ಶಾಂತರಸರಿಗೂ ಕೊಪ್ಪಳಕ್ಕೂ ಇದೆ ವಿಶೇಷ ನಂಟು: ಮದರಿ

0

Get real time updates directly on you device, subscribe now.

//ಶತಮಾನೋತ್ಸವ ಕಾರ್ಯಕ್ರಮ//

– ವಿದ್ಯಾರ್ಥಿ ದಿಸೆಯಲ್ಲೇ ಓದುವಿಕೆ ರೂಢಿಸಿಕೊಳ್ಳಬೇಕು

– ಮೌಲ್ಯಯುತ ಕೃತಿಗಳು ಬದುಕು ರೂಪಿಸುತ್ತವೆ

 

ಕೊಪ್ಪಳ: ಹೋರಾಟದ ಹಾದಿ, ಸಾಹಿತ್ಯ ಕ್ಷೇತ್ರದಲ್ಲಿ ಶಾಂತರಸ ಅವರದ್ದು ದೊಡ್ಡ ಹೆಜ್ಜೆ. ಅವರಿಗೂ ಕೊಪ್ಪಳಕ್ಕೂ ವಿಶೇಷ ನಂಟಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ವಿಜೇತರಾದ ಎ.ಎಂ.ಮದರಿ ಹೇಳಿದರು.

ಕವಿ ಸಮೂಹ ಕೊಪ್ಪಳ, ಸಂಸ ಥಿಯೇಟರ್ ಬೆಂಗಳೂರು, ಬಹುತ್ವ ಬಳಗ ಕೊಪ್ಪಳ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ನಡೆದ ಶಾಂತರಸರ ಶತಮಾನೋತ್ಸವ ಆಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಹಿಂದಿನವರನ್ನು ನಾವು ನೆನಪಿಸಿಕೊಳ್ಳಬೇಕು.  ಕೃತಜ್ಞತಾ ಭಾವದಿಂದ ಅವರಿಗೆ ಗೌರವವನ್ನು ಸಲ್ಲಿಸಬೇಕು. ಇದು ನಮ್ಮ ಕರ್ತವ್ಯವು ಹೌದು .  ಆ ಊರು ಈ ಊರು ಯಾವ ಊರಾದರೇನು? ನಮ್ಮ ಊರೇ ನಮಗೆ ಚೆಂದ.  ನಮ್ಮೆಲ್ಲರ ಕನಸಿನಲ್ಲಿ ಬರುವುದು ಸಹ ನಮ್ಮದೇ ಊರು, ನಮ್ಮದೇ ಭಾಷೆ. ಹೀಗೆ ಹೆಂಬೆರಾಳ ಶಾಂತರಸರಿಗೂ, ಕೊಪ್ಪಳಕ್ಕೂ ವಿಶೇಷ ನಂಟಿದೆ. ಹೀಗಾಗಿ ಈ ಕಾರ್ಯಕ್ರಮ ವಿಶೇಷವಾಗಿದೆ ಎಂದು ವಿಮರ್ಶಕ ಎ.ಎಂ ಮದರಿ ತಿಳಿಸಿದರು.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂಭಾಗದಲ್ಲಿ ಸಂಸ ರಂಗ ಮಂದಿರವಿದೆ. ಅವರು ದೊಡ್ಡ ನಾಟಕಕಾರರು. ಅವರ ಹೆಸರಿನ ಸಂಘಟನೆಯೂ ಸಹ ಈ ಕಾರ್ಯಕ್ರಮದಲ್ಲಿ ಜೊತೆಯಾಗಿರುವುದು ವಿಶೇಷ.   ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡುವುದು ನೀರು ಎರೆವುದರ ಮೂಲಕ. ಅಂದರೆ ಅದು ಬೆಳೆಸುವುದರ ಸಂಕೇತ. ವಿದ್ಯಾರ್ಥಿಗಳು ಸಹ ಸಸಿಗಳಂತೆ. ವಿವಿಧ ವಿಷಯಗಳನ್ನು ಧಾರೆ ಎರೆದು ಅವರನ್ನು ಬೆಳೆಸಬೇಕಾಗುತ್ತದೆ ಎಂದು ಹೇಳಿದರು.

ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಕೊಪ್ಪಳಕ್ಕೆ ಬರಲಿರುವ ಫ್ಯಾಕ್ಟರಿ ಬಗ್ಗೆ ವಿದ್ಯಾರ್ಥಿಗಳು, ಜನರು ಎಚ್ಚೆತ್ತುಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಎಚ್.ನಾಯ್ಕ ಮಾತನಾಡಿ, ಕಾಲೇಜಿನ ಕನ್ನಡ ವಿಭಾಗ ಇಂಥ ಕಾರ್ಯಕ್ರಮಗಳನ್ನು ಹೆಚ್ಚಾಗಿ, ಅಚ್ಚುಕಟ್ಟಾಗಿ ರೂಪಿಸಬೇಕು. ವಿದ್ಯಾರ್ಥಿಗಳು ಸಹ ಇಂಥ ಕಾರ್ಯಕ್ರಮಗಳಿಂದ ಸಾಧಕರ ಬದುಕು ಅರಿತು, ಪ್ರೇರಣೆ ಪಡೆದು, ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜಿನ ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಭಾಗ್ಯಜ್ಯೋತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರಾದ ಸಾವಿತ್ರಿ ಮುಜುಂದಾರ, ಹಿರಿಯ ಚಿಂತಕ ರವಿ ಕಾಂತನವರ, ಬಿಕನಳ್ಳಿಯ ರಂಗಭೂಮಿ ಕಲಾವಿದ ಮಲ್ಲಪ್ಪ ಕುರಿ, ಬಹುತ್ವ ಬಳಗದ ಎಚ್. ವಿ.ರಾಜಾಭಕ್ಷಿ, ಚುಟುಕು ಕವಿ ಶಿವಪ್ರಸಾದ ಹಾದಿಮನಿ, ಕಾಲೇಜಿ‌ನ ಬೋಧಕ ಸಿಬ್ಬಂದಿ ಡಾ.ಪ್ರಕಾಶ್ ಬಳ್ಳಾರಿ, ಡಾ.ಬೋರೇಶ್.ಇ,  ಎಂ.ಶಿವಣ್ಣ, ಬಸವರಾಜ ಕರುಗಲ್, ಉಮೇಶ್ ಅಂಗಡಿ, ಮತ್ತಿತರರು ಇದ್ದರು.

ಚೈತ್ರಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸಾಹಿತಿ, ನ್ಯಾಯವಾದಿಗಳಾದ ವಿಜಯ ಅಮೃತರಾಜ್ ಸ್ವಾಗತಿಸಿದರು. ಕವಿಸಮೂಹದ ಸಿರಾಜ್ ಬಿಸರಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಡಾ.ಮಹಾಂತೇಶ ನೆಲಾಗಣಿ ನಿರೂಪಿಸಿದರು. ಡಾ.ಅನ್ನಪೂರ್ಣ ಗೋಸಬಾಳ ವಂದಿಸಿದರು.

ಕಾಲಿಮಿರ್ಚಿ, ಭಾವಿಕಟ್ಟಿಯವರಿಂದ ವಿಶೇಷ ಉಪನ್ಯಾಸ:

ಶಾಂತರಸರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಅಕ್ಬರ್ ಸಿ.ಕಾಲಿಮಿರ್ಚಿಯವರು ಶಾಂತರಸರ ಬಾಲ್ಯ, ಶಿಕ್ಷಣ, ವಿದ್ಯಾರ್ಥಿ ಹಂತದಲ್ಲೇ ತುಳಿದ ಹೋರಾಟದ ದಾರಿ, ಸಾಹಿತ್ಯ‌ ಕ್ಷೇತ್ರದಲ್ಲಿ ಅವರ ಸಾಧನೆ, ಬದುಕು ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಗಾಯತ್ರಿ ಭಾವಿಕಟ್ಟಿಯವರು ಶಾಂತರಸರು ಬರೆದ ಉರಿದ ಬದುಕು, ಸಣ್ಣ ಗೌಡಶಾನಿ, ನಾಯಿ ಮತ್ತು ಪಿಂಚಣಿ ಕೃತಿಗಳ ಸಾರವನ್ನು ವಿಶೇಷ ಉಪನ್ಯಾಸದಲ್ಲಿ ಸಂಕ್ಷಿಪ್ತವಾಗಿ ತಿಳಿಸಿ, ಶಾಂತರಸರ ಕೃತಿಗಳ ಮಹತ್ವ ವಿವರಿಸಿದರು.

 

 

ಗಮನ ಸೆಳೆದ ವಿದ್ಯಾರ್ಥಿಗಳ ಗಜಲ್ ವಾಚನ

ಸಮಾರಂಭದಲ್ಲಿ ಕಾಲೇಜಿನ ಬಿ.ಎ.ಎರಡನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ಪೃಥ್ವಿ, ಶ್ರವಣಕುಮಾರ್ ಹಾಗೂ ಬಿ.ಎ.ಆರನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಶ್ರೀದೇವಿ, ಚೈತ್ರಾ, ಮಂಜುಳಾ ಗಜಲ್ ವಾಚನ ಮಾಡಿ ಗಮನ ಸೆಳೆದರು.

ಸಾಧಕರಿಗೆ ಸನ್ಮಾನ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅಲ್ಲಮಪ್ರಭು ಬೆಟ್ಟದೂರು, ಎ.ಎಂ.ಮದರಿ, ಪ್ರಸಕ್ತ ಸಾಲಿನಲ್ಲಿ ಪಿಎಚ್‌.ಡಿ ಪದವಿ ಪಡೆದ ಕಾಲೇಜಿನ ಅತಿಥಿ ಉಪನ್ಯಾಸಕರಾದ ಕನ್ನಡ ವಿಭಾಗದ ಡಾ.ಮಹಾಂತೇಶ ಬಿ.ನೆಲಾಗಣಿ, ಇಂಗ್ಲಿಷ್ ವಿಭಾಗದ ಡಾ.ಶಿವಬಸಪ್ಪ ಮಸ್ಕಿ, ಸಮಾಜಶಾಸ್ತ್ರ ವಿಭಾಗದ ಡಾ.ವಿಜಯಕುಮಾರ್ ಕೆ.ತೋಟದ, ಡಾ.ಪ್ರಕಾಶ ಜಡಿಯವರ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಕಾರ್ಯಕ್ರಮವನ್ನು ಡಾ.ತುಕಾರಾಂ ನಾಯ್ಕ ನಡೆಸಿಕೊಟ್ಟರು.

=====

ಫೋಟೋ

Get real time updates directly on you device, subscribe now.

Leave A Reply

Your email address will not be published.

error: Content is protected !!