ಗಂಗಾವತಿ: ತಾಲೂಕು ಮಟ್ಟದ ಮಕ್ಕಳ ರಕ್ಷಣಾ ಸಮಿತಿ ಸಭೆ

Get real time updates directly on you device, subscribe now.

ಸರಕಾರದ ಆದೇಶದನ್ವಯ ತಾಲೂಕು ಮಟ್ಟದ ಬಾಲ್ಯವಿವಾಹ ನಿಷೇಧ ಮತ್ತು ಸಮನ್ವಯ ಸಮಿತಿ, ತಾಲೂಕು ಮಟ್ಟದ ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ತಡೆ ಸಮಿತಿ ಹಾಗೂ ತಾಲೂಕು ಮಟ್ಟದ ಮಕ್ಕಳ ರಕ್ಷಣಾ ಸಮಿತಿಯ ಸಭೆ ಆಗಸ್ಟ್ 07ರಂದು ಗಂಗಾವತಿ ತಹಶೀಲ್ದಾರರ ಕಚೇರಿಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ತಹಶೀಲ್ದಾರರಾದ ಮಂಜುನಾಥ ಭೋಗಾವತಿ ಅವರು ವಹಿಸಿದ್ದರು. ಇದೆ ವೇಳೆ ಮಾತನಾಡಿದ ಅವರು, ಬಾಲ್ಯವಿವಾಹ ಮುಕ್ತ ತಾಲೂಕನ್ನಾಗಿಸಲು ತಾಲೂಕಿನ ಎಲ್ಲಾ ಬಾಲ್ಯವಿವಾಹ ನಿಷೇದಾಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ತಾಲೂಕಿನ ಎಲ್ಲಾ ದೇವಾಲಯಗಳಲ್ಲಿ ಮುಖ್ಯವಾಗಿ ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ದೇವಸ್ಥಾನಗಳಲ್ಲಿ ಸಾರ್ವಜನಿಕರಿಗೆ ಕಾಣಿಸುವಂತೆ “ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ” ಎಂಬ ಶಾಶ್ವತ ಗೋಡೆ ಬರಹವನ್ನು ಬರೆಯಿಸಲು ದೇವಸ್ಥಾನಗಳ ಮುಖ್ಯಸ್ಥರುಗಳಿಗೆ ಸೂಚಿಸಲು ತಿಳಿಸಿದರು.
ಅಲ್ಲದೇ ಸಾಮೂಹಿಕ ವಿವಾಹ ಆಯೋಜಕರುಗಳು, ಬಾಲ್ಯವಿವಾಹ ನಿಷೇಧದ ಕುರಿತು ಶಾಶ್ವತ ಗೋಡೆ ಬರಹವನ್ನು ಬರೆಯಿಸುವುದನ್ನು ಸಹ ಒಂದು ಕಡ್ಡಾಯ ಅಂಶವಾಗಿ ಪರಿಗಣಿಸಬೇಕು. ಸಾಮೂಹಿಕ ವಿವಾಹ ಆಯೋಜಕರು ಕಡ್ಡಾಯವಾಗಿ ತಹಶೀಲ್ದಾರರು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ಸಾಮೂಹಿಕ ವಿವಾಹ ಆಯೋಜನೆಗೆ ಅನುಮತಿಯನ್ನು ಪಡೆದುಕೊಳ್ಳಬೇಕು. ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳ ಮೇಲಾಗುವ ಯಾವುದೇ ರೀತಿಯ ಅಪರಾಧಗಳನ್ನು ತಡೆಗಟ್ಟಲು ರಾಜ್ಯ ಸರಕಾರವು “ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ-2016ರಡಿಯಲ್ಲಿ ಶೈಕ್ಷಣಿಕ ಸಂಸ್ಥೆಗಳಿಗಾಗಿ ರೂಪಿಸಲಾಗಿರುವ ಕಾರ್ಯನಿರ್ವಹಣಾ ಮಾರ್ಗಸೂಚಿಗಳು ಮತ್ತು ಕಾರ್ಯವಿಧಾನಗಳನ್ನು” ಜಾರಿಗೊಳಿಸಿದ್ದು, 2016 ಎಪ್ರೀಲ್ 03 ರಿಂದ ಈ ನೀತಿಯು ಅನುಷ್ಠಾದಲ್ಲಿದೆ. ಶಾಲಾ ಮಕ್ಕಳಿಗೆ ಮಕ್ಕಳ ಹಕ್ಕುಗಳು ಮತ್ತು ಕಾನೂನುಗಳ ಕುರಿತು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015ರಡಿಯಲ್ಲಿ ಬಾಲಭಿಕ್ಷಾಟನೆ ಶಿಕ್ಷಾರ್ಹ ಅಪರಾಧವಾದ್ದು, ತಾಲೂಕಿನಲ್ಲಿ ಬಾಲ ಭಿಕ್ಷಾಟನೆ ಪಿಡುಗು ಇದ್ದು, ಸಮಾಜ ಕಲ್ಯಾಣ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು ಅನಿರೀಕ್ಷಿತ ದಾಳಿಗಳನ್ನು ಕೈಗೊಳ್ಳಲು ಸೂಚಿಸಿದರು. ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಕ್ಕಳ ಸ್ನೇಹಿ ವಾತಾವರಣ ಮತ್ತು ಮಕ್ಕಳಪರವಾದ ಪಂಚಾಯತ್‌ಗಳನ್ನಾಗಿಸಲು ಪ್ರತಿ ಗ್ರಾಮ ಪಂಚಾಯತ್‌ಗಳಲ್ಲಿ ಕನಿಷ್ಠ 03 ತಿಂಗಳಿಗೊಮ್ಮೆ “ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ”ಗಳ ಸಭೆಯನ್ನು ಕಡ್ಡಾಯವಾಗಿ ಆಯೋಜಿಸಿ ವರದಿಯನ್ನು ತಾಲೂಕು ಪಂಚಾಯತ್ ಮತ್ತು ಶಿಶು ಅಭಿವೃದ್ಧಿ ಯೋಜನಧಿಕರಾರಿಗಳಿಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರವಿಕುಮಾರ ಪವಾರ ಮಾತನಾಡಿ, ಮಕ್ಕಳ ಸಂರಕ್ಷಣೆಗಾಗಿ ಇರುವ ಮೀಷನ ವಾತ್ಸಲ್ಯ ಯೋಜನೆಯ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗಂಗಾವತಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಪ್ರಸನ್ನ ಕಲ್ಮನಿ, ಶಿಕ್ಷಣ ಇಲಾಖೆ ಸಂಯೋಜಕರಾದ ರಾಘವೇಂದ್ರ ಸೇರಿದಂತೆ ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ಅಂಗನವಾಡಿ ಮೇಲ್ವಿಚಾರಕಿಯರು, ರೀಡ್ಸ ಸಂಸ್ಥೆ ಮತ್ತು ಬ್ರೈಟ್ ಇಂಡಿಯಾ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು

Get real time updates directly on you device, subscribe now.

Comments are closed.

error: Content is protected !!