ತಂಬಾಕು ನಿಯಂತ್ರಣಕ್ಕೆ ಹೆಚ್ಚು ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ ನಲಿನ್ ಅತುಲ್

Get real time updates directly on you device, subscribe now.

 : ಆರೋಗ್ಯಕ್ಕೆ ಹಾನಿಕರವಾಗಿರುವ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಹೆಚ್ಚು ಜಾಗೃತಿ ಮೂಡಿಸುವುದರ ಮೂಲಕ ತಂಬಾಕು ನಿಯಂತ್ರಣಕ್ಕೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಅಂಗವಾಗಿ ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ವಿಶ್ವದಾದ್ಯಂತ ಕ್ಯಾನ್ಸರ್, ಹೃದಯ ಸಂಬಂಧಿ ಖಾಯಿಲೆಗಳು, ಶ್ವಾಸಕೋಶದ ಖಾಯಿಲೆಗಳಿಗೆ ತಂಬಾಕು ಸೇವನೆಯೇ ಮುಖ್ಯ ಕಾರಣವಾಗಿದೆ. ತಂಬಾಕು ಸೇವನೆಯಿಂದಾಗುವ ಶ್ವಾಸಕೋಶದ ಕ್ಯಾನ್ಸರ್, ಬಾಯಿ ಕ್ಯಾನ್ಸರ್, ಹೃದಯ  ಸಂಬಂಧಿ ಕಾಯಿಲೆಗಳು, ಹೆಣ್ಣು ಮಕ್ಕಳಿಗೆ ಗರ್ಭಪಾತ, ಗರ್ಭಕಂಠದ ಕ್ಯಾನ್ಸರ್ ಹಾಗೂ ಇತ್ಯಾದಿ ದುಷ್ಪರಿಣಾಮಗಳ ತಿಳುವಳಿಕೆ ಮೂಡಿಸಬೇಕು. ನಗರ ಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿ ಅಡಿಯಲ್ಲಿ ಬರುವ ಕಿರಾಣಿ ಅಂಗಡಿಗಳು, ಪಾನ್ ಶಾಪ್, ಹೊಟೇಲ್‌ಗಳಿಗೆ ಟಬಾಕೋ ವೆಂಡರ್ ಲೈಸನ್ಸ್ ನೀಡುಬ ಬಗ್ಗೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕೊಟ್ಟಾ-2003 ಕಾಯ್ದೆಯ ಸೆಕ್ಷನ್ 4ರಂತೆ ದೂಮಪಾನ ನಿಷೇಧಿತ ಪ್ರದೇಶ ಎಂಬ ನಾಮ ಫಲಕ ಹಾಕಿಕೊಳ್ಳುವಂತೆ ನೋಡಿಕೊಳ್ಳುವುದರ ಜೊತೆಗೆ ಸ್ವಚ್ಛತಾ ಸಿಬ್ಬಂದಿಗಳ ಮೂಲಕವು ಪ್ರಚಾರ ಕೈಗೊಳ್ಳಬೇಕು ಎಂದರು.
ತಾಲ್ಲೂಕ ಆರೋಗ್ಯಾಧಿಕಾರಿಗಳು ಕೊಟ್ಪಾ-2003ರ ಕಾಯ್ದೆಯಡಿಯಲ್ಲಿ ದಾಳಿ ನಡೆಸಬೇಕು. ಪೋಲಿಸ್ ಇಲಾಖೆ, ಸಾರಿಗೆ ಇಲಾಖೆ, ಪಿ.ಡಿ.ಓ.ಗಳು, ಆರ್.ಡಿ.ಪಿ.ಆರ್, ಶಿಕ್ಷಣ ಇಲಾಖೆ, ನಗರ ಸಭೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಗೂ ಪ್ರವಾಸೋದ್ಯಮ ಇಲಾಖೆ, ಅಬಕಾರಿ ಇಲಾಖೆಯವರು ಕೋಟ್ಪಾ-2003ರ ಕಾಯ್ದೆಯಡಿಯಲ್ಲಿ ತಮ್ಮ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ಕಾಯ್ದೆ ಉಲ್ಲಂಘನೆಯಾದಲ್ಲಿ ಕ್ರಮ ಜರುಗಿಸಿ, ದಂಡ ವಿಧಿಸಿ ವರದಿಯನ್ನು ಕೊಪ್ಪಳ ಜಿಲ್ಲಾ ತಂಬಾಕು ನಿಯಂತ್ರಣ ಕೋಶಕ್ಕೆ ವರದಿಯನ್ನು ತಪ್ಪದೇ ನೀಡಬೇಕು. ತಹಶೀಲ್ದಾರರ ನೇತೃತ್ವದಲ್ಲಿ ತಾಲ್ಲೂಕಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು. ಸೆಕ್ಷನ್ 6(ಬಿ) ಪ್ರಕಾರ ಶಿಕ್ಷಣ ಸಂಸ್ಥೆಯ 100 ಗಜದ ಒಳಗೆ ಯಾವುದೇ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಶಿಕ್ಷಣ ಇಲಾಖೆಯು ತೀವ್ರ ನಿಗಾವಹಿಸಬೇಕು. ತಾಲೂಕ ಪಂಚಾಯತ, ಗ್ರಾಮ ಪಂಚಾಯತ ಅಡಿಯಲ್ಲಿ ಬರುವ ಕಿರಾಣಿ ಅಂಗಡಿಗಳು, ಪಾನ್‌ಶಾಪ್, ಹೊಟೇಲ್ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಸೆಕ್ಷನ್: 6ಎ ಅಡಿಯಲ್ಲಿ ಅಪ್ರಾಪ್ತ ವಯಸ್ಕರಿಗೆ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದು ಹಾಗೂ ಮಾಡಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ತಂಬಾಕು ಮಾರಾಟ ಮಾಡುವ ಅಂಗಡಿ ಮಾಲೀಕರು ಆರೋಗ್ಯ ಎಚ್ಚರಿಕೆ ನಾಮ ಫಲಕವನ್ನು ಕಡ್ಡಾಯವಾಗಿ ಅಂಗಡಿ ಮುಂದೆ ಪ್ರದರ್ಶನ ಮಾಡಬೇಕು. ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಟ್ಟಾ-2003ರ ಕಾಯ್ದೆಯ ನಿಯಮಾವಳಿಗಳ ಪ್ರಕಾರ ಸೆಕ್ಷನ್-4, ಸೆಕ್ಷನ್-5 ಹಾಗೂ ಸೆಕ್ಷನ್-7ರ ಉಲ್ಲಂಘನೆ ಕಂಡು ಬಂದಲ್ಲಿ ಪೋಲಿಸ್ ಇಲಾಖೆಯಿಂದ ಮುಕದ್ದಮೆ ದಾಖಲಿಸಿ, ತಂಬಾಕು ನಿಯಂತ್ರಣ ಕೋಶದಿಂದ ಜಿಲ್ಲೆಯ ಎಲ್ಲಾ ತಾಲ್ಲೂಕಾಗಳಲ್ಲಿ ದಾಳಿ ಮಾಡುವ ಸಂಧರ್ಬದಲ್ಲಿ ಪೋಲಿಸ್ ಇಲಾಖೆಯಿಂದ ಖಡ್ಡಾಯವಾಗಿ ಸಹಕಾರ ನೀಡಬೇಕು. ಜಿಲ್ಲೆಯ ಎಲ್ಲಾ ಸರಕಾರಿ ಕಛೇರಿ ಸುತ್ತಮುತ್ತಲಿನ ಆವರಣದಲ್ಲಿ ತಂಬಾಕು ಮಾರಾಟ ಮಾಡದಂತೆ ನಿಗಾವಹಿಸುವುದು ಕಡ್ಡಾಯವಾಗಿದೆ ಹಾಗೂ ಧೂಮಪಾನ ಮುಕ್ತ ಕಛೇರಿಯನ್ನಾಗಿ ಮಾಡಬೇಕು. ಎಲ್ಲಾ ತಾಲೂಕಾ ಬಸ್ ನಿಲ್ದಾಣಗಳಲ್ಲಿ ತಂಬಾಕು ಮಾರಾಟ ಮತ್ತು ಧೂಮಪಾನ ಮಾಡದ ಹಾಗೆ ನಿಗಾವಹಿಸುವ ಬಗ್ಗೆ ಹಾಗೂ ಸೆಕ್ಷನ್ 4ರ ನಾಮಫಲಕವನ್ನು ಕಡ್ಡಾಯವಾಗಿ ಹಾಕಿಕೊಳ್ಳಲು ಸಾರಿಗೆ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಎಸ್ ದರಗದ ಅವರು ಮಾತನಾಡಿ, ತಂಬಾಕು ಮಾರಾಟ ಮತ್ತು ಸೇವನೆ ಕುರಿತು ಇರುವ ಕಾನೂನುಗಳು, ದಂಡ ಮತ್ತು ಶಿಕ್ಷೆಗಳ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಿದಾಗ ಮಾತ್ರ ತಂಬಾಕು ಮಾರಾಟ ಮತ್ತು ಸೇವನೆಯ ಮೇಲೆ ಪರಿಣಾಮಕಾರಿ ಬದಲಾವಣೆ ಸಾಧ್ಯವಾಗಿದೆ. ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ ಕೊಟ್ಟಾ-2003ರ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ, ಶಿಶು ಮತ್ತು ತಾಯಿ ಮರಣ ಪ್ರಮಾಣ ತಡೆ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಟಿ.ಲಿಂಗರಾಜು, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರವಿಂದ್ರ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಪ್ರಾಕಾಶ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ್, ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಶಶಿಧರ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ವೆಂಕಟೇಶ, ಗಂಗಾವತಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಈಶ್ವರ ಸವಡಿ, ತಾಲೂಕ ಆರೋಗ್ಯಾಧಿಕಾರಿಗಳಾದ ಕೊಪ್ಪಳದ ಡಾ. ರಾಮಾಂಜಿನೇಯ, ಕುಷ್ಟಗಿಯ ಡಾ.ಆನಂದ, ಗಂಗಾವತಿಯ ಡಾ. ಗೌರಿಶಂಕರ, ಯಲಬುರ್ಗಾದ ಡಾ.ಅಂಬರೀಶ್, ಕೊಪ್ಪಳ ಕಿಮ್ಸ್ ತಜ್ಞ ವೈದ್ಯರಾದ ಡಾ.ನಾರಾಯಣ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!