ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ
ಕನಕಗಿರಿ: ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಬಹಳ ಪ್ರಾಮುಖ್ಯವಾದದು, ಆದ್ದರಿಂದ ಎಲ್ಲಾ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಕ್ರಮವಹಿಸಲು ಅಧಿಕಾರಿಗಳಿಗೆ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಹಜರತ್ ಹುಸೇನ್ ತಿಳಿಸಿದರು.
ಅವರು ಕನಕಗಿರಿ ಪಟ್ಟಣದ ತಾಲೂಕು ಪಂಚಾಯತ್ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೊದಲಿಗೆ ಗೃಹಜ್ಯೋತಿ ಯೋಜನೆ ಕುರಿತು ಮಾತನಾಡಿದ ಅವರು ಯೋಜನೆಗೆ ಒಳಪಡದೇ ಬಾಕಿ ಉಳಿದಿರುವ ಫಲಾನುಭವಿಗಳನ್ನು ಗುರುತಿಸಿ ಶೇ.100 ರಷ್ಟು ಪ್ರಗತಿ ಸಾಧಿಸಲು ಜೆಸ್ಕಾಂ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ಯೋಜನೆ ಕುರಿತು ಹೆಚ್ಚು ಪ್ರಚುರ ಪಡಿಸಲು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಬ್ಯಾನರ್ ಅಳವಡಿಸುವಂತೆ ತಿಳಿಸಿದರು.
ನಂತರ ಸಾರಿಗೆ ಇಲಾಖೆ ಗಂಗಾವತಿ ವಿಭಾಗದ ಡಿಪೋ ಮ್ಯಾನೇಜರ್ ಸತತವಾಗಿ ನಾಲ್ಕು ಸಭೆಗಳಿಗೆ ಗೈರಾಗಿ ಅವರ ಅಧೀನ ಸಿಬ್ಬಂದಿಯನ್ನು ನಿಯೋಜನೆಗೊಳಿಸಿ ಸಭೆಗೆ ಕಳುಹಿಸಿದ್ದರಿಂದ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು. ಇನ್ಮುಂದೆ ಜರುಗುವ ಪ್ರಗತಿ ಪರಿಶೀಲನಾ ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಿದರು.
ಇದೇ ವೇಳೆ ಕನಕಗಿರಿ ಉತ್ಸವಕ್ಕೆ ಆಗಮಿಸುವ ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಹೆಚ್ಚಿನ ಬಸ್ ಸೌಕರ್ಯ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿದರು. ಜೊತೆಗೆ ಯುವನಿಧಿ ಯೋಜನೆ ಕುರಿತು ಉತ್ಸವದಲ್ಲಿ ಹೆಚ್ಚಿನ ಪ್ರಚುರ ಪಡಿಸುವುದರ ಜೊತೆಗೆ ಸಂಬಂಧಿಸಿದ ಇಲಾಖೆಯಿಂದ ಉದ್ಯೋಗ ಮೇಳ ಆಯೋಜನೆ ಮಾಡುವಂತೆ ಕ್ರಮ ಕೈಗೋಳ್ಳಲು ತಿಳಿಸಿದರು.
ಬಳಿಕ ಉಳಿದ ಯೋಜನೆ ಕುರಿತು ಚರ್ಚಿಸಿ, ಶೇ.100 ರಷ್ಟು ಪ್ರಗತಿಯನ್ನು ಸಾಧಿಸಲು ಅನುಷ್ಟಾನ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ರಾಜಶೇಖರ್, ಅನುಷ್ಟಾನ ಇಲಾಖೆಯ ಅಧಿಕಾರಿಗಳು, ಗ್ಯಾರಂಟಿ ಯೋಜನೆಯ ತಾಲೂಕು ಸದಸ್ಯರು ಹಾಗೂ ತಾ.ಪಂ ಸಿಬ್ಬಂದಿಗಳು ಹಾಜರಿದ್ದರು.
Comments are closed.