ಕಾರಟಗಿಯಲ್ಲಿ ಶೀಘ್ರ ಸಿಎಂರಿಂದ 100 ಹಾಸಿಗೆ ತಾಲ್ಲೂಕು ಆಸ್ಪತ್ರೆಗೆ ಶಂಕುಸ್ಥಾಪನೆ-ಶಿವರಾಜ್ ತಂಗಡಗಿ
* ಇಂದ್ರ ಧನುಷ್ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿಕೆ
ಕಾರಟಗಿ: ಆ.7
ಕಾರಟಗಿಯಲ್ಲಿ 100 ಹಾಸಿಗೆಯ ತಾಲ್ಲೂಕು ಆಸ್ಪತ್ರೆ ನಿರ್ಮಾಣಕ್ಕೆ ಶೀಘ್ರ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಕಾರಟಗಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ‘ಪರಿಣಾಮಕಾರಿ ಮಿಷನ್ ಇಂದ್ರ ಧನುಷ್ 5.0’ ಅಭಿಯಾನ ಕಾರ್ಯಕ್ರಮದಲ್ಲಿ ಸಚಿವರು ಮಗುವಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿ ಸೂಕ್ತ ಆಸ್ಪತ್ರೆ ಇಲ್ಲದೆ, ಇಲ್ಲಿನ ಜನತೆ ಅನುಭವಿಸಿದ ನರಕಯಾತನೆ ನೋಡಿದ್ದೇನೆ. ತಾಲ್ಲೂಕು ಆಸ್ಪತ್ರೆಗಾಗಿ ಸ್ಥಳ ಹುಡುಕಾಟದಲ್ಲಿದ್ದೆವು. ಆಸ್ಪತ್ರೆ ನಿರ್ಮಾಣಕ್ಕೆ ಎಲ್ ವಿಟಿ ಸಹೋದರರು ಆರು ಎಕರೆ ಜಮೀನು ನೀಡಿದ್ದು, ಅವರಿಗೆ ಧನ್ಯವಾದಗಳು. ಶೀಘ್ರ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಶಂಕುಸ್ಥಾಪನೆ ನೆರವೇರಿಸಲಾಗುವುದು.ನೂತನ ಆಸ್ಪತ್ರೆ ತಲೆಎತ್ತುವುದರಿಂದ ಈ ಭಾಗದ ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.
ಪ್ರತಿಯೊಂದು ಮಗು ಈ ದೇಶದ ಸಂಪತ್ತು. ಪ್ರತಿ ಬಡ ಕುಟುಂಬವು ಲಸಿಕೆ ಪಡೆಯಬೇಕು ಎಂಬ ಉದ್ದೇಶದಿಂದ ಇಂದ್ರ ಧನುಷ್ ಎಂಬ ಕಾರ್ಯಕ್ರಮ ತರಲಾಗಿದೆ. ಜಿಲ್ಲೆಯ ಯಾವೊಬ್ಬ ಮಗು ಹಾಗೂ ಗರ್ಭಿಣಿಯರು ಲಸಿಕೆಯಿಂದ ವಂಚಿತರಾಗಬಾರದು. ಈ ಕೆಲಸದಲ್ಲಿ ಆಶಾ ಕಾರ್ಯಕರ್ತೆಯರ ಜವಾಬ್ದಾರಿ ಹೆಚ್ಚಿದ್ದು, ಲಸಿಕೆಯನ್ನು ಪ್ರತಿಯೊಂದು ಕುಟುಂಬಕ್ಕೆ ಪ್ರಮಾಣಿಕವಾಗಿ ತಲುಪಿಸುವ ನಿಟ್ಟಿನಲ್ಲಿ ವೈದ್ಯರು ಹಾಗೂ ಆಶಾ ಕಾರ್ಯಕರ್ತೆಯರು ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಈ ಹಿಂದೆ ಉಳ್ಳವರು ಮಾತ್ರ ಎಲ್ಲ ಲಸಿಕೆ ಪಡೆಯುತ್ತಿದ್ದರು. ಬಡ ಹಾಗೂ ಮಧ್ಯಮ ವರ್ಗದವರಿಗೂ ಲಸಿಕೆ ದೊರಕಬೇಕು. ಲಸಿಕೆಯಿಂದ ವಂಚಿತರಾಗಿ ಯಾವುದೇ ಮಗು ಮಾರಣಾಂತಿಕ ರೋಗದಿಂದ ಅಸುನೀಗಬಾರದು. ಇಡೀ ಜಿಲ್ಲೆಯಲ್ಲಿ ಎರಡು ವರ್ಷದೊಳಗಿನ 5,099 ಮಕ್ಕಳು, ಎರಡರಿಂದ ಐದು ವರ್ಷದೊಳಗಿನ 510 ಮಕ್ಕಳು ಹಾಗೂ 1207 ಗರ್ಭಿಣಿಯರಿದ್ದಾರೆ. ಗರ್ಭಿಣಿಯರು ಹಾಗೂ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವ ಮೂಲಕ ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಸಮಾಜದಲ್ಲಿ ವೈದ್ಯರು ಮತ್ತು ಶಿಕ್ಷಕರಿಗೆ ವಿಶೇಷ ಗೌರವ ಇದೆ. ಶಿಕ್ಷಕರು ಜೀವನ ಬದಲಿಸಿದರೆ, ವೈದ್ಯರು ಜೀವ ಉಳಿಸುತ್ತಾರೆ. ಎಲ್ಲರಿಗೂ ಶಿಕ್ಷಕ ಹಾಗೂ ವೈದ್ಯ ಹುದ್ದೆ ದೊರಕುವುದಿಲ್ಲ. ಯಾವುದೇ ಸಂದರ್ಭದಲ್ಲಿಯೂ ವೈದ್ಯರು ಜನತೆಗೆ ಸ್ಪಂದಿಸಬೇಕು. ಆಗ ಮಾತ್ರ ತಮ್ಮ ಸೇವೆ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಗುರುತರ ಕೆಲಸ ಮಾಡಿದರೆ ಜನತೆ ನಮ್ಮನ್ನು ನೆನೆಯುತ್ತಾರೆ. ಆ ನಿಟ್ಟಿನಲ್ಲಿ ಕೆಲಸ ಮಾಡಿದಾಗ ತಮ್ಮ ವೈದ್ಯ ಪದವಿಗೆ ಹೆಚ್ಚಿನ ಗೌರವ ಬರಲಿದೆ. ಉದಾಹರಣೆಗೆ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಮಂಜುನಾಥ್ ಅವರು ನಿವೃತ್ತರಾಗಿದ್ದಾರೆ. ಅವರ ನಿಸ್ವಾರ್ಥ ಸೇವೆಯಿಂದಾಗಿ ಅವರನ್ನು ಆ ಹುದ್ದೆಯಲ್ಲಿ ಇನ್ನು ಕೂಡ ಮುಂದುವರೆಸಲಾಗಿದೆ ಮಂಜುನಾಥ್ ಅವರು ವೈದ್ಯ ವೃಂದಕ್ಕೆ ಮಾದರಿಯಾಗಿದ್ದು, ಅವರಂತೆ ಎಲ್ಲ ವೈದ್ಯರು ಕರ್ತವ್ಯ ನಿರ್ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಲಿಂಗರಾಜು, ತಾಲ್ಲೂಕು ವೈದ್ಯಾಧಿಕಾರಿ ಶಾಕುಂತಲ, ವೀರಭದ್ರೇಗೌಡ, ಸೂಗಪ್ಪ, ಸಿದ್ದನಗೌಡ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Comments are closed.