ಸಾಧು-ಸಂತರು, ವಚನಕಾರರು ಸಮಾಜಕ್ಕೆ ಸನ್ಮಾರ್ಗ ತೋರುವ ದಾರಿ ದೀಪಗಳು-ಶಿವರಾಜ್ ಎಸ್.ತಂಗಡಗಿ

Get real time updates directly on you device, subscribe now.

*ಸಂತಸೇವಾಲಾಲ್ ಜಯಂತಿಯಲ್ಲಿ ಸಚಿವ ಶಿವರಾಜ್ ಎಸ್.ತಂಗಡಗಿ ಅಭಿಮತ

ಬೆಂಗಳೂರು: ಫೆ.15

ಸಾಧು-ಸಂತರು, ಸನ್ಯಾಸಿಗಳು, ವಚನಕಾರರು ಹಾಗೂ ದಾಸರು ಸಮಾಜಕ್ಕೆ ಸನ್ಮಾರ್ಗ ತೋರುವ ದಾರಿ ದೀಪಗಳು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಯನ ರಂಗಮಂದಿರದಲ್ಲಿ ಆಯೋಜಿಸಿದ್ದ ಸಂತ ಶ್ರೀ ಸೇವಾಲಾಲ್ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದಿನ ಕಾಲದಲ್ಲಿಯೇ ಸೇವಾಲಾಲ್ ಅವರು ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದರು. ನಾವು ಇನ್ನು ಕೂಡ ಸಂಘಟನೆಯ ಹಂತದಲ್ಲಿಯೇ ಇದ್ದೇವೆ. ನಮ್ಮ ಸಮುದಾಯಗಳ ಸಮಸ್ಯೆಯನ್ನು ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಿಕೊಳ್ಳುವ ಮೂಲಕ ನಾವು ಹೆಚ್ಚು ಸಂಘಟಿತರಾಗಬೇಕು ಎಂದು ಕಿವಿ ಮಾತು ಹೇಳಿದರು.

ಶಿಕ್ಷಣ, ಹೋರಾಟ ಹಾಗೂ ಸಂಘಟನೆಯಾಗಬೇಕು ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ್ದಾರೆ. ಅತೀ ಹಿಂದುಳಿದ ಸಮುದಾಯಗಳು ಶಿಕ್ಷಣ ಕ್ಷೇತ್ರದಲ್ಲಿ ಹಿಂದೆ ಬೀಳುತ್ತಿದ್ದು, ಇದೀಗ ಎಚ್ಚೆತ್ತುಕೊಳ್ಳುವ ಕೆಲಸ ಆಗುತ್ತಿದೆ. ಯಾವುದೇ ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಬಹಳ ಮುಖ್ಯ. ಪ್ರತಿಯೊಂದು ಮನೆಯಲ್ಲಿ ಶಿಕ್ಷಣವಂತರಿರಬೇಕು ಎಂದರು.‌

ರಾಯಚೂರಿನ ಆಶಾ ತಾಂಡದಲ್ಲಿನ ಪ್ರತಿಯೊಂದು ಮನೆಯಲ್ಲೂ ಡಿ ಗ್ರೂಪ್ ನಿಂದ ಹಿಡಿದು ಐಎಎಸ್ ಅಧಿಕಾರಿ ಮಟ್ಟದ ಅಧಿಕಾರಿ ಇರುವುದು ಈ ಸಮುದಾಯದ ಹೆಮ್ಮೆ. ಅದೇ ರೀತಿ ಪ್ರತಿಯೊಂದು ತಾಂಡವಾಗಬೇಕು ಎಂದು ತಿಳಿಸಿದರು.‌

ಎರಡು ವರ್ಷದಲ್ಲಿ ಅತೀ ಹಿಂದುಳಿದ ಸಮುದಾಯದ ಸುಮಾರು 40ಕ್ಕೂ ಹೆಚ್ಚು ಮಂದಿಯನ್ನು ಗುರುತಿಸಿ ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆಯಿಂದ ಪ್ರಶಸ್ತಿ ನೀಡಿದ್ದೇವೆ.‌ ಕಳೆದ‌ ಬಾರಿಯ ದಸರಾದಲ್ಲಿ ಬಸವರಾಜ್ ಬಜಂತ್ರಿ ಅವರನ್ನು ಗುರುತಿಸಿ ಸಂಗೀತ ವಿದ್ವಾನ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.‌ ಈ‌ ಮೂಲಕ ಹಿಂದುಳಿದ ಸಮುದಾಯದ ಕಲಾವಿದರನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ.‌ ಇವೆಲ್ಲವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲದಲ್ಲಿ ಮಾತ್ರ ಸಾಧ್ಯ.‌ ಇನ್ನು ಒಟ್ಟು ಬಜೆಟ್ ನಲ್ಲಿ‌ ಶೇ.24.1 ರಷ್ಟು ಹಣವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನು ಬಾಲ ಬ್ರಹ್ಮಚಾರಿಯಾಗಿ ತಪಸ್ಸು, ಧ್ಯಾನ ಮತ್ತು ಭಕ್ತಿ ಮೂಲಕ ಆಧ್ಯಾತ್ಮ ಸಾಧನೆಯನ್ನು ಮಾಡಿ ಸಮಾಜಕ್ಕೆ ಸರಿದಾರಿಯನ್ನು ತೋರಿದ ಮಹಾನ್ ಸಂತ ಸೇವಾಲಾಲ್ ಅವರ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರಕಾಶ್ ರಾಠೋಡ್, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ.ಎ.ಆರ್.ಗೋವಿಂದಸ್ವಾಮಿ, ಇಲಾಖೆ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ, ಜಂಟಿ ನಿರ್ದೇಶಕ ಬಲವಂತರಾಯ ಪಾಟೀಲ್, ಸಮಾಜದ ಮುಖಂಡರಾದ ಕುಮಾರ್ ನಾಯಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!