ಇಂದು ಕೊಪ್ಪಳದಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಜಿಲ್ಲಾ ಮಟ್ಟದ ಸಂವಾದ ಸಭೆ
): ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಕೊಪ್ಪಳ ಜಿಲ್ಲಾ ಮಟ್ಟದ ಸಂವಾದ ಸಭೆಯನ್ನು ಏಪ್ರಿಲ್ 8 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಡಾ. ಡಿ.ಎಂ.ನಂಜುಂಡಪ್ಪ ವರದಿಯು ಸುಮಾರು 22 ವರ್ಷಗಳಷ್ಟು ಹಳೆಯಾದಾಗಿರುವುದರಿಂದ ಹಾಗೂ ಕರ್ನಾಟಕದಲ್ಲಿ ಹಿಂದೆ ಇದ್ದ 175 ತಾಲ್ಲೂಕುಗಳ ಬದಲು ಪ್ರಸ್ತುತ 240 ತಾಲ್ಲೂಕುಗಳಾಗಿರುವುದರಿಂದ 2023ರ ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಘೋಷಿಸಿದಂತೆ, ಡಾ. ಡಿ.ಎಂ ನಂಜುಂಡಪ್ಪ ವರದಿಯ ಅನುಷ್ಠಾನದಿಂದ ತಾಲ್ಲೂಕುಗಳು ಅಭಿವೃದ್ಧಿ ಹೊಂದಿರುವ ಬಗ್ಗೆ ಹಾಗೂ ಅಭಿವೃದ್ಧಿ ಹೊಂದದೆ ಇರುವ ತಾಲ್ಲೂಕುಗಳನ್ನು ಗುರುತಿಸಿ ಹೊಸದಾಗಿ ಸೂಚ್ಯಾಂಕವನ್ನು ಕಂಡು ಹಿಡಿದು ಪ್ರಾದೇಶಿಕ ಅಸಮತೋಲನವನ್ನು ನಿವಾರಣೆ ಮಾಡಲು ರಾಜ್ಯ ಸರ್ಕಾರವು ಆರ್ಥಿಕ ತಜ್ಞರಾದ ಪ್ರೊ. ಎಂ. ಗೋವಿಂದರಾವ್ ರವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಜಿಲ್ಲಾ ಮಟ್ಟದ ಸಂವಾದ ಸಭೆಗಳನ್ನು ಏರ್ಪಡಿಸಲು ನಿರ್ಧರಿಸಿದೆ. ಅದರಂತೆ ಏಪ್ರಿಲ್ 7 ರಂದು ಗದಗ ಜಿಲ್ಲೆ, ಏ. 8 ರಂದು ಕೊಪ್ಪಳ ಜಿಲ್ಲೆ ಹಾಗೂ ಏ. 9 ರಂದು ಹಾವೇರಿ ಜಿಲ್ಲೆಗೆ ಕ್ಷೇತ್ರ ಭೇಟಿ ನೀಡಿ ಪ್ರಾಥಮಿಕ ಹಂತದ ಮಾಹಿತಿ, ಡಾಟಾಗಳನ್ನು ಕಲೆ ಹಾಕಲು ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಡಾ. ವಿಶಾಲ್.ಆರ್ (ಸರ್ಕಾರದ ಕಾರ್ಯದರ್ಶಿಗಳು ವಿತ್ತೀಯ ಸುಧಾರಣೆ ಮತ್ತು ಯೋಜನ ಇಲಾಖೆ) ಹಾಗೂ ಸಮಿತಿ ಸದಸ್ಯರಾದ ಎಸ್.ಟಿ ಬಾಗಲಕೋಟಿ ರವರು ಭೇಟಿ ನೀಡುವರು.
ಈ ಹಿನ್ನೆಲೆಯಲ್ಲಿ ಏ. 8ರಂದು ನಡೆಯಲಿರುವ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಕೊಪ್ಪಳ ಜಿಲ್ಲಾ ಮಟ್ಟದ ಸಂವಾದ ಸಭೆಗೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗುವಂತೆ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.