆ 3000 ಕ್ಯೂಸೆಕ್ ನಂತೆ ಮತ್ತು ಆ.1ರಿಂದ ನ. 30ರವರೆಗೆ 4100 ಕ್ಯೂಸೆಕ್ ನಂತೆ ನೀರು ಹರಿಸಲಾಗುವುದು ಎಂದು ಹೇಳಿದರು.

ಬಲದಂಡೆ ಮೇಲ್ಮಟ್ಟದ
ಕಾಲುವೆಗೆ ಜು.10ರಿಂದ ಜು.31ರವರೆಗೆ ಸರಾಸರಿ 700 ಕ್ಯೂಸೆಕ್ ನಂತೆ ಆ.1ರಿಂದ ನ. 30ರವರೆಗೆ 1300 ಕ್ಯೂಸೆಕ್, ಬಲದಂಡೆಯ ಕೆಳಮಟ್ಟದ ಕಾಲುವೆಗೆ 500 ಕ್ಯೂಸೆಕ್ , ಆ.1 ರಿಂದ ನ.31ರವರೆಗೆ 650 ಕ್ಯೂಸೆಕ್ ನೀರನ್ನು ಹರಿಸಲಾಗುವುದು.

ರಾಯ ಬಸವಣ್ಣ ಕಾಲುವೆಗೆ 220 ಕ್ಯೂಸೆಕ್ ಹಾಗೂ ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ 25 ಕ್ಯೂಸೆಕ್ ಅಥವಾ ಕಾಲುವೆಯಡಿ ನೀರಿನ ಲಭ್ಯತೆ ಆಧಾರದ ಮೇರೆಗೆ ನೀರು ಹರಿಸಲು ಸಲಹಾ ಸಮಿತಿಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಜುಲೈ ಎರಡು ಅಥವಾ ಮೂರನೇ ವಾರದಲ್ಲಿ ಸಿಎಂ ಮತ್ತು ಡಿಸಿಎಂ ನೇತೃತ್ವದಲ್ಲಿ ಸಭೆ
ಸಭೆಯಲ್ಲಿ ವಿಸ್ತೃತವಾದ ಚರ್ಚೆ ನಡೆದಿದ್ದು, ಅಣೆಕಟ್ಟೆಯ ಸುರಕ್ಷತೆ ಮತ್ತು ಬೆಳೆ ಸಂರಕ್ಷಣೆ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಾಲ್ಕು ಜಿಲ್ಲೆಯ ಶಾಸಕರು ಹಾಗೂ ರೈತರನ್ನು ಒಳಗೊಂಡಂತೆ ಸಭೆ ನಡೆಸಬೇಕು ರೈತರು ಬೇಡಿಕೆ ಇಟ್ಟಿದ್ದಾರೆ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಜುಲೈ 2ನೇ ವಾರ ಅಥವಾ ಮೂರನೇ ವಾರದಲ್ಲಿ ಸಭೆ ನಡೆಸಲು ದಿನಾಂಕ ನಿಗದಿಪಡಿಸಲಾಗುವುದು ಎಂದರು.

ಬೋರ್ಡಿನ ಕೆಲ ಅಧಿಕಾರಿಗಳು ಈ ಬಾರಿ ಒಂದು ಬೆಳೆಗೆ ಮಾತ್ರ ನೀರು ನೀಡಲಾಗುವುದು ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ ಎಂದು ರೈತರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಸಿದ ಸಚಿವರು ಇದೀಗ ಒಂದು ಬೆಳೆಗೆ ನೀರು ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಮುಂದಿನ ಸಭೆಯಲ್ಲಿ ಎರಡನೇ ಬೆಳೆಗೆ ನೀರು ನೀಡುವ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು ರೈತರ ಹಿತಕರ ಪಾಡುವುದು ನಮ್ಮ ಉದ್ದೇಶ. ಇದರಲ್ಲಿ ಯಾರೂ ಕೂಡ ರಾಜಕಾರಣ ಮಾಡಬಾರದು ಎಂದು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.

ಜಲಾಶಯದ 32 ಗೇಟ್ ಅನ್ನು ಬದಲಾವಣೆ ಮಾಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲ ಸಂಪನ್ಮೂಲ ಸಚಿವರು ಆದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಈ ಸಭೆಯಲ್ಲಿ ಅಣೆಕಟ್ಟೆಯ ಪರಿಣಿತ ತಜ್ಞರು ಪಾಲ್ಗೊಳ್ಳಲಿದ್ದಾರೆ ಎಂದು ಸಚಿವರು ವಿವರಿಸಿದರು.

ಸಭೆಯಲ್ಲಿ ಸಚಿವರಾದ ಶರಣ್ ಪ್ರಕಾಶ್ ಪಾಟೀಲ್, ಜಮೀರ್ ಅಹ್ಮದ್, ಮಾಜಿ ಸಚಿವ ಬಿ.ನಾಗೇಂದ್ರ, ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ್,
ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್, ಎಚ್.ಆರ್.ಗವಿಯಪ್ಪ, ಹಂಪನಗೌಡ ಬಾದರ್ಲಿ, ಬಸವನಗೌಡ ತುರುವಿಹಾಳ್, ಶಿವರಾಜ್ ಪಾಟೀಲ್, ಬಿ.ಎಂ.ನಾಗರಾಜ್, ರೈತ ಮುಖಂಡರು ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲಾಧಿಕಾರಿಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

Shivaraj Tangdagi Koppal District Incharge Minister

Get real time updates directly on you device, subscribe now.

Comments are closed.

error: Content is protected !!