ಬಾಲಕಾರ್ಮಿಕ ಮಕ್ಕಳನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸಬೇಕು: ಯು.ನಾಗರಾಜ
ಟಾಸ್ಕ್ ಫೋರ್ಸ್ ಸಮಿತಿಗಳು ವಿವಿಧ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಬಾಲಕಾರ್ಮಿಕ, ಕಿಶೋರ ಕಾರ್ಮಿಕ ಮಕ್ಕಳನ್ನು ರಕ್ಷಿಸಿ ಕೆಲಸದಿಂದ ಬಿಡುಗಡೆಗೊಳಿಸಿ ಪುನರ್ವಸತಿ ಕಲ್ಪಿಸಬೇಕು ಎಂದು ಗಂಗಾವತಿ ತಹಶಿಲ್ದಾರ ಯು.ನಾಗರಾಜ ಹೇಳಿದರು.ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಟಾಸ್ಕ್ ಫೋರ್ಸ್ ಸಮಿತಿ ರಚನೆ ಮಾಡಿದ್ದು, ತಂಡದ ಎಲ್ಲಾ ಅಧಿಕಾರಿಗಳು ತಮ್ಮ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಕಂಡು ಬರುವ ಬಾಲಕಾರ್ಮಿಕ, ಕಿಶೋರ ಕಾರ್ಮಿಕ ಮಕ್ಕಳ ಗುರುತಿಸಿ, ಪುನರ್ವಸತಿ ಅವಶ್ಯಕತೆ ಇರುವ ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸುವುದರ ಮೂಲಕ ಪುನರ್ವಸತಿ ಕಲ್ಪಿಸಬೇಕು. ಕಾರ್ಯಾಚರಣೆಗೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ ಅವರು ಮಾತನಾಡಿ, 14 ವರ್ಷದೊಳಗಿನ ಯಾವುದೇ ಮಕ್ಕಳು ಯಾವುದೇ ವೃತ್ತಿಯಲ್ಲಿ ಕೆಲಸ ನಿರ್ವಹಿಸುವುದು ಮತ್ತು 14 ರಿಂದ 18 ವರ್ಷದೊಳಗಿನ ಮಕ್ಕಳು ಅಪಾಯಕಾರಿ ವೃತ್ತಿಯಲ್ಲಿ ಮತ್ತು ಪ್ರಕ್ರಿಯೆಗಳಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಲಾಗಿದೆ. ಆ ನಿಟ್ಟಿನಲ್ಲಿ ಎಲ್ಲಾ ಟಾಸ್ಕ್ಫೋರ್ಸ್ ಸಮಿತಿ ಅಧಿಕಾರಿಗಳು ನಿರಂತರವಾಗಿ ತಮ್ಮ ವ್ಯಾಪ್ತಿಯಲ್ಲಿ ತಪಾಸಣೆ ನಡೆಸಿ, ತಾಲೂಕು ಆಡಳಿತಕ್ಕೆ ವರದಿ ಸಲ್ಲಿಸಬೇಕು. ಈ ಕಾರ್ಯಕ್ಕೆ ಎಲ್ಲಾ ಅಧಿಕಾರಿಗಳು ಸಹಕಾರ ನಿಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಗಂಗಾವತಿಯ ಕಾರ್ಮಿಕ ನಿರೀಕ್ಷಕ ಅಶೋಕ ಎಂ. ಸೇರಿದಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಬ್ಬಂದಿ, ಗಂಗಾವತಿ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿ, ನಗರ ಪೋಲಿಸ್ ಠಾಣೆ ಪಿಎಸ್‌ಐ ಸೇರಿದಂತೆ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ವಿವಿಧ ವಾಣಿಜ್ಯ ಸಂಸ್ಥೆಗಳ ಪರಿಶೀಲನೆ: ಸಭೆಯ ನಂತರ ಗಂಗಾವತಿ ತಾಲೂಕಿನ ಎಲ್ಲಾ ಅಧಿಕಾರಿಗಳ ತಂಡವು ವಿವಿಧ ವಾಣಿಜ್ಯ ಸಂಸ್ಥೆಗಳನ್ನು ಹಾಗು ಇಟ್ಟಂಗಿ ಬಟ್ಟಿಗಳನ್ನ ಪರಿಶೀಲಿಸಿದಾಗ, ಶ್ರೀ ಭವಾನಿ ಹೋಟೆಲ್ ಸಂಸ್ಥೆಯಲ್ಲಿ ಮಂಜುನಾಥ ತಂದೆ ವೀರಣ್ಣ, ಎಮ್.ಎಮ್.ಕೆ. ಬ್ರಿಕ್ಸ್ ವೆಂಕಟಗಿರಿ ಇಟ್ಟಂಗಿ ಭಟ್ಟಿಯಲ್ಲಿ ಸುನಿತಾ ತಂದೆ ಕೃಷ್ಣಪ್ಪ, ಶ್ರೀ ಸಾಯಿ ಪುನೇರಿ ಅಮೃತಯ್ಯ ಟೀ ಪಾಯಿಂಟ್ ಸಂಸ್ಥೆಯಲ್ಲಿ ರಾಜು ಯಮನೂರಪ್ಪ ಮಡಿವಾಳರ, ಎಮ್.ಕೆ ಬ್ರಿಕ್ಸ್ ವೆಂಕಟಗಿರಿಯಲ್ಲಿ ಸಿಡ್ಲಮ್ಮ ತಂದೆ ಪಕೀರಪ್ಪ ಎಂಬ ನಾಲ್ಕು ಕಿಶೋರ ಕಾರ್ಮಿಕ ಮಕ್ಕಳು ಪತ್ತೆಯಾಗಿದ್ದು, ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಯಿತು. ನಂತರ ಬಾಲಕಾರ್ಮಿಕರನ್ನು ನೇಮಿಸಿಕೊಂಡ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪಳ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.
Comments are closed.