ಕೆಲವೆ ದಿನಗಳಲ್ಲಿ ಕಾರ್ಮಿಕರಿಗೆ ನಿವೇಶನ, ಮನೆ, ಕಲ್ಯಾಣ ಮಂಟಪ: ಜನಾರ್ದನರೆಡ್ಡಿ

Get real time updates directly on you device, subscribe now.


ಗಂಗಾವತಿ: ಕಾರ್ಮಿಕರ ಬಹುದಿನಗಳ ಬೇಡಿಕೆಯಾದ ನಿವೇಶನ, ಮನೆ, ಕಲ್ಯಾಣ ಕಾರ್ಯಗಳಿಗಾಗಿ ಕಲ್ಯಾಣ ಮಂಟಪ ಕೆಲವೆ ದಿನಗಳಲ್ಲಿ ನಿರ್ಮಾಣ ಮಾಡಿಕೊಡಲಾಗುವುದೆಂದು ಶಾಸಕ ಗಾಲಿ ಜನಾರ್ದನರೆಡ್ಡಿ ಭರವಸೆ ನೀಡಿದರು.
ನಗರದ ಆನೆಗೊಂದಿ ರಸ್ತೆಯಲ್ಲಿರುವ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಶ್ರಮಜೀವಿ ಕಲ್ಯಾಣ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರ ಸೇವಾ ಸಂಘಟನೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸಂಘದ ಎರಡನೇ ವಾರ್ಷಿಕೋತ್ಸವ ಹಾಗು ನಾಮಫಲಕ ಅನಾವರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಅವರ ಮಕ್ಕಳ ಭವಿಷ್ಯದ ನಿರ್ಮಾಣಕ್ಕಾಗಿ ಶ್ರಮಿಸುವೆ ಎಂದು ಆಶ್ವಾಸನೆ ನಿಡಿದ್ದೆ ಅದೇ ರೀತಿ ನಾನು ನಡೆದುಕೊಳ್ಳುತ್ತೆನೆ. ಬಡತನದಲ್ಲಿ ಜೀವನ ನಡೆಸುತ್ತಿರುವ ಕಾರ್ಮಿಕರಿಗೆ ಸ್ವಂತ ಮನೆಗಳನ್ನು ನಿರ್ಮಿಸುವೆ ಅಷ್ಟೇ ಅಲ್ಲದೆ ಕಟ್ಟಡ ಕಾರ್ಮಿಕರ ಸಂಘಟಿತರಾಗಲು, ಸಭೆ ಸಮಾರಂಭಗಳನ್ನು ನಡೆಸಲು ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಒಳ್ಳೆಯ ಜಾಗ ಖರೀದಿ ಮಾಡಿ, ಕಾರ್ಮಿಕರ ಭವನವನ್ನು ನಿರ್ಮಾಣ ಮಾಡಿಕೊಡುವೆ. ಕಾರ್ಮಿಕರು ಸಹ ನಿಮ್ಮ ಮಕ್ಕಳನ್ನು ಕೂಲಿ ಮಾಡಲು ಕಳುಹಿಸದೆ ಶಿಕ್ಷಣ ಕೊಡಿಸಲು ಆಸಕ್ತಿಯನ್ನು ತೊರಿಸಬೇಕು. ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಂಡಿರುವ ಮಕ್ಕಳಿಂದ ಮಾತ್ರ ಉತ್ತಮ ಭವಿಷ್ಯ ನಿರ್ಮಾಣವಾಗಲು ಸಾಧ್ಯವಾಗುತ್ತದೆ. ದೇಶದ ಅಭಿವೃದ್ಧಿಯ ದೃಷ್ಠಿಯಿಂದ ಮಕ್ಕಳಿಗೆ ಪಾಲಕರು ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ಮಾತ್ರ ಮಕ್ಕಳ ಭವಿಷ್ಯ ಬದಲಾವಣೆ ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಹಕ್ಕು ಪಡೆಯಲು ಸಂಘಟಿತರಾಗಿ : ಕಾರ್ಮಿಕರ ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಪಡೆದುಕೊಳ್ಳಬೇಕಾದರೆ ನೀವುಗಳು ಸಂಘಟಿತರಾಗಬೇಕು. ಸಂಘಟನೆಯಿಂದ ಹೋರಾಟಗಳನ್ನು ನಡೆಸಿ, ಹಕ್ಕುಗಳನ್ನು ಪಡೆದುಕೊಳ್ಳಬೇಕು. ಕಟ್ಟಡ ಸೇರಿದಂತೆ ಇತರೆ ಕಾರ್ಮಿಕರು ಸಂಘಟಿತರಾಗಬೇಕು. ಸಂಘಟನೆಯಿಂದ ಮಾತ್ರ ಬದಲಾವಣೆ ಸಾಧ್ಯ ಎನ್ನುವುದು ಕಾರ್ಮಿಕರು ಅರಿತುಕೊಳ್ಳಬೇಕು ಎಂದು ವಿಧಾನ ಪರಿಷತ್‌ನ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಹೇಳಿದರು. ನಂತರ ಶಾಸಕ ಗಾಲಿ ಜನಾರ್ದನರೆಡ್ಡಿ ಹಾಗು ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಆರ್.ಶ್ರೀನಾಥ್ ಅವರನ್ನು ಆತ್ಮೀಯವಾಗಿ ಕಾರ್ಮಿಕ ಸಂಘಟನೆಯಿಂದ ಸನ್ಮಾನಿಸಲಾಯಿತು.
ಪ್ರಮುಖರಾದ ದುರ್ಗಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ, ಕೆಆರ್‌ಪಿಪಿ ಕೊಪ್ಪಳ ಅಧ್ಯಕ್ಷ ಮನೋಹರಗೌಡ, ಕೆಆರ್‌ಪಿಪಿ ಪ್ರಚಾರ ಸಮಿತಿ ಅಧ್ಯಕ್ಷ ಅಮರಜ್ಯೋತಿ ನರಸಪ್ಪ, ಮುಖಂಡರಾದ ಯಮನೂರ ಚೌಡ್ಕಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗಂಗಾವತಿ ತಾಲೂಕಾ ಅಧ್ಯಕ್ಷ ನಾಗರಾಜ್ ಇಂಗಳಗಿ, ಕೊಪ್ಪಳ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಶಿವಕುಮಾರಗೌಡ, ಜಿಲ್ಲಾಧ್ಯಕ್ಷ ಪಂಪಾಪತಿ ಇಂಗಳಗಿ, ಗೌರವಧ್ಯಕ್ಷ ಶರಣಪ್ಪ ಇತರರಿದ್ದರು.

 

Get real time updates directly on you device, subscribe now.

Comments are closed.

error: Content is protected !!