ಬಿಹಾರದಲ್ಲಿ ಪತ್ರಕರ್ತನ ಎದೆಗೆ ಗುಂಡಿಟ್ಟು ಹತ್ಯೆ: ಕೆಯುಡಬ್ಲ್ಯೂಜೆ ಖಂಡನೆ
ಬೆಂಗಳೂರು:
ಬಿಹಾರದಲ್ಲಿ ಪತ್ರಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದನ್ನು ಉಗ್ರವಾಗಿ ಖಂಡಿಸಿರುವ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ), ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದೆ.
ಅರಾರಿಯಾ ಜಿಲ್ಲೆಯ ರಾಣಿ ಗಂಜ್ ನಲ್ಲಿರುವ ಪತ್ರಕರ್ತ ಬಿಮಲ್ ಯಾದವ್ ಅವರ ಮನೆಗೆ ಏಕಾಏಕಿ ನುಗ್ಗಿದ ನಾಲ್ವರು ದುಷ್ಕರ್ಮಿಗಳು ಅವರ ಎದೆಗೆ ಗುಂಡಿಕ್ಕಿ ಪರಾರಿಯಾಗಿರುವುದು ಆತಂಕಕಾರಿ ಸಂಗತಿಯಾಗಿದೆ. ಬಿಹಾರ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಒತ್ತಾಯಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳಿಗೆ ಮಹತ್ವದ ಪಾತ್ರವಿದೆ. ಪತ್ರಕರ್ತನ ಜವಾಬ್ದಾರಿ ಕೂಡ ಅಷ್ಟೇ ಪ್ರಮುಖವಾಗಿದೆ. ಅಭಿಪ್ರಾಯ ವ್ಯಕ್ತಪಡಿಸಲು ಮಾಧ್ಯಮ ಒಂದು ವೇದಿಕೆ. ನಾಗರೀಕ ಮಾರ್ಗದಲ್ಲಿ ಪ್ರತಿಕ್ರಿಯೆ ನೀಡಿ ಸಮಸ್ಯೆ ಬಗೆಹರಿಸಿಕೊಳ್ಳುವ ಬದಲು
ಪತ್ರಕರ್ತನ ಎದೆಗೆ ಗುಂಡಿಕ್ಕುವ ಮೂಲಕ ಹೀನ ಕೃತ್ಯ ನಡೆಸಿರುವ ಆರೋಪಿಗಳನ್ನು ಶಿಕ್ಷಿಸಿ, ಪತ್ರಕರ್ತರಿಗೆ ರಕ್ಷಣೆ ನೀಡಲು ಸರ್ಕಾರ ಮುಂದಾಗಬೇಕು ಎಂದು ತಗಡೂರು ಆಗ್ರಹಿಸಿದ್ದಾರೆ.
Comments are closed.