ಸಾವಿತ್ರಿ ಬಾಯಿ ಫುಲೆ ಅವರ 194 ನೇ ಜನ್ಮ ದಿನ : ಪಾಕ್ಷಿಕ ಸಮಾರೋಪ ಕಾರ್ಯಕ್ರಮ

0

Get real time updates directly on you device, subscribe now.

ಸಾವಿತ್ರಿ ಬಾಯಿ ಫುಲೆ ಅವರ 194 ನೇ ಜನ್ಮ ದಿನದ ಅಂಗವಾಗಿ AIMSS ನ ಪಕ್ಷದ ಕಚೇರಿಯಲ್ಲಿ ಪಾಕ್ಷಿಕ ಸಮಾರೋಪ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
AIMSS ನ ಜಿಲ್ಲಾ ಸಂಘಟನಾಕಾರರಾದ ಶಾರದಾ ಮಾತನಾಡುತ್ತಾ “ಶಿಕ್ಷಣದಿಂದ ಮಾತ್ರ ಅರಿವು ಸಾಧ್ಯ, ಅರಿವಿನಿಂದ ಮಾತ್ರ ಕ್ರಿಯೆ ಸಾಧ್ಯ, ಕ್ರಿಯೆಯಿಂದ ಮಾತ್ರ ಬದಲಾವಣೆ ಸಾಧ್ಯ” ಎಂದು ಸಾರಿದ ಸಾವಿತ್ರಿಬಾಯಿ ಫುಲೆಯವರು ಹೆಣ್ಣು ಮಕ್ಕಳ ಅದರಲ್ಲೂ ಕೆಳಜಾತಿಯ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಪಣತೊಟ್ಟರು. ಅಂದಿನ ಕಾಲದಲ್ಲಿ ಜಾತಿ ವ್ಯವಸ್ಥೆ ಜನಗಳನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಿತ್ತು. ಅದರಲ್ಲೂ ಅತಿಶೂದ್ರರನ್ನು ಪ್ರಾಣಿಗಳಿಗಿಂತ ಕೀಳಾಗಿ ಕಾಣುತ್ತಿತ್ತು. ಅವರಿಗೆ ಶಿಕ್ಷಣವಿಲ್ಲ, ಮತ್ತೆ ಅಸ್ಪೃಶ್ಯರಾಗಿದ್ದ ಇವರಿಗೆ ಯಾರು ಕೆಲಸ ಕೊಡುತ್ತಿರಲಿಲ್ಲ. ವಿದ್ಯೆಯಂತೂ ಇಲ್ಲವೇ ಇಲ್ಲ, ಸಂಸ್ಕೃತ ಕಲಿತರೆ ನಾಲಿಗೆ ಕತ್ತರಿಸಿ ಬಿಡುವರೆಂದು ಭಯ. ಆರೋಗ್ಯ ಕೆಟ್ಟರಂತೂ ಯಾವ ವೈದ್ಯನು ಇವರಿಗೆ ಚಿಕಿತ್ಸೆ ಕೊಡುತ್ತಿರಲಿಲ್ಲ. ಮಕ್ಕಳನ್ನು ಹೆರುವಾಗಲೂ ವೈದ್ಯರಿಲ್ಲದೆ ಎಷ್ಟೋ ಬಾರಿ ತಾಯಿ ಮತ್ತು ಮಗು ಇಬ್ಬರು ಸತ್ತು ಹೋಗುತ್ತಿದ್ದುದು ಸಾಮಾನ್ಯವಾಗಿತ್ತು. ಎಲ್ಲರಿಗೂ ಬದುಕುವ ಹಕ್ಕು ಇದೆ ಎಂದು ಅರ್ಥೈಸಿಕೊಂಡ ಫುಲೆ ದಂಪತಿಗಳು ಈ ವರ್ಣ ವ್ಯವಸ್ಥೆಯ ವಿರುದ್ಧ ಸಮರ ಸಾರಿದರು.
ಜೊತೆಗೆ ಅವರು ವಿಧವಾ ಪುನರ್ ವಿವಾಹ, ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹಿಸಿದರು. ತಾವು ಶಿಕ್ಷಣ ಕ್ಷೇತ್ರದಲ್ಲಿ ಮಾಡುತ್ತಿದ್ದ ಕೆಲಸಗಳ ಜೊತೆಜೊತೆಗೆ 1852 ರಲ್ಲಿ “ಮಹಿಳಾ ಸೇವಾ ಮಂಡಳಿಯನ್ನು” ಆರಂಭಿಸಿದರು. ಮಹಿಳೆಯರು ಕೂಡ ಮನುಷ್ಯರು, ಅವರಿಗೂ ಮಾನವ ಹಕ್ಕುಗಳು, ಗೌರವಯುತ ಬಾಳ್ವೆ ಬಾಳಬೇಕೆಂದು ಮನವರಿಕೆ ಮಾಡುವ ಉದ್ದೇಶವೊಂದಿದ್ದ ಈ ಸಂಘಟನೆ, ದೇಶದಲ್ಲೇ ಮೊಟ್ಟಮೊದಲ ಮಹಿಳಾ ಸಂಘಟನೆ. ಮುಂದೆ ಅವರು ಕೇವಲ ಒಬ್ಬೊಬ್ಬರೇ ಸಮಾಜದ ಬದಲಾವಣೆಗೆ ದುಡಿಯುವ ಬದಲು ಇದೇ ವಿಚಾರಗಳುಳ್ಳ ಹಲವರು ಒಟ್ಟಾಗಿ ಒಂದೇ ಉದ್ದೇಶಕ್ಕಾಗಿ ಕೆಲಸ ಮಾಡಬೇಕೆಂಬ ವಿಚಾರದೊಂದಿಗೆ ಜ್ಯೋತಿಬಾ ಹಾಗು ಅವರ ಸ್ನೇಹಿತರು ಸೇರಿ 1873 ರಲ್ಲಿ ” ಸತ್ಯ ಶೋಧಕ ಸಮಾಜ ” ಸ್ಥಾಪಿಸಿದರು. ಹೀಗೆ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದರು.
 ಸಾವಿತ್ರಿಯವರ ಹೋರಾಟದ ಬದುಕು ವ್ಯರ್ಥವಾಗಲಿಲ್ಲ. ವ್ಯರ್ಥವಾಗಕೂಡದು. ಅವರು ಅಂದು ಮಾಡಿದ ಪ್ರಯತ್ನಗಳ ಫಲ ಸಮಾಜದಲ್ಲಿ ಸಾಕಷ್ಟು ಅರಿವು ಮೂಡಿಸಿತು. ವಿಧವೆಯರ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ಪರಿಹಾರವಾದವು. ಎಲ್ಲದಕ್ಕೂ ಮುಖ್ಯವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಅವರು ಪಟ್ಟ ಪ್ರಯತ್ನ ಫಲ ನೀಡಿತು. ನಾವು ಅವರ ಜೀವನದಿಂದ ಸ್ಫೂರ್ತಿ ಪಡೆದು ಅವರು ಆರಂಭಿಸಿದ, ಇಂದಿಗೂ ಅಪೂರ್ಣವಾಗಿ ಉಳಿದಿರುವ ಕೆಲಸವನ್ನು ಮುಂದುವರಿಸಲು ಅವರ ವಾರಸುದಾರರಾಗಿ ಕಾರ್ಯ ಪ್ರವೃತ್ತರಾಗಬೇಕು. ಅದುವೇ ನಾವು ಅವರಿಗೆ ನೀಡುವ ನಿಜವಾದ ಗೌರವ. ಈ ನಿಟ್ಟಿನಲ್ಲಿ ಎಐಎಂಎಸ್ಎಸ್, ಸಾವಿತ್ರಿಬಾಯಿ ಫುಲೆ ಯಂತಹ ದಿಟ್ಟ ಹೋರಾಟಗಾರ್ತಿಯ ಜೀವನ ಹೋರಾಟವನ್ನು ಎಲ್ಲಾ ಸ್ತರದ ಮಹಿಳೆಯರಿಗೆ ತಲುಪಿಸಲು ಬಡಾವಣೆ, ಹಳ್ಳಿ, ಕಾಲೇಜು ಮಟ್ಟದಲ್ಲಿ ಮಹಿಳೆಯರಿಗೆ ಶಿಕ್ಷಣ, ಆರೋಗ್ಯ, ಉದ್ಯೋಗ, ಭದ್ರತೆಗಾಗಿ ಆಗ್ರಹಿಸಿ ಪಾಕ್ಷಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು. ಸಾವಿತ್ರಿಬಾಯಿ ಫುಲೆ ಹಾಗೂ ಜ್ಯೋತಿಬಾ ಫುಲೆ ಅವರು ಕಂಡ ಕನಸಿನ ಸಮಾಜವನ್ನು ಕಟ್ಟಲು ಎಐಎಂಎಸ್ಎಸ್ ಶ್ರಮಿಸುತ್ತಿದೆ. ಈ ಮಹಾನ್ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು” ಎಂದು ಹೇಳಿದರು.
 ಕಾರ್ಯಕ್ರಮದಲ್ಲಿ ಸುಮಯ್ಯ ಮತ್ತಿತರರು ಭಾಗವಹಿಸಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!