ಹಲಗೇರಿ ಗ್ರಾಮದ ಚರಿತ್ರೆ ಮತ್ತು ಪರಂಪರೆ
(ದಿನಾಂಕ;-೨೩-೦೩-೨೦೨೫ರಂದು ಹಲಗೇರಿ ಗ್ರಾಮದಲ್ಲಿ ನಡೆಯುವಕೊಪ್ಪಳ ತಾಲ್ಲೂಕು ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ಯ ವಿಶೇಷ ಲೇಖನ)
ಹಲಗೇರಿ ಗ್ರಾಮವು ಕೊಪ್ಪಳದಿಂದ ಕೂಗಳತೆ ದೂರದಲ್ಲೇ ಇದೆ.ಹಿಂದಿನ ಮುಂಬೈ ಮತ್ತು ಹೈದರಾಬಾದ ಪ್ರಾಂತ್ಯ ಸೇರಿಸುವ ಮುಖ್ಯ ರಸ್ತೆಯಲ್ಲಿಯೇ ಈ ಗ್ರಾಮ ಬರುತ್ತದೆ. ಪ್ರಾಚೀನ ಕಾಲದಲ್ಲಿ ಇದೊಂದು ಬಹುದೊಡ್ಡ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿತ್ತು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಲ್ಲಿ ಇಂದಿಗೂ ದೊರೆಯುವ ಶಾಸನಗಳು, ದೇವಾಲಯಗಳು, ಮೂರ್ತಿ-ಶಿಲ್ಪಗಳು ಮುಂತಾದ ಸ್ಮಾರಕಗಳು ಅದನ್ನು ಸಾಕ್ಷೀಕರಿಸುತ್ತವೆ. ಈ ಗ್ರಾಮದಲ್ಲಿ ಮೂರು ಪ್ರಾಚೀನ ದೇವಸ್ಥಾನಗಳು, ಐದು ಶಾಸನಗಳು, ಮೂರ್ತಿ-ಶಿಲ್ಪಗಳು ಮತ್ತು ಕೆಲ ನಿಶಧಿಗಲ್ಲುಗಳು ದೊರಕಿವೆ. ಅವುಗಳನ್ನು ಅಧ್ಯಯನ ಮಾಡಿದಾಗ ಈ
ಹಲಗೇರಿ ಗ್ರಾಮದ ಪ್ರಾಚೀನ ಕಾಲದ ಚರಿತ್ರೆ ತಿಳಿದುಬರುತ್ತದೆ.
ಹಲಗೇರಿಗ್ರಾಮವು ಕೊಪ್ಪಳ ನಗರದಿಂದ ಪಶ್ಚಿಮಕ್ಕೆ ಸುಮಾರು ೬-೭ ಕಿ.ಮೀ ಅಂತರದಲ್ಲಿದೆ. ಶಾಸನಗಳಲ್ಲಿ ಈ ಗ್ರಾಮವನ್ನು ಪಲ್ಗಿರಿ, ಪಲ್ಗೇರೆ, ಪಲ್ಗೆರಿ, ಪಲಗೇರಿ ಎಂಬ ಹೆಸರಿನಿಂದಕರೆಯಲಾಗಿದೆ.ಸಾಮಾನ್ಯವಾಗಿ ಹಳೆಗನ್ನಡ ಮತ್ತು ನಡುಗನ್ನಡದಲ್ಲಿ ಹಕಾರದ ಬದಲಾಗಿ ಪಕಾರ ಬಳಕೆಯಾಗಿದ್ದು ಕಂಡುಬರುತ್ತದೆ. ಹೀಗಾಗಿ ಈ ಹಲಗೇರಿ ಗ್ರಾಮವನ್ನು ಪಲ್ಗಿ(ಲ್ಗೇ)ರಿ ಎಂದು ಕರೆದಿರಬಹುದು.
ಈ ಗ್ರಾಮದಉತ್ತರಕ್ಕೆಕಲ್ಲೇಶ್ವರದೇವಸ್ಥಾನ ನಿರ್ಮಾಣಗೊಂಡಿದೆ.ಇದು ಸುಮಾರು ಕ್ರಿ.ಶ. ೧೦-೧೧ನೇ ಶತಮಾನದಲ್ಲಿ ನಿರ್ಮಾಣವಾದದೇವಸ್ಥಾನಎಂದು ಹೇಳಲಾಗುತ್ತಿದೆ.ಈ ದೇವಸ್ಥಾನವು ಬಹುತೇಕ ನಾಶವಾಗಿದ್ದು ಗರ್ಭಗುಡಿ ಮಾತ್ರ ಉಳಿದಿದೆ ಮತ್ತು ಕೆಲವು ಭಾಗಗಳನ್ನು ಜೀರ್ಣೊದ್ಧಾರ ಮಾಡಿರುವುದರಿಂದಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರುವುದಿಲ್ಲ. ಈ ದೇವಸ್ಥಾನದ ಮುಂದೆ ಕ್ರಿ.ಶ. ೧೦೨೮ಕ್ಕೆ ಸೇರಿದ ಒಂದು ಶಾಸನವನ್ನುಕಾಣಬಹುದಾಗಿದೆ.ಆಶಾಸನದಲ್ಲಿ ಚಾಲುಕ್ಯ ಜಗದೇಕಮಲ್ಲನ ಆಳ್ವಿಕೆಯಲ್ಲಿ ಪಲ್ಗೇರಿಯ ಮೂಡಣದಆದಿತ್ಯದೇವರಿಗೆ ದಾನನೀಡಿದ ವಿವರವಿದೆ.ಪ್ರಸ್ತುತ ಶಾಸನವು ಹೆಚ್ಚು ಹಾಳಾಗಿರುವುದರಿಂದ ಇದರಿಂದಲೂಸಹ ಹೆಚ್ಚಿನ ಮಾಹಿತಿ ತಿಳಿದುಬರುವುದಿಲ್ಲ. ಬಹುಶಃ ಈ ಗ್ರಾಮದ ಮೂಡಣ ದಿಕ್ಕಿಗೆ ಆದಿತ್ಯದೇವಾ ಎಂಬ ದೇವಸ್ಥಾನವಿರಬಹುದು.ಆ ದೇವಾಲಯಕ್ಕೆ ದಾನ ನೀಡಿದಉಲ್ಲೇಖ ಈ ಶಾಸನದಲ್ಲಿ ಬಂದಿದೆ.ಆದರೆ ಇಂದು ಆ ದೇವಸ್ಥಾನವಾಗಲಿ ಅಥವಾ ಅಂತಹ ಕುರುಗಳು ಕಾಣುವುದಿಲ್ಲ. ಬಹುಶಃ ಕಾಲಾಂತರದಲ್ಲಿ ಅದು ನಾಶವಾಗಿರಬಹುದು.
ಈ ಗ್ರಾಮದಕೆರೆಯ ಬಳಿ ಕಟ್ಟೆಯಲ್ಲಿ ನೆಟ್ಟ ವೀರಗಲ್ಲು ಶಾಸನವಿದೆ.ಅದರ ಕಾಲ ಕ್ರಿ.ಶ.೧೦೧೮ ಎಂದು ಗುರುತಿಸಲಾಗಿದೆ.ಅದರಲ್ಲಿ ಬೆಣ್ಣೆಕಲ್ಲು ಸೀಮೆಯಲ್ಲಿ ನಡೆದ ಕಾಳಗದಲ್ಲಿ ತಳಾರನಾಯಕ ಎರೆಯಮ್ಮನು ಸತ್ತಾಗ ಅವನ ಕುಟುಂಬಕ್ಕೆಂದು ಪಲ್ಗೆರೆಯಜನರು ಭೂಮಿದಾನ ನೀಡಿದ ವಿವರವಿದೆ.ಪ್ರಸ್ತುತ ಶಾಸನವು ಮೂರು ಭಾಗದಲ್ಲಿರಚನೆಯಾದ ವೀರಗಲ್ಲಾಗಿದೆ. ವೀರ ಹೋರಾಡುವುದು, ಅಪ್ಸೆಯರುಸ್ವರ್ಗಕ್ಕೆ ಕರೆದುಕೊಂಡು ಹೋಗುವುದು ಮತ್ತು ಲಿಂಗಪೂಜೆ ನಿರತ ವೀರಯೋಧನ ಶಿಲ್ಪವನ್ನು ಮೂರು ಭಾಗಗಳಲ್ಲಿ ಕೆತ್ತಲಾಗಿದೆ.ಮೂರು ಭಾಗದ ಕೆತ್ತನೆಯ ಇಂತಹ ವೀರಗಲ್ಲು ಶಾಸನಗಳು ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಹಳ ಕಡಿಮೆ ಮತ್ತು ಅಂತಹ ಶಾಸನ ಈ ಗ್ರಾಮದಲ್ಲಿ ದೊರಕಿರುವುದು ಬಹಳ ವಿಶೇಷ. ಹೀಗಾಗಿ ಇದೊಂದು ವಿಶಿಷ್ಟವಾದ ಶಾಸನ ಎಂದು ಹೇಳಬಹುದು.ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ ಈ ಗ್ರಾಮದಲ್ಲಿ ಯುದ್ಧ ಮಾಡುವ ವೀರಯೋಧರು ಇದ್ದರೆನ್ನೆವುದು.ಅಲ್ಲದೇ ವೀರಮರಣ ಹೊಂದಿದ ಯೋಧರಿಗೆ ಸಹಾಯ ಹಸ್ತ ಚಾಚುವ ಹೃದಯವಂತರೂ ಸಹ ಈ ಗ್ರಾಮದಲ್ಲಿ ಇದ್ದರೆಂದು ತಿಳಿದುಬರುತ್ತದೆ.
ಈ ಹಲಗೇರಿಗ್ರಾಮದಲ್ಲಿಕ್ರಿ.ಶ ೮-೯ನೇ ಶತಮಾನಕ್ಕೆ ಸೇರಿದ ಶಾಸನವು ಬಹಳ ವಿಶಿಷ್ಟವಾದ ಶಾಸನವಾಗಿದೆ.ಈ ಶಾಸನದಲ್ಲಿ ಪಲ್ಗೆರೆಯ ಬ್ರಾಹ್ಮಣನಾದ ಸಾವಿರ್ಪಿ ಎಂಬುವವನು ಯುದ್ಧದಲ್ಲಿ ಹೋರಾಡಿ ಮಡಿದಂತೆ ತಿಳಿಸುತ್ತದೆ.ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ ಯುದ್ಧಎಂದಕೂಡಲೇಕ್ಷತ್ರಿಯರು ಭಾಗವಹಿಸುವುದು, ಹೋರಾಡುವುದುಇಲ್ಲವೇ ಮಡಿಯುವುದು ಸಾಮಾನ್ಯವಾದ ಸಂಗತಿಯಾಗಿದೆ.ಕ್ಷತ್ರಿಯರು ಯುದ್ಧದಲ್ಲಿ ಹೋರಾಡಿದ, ವೀರಮರಣ ಹೊಂದಿದಉಲ್ಲೇಖವಿರುವ ಅನೇಕ ಶಾಸನ ಮತ್ತು ಮೂರ್ತಿ-ಶಿಲ್ಪಗಳನ್ನು ರಾಜ್ಯದ ನಾನಾ ಕಡೆ ಕಂಡುಬರುತ್ತಿವೆ. ಆದರೆ ಈ ಗ್ರಾಮದಲ್ಲಿದೊರೆತ ಶಾಸನ ಬಹಳ ವಿಶಿಷ್ಟವಾಗಿದೆ.ಬ್ರಾಹ್ಮಣನು ಯುದ್ಧದಲ್ಲಿ ಹೋರಾಡಿರುವುದು ಮತ್ತು ಆ ಯುದ್ಧದಲ್ಲಿ ವೀರಮರಣವನಪ್ಪಿರುವುದುಬಹಳ ವೈಶಿಷ್ಟ್ಯ.ಬ್ರಾಹ್ಮಣರೆಂದರೆ ಪಾಠ-ಪ್ರವಚನ, ಪೂಜೆ, ಯಜ್ಞ-ಯಾಗಾದಿಗಳ ನಿರ್ವಹಣೆಯ ಕರ್ತವ್ಯವಾಗಿರುತ್ತದೆ.ಆದರೆ ಇಲ್ಲಿ ಬ್ರಾಹ್ಮಣನೂ ಯುದ್ಧದಲ್ಲಿ ಹೋರಾಡಿ ಮಡಿದಿರುವುದು ಬಹಳ ವಿಶಿಷ್ಟ. ಹೀಗಾಗಿ ರಾಜ್ಯದಲ್ಲಿದೊರೆತ ವಿಶಿಷ್ಟ ಶಾಸನಗಳಲ್ಲಿ ಇದೂಒಂದಾಗಿದೆ.
ಕ್ರಿ.ಶ. ೧೬ನೇ ಶತಮಾನಕ್ಕೆ ಸೇರಿದತೃಟಿತಒಂದು ಶಾಸನವು ಹಲಗೇರಿಯ ಮಲ್ಲನಗೌಡರಗೌಡಿಕೆ ಮತ್ತು ಭೂಮಿಯನ್ನು ತಿಳಿಸುತ್ತದೆ.ಈ ಶಾಸನವು ಬಹುತೇಕತೃಟಿತವಾಗಿರುವುದರಿಂದ ಹೆಚ್ಚಿನ ಮಾಹಿತಿ ತಿಳಿಸುವುದಿಲ್ಲ. ಬಹುಶಃ ಈ ಗ್ರಾಮದಲ್ಲಿ ಮಲ್ಲನಗೌಡ ಎಂಬ ಗೌಡಿಕೆಯ ಆಧಿಕಾರಿ ಇರಬೇಕು.ಅವನ ಅಧಿಕಾರ ಮತ್ತು ದಾನದ ವಿಷಯ ಈ ಶಾಸನದಲ್ಲಿ ತಿಳಿಸಿರಬೇಕು.ಆದರೆ ಅದು ಅಸ್ಪಷ್ಟವಾಗಿರುವುದರಿಂದ ಹೆಚ್ಚಿನ ಮಾಹಿತಿ ಲಭ್ಯವಾಗುವುದಿಲ್ಲ.
ಈ ಹಲಗೇರಿಗ್ರಾಮದಲ್ಲಿದೊರೆತ ಮತ್ತೊಂದು ವಿಶಿಷ್ಟವಾದ ಶಾನಸವೆಂದರೆಕ್ರಿ.ಶ. ೮ನೇ ಶತಮಾನಕ್ಕೆ ಸೇರಿದ ಬಾದಾಮಿಚಾಲುಕ್ಯರ ಆಳ್ವಿಕೆಯ ಕಾಲದ ಶಾಸನವಾಗಿದೆ.ಈ ಶಾಸನದಲ್ಲಿ ಮೂರುಜಾತಿಯ ವಿವರಗಳನ್ನು ತಿಳಿಸುವುದರಜೊತೆಗೆ ಕೊಪಣ ಎಂಬ ಗ್ರಾಮನಾಮವನ್ನುಉಲ್ಲೇಖಿಸುತ್ತದೆ.ಕ್ರಿ.ಪೂ ೩-೨ನೇ ಶತಮಾನದ ಕಲಬುರ್ಗಿ ಜಿಲ್ಲೆಯ ಸನ್ನತಿ ಹತ್ತಿರವಿರುವ ಕನಗನಹಳ್ಳಿಯ ಪ್ರಾಕೃತ ಭಾಷೆಯ ಶಾಸನ ಮತ್ತು ಚಿತ್ರದುರ್ಗದ ಚಂದ್ರವಳ್ಳಿಯ ಕ್ರಿ.ಶ ೪ನೇ ಶತಮಾನದ ಸಂಸ್ಕೃತ ಭಾಷೆಯ ಶಾಸನದನಂತರ ಕೊಪಣ(ಕೊಪ್ಪಳ)ದ ಉಲ್ಲೇಖವಿರುವ ಶಾಸನವೆಂದರೆ ಕ್ರಿ.ಶ ೮ನೇ ಶತಮಾನದ ಹಲಗೇರಿ ಗ್ರಾಮದಲ್ಲಿ ದೊರೆತ ಶಾಸನವಾಗಿದೆ.ಕೊಪಣ ಕುರಿತು ಕೊಪ್ಪಳ ಪರಿಸರದಲ್ಲೇ ದೊರೆತ ಮೊದಲ ಶಾಸನ ಇದಾಗಿದೆ.ಈ ಕಾಲಕ್ಕಿಂತ ಮೊದಲು ಅಂದರೆ ಕ್ರಿ.ಶ ೮ನೇ ಶತಮಾನಕ್ಕಿಂತ ಮೊದಲಿನ ಕೊಪ್ಪಳ ಪರಿಸರದಲ್ಲಿ ದೊರೆತಯಾವುದೇ ಶಾಸನಗಳಲ್ಲಿ ಕೊಪಣ ನಗರದ ಬಗ್ಗೆ ಉಲ್ಲೇಖವಿಲ್ಲಾ. ಹೀಗಾಗಿ ಕೊಪ್ಪಳ ನಾಮವನ್ನು ಕುರಿತುಉಲ್ಲೇಖಿಸುವ ಕೊಪ್ಪಳ ಪರಿಸರದ ಮೊದಲ ಶಾಸನ ಇದಾಗಿದೆ.ಅದು ಕೊಪ್ಪಳ ನಗರದ ಹೊರಗಿನ ಹಲಗೇರಿ ಗ್ರಾಮದಲ್ಲಿ ದೊರಕಿರುವುದು ವಿಶಿಷ್ಟ.
ಹಲಗೇರಿ ಗ್ರಾಮದಲ್ಲಿ ಕೆಂಚಮ್ಮ ಎಂಬ ಮತ್ತೊಂದು ಪುರಾತನ ದೇವಸ್ಥಾನವಿದೆ. ಆದರೆ ಅದು ಸಂಪೂರ್ಣವಾಗಿ ಜೀರ್ಣೋದ್ಧಾರಗೊಂಡ ದೇವಾಲಯವಾಗಿದೆ.ಹೀಗಾಗಿ ಅದರ ಇತಿಹಾಸ ತಿಳಿದುಬರುವುದಿಲ್ಲ. ಆದರೂ ಅಲ್ಲಿನ ಹಿರಿಯರು ಹೇಳುವಂತೆ ಇದು ಬಹಳ ಪುರಾತನ ದೇವಸ್ಥಾನವಾಗಿದ್ದು ನಾಶದ ಅಂಚಿನಲ್ಲಿದ್ದಾಗ ಅದನ್ನು ಕೆಡವಿ ಕಟ್ಟಲಾಗಿದೆ ಎಂದು ಹೇಳುತ್ತಾರೆ.
ಹಲಗೇರಿಗ್ರಾಮದಲ್ಲಿ ಪ್ರಾಚೀನ ಕಾಲದ ಶಾಂಭವಿದೇವಿಯದೇವಸ್ಥಾನವನ್ನುಕಾಣಬಹುದಾಗಿದೆ. ಈ ದೇವಸ್ಥಾನವುಗ್ರಾಮದಅದಿದೇವತೆ ಮತ್ತು ಗ್ರಾಮದೇವತೆಯಾಗಿದ್ದಾಳೆ.ಈ ದೇವಸ್ಥಾನಕ್ಕೆ ಹಲಗೇರಮ್ಮ, ಶಾಂಭವಿದೇವಸ್ಥಾನಎಂತಲೂಕರೆಯಲಾಗುತ್ತದೆ.ಇದುಕಲ್ಯಾಣಿಚಾಲುಕ್ಯರ ಶಿಲ್ಪಕಲೆಯನ್ನು ಹೊಂದಿದೆ.ಹೀಗಾಗಿ ಈ ದೇವಸ್ಥಾನವುಅವರಕಾಲದಲ್ಲಿ ನಿರ್ಮಾಣವಾಗಿರಬೇಕೆಂದು ಇತಿಹಾಸಕಾರರು ಅಂದಾಜಿಸಿದ್ದಾರೆ. ಆದರೆ ನಿರ್ಮಾಣ ಕಾಲದ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಮತ್ತು ಈ ದೇವಸ್ಥಾನವನ್ನು ಅನೇಕ ಸಂದರ್ಭಗಳಲ್ಲಿ ಜೀಣೋದ್ಧಾರ ಮಾಡಿರುವುದರಿಂದ ಹೆಚ್ಚಿನ ಮಾಹಿತಿ ತಿಳಿದುಬರುವುದಿಲ್ಲ.ಈ ದೇವಸ್ಥಾನವುಗ್ರಾಮದ ನಾಮದೊಂದಿಗೆ ಸೇರಿಕೊಂಡಿರುವುದು ಬಹಳ ವಿಶಿಷ್ಟ.ಈ ದೇವಸ್ಥಾನದ ಮುಂದೆ ಅಸ್ಪಷ್ಟ ಮತ್ತು ಭಗ್ನಗೊಂಡ ಕೆಲ ನಿಶಧಿಗಲ್ಲು, ವೀರಗಲ್ಲು ಮತ್ತು ಇತರೆ ಮೂರ್ತಿ-ಶಿಲ್ಪಗಳನ್ನು ಕಾಣಬಹುದಾಗಿದೆ.ಈ ಹಲಗೇರಮ್ಮ ದೇವಿಯ ಪೂಜೆ, ಜಾತ್ರೆ, ಆಚರಣೆಗಳಲ್ಲಿ ಬಹಳ ಕಟ್ಟಳೆಗಳಿವೆ.
ಇನ್ನು ಈ ಹಲಗೇರಿಗ್ರಾಮವನ್ನುಜೈನಧರ್ಮದ ಹಿನ್ನೆಲೆಯಲ್ಲಿ ನೋಡುವುದಾದರೆ ಹೆಚ್ಚಿನ ಕುರುಹುಗಳು ದೊರೆಯದಿದ್ದರೂ ಸಹ ಇದು ಪ್ರಾಚೀನ ಕಾಲದ ಜೈನರನೆಲೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.ಇಲ್ಲಿ ಜೈನಶಾಸನಗಳು ಲಭ್ಯವಿಲ್ಲ. ಆದರೂ ದೊರೆತ ಕೆಲ ಮೂರ್ತಿ-ಶಿಲ್ಪಗಳನ್ನು ಗಮನಿಸಿದಾಗಪ್ರಾಚೀನಕಾಲದಲ್ಲಿ ಇಲ್ಲಿ ಜೈನ ಸಂಪ್ರದಾಯವಿತ್ತೆಂದು ತಿಳಿದುಬರುತ್ತದೆ.
ಪ್ರಾಚೀನ ಕಾಲದಲ್ಲಿ ಕೊಪ್ಪಳವು ಜೈನಧರ್ಮದ ಪವಿತ್ರಕ್ಷೇತ್ರ ಮತ್ತುದಕ್ಷಿಣ ಭಾರತದಲ್ಲಿ ಪ್ರಸಿದ್ಧಿ ಪಡೆದ ಕ್ಷೇತ್ರವಾಗಿತ್ತು.ಇದನ್ನು ಜೈನರಕಾಶಿ ಎಂತಲೂ ಕರೆಯುತ್ತಿದ್ದರು.ಶ್ರವಣಬೆಳಗೋಳ ಮುನ್ನೆಲೆಗೆ ಬರುವ ಮೊದಲೇ ಕೊಪ್ಪಳ ಜೈನರ ಪವಿತ್ರ ಕ್ಷೇತ್ರವಾಗಿತ್ತು.ಕವಿ ರನ್ನರ ಆದಿಯಾಗಿ ಅನೇಕ ಜೈನ ಕವಿಗಳು ಈ ಕೊಪ್ಪಳವನ್ನು ಹಾಡಿಹೊಗಳಿದ್ದಾರೆ.ಇದು ಬಿಳಿಯರಳೆಯಂತೆ, ಅತ್ತಿಮಬ್ಬೆಯ ಚರಿತೆಯಂತೆ ಪವಿತ್ರವಾಗಿತ್ತು ಎಂದು ವರ್ಣಿಸಲಾಗಿದೆ.ಅಲ್ಲದೇ ಇದನ್ನು ಆದಿ, ಆದಿತೀರ್ಥ, ಮಹಾತೀರ್ಥ ಎಂದು ಸಂಭೋದಿಸಲಾಗಿದೆ.ಹೀಗಾಗಿಯೇ ಇದು ದಕ್ಷಿಣ ಭಾರತದಲ್ಲೇ ಮೊದಲ ಜೈನ ಪವಿತ್ರ ಕ್ಷೇತ್ರವಾಗಿರಬೇಕು. ಅದಕ್ಕಾಗಿಯೇ ಇದನ್ನು ಆದಿ(ಮೊದಲು) ಎಂದು ಸಂಭೋದಿಸಿರಬಹುದು. ತೀರ್ಥ ಮತ್ತು ಮಹಾ ಶಬ್ದಗಳೂ ಸಹ ಇಲ್ಲಿನ ಪವಿತ್ರತೆ ಮತ್ತುಘನತೆಯನ್ನು ಸಾರುತ್ತಿವೆ. ಇಲ್ಲಿ ಸುಮಾರು ೭೭೨ ಜೈನ ಬಸದಿಗಳಿದ್ದವೆಂದು ಹೇಳಲಾಗುತ್ತಿದೆ. ಇಲ್ಲಿಗೆ ನಾಡಿನ ಅನೇಕ ಯತಿಗಳು ಆಗಮಿಸುತ್ತಿದ್ದರು. ತಾವಿದ್ದ ಸ್ಥಳದಲ್ಲಿ ಮುಕ್ತಿ ದೊರೆಯದಿದ್ದಾಗ ಕೊಪ್ಪಳಕ್ಕೆ ಬಂದು ಸಲ್ಲೇಖನವ್ರತ ಮಾಡಿ ಮುಡಿಪಿದ(ಮಡಿದ) ಅನೇಕ ಸಂಗತಿಗಳು ಕೊಪ್ಪಳದ ಶಾಸನಗಳಲ್ಲಿ ಉಲ್ಲೇಖಗಳಿವೆ. ಕೊಪ್ಪಳ ನಗರದಲ್ಲೇ ದೊರೆತ ಸುಮಾರು ೧೧೦ ಶಾಸನಗಳಲ್ಲಿ ೧೦೦ಕ್ಕೂ ಅಧಿಕ ಜೈನ ಶಾಸನಗಳಾಗಿವೆ ಎಂಬುದನ್ನು ಗಮನಿಸಿದಾಗ ಇಲ್ಲಿನ ಜೈನ ಧರ್ಮದ ಪ್ರಭಾವ ತಿಳಿಯುತ್ತದೆ. ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ಜೈನಮುನಿಗಳು ಆಗಮಿಸುವಾಗ ಕೊಪ್ಪಳ ಪ್ರದೇಶದಲ್ಲಿ ನೂರಾರು ಜೈನ ಅನುಯಾಯಿಗಳು ಅವರನ್ನು ಆಮಂತ್ರಿಸಲು ಇಲ್ಲಿ ಸೇರಿದ್ದರೆಂದು ಹೇಳಲಾಗುತ್ತಿದೆ.ಇಂದಿಗೂ ಸಹ ಜೈನಯತಿಗಳ ಪುರಪ್ರವೇಶದ ಸಂದರ್ಭದಲ್ಲಿ ಊರ ಹೊರಗಡೆ ನಿಂತು ಅವರನ್ನು ಆಮಂತ್ರಿಸಿ ಕರೆದುಕೊಂಡು ಬರುವ ಸಂಪ್ರದಾಯವನ್ನು ಕಾಣಬಹುದು.ಹೀಗಾಗಿ ಈ ಕೊಪ್ಪಳ ಪ್ರದೇಶವು ಜೈನ ಸಂಪ್ರದಾಯದಿಂದ ಕೂಡಿತ್ತು ಎನ್ನಬಹುದು.ಅದರಂತೆ ಕೊಪ್ಪಳ ಪ್ರದೇಶದ ಸುತ್ತಲೂ ಜೈನ ಆಚರಣೆ, ಸಂಪ್ರದಾಯ ಹೊಂದಿರುವ ಅನೇಕ ಗ್ರಾಮಗಳಿದ್ದವು.ಮತ್ತು ಇಂದಿಗೂ ಅವುಗಳನ್ನು ಕಾಣಬಹುದು.ಕೊಪ್ಪಳ ಸುತ್ತ-ಮುತ್ತಲ ಜೈನ ಸಾಂಸ್ಕೃತಿಕ ಕೆಲವು ಗ್ರಾಮಗಳನ್ನು ನೋಡುವುದಾದರೆ; ಬಹದ್ದೂರುಬಂಡಿ, ಕಾತರಕಿ-ಗುಡ್ಲಾನೂರು, ಉಪ್ಪಿನಬೆಟಗೇರಿ, ಅಳವಂಡಿ, ಹಿರೇಸಿಂದೋಗಿ, ಕವಲೂರು, ಮಾದಿನೂರು, ಓಜಿನಹಳ್ಳಿ, ನರೆಗಲ್ಲು, ಇರಕಲ್ಲಗಡಾ, ಹುಲಿಗಿ, ಶಿವಪುರ, ಆನೆಗುಂದಿ ಹೀಗೆ ಪಟ್ಟಿ ಬೆಳೆಯುತ್ತದೆ. ಅದರಲ್ಲಿ ಈ ಹಲಗೇರಿ ಗ್ರಾಮವೂ ಒಂದಾಗಿದೆ.ಈಗಾಗಲೇ ವಿವರಿಸಿದಂತೆ ಜೈನಧರ್ಮ ಉತ್ತರ ಭಾರತದಿಂದ ದಕ್ಷಿಣಕ್ಕೆ ಪಸರಿಸುತ್ತಾ ಕೊಪ್ಪಳ ನಗರಕ್ಕೆ ಬರುವಾಗ ಮೊದಲು ಹಲಗೇರಿ ಗ್ರಾಮ ಎದುರಿಗೆ ಬರುತ್ತದೆ. ಹೀಗಾಗಿ ಹಲಗೇರಿ ಗ್ರಾಮದಲ್ಲಿಯೂ ಸಹ ಆ ಧರ್ಮದ ಪ್ರಭಾವ ಬೀರಿದೆ.
ಗ್ರಾಮದ ಹಲಗೇರಮ್ಮ ಅಥವಾ ಶಾಂಭವಿದೇವಸ್ಥಾನದ ಮುಂದೆಭಗ್ನಗೊಂಡ ಅನೇಕ ಮೂರ್ತಿ-ಶಿಲ್ಪಗಳು ಇಂದಿಗೂ ಕಾಣಸಿಗುತ್ತವೆ. ಅವು ಭಗ್ನಗೊಂಡಿರುವುದರಿಂದ ಹೆಚ್ಚಿನ ಮಾಹಿತಿ ತಿಳಿದುಬರುವುದಿಲ್ಲವಾದರೂ ಅವುಗಳನ್ನು ಗಮನಿಸಿದಾಗ ಅವುಗಳಲ್ಲಿ ಎರಡುಜೈನ ಬಿಂಬಗಳೆಂಬುದುಸ್ಪಷ್ಟವಾಗಿ ತಿಳಿದುಬರುತ್ತದೆ.ಅದರಲ್ಲಿ ಒಂದು ತೀರ್ಥಂಕರರ ಬಿಂಬ ಮತ್ತೊಂದು ನಿಶಧಿಗೆ ಶಿಲ್ಪಗಳಾಗಿವೆ. ತೀರ್ಥಂಕರರ ಹೆಸರಿನಲ್ಲಿ ಬಿಂಬಗಳನ್ನು ಸ್ಥಾಪಿಸಿದರೆ;ಜೈನ ಮುನಿಗಳು ಅಥವಾ ಅನುಯಾಯಿಗಳು ಸಲ್ಲೇಖವ್ರತದ ಮೂಲಕ ಮುಡಿಪಿದಾಗ ಅವರ ಸ್ಮರಣಾರ್ಥವಾಗಿ ಅವರ ಶಿಷ್ಯರು ಅಥವಾ ಧರ್ಮದ ಅನುಯಾಯಿಗಳು ನಿಶಧಿಗೆಗಳನ್ನು ಸ್ಥಾಪಿಸಿರುವುದು ಇತಿಹಾಸದಿಂದ ತಿಳಿದುಬರುತ್ತದೆ.ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ ತೀರ್ಥಂಕರರ ಬಿಂಬಗಳನ್ನು ಅಥವಾ ನಿಶಧಿಗೆಗಳನ್ನು ಬಹುತೇಕ ಸಂದರ್ಭಗಳಲ್ಲಿ ಬಸದಿಯ ಮುಂದೆ ಸ್ಥಾಪಿಸಿದ ಉದಾಹರಣೆಗಳು ಚರಿತ್ರೆಯಲ್ಲಿ ಸಿಗುತ್ತವೆ. ಹೀಗಾಗಿ ಈ ದೇವಸ್ಥಾನ ಜೈನ ಸ್ಮಾರಕವಾಗಿರಬೇಕೇನೋ ಎಂದು ಊಹಿಸಬಹುದಾಗಿದೆ.ರಾಜ್ಯದಲ್ಲಿ ಜೈನ ಸಂಪ್ರದಾಯದ ಪದ್ಮಾವತಿ ದೇವಸ್ಥಾನಗಳು ಕಾಲಾಂತರದಲ್ಲಿ ಗ್ರಾಮದೇವತೆಗಳಾಗಿ ಪರಿವರ್ತನೆಗೊಂಡಿವೆ ಎಂದು ಸಂಶೋಧಕರಾದ ಡಾ.ಎಂ.ಎಂ.ಕಲಬುರ್ಗಿಯವರು ಸಂಶೋಧಿಸಿದ್ದಾರೆ. ಹೀಗಾಗಿ ಅಂತಹ ಬದಲಾವಣೆ ಈ ಗ್ರಾಮದಲ್ಲಿ ಆಗಿರಬಹುದೇ?ಇದರ ಕುರಿತು ಸುಧೀರ್ಘ ಅಧ್ಯಯನಗಳು ನಡೆಯಬೇಕಿದೆ.
ಜೈನ ಶಿಲ್ಪಗಳು ಹಲಗೇರಮ್ಮ ದೇವಸ್ಥಾನ ಮುಂದೆ ಭಗ್ನಸ್ಥಿತಿಯಲ್ಲಿ ಉಳಿದುಕೊಂಡಿವೆ ಎನ್ನುವುದನ್ನು ಗಮನಿಸಿದಾಗ ಬಹುಶಃ ಈ ಪರಿಸರದ ಸುತ್ತಲಲ್ಲೇ ಜೈನ ಸ್ಮಾರಕವಿರಬೇಕು. ಅಥವಾ ಈ ಹಲಗೇರಮ್ಮ ದೇವಸ್ಥಾನವೇ ಹಿಂದೊಂದು ಕಾಲದಲ್ಲಿ ಜೈನ ಸ್ಮಾರಕವಾಗಿತ್ತೇ ಎಂಬ ಅನುಮಾನ ಮೂಡುವುದು ಸಹಜ.ಆದರೆ ಈಗಾಗಲೇ ವಿವರಿಸಿದಂತೆ ಈ ದೇವಸ್ಥಾನವನ್ನು ಅನೇಕ ಸಂದರ್ಭಗಳಲ್ಲಿ ಸಂಪೂರ್ಣವಾಗಿ ಜೀರ್ಣೋದ್ಧಾರ ಮಾಡಲಾಗಿದೆ.ದೇವಸ್ಥಾನದೊಳಗಿರುವ ಮೂರ್ತಿಯನ್ನು ಕಾಲ-ಕಾಲಕ್ಕೆ ಬದಲಾಯಿಸುತ್ತಾ ಬರಲಾಗಿದೆ. ಆದ್ದರಿಂದ ಇದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುವುದಿಲ್ಲ. ಆದರೂ ಈ ದೇವಸ್ಥಾನದ ಮುಂದೆ ತೀರ್ಥಂಕರರ ಮತ್ತು ನಿಶಧಿಗಲ್ಲುಗಳು ಕಂಡುಬರುವುದರಿಂದ ಇಲ್ಲೇ ಜೈನ ಸ್ಮಾರಕ ಇರಬೇಕೆನಿಸುತ್ತದೆ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ ಹಲಗೇರಮ್ಮ ಅಥವಾ ಶಾಂಭವಿ ದೇವಸ್ಥಾನ ಗ್ರಾಮದೇವತೆ.ಬಹುತೇಕ ಗ್ರಾಮಗಳಲ್ಲಿ ಹೆಣ್ಣು ದೇವರಿಗೆ ಕೋಣ, ಕುರಿ, ಕೋಳಿ ಬಲಿಕೊಟ್ಟು ಅದರ ಮಾಂಸ ನೈವೇದ್ಯ ಮಾಡುವುದು ವಾಡಿಕೆ.ಆದರೆ ಇಲ್ಲಿ ಆ ಸಂಪ್ರದಾಯ ಅತ್ಯಂತ ಕಡಿಮೆ.ಬಲಿ ಕೊಡುವ ಹೆಚ್ಚಿನ ಕ್ರಿಯೆಗಳು ಅನತಿ ದೂರದಲ್ಲಿರುವ ಕೆಂಚಮ್ಮ ದೇವಸ್ಥಾನದಲ್ಲಿ ನಡೆಯುತ್ತವೆ. ಇಲ್ಲಿ ಮತ್ತೊಂದು ಸಂಗತಿ ಎಂದರೆ ಈ ದೇವಸ್ಥಾನ ಆಡಳಿತದ ಸುಪರ್ದಿ ಮೇಲ್ವರ್ಗದವರೇ ನೋಡಿಕೊಳ್ಳುತ್ತಾರೆ.ಈಗಾಗಲೇ ವಿವರಿಸಿದಂತೆ ಎಲ್ಲದಕ್ಕಿಂತ ಮುಖ್ಯವಾಗಿ ಈ ದೇವಸ್ಥಾನದಲ್ಲಿ ತುಂಬಾ ಕಟ್ಟಳೆಗಳಿವೆ. ಜಾತ್ರೆ, ಪೂಜೆ-ಪುನಸ್ಕಾರ ಮುಂತಾದ ಆಚರಣೆಗಳು ಬಹಳ ಕಠಿಣವಾಗಿವೆ. ವಿಶೇಷವಾಗಿ ಜಾತ್ರೆ ಮುಗಿಯುವವರೆಗೆ ಆ ಊರಿನ ಭಕ್ತಾದಿಗಳು ಕಾಲಿಗೆ ಪಾದರಕ್ಷೆಯನ್ನೂ ಧರಿಸುವುದಿಲ್ಲ. ಜಾತ್ರೆ ಮುಗಿಯುವವರೆಗೂ ತುಂಬಾ ಭಯ-ಭಕ್ತಿ, ಶ್ರದ್ಧೆಯಿಂದ ಆಚರಣೆ ಮಾಡುತ್ತಾರೆ.ಇದು ಪುರಾತನ ಕಾಲದಿಂದಲೂ ನಡೆದುಕೊಂಡುಬಂದ ಸಂಪ್ರದಾಯ ಎಂದು ಇಲ್ಲಿನ ಹಿರಿಯರು ಅಭಿಪ್ರಾಯ ಪಡುತ್ತಾರೆ.ಆದರೆ ಇಂತಹ ಕಠಿಣ ಆಚರಣೆಗಳು ದ್ಯಾಮವ್ವ, ದುರುಗಮ್ಮ, ಮಾರೆಮ್ಮಗ್ರಾಮದೇವತೆಗಳ ಸಂಪ್ರದಾಯದಲ್ಲಿ ಕಾಣುವುದಿಲ್ಲ. ಆದೇವತೆಗಳಿಗೆ ಬಲಿ-ಮಾಂಸಾದಿಗಳ ನೈವೇದ್ಯಗಳ ಮೂಲಕ ಪೂಜೆ ಸಲ್ಲಿಸಲಾಗುತ್ತದೆ.ಅಂತಹ ಆಚರಣೆ ಇಲ್ಲಿ ಕಂಡುಬರುವುದಿಲ್ಲ. ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಇದು ಮೇಲ್ವರ್ಗದ ಆರಾಧನೆಯ ಸ್ಮಾರಕವಾಗಿರಬಹುದು ಎನಿಸುತ್ತದೆ.
ಈ ಗ್ರಾಮದಲ್ಲಿ ಮತ್ತೊಂದು ಜೈನ ಕುರುಹು ಎಂದರೆ ಕಲ್ಲೇಶ್ವರ ಅಥವಾ ಕಲ್ಲಪ್ಪ ಗುಡಿಯ ಹತ್ತಿರದಿಂದ ಸ್ವಲ್ಪ ದೂರದಲ್ಲಿ ಭಗ್ನಗೊಂಡ ಒಂದು ಬ್ರಹ್ಮಮೂರ್ತಿ ಶಿಲ್ಪ ಕಂಡುಬರುತ್ತಿದೆ.೨೪ ಜೈನತೀರ್ಥಂಕರರಲ್ಲಿ ೧೦ನೇ ತೀರ್ಥಂಕರ ಶೀತಲನಾಥ.ಈ ಶೀತಲನಾಥನ ಯಕ್ಷನು ಬ್ರಹ್ಮ ಅಥವಾ ಬ್ರಹ್ಮೇಶ್ವರನಾಗಿದ್ದನು.ಹೀಗಾಗಿ ಬ್ರಹ್ಮನ ಹೆಸರಿನ ಮೇಲೆ ಜೈನ ಸಂಪ್ರದಾಯದಲ್ಲಿ ಅನೇಕ ದೇವಾಲಯಗಳು ನಿರ್ಮಾಣಗೊಂಡಿವೆ. ಅದರಂತೆ ಈ ಹಲಗೇರಿ ಗ್ರಾಮದಲ್ಲಿಯೂ ಬ್ರಹ್ಮದೇವಸ್ಥಾನ ನಿರ್ಮಾಣಗೊಂಡಿರಬಹುದು.ಆದರೆ ಇಲ್ಲಿ ಕೇವಲ ಬ್ರಹ್ಮನ ಮೂರ್ತಿ ಮಾತ್ರವಿದ್ದು ದೇವಸ್ಥಾನದ ಯಾವುದೇ ಕುರುಹುಗಳಿಲ್ಲ. ಬಹುಶಃ ಅದು ನಾಶವಾಗಿ ಇಂದು ಕೇವಲ ಮೂರ್ತಿ ಮಾತ್ರ ಉಳಿದಿರಬಹುದು.ಇದೇ ಕಲ್ಲೇಶ್ವರ ದೇವಸ್ಥಾನದ ಹತ್ತಿರ ಬ್ರಹ್ಮಗುಂಡು ಕಂಡುಬರುತ್ತದೆ.ಜೈನ ಸಂಪ್ರದಾಯದಲ್ಲಿ ಬ್ರಹ್ಮನ ಹೆಸರಿನ ಮೇಲೆ ದೇವಸ್ಥಾನ ನಿರ್ಮಿಸಿದಂತೆ ಗುಂಡುಗಳನ್ನೂ ಸಹ ನಿರ್ಮಿಸಿದ್ದು ಕೊಪ್ಪಳ ಪರಿಸರದಲ್ಲಿ ಕಂಡುಬರುತ್ತಿವೆ. ಇರಕಲ್ಲಗಡಾ, ಅರಕೇರಿ, ಹಿರೇಬೊಮ್ಮನಾಳ ಗ್ರಾಮಗಳಲ್ಲಿ ಇಂತಹ ಬ್ರಹ್ಮದೇವರ ಗುಂಡುಗಳನ್ನು ಇಂದಿಗೂ ಸಹ ಕಾಣಬಹುದಾಗಿದೆ.
ಮೇಲಿನ ಈ ಎಲ್ಲಾ ಅಂಶಗಳನ್ನು ಗಮನಿಸುತ್ತಾ ಹೋದಂತೆ ಈ ಹಲಗೇರಿ ಗ್ರಾಮವು ಪ್ರಾಚೀನ ಕಾಲದಲ್ಲಿ ಜೈನ ಸಂಪ್ರದಾಯದ ನೆಲೆಯಾಗಿತ್ತು ಎಂದು ತೋರುತ್ತದೆ.ಹಿಂದೆ ಇಲ್ಲಿ ಜೈನ ಧರ್ಮದ ಅನುಯಾಯಿಗಳಿದ್ದರು.ಧಾರ್ಮಿಕ ಆಚರಣೆ-ಸಂಪ್ರದಾಯಗಳು ನಡೆಯುತ್ತಿದ್ದವು, ಜೈನಸ್ಮಾರಕಗಳಿದ್ದವು ಎನ್ನುವುದು ಇಲ್ಲಿ ದೊರೆತ ಕೆಲವು ಆಕರಗಳಿಂದ ತಿಳಿದುಬರುತ್ತದೆ.ಒಟ್ಟಿನಲ್ಲಿ ಜೈನಶಿಲ್ಪಗಳು ಈ ಗ್ರಾಮದಲ್ಲಿ ದೊರೆತಿರುವುದರಿಂದ ಇದು ಪ್ರಾಚೀನ ಕಾಲದಲ್ಲಿ ಜೈನನೆಲೆಗಿರಬೇಕು ಎನ್ನುವುದು ಮಾತ್ರ ಸ್ಪಷ್ಟ.
ಆದರೆ ಈ ಹಲಗೇರಿಗ್ರಾಮದಲ್ಲಿ ಅನೇಕ ಜಾತಿ, ವರ್ಗದಜನರು ವಾಸವಾಗಿದ್ದಾರೆ.ಜೊತೆಗೆಒಂದು ಬ್ರಾಹ್ಮಣ ಮನೆತನವೂಸಹ ಇಲ್ಲಿ ವಾಸವಾಗಿದೆ. ಆದರೆಇಂದು ಜೈನಧರ್ಮಕ್ಕೆ ಸೇರಿದಒಂದು ಮನೆತನವೂ ಈ ಗ್ರಾಮದಲ್ಲಿಕಂಡುಬರುವುದಿಲ್ಲ. ಇಂದು ಜೈನಧರ್ಮಿಯರು ವಾಸವಿಲ್ಲದ ಪುರಾತನ ಜೈನಗ್ರಾಮಗಳು ಕೊಪ್ಪಳ ಜಿಲ್ಲೆಯಲ್ಲಿ ಅನೇಕ ಸಿಗುತ್ತವೆ. ಓಜಿನಹಳ್ಳಿ, ಉಪ್ಪನಬೆಟಗೇರಿ, ಕಾತರಕಿ-ಗುಡ್ಲಾನೂರು, ಇರಕಲ್ಲಗಡಾ, ಬಹದ್ಧೂರುಬಂಡಿ, ಜಿನ್ನಾಪುರಾ ಮುಂತಾದ ಗ್ರಾಮಗಳಲ್ಲಿ ಇಂದು ಜೈನಧರ್ಮದವರಿಲ್ಲ. ಬಹುಶಃಪ್ರಾಚೀನಕಾಲದಲ್ಲಿ ಈ ಗ್ರಾಮದಲ್ಲಿಜೈನಧರ್ಮಿಯರು ವಾಸವಾಗಿರುವುದರಿಂದಲೇಇಲ್ಲಿ ಮೂರ್ತಿ-ಶಿಲ್ಪಗಳು, ಬಿಂಬಗಳು, ನಿಶಧಿಗೆಗಳು ನಿರ್ಮಾಣಗೊಂಡಿವೆ. ಜೈನ ಸಂಪ್ರದಾಯದ ಆಚರಣೆಗಳು ಇಲ್ಲಿ ನಡೆಯುತ್ತಿರಬೇಕು.ಕಾಲಾಂತರದಲ್ಲಿ ಮನುಷ್ಯನು ಬದುಕುಅರಸುತ್ತಾಅಲೆಮಾರಿಯಾಗಿಊರಿಂದಊರಿಗೆ ಸಂಚಾರ ಮಾಡಿರುವುದರಿಂದ ಈ ಗ್ರಾಮದಿಂದಲೂ ಸಹ ಜೈನರು ಬೇರೆ ಪ್ರದೇಶಗಳಿಗೆ ತೆರಳಿರಲು ಸಾಧ್ಯವಿದೆ. ವಿಶೇಷವಾಗಿ ಜೈನಧರ್ಮಿಯರ ಬಹುದೊಡ್ಡ ಧಾರ್ಮಿಕಕೇಂದ್ರವಾದ ಕೊಪ್ಪಳ ಕೇಂದ್ರದಿಂದ ಕೆಲವೇ ಅಂತರದದೂರದಲ್ಲಿರುವುದರಿಂದ ಸಹಜವಾಗಿ ಈ ಗ್ರಾಮದಲ್ಲಿಜೈನಧರ್ಮದ ಪ್ರಭಾವಇದ್ದಿರಬಹುದು.ಆದರೂ ಈ ಹಲಗೇರಿಗ್ರಾಮದಲ್ಲಿ ಪ್ರಾಚೀನ ಸ್ಮಾರಕಗಳಾದ ತೀರ್ಥಂಕರರ ಮೂರ್ತಿ ಶಿಲ್ಪಗಳು ದೊರೆತಿರುವುದರಿಂದಇದೊಂದುಜೈನ ಸಾಂಸ್ಕೃತಿಕನೆಲೆಎಂದು ಹೇಳಬಹುದು.
ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್
ಕನ್ನಡಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ-೫೮೩೨೩೧
Comments are closed.