ತಹಶೀಲ್ದಾರ್ ಎಸಿ-ಡಿಸಿ ನ್ಯಾಯಾಲಯಗಳ ತಕರಾರು ಪ್ರಕರಣಗಳನ್ನು ನಿಗದಿತ ಗಡುವಿನೊಳಗೆ ಇತ್ಯರ್ಥಗೊಳಿಸಿ, ಜನಸ್ನೇಹಿ ಸೇವೆ ನೀಡಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ

Get real time updates directly on you device, subscribe now.

# 14.87 ಕೋಟಿ ರೂ. ಬಾಕಿ ಕಾಮಗಾರಿ ಪೂರ್ಣಗೊಳಿಸಲು ತಾಕೀತು
# ಆದೇಶಕ್ಕೆ ಕಾಯ್ದಿರಿಸಿದ ಪ್ರಕರಣಗಳ ವಿಳಂಬವೇಕೆ? ಸಚಿವರ ಪ್ರಶ್ನೆ
# ಇ-ಆಫೀಸ್ ಮೂಲಕ ಕಡತ ವಿಲೇವಾರಿಗೆ ಸೂಚನೆ
# ಕಟ್ಟುನಿಟ್ಟಿನ ‘ಬೀಟ್’ ವ್ಯವಸ್ಥೆ ಪಾಲಿಸಲು ತಾಕೀತು

ಬೆಂಗಳೂರು, ಆಗಸ್ಟ್ 18:

ತಹಶೀಲ್ದಾರ್, ಎಸಿ ಹಾಗೂ ಡಿಸಿ ಮಟ್ಟದ ನ್ಯಾಯಾಲಯಗಳಲ್ಲಿ 6 ತಿಂಗಳಿನಿಂದ 5 ವರ್ಷಗಳವರೆಗೆ ನೂರಾರು ತಕರಾರು ಪ್ರಕರಣಗಳು ಬಾಕಿ ಉಳಿದಿದ್ದು, ಈ ಎಲ್ಲ ಪ್ರಕರಣಗಳನ್ನು 4 ತಿಂಗಳ ಕಾಲಮಿತಿಯಲ್ಲಿ ಇತ್ಯರ್ಥಪಡಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.

ವಿಕಾಸಸೌಧದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ಜನರಿಗೆ ಒಳಿತು ಕೆಡುಕು ಎರಡನ್ನೂ ಮಾಡುವ ಶಕ್ತಿ ಕಂದಾಯ ಇಲಾಖೆಗೆ ಇದೆ. ಆದರೆ, ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡಲಿದೆ ಎಂಬ ಭರವಸೆಯಲ್ಲಿ ಜನ ನಮಗೆ ಮತ ನೀಡಿದ್ದು, ಜನಸ್ನೇಹಿ ಆಡಳಿತ ನೀಡುವುದು ನಮ್ಮ ಆದ್ಯತೆಯಾಗಲಿ ಎಂದು ಕಿವಿಮಾತು ಹೇಳಿದ ಸಚಿವರು, ಕಳೆದ ಐದು ವರ್ಷಗಳಿಂದ ಇತ್ಯರ್ಥವಾಗದ ತಕರಾರು ಪ್ರಕರಣಗಳನ್ನು ಶೀಘ್ರದಲ್ಲೇ ವಿಲೇವಾರಿಗೊಳಿಸಿ ಎಂದು ಅಧಿಕಾರಿಳಿಗೆ ತಾಕೀತು ಮಾಡಿದರು.

“ಬೆಂಗಳೂರು ಪ್ರದೇಶಿಕ ವಿಭಾಗದ ತಹಶೀಲ್ದಾರ್ ನ್ಯಾಯಾಲಯಗಳಲ್ಲ 6 ತಿಂಗಳಿಂದ 5 ವರ್ಷಗಳವರೆಗಿನ ಒಟ್ಟು 6,859 ತಕರಾರು ಪ್ರಕರಣಗಳು ಈವರೆಗೆ ಇತ್ಯರ್ಥವಾಗದೆ ಬಾಕಿ ಉಳಿದಿವೆ. ಇದರಿಂದಾಗಿ ಸಾರ್ವಜನಿಕರು ದಿನಂಪ್ರತಿ ತಹಶೀಲ್ದಾರ್ ಕಚೇರಿಗೆ ಅಲೆಯುವಂತಾಗಿದೆ. ಹೀಗಾಗಿ ತಹಶೀಲ್ದಾರ್ ಕಚೇರಿಯಲ್ಲಿ ಬಾಕಿ ಉಳಿದಿರುವ ಪ್ರಕರಣಗಳಲ್ಲಿ 4000 ಪ್ರಕರಣಗಳನ್ನು ಮುಂದಿನ 4 ತಿಂಗಳ ಒಳಗಾಗಿ ಇತ್ಯರ್ಥಗೊಳಿಸಬೇಕು” ಎಂದು ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಉಪ ವಿಭಾಗಾಧಿಕಾರಿ-ಜಿಲ್ಲಾಧಿಕಾರಿಗಳ ವಿರುದ್ಧ ಅಸಮಾಧಾನ!

ಬೆಂಗಳೂರು ಪ್ರಾದೇಶಿಕ ವಿಭಾಗದ ಉಪ ವಿಭಾಗಾಧಿಕಾರಿ (ಎಸಿ) ಹಾಗೂ ಜಿಲ್ಲಾಧಿಕಾರಿ (ಡಿಸಿ) ನ್ಯಾಯಾಲಯಗಳಲ್ಲೂ ಸಾಕಷ್ಟು ತಕರಾರು ಪ್ರಕರಣಗಳು ಬಾಕಿ ಉಳಿದಿದ್ದು, ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ತೀವ್ರ ಅಸಮಾಧಾನ ಹೊರಹಾಕಿದರು.

ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳ ಪೈಕಿ ದೊಡ್ಡಬಳ್ಳಾಪುರ 5683, ಬೆಂಗಳೂರು ದಕ್ಷಿಣ 6129, ಬೆಂಗಳೂರು ಉತ್ತರ 6035, ಚಿಕ್ಕಬಳ್ಳಾಪುರ 3014, ಚಿತ್ರದುರ್ಗ 1374, ದಾವಣಗೆರೆ 152, ಹೊನ್ನಾಳ್ಳಿ 456, ಕೋಲಾರ 5112, ರಾಮಮನಗರ 4210, ಶಿವಮೊಗ್ಗ 613, ಸಾಗರ 411, ತುಮಕೂರು 7354, ಮಧುಗಿರಿ 3167 ಮತ್ತು ತಿಪಟೂರಿನ 742 ಪ್ರಕರಣಗಳು ಸೇರಿದಂತೆ ಒಟ್ಟಾರೆಯಾಗಿ 45,482 ಪ್ರಕರಣಗಳು ಬಾಕಿ ಇವೆ.

ಜಿಲ್ಲಾಧಿಕಾರಿ ನ್ಯಾಯಾಲಯಗಳ ಪೈಕಿ ಬೆಂಗಳೂರು ಗ್ರಾಮಾಂತರ 1384, ಬೆಂಗಳೂರು ನಗರ 4974, ಚಿಕ್ಕಬಳ್ಳಾಪುರ 429, ಚಿತ್ರದುರ್ಗ 1711, ದಾವಣಗೆರೆ 81, ಕೋಲಾರ 102, ರಾಮನಗರ 501, ಶಿವಮೊಗ್ಗ 73, ತುಮಕೂರಿನ 697 ಸೇರಿದಂತೆ ಒಟ್ಟಾರೆಯಾಗಿ 10,ಿತ 065 ಪ್ರಕರಣಗಳು ಬಾಕಿ ಇವೆ.

ಪರಿಶೀಲನೆಯ ವೇಳೆ ಎಸಿ-ಡಿಸಿ ನ್ಯಾಯಾಲಯಗಳಲ್ಲೂ ಬಾಕಿ ಇರುವ ಪ್ರಕರಣಗಳ ಬಗ್ಗೆ ಅಸಮಾಧಾನ ಹೊರಹಾಕಿದ ಸಚಿವರು, “ಉನ್ನತ ಅಧಿಕಾರಿಗಳೇ ತಮ್ಮ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಇತ್ಯರ್ಥಪಡಿಸದಿದ್ದರೆ, ತಹಶೀಲ್ದಾರರಿಂದ ನೀವು ಹೇಗೆ ಪರಿಣಾಮಕಾರಿ ಕೆಲಸವನ್ನು ನಿರೀಕ್ಷೆ ಮಾಡಲು ಸಾಧ್ಯ. ಹೀಗಾಗಿ ನೀವು ಇತರರಿಗೆ ತಪ್ಪು ಉದಾಹರಣೆಯಾಗಬೇಡಿ. ” ಎಂದು ಸಲಹೆ ನೀಡಿದರು.

ಅಲ್ಲದೆ, “ಉಪ ವಿಭಾಗಾಧಿರಿಗಳು ಸಿವಿಲ್ ತಕರಾರು ಪ್ರಕರಣಗಳನ್ನು ಮುಂದಿನ ಒಂದು ತಿಂಗಳಲ್ಲಿ ಇತ್ಯರ್ಥಪಡಿಸಬೇಕು. ಜಿಲ್ಲಾಧಿಕಾರಿಗಳು ತಮ್ಮ ಬಳಿಯ ಪ್ರಕರಣಗಳನ್ನು ವಿಭಾಗಿಸಿ ಈ ಪ್ರಕರಣಗಳನ್ನು ಎಷ್ಟು ದಿನಗಳಲ್ಲಿ ಮುಗಿಸಬಹುದು ಎಂದು ನಿರ್ಧರಿಸಬೇಕು ಹಾಗೂ ಸಣ್ಣಪುಟ್ಟ ಪ್ರಕರಣಗಳನ್ನು ಕೋರ್ಟ್ ಅದಾಲತ್ ಮೂಲಕ ಬಗೆಹರಿಸಬೇಕು. ಪ್ರಕರಣಕ್ಕೆ ಸಂಬಂಧಪಟ್ಟವರನ್ನು ಕರೆತರುವ ಜವಾಬ್ದಾರಿಯನ್ನು ಆಯಾ ರಾಜಸ್ವ ನಿರೀಕ್ಷಕರಿಗೆ (ರೆವೆನ್ಯೂ ಇನ್ಸ್ಪೆಕ್ಟರ್)ಗ ವಹಿಸಬೇಕು ಎಂದು ಸಭೆಯಲ್ಲಿ ಸಚಿವರು ಸೂಚಿಸಿದರು.

ಉಪ ವಿಭಾಗಾಧಿಕಾರಿಗಳು ತಮ್ಮ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಪೈಕಿ 6 ತಿಂಗಳಿಗಿಂತ ಹಳೆಯ ಎಲ್ಲಾ ಪ್ರಕರಣಗಳೂ ಸೇರಿದಂತೆ ಉಳಿದಿರುವ 12000 ಪ್ರಕರಣಗಳನ್ನೂ ಮುಂದಿನ 4 ತಿಂಗಳಲ್ಲಿ ವಿಲೇವಾರಿ ಮಾಡಬೇಕು. ಜಿಲ್ಲಾಧಿಕಾರಿಗಳೂ ಸಹ ತಮ್ಮ ನ್ಯಾಯಾಲಯದಲ್ಲಿರುವ 6 ತಿಂಗಳಿಗಿಂತ ಹಳೆಯ ಎಲ್ಲಾ ಪ್ರಕರಣಗಳನ್ನೂ ಮುಂದಿನ 3 ತಿಂಗಳಲ್ಲಿ ವಿಲೇವಾರಿ ಮಾಡಬೇಕು ಎಂದು ಕಾಲಮಿತಿ ನೀಡಿದರು

ಸೆಪ್ಟೆಂಬರ್ 10ನೇ ತಾರಿಖಿನ ಒಳಗಾಗಿ ಮತ್ತೊಂದು ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದು, ಈ ಸಭೆಯಲ್ಲಿ ತಹಶೀಲ್ದಾರ್, ಎಸಿ-ಡಿಸಿ ನ್ಯಾಯಾಲಯಗಳಲ್ಲಿ ವಿಲೇವಾರಿಯಾಗಿರುವ ಪ್ರಕರಣಗಳ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಆದೇಶಕ್ಕೆ ಕಾಯ್ದಿರಿಸಿದ್ದ ಪ್ರಕರಣಗಳ ವಿಳಂಬವೇಕೆ?

ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಆದೇಶಕ್ಕೆ ಕಾಯ್ದಿರಿಸಲ್ಪಟ್ಟ ಪ್ರಕರಣಗಳ ವಿಲೇವಾರಿಗೂ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವುದೇಕೆ? ಎಂದು ಸಚಿವರ ಕೃಷ್ಣ ಬೈರೇಗೌಡ ಅವರು ಸಭೆಯಲ್ಲಿ ಅಸಮಾಧಾನ ಹೊರಹಾಕಿದರು.

ಈ ವೇಳೆ ಅಧಿಕಾರಿಗಳಿಗೆ ಕಾನೂನು ಪಾಠ ಮಾಡಿದ ಸಚಿವರು, “ಆದೇಶಕ್ಕೆ ಕಾಯ್ದಿರಿಸಲ್ಪಟ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ 15 ದಿನಗಳೊಳಗಾಗಿ ಆದೇಶ ಹೊರಡಿಸಬೇಕು ಎಂಬ ಕಾನೂನು ಇದೆ. ಆದರೆ, ಉಪ ವಿಭಾಗಾಧಿಕಾರಿಗಳು ವಿಚಾರಣೆ ಮುಗಿಸಿಯೂ ಸಾವಿರಾರು ಪ್ರಕರಣಗಳ ಆದೇಶ ಹೊರಡಿಸದಿರುವುದು ಏಕೆ? ಎಂದು ಕಟು ಪ್ರಶ್ನೆಗಳನ್ನು ಮುಂದಿಟ್ಟ ಸಚಿವರು, ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ನಿಯಮಗಳ ಅನ್ವಯ ತುರ್ತಾಗಿ ಆದೇಶ ಹೊರಡಿಸಲು ತಿಳಿಸಿದರು.

ಬಾಕಿ ಕಾಮಗಾರಿ ಪೂರ್ಣಗೊಳಿಸಲು ತಾಕೀತು

ಸಾರ್ವಜನಿಕ ಆಸ್ತಿಗಳಿಗೆ ಉಂಟಾಗಿರುವ ಹಾನಿ ದುರಸ್ಥಿಗೆ 2019ರಿಂದ 2022 ರ ಅವಧಿಯಲ್ಲಿ ಮಂಜೂರಾಗಿ ಇನ್ನೂ ಪೂರ್ಣಗೊಳ್ಳದ 14.87 ಕೋಟಿ ರೂ. ವೆಚ್ಚದ ಕಾಮಗಾರಿಗಳ (ಕೊರೋನಾ ಸೇರಿದಂತೆ) ಬಗ್ಗೆಯೂ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ಹೊರಹಾಕಿದರು.

ಈ ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳದಿರಲು ಕಾರಣವೇನು? 45 ದಿನಗಳಲ್ಲಿ ಮುಗಿಯಬೇಕಾದ ಕಾಮಗಾರಿಗಳು 2019ರಿಂದಲೂ ಬಾಕಿ ಉಳಿದಿವೆ ಎಂದರೆ ಏನರ್ಥ? 2019ರ ನೆರೆಯಲ್ಲಿ ರಿಪೇರಿಯಾದ ಮನೆಯನ್ನು ಅಧಿಕಾರಿಗಳು ಈಗ ದುರಸ್ಥಿ ಮಾಡಿ ಕೊಡ್ತೀರಾ? ಎಂದು ಆಕ್ರೋಶ ಹೊರಹಾಕಿದ ಸಚಿವರು, ಮುಂದಿನ 15 ದಿನಗಳಲ್ಲಿ ಈ ಎಲ್ಲಾ ಕಾಮಗಾರಿಗಳೂ ಪೂರ್ಣಗೊಳಿಸಬೇಕು, ಸಂಬಂಧಪಟ್ಟ ಕಾಮಗಾರಿಗೆ ಹಣ ಪಾವತಿ ಮಾಡಬೇಕು. ಕಳೆದ ವರ್ಷದ ಬಾಕಿಯನ್ನೂ ಸಂಪೂರ್ಣವಾಗಿ ವಿಲೇವಾರಿ ಮಾಡಬೇಕು ಎಂದು ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಅಧಿಕಾರಿಗಳು ಇ-ಆಫೀಸ್ ಬಳಕೆಗೆ ಮುಂದಾಗಿ

ಹಳೇ ಕಾಲದ ಪತ್ರ ವ್ಯವಹಾರವನ್ನು ಕೈಬಿಟ್ಟು ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವ ಹಾಗೂ ಕಡತಗಳ ಶೀಘ್ರ ವಿಲೇವಾರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಗಸ್ಟ್ 15ರಿಂದ ಇ-ಆಫೀಸ್ ಅನುಷ್ಠಾನಗೊಳಿಸಲಾಗಿದೆ. ಇನ್ನು ಮುಂದೆ ರಾಜ್ಯದ ಎಲ್ಲಾ ಎಸಿ-ಡಿಸಿ ಕಚೇರಿಯಿಂದ ಸರ್ಕಾರಕ್ಕೆ ಇ-ಆಫೀಸ್ ಮೂಲಕವೇ ಪತ್ರ ವ್ಯವಹಾರ ಮಾಡಬೇಕು. ಭೌತಿಕವಾಗಿ ಪತ್ರ ಸ್ವೀಕರಿಸುವುದಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

“ಕಡತಗಳು ಇ-ಆಫೀಸ್ ನಲ್ಲಿ ನನ್ನ ಲಾಗಿನ್ ಗೆ ಬಂದರೆ 2 ದಿನದಲ್ಲಿ ವಿಲೇವಾರಿ ಮಾಡಿದ್ದೇನೆ. ಇ-ಆಫೀಸ್ ಸಹಜವಾಗಿ ಕಾರ್ಯ ದಕ್ಷತೆ ಹೆಚ್ಚಿಸಲಿದೆ. ಯಾವುದೇ ಸ್ಥಳದಲ್ಲಿಂದಲು ನೀವು ಕಡತ ವಿಲೇವಾರಿ ಮಾಡಬಹುದಾಗಿದೆ. ಸ್ವತ ನಾನು ಇ-ಆಫೀಸ್ ಮೂಲಕ ಕಡತ ವಿಲೇವಾರಿ ಮಾಡುತ್ತಿದ್ದೇನೆ. ಶಾಲೆ, ಗ್ರಾಮ ಪಂಚಾಯತಿಗೆ ಜಮೀನು ನೀಡಲು ಆಗುತ್ತಿರುವ ವಿಳಂಬಕ್ಕೆ ಇ-ಆಫೀಸ್ ಮೂಲಕ ಪರಿಹಾರ ನೀಡಬಹುದು” ಎಂದು ಅವರು ತಿಳಿಸಿದರು.

ಪೈಕಿ ಪಹಣಿ ಪರಿಹಾರಕ್ಕೆ ಸೂಚನೆ

ಸಭೆಯಲ್ಲಿ ಸರ್ವೆ ಇಲಾಖೆಯ ಪ್ರಗತಿಯನ್ನೂ ಪರಿಶೀಲನೆ ನಡೆಸಲಾಗಿದ್ದು, ಬೆಂಗಳೂರು ಪ್ರಾದೇಶಿಕ ವಿಭಾಗದಲ್ಲಿ 7,271 ಪೈಕಿ ಪಹಣಿಗಳು ಬಾಕಿ ಇರುವುದನ್ನು ಸಚಿವ ಕೃಷ್ಣ ಬೈರೇಗೌಡ ತೀವ್ರವಾಗಿ ಪರಿಗಣಿಸಿದರು. ಅಲ್ಲದೆ, ಸುದೀರ್ಘ ಚರ್ಚೆಯ ನಂತರ ಮುಂದಿನ 4 ತಿಂಗಳಲ್ಲಿ ಎಲ್ಲಾ ಪೈಕಿ ಪಹಣಿಗಳನ್ನು ಪರಿಹರಿಸಲು ಸೂಚಿಸಿದರು.

ಒತ್ತುವರಿ ತಡೆಗೆ ಬೀಟ್ ವ್ಯವಸ್ಥೆ

ಬೆಂಗಳೂರು ನಗರ-ಗ್ರಾಮೀಣ ಭಾಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸರ್ಕಾರ ಜಮೀನು ಒತ್ತುವರಿ ಎಗ್ಗಿಲ್ಲದೆ ನಡೆಯುತ್ತಿದೆ. ಆದರೆ, ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸಭೆಯಲ್ಲಿ ತಿಳಿಸಿದರು.

ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ವಿಶೇಷ ಅಭಿಯಾನ ಕೈಗೊಂಡು ಎಲ್ಲಾ ಸರ್ಕಾರಿ ಜಮೀನುಗಳನ್ನೂ ಭೂಮಿ ತಂತ್ರಾಂಶದಲ್ಲಿ ಕಡ್ಡಾಯವಾಗಿ ಅಳವಡಿಸುವ ಕೆಲಸ ತುರ್ತಾಗಿ ಆಗಬೇಕು. ಆಯಾ ಭಾಗದ ಗ್ರಾಮ ಆಡಳಿತ ಅಧಿಕಾರಿ (ವಿಲೇಜ್ ಅಕೌಂಟೆಂಟ್) ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರಿ ಜಮೀನಿಗೆ ಭೇಟಿ ನೀಡಿ ಒತ್ತುವರಿಯಾಗಿಲ್ಲ ಎಂಬುದನ್ನು ಖಚಿತಪಡಿಸಬೇಕು. ಇಂತಹ ‘ಬೀಟ್’ ವ್ಯವಸ್ಥೆಯನ್ನು ಎಲ್ಲ ವಿಭಾಗದಲ್ಲೂ ಅಧಿಕಾರಿಗಳು ಪಾಲಿಸಬೇಕು ಎಂದು ತಿಳಿಸಿದರು.

ಈಗಾಗಲೇ ಬೆಂಗಳೂರು ನಗರ-ಗ್ರಾಮೀಣ ಭಾಗದಲ್ಲಿ ಒತ್ತುವಾರಿಯಾಗಿರುವ ಸರ್ಕಾರಿ ಭೂಮಿಗಳ ಪಟ್ಟಿ ಸಿದ್ದಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪಟ್ಟಿ ಸಂಪೂರ್ಣವಾಗಿ ಸಿದ್ದವಾಗುತ್ತಿದ್ದಂತೆ ವಾರಂತ್ಯಗಳಲ್ಲಿ ಒತ್ತುವರಿ ತೆರವಿಗೆ ಮುಂದಾಗುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಸಭೆಯಲ್ಲಿ ಸಚಿವರು ತಿಳಿಸಿದರು.

ಇದರ ಜೊತೆಗೆ ಸರ್ವೆ ಇಲಾಖೆಯಲ್ಲಿ ಬಾಕಿ ಇರುವ ಪ್ರಕರಣಗಳನ್ನು ವಿಲೇವಾರಿ ಮಾಡಲು 100 ಲೈಸೆನ್ಸ್ ಸರ್ವೇಯರ್, 257 ಸರ್ಕಾರಿ ಸರ್ವೇಯರ್ ಮತ್ತು 27 ಎಡಿಎಲ್ ಆರ್ ಗಳನ್ನು ನೇಮಕಾತಿ ಮಾಡಲು ಶುಕ್ರವಾರದ ಸಭೆಯಲ್ಲಿ ತೀರ್ಮಾನಿಸಲಾಯಿತು. ಬಾಕಿ ಪ್ರಕರಣಗಳಿಂದ ಜನಗಳಿಗೆ ಆಗುತ್ತಿರುವ ತೊಂದರೆಗೆ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಲಾಯಿತು.

ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ವಿ. ರಶ್ಮಿ ಮಹೇಶ್, ಕಂದಾಯ ಇಲಾಖೆ ಆಯುಕ್ತರಾದ ಪಿ. ಸುನೀಲ್ ಕುಮಾರ್, ನೋಂದಣಿ ಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಾದ ಡಾ| ಮಮತ ಬಿ. ಆರ್ ಸೇರಿದಂತೆ ಬೆಂಗಳೂರು ವಿಭಾಗದ 9 ಜಿಲ್ಲೆಯ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: