ಹುಬ್ಬಳ್ಳಿ ಕೋರ್ಟ್ ವೃತ್ತದಿಂದ ದೇಸಾಯಿ ಕ್ರಾಸ್‌ವರೆಗೆ ಪ್ಲೈಓವರ್: ಜನವರಿ ಅಂತ್ಯಕ್ಕೆ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಲು ಸೂಚನೆ

0

Get real time updates directly on you device, subscribe now.

ಹುಬ್ಬಳ್ಳಿ ಕೋರ್ಟ್ ವೃತ್ತದಿಂದ ನಿರ್ಮಾಣವಾಗುತ್ತಿರುವ ಪ್ಲೈಓವರ್‌ನ್ನು ದೇಸಾಯಿ ಕ್ರಾಸ್‌ವರೆಗೆ ಮುಂದುವರೆಸುವ ಅಥವಾ ಪ್ರಸ್ತುತ ಅಲ್ಲಿರುವ ಅಂಡರ್‌ಪಾಸನ್ನು ತೆಗೆದು ಹಾಕಿ ಈ ಹಿಂದೆ ಇದ್ದ ರಸ್ತೆಯನ್ನು ನಿರ್ಮಾಣ ಮಾಡುವ ಕುರಿತು ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ಡಿ.18ರಂದು ಸಭೆ ನಡೆಯಿತು.
ಸುವರ್ಣಸೌಧದ ಮೂರನೇ ಮಹಡಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ಲೈಓವರ್ ನಿರ್ಮಾಣದ ಪ್ರಾತ್ಯಕ್ಷಿಕೆ ವೀಕ್ಷಣೆ ವೇಳೆ ಮಾತನಾಡಿದ ಹೊರಟ್ಟಿಯವರು, ರಸ್ತೆ ವ್ಯವಸ್ಥೆ ಸರಿಯಾಗಿಲ್ಲದೇ ಈ ಪ್ರದೇಶದ ಜನರು ಅನೇಕ ತೊಂದರೆಗಳಿಂದಾಗಿ ಹೈರಾಣಾಗಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಎಂಜಿನಿಯರ್ ಗಮನ ಹರಿಸಬೇಕು ಎಂದು ತಿಳಿಸಿದರು.
ಚನ್ನಮ್ಮ ಸರ್ಕಲ್, ಕೋರ್ಟ್ ವೃತ್ತದಿಂದ ಸರ್ಕಿಟ್ ಹೌಸ್ ಮತ್ತು ರೈಲ್ವೆ ಸೇತುವೆ ಬಳಸಿ ಕೇಶ್ವಾಪುರಗೆ ಸಂಪರ್ಕ ಕಲ್ಪಿಸುವ ಈ ರಸ್ತೆಗೆ ಪ್ಲೈಓವರ್ ಅಗತ್ಯವಿದೆಯೇ ಎಂಬುದರ ಬಗ್ಗೆ ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ಯೋಚಿಸಿ ನಿರ್ಣಯಿಸಬೇಕು. ಪ್ಲೈಓವರ್ ನಿರ್ಮಾಣವಾಗಲೇಬೇಕು ಎಂದಾದಲ್ಲಿ ಇದರಿಂದಾಗುವ ಸಾಧಕ ಬಾಧಕಗಳ ಬಗ್ಗೆ ಸರಿಯಾಗಿ ಅರಿಯಬೇಕು. ಅಥವಾ ಪ್ರೈಓವರ್ ಬದಲಿಗೆ ಪ್ರಸ್ತುತ ಅಲ್ಲಿರುವ ಅಂಡರ್‌ಪಾಸನ್ನು ತೆಗೆದುಹಾಕಿ ಈ ಹಿಂದೆ ಇದ್ದ ರಸ್ತೆಯನ್ನು ನಿರ್ಮಾಣ ಮಾಡುವುದು ಸೂಕ್ತ ಎಂದಾದಲ್ಲಿ ಈ ಬಗ್ಗೆ ಪರಿಷ್ಕೃತ ಪ್ರಸ್ತಾವನೆಯನ್ನು ಬರುವ ಜನವರಿ ಅಂತ್ಯಕ್ಕೆ ಸಲ್ಲಿಸಬೇಕು ಎಂದು ಹೊರಟ್ಟಿಯವರು ಅಧಿಕಾರಿಗಳು ಮತ್ತು ಎಂಜಿನಿಯರುಗಳಿಗೆ ಗಡುವು ವಿಧಿಸಿದರು.
ಹುಬ್ಬಳ್ಳಿ ನಗರದ ರಾಣಿ ಚೆನ್ನಮ್ಮ ಸರ್ಕಲ್‌ದಿಂದ ನವಲಗುಂದ ಪಟ್ಟಣಕ್ಕೆ ಹೊರಡುವ ರಸ್ತೆಯು ದಿನೇದಿನೆ ಜನದಟ್ಟಣೆಯಿಂದಾಗಿ ಸುಗಮ ಸಂಚಾರಕ್ಕೆ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಸಂಬಂಧಿಸಿದ ಅಧಿಕಾರಿಗಳು, ಎಂಜಿನಿಯರ್ ಇಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅರಿಯಬೇಕು. ನವಲಗುಂದ, ಬಾಗಲಕೋಟೆ, ವಿಜಯಪುರಕ್ಕೆ ಸಾರ್ವಜನಿಕರು ಈ ರಸ್ತೆ ಬಳಸಿಯೇ ಪ್ರತಿನಿತ್ಯ ಸಂಚಾರ ನಡೆಸುತ್ತಾರೆ. ಇದನ್ನು ಅರಿತು ವಿಳಂಬ ಮಾಡದೇ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಪರಿಷ್ಕೃತ ಪ್ರಸ್ತಾವನೆಯನ್ನು ಕಾಲಮಿತಿಯೊಳಗೆ ಸಲ್ಲಿಸಲು ಮುಂದಾಗಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ, ಕಾರ್ಯದರ್ಶಿ ಸತ್ಯನಾರಾಯಣ, ಜಿಲ್ಲಾಧಿಕಾರಿ ದಿವ್ಯಪ್ರಭು, ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತರು, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರು, ರಾಷ್ಟೀಯ ಹೆದ್ದಾರಿ ಉತ್ತರ ವಲಯದ ಮುಖ್ಯ ಎಂಜನಿಯರ್, ಸಂಪರ್ಕ ಮತ್ತು ಕಟ್ಟಡದ ಮುಖ್ಯ ಎಂಜಿನಿಯರ್, ಸಭಾಪತಿಯವರ ವಿಶೇಷ ಕರ್ತವ್ಯಾಧಿಕಾರಿ ಮಹೇಶ ವಾಳ್ವೇಕರ್, ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಎಂಜಿನಿಯರ್, ರಾಷ್ಟೀಯ ಹೆದ್ದಾರಿಗಳ ವೃತ್ತದ ಅಧೀಕ್ಷಕ ಎಂಜಿನಿಯರ್, ರಾಷ್ಟೀಯ ಹೆದ್ದಾರಿಗಳ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಸೇರಿದಂತೆ ಇನ್ನೀತರರು ಇದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!