ಕೊಪ್ಪಳ, ಮುನಿರಾಬಾದ್ ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಚಾಲನೆ

Get real time updates directly on you device, subscribe now.

* ಅಮೃತ್ ಭಾರತ ರೈಲು ನಿಲ್ದಾಣಗಳ ಅಭಿವೃದ್ಧಿ ಯೋಜನೆಯಡಿ ಕ್ರಮ
* ಐಕಾನ್‌ಗಳು, ಆಕರ್ಷಕ ವಾಸ್ತು ಶಿಲ್ಪ ಮತ್ತು ಪ್ರಯಾಣಿಕರ ಸ್ನೇಹಿ ಸೌಲಭ್ಯ
* ಕೊಪ್ಪಳ ರೈಲು ನಿಲ್ದಾಣವು 21 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೆ
* ಮುನಿರಾಬಾದ್(ಹುಲಗಿ) ರೈಲು ನಿಲ್ದಾಣವು 20 ಕೋಟಿ ರೂ. ವೆಚ್ಚದಲ್ಲಿ ಪುನರಾಭಿವೃದ್ಧಿ

*ಕೊಪ್ಪಳ, ಮುನಿರಾಬಾದ್ ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಚಾಲನೆ*
—-
ಕೊಪ್ಪಳ ಆಗಸ್ಟ್ 06 (ಕರ್ನಾಟಕ ವಾರ್ತೆ): ಕೊಪಣಾದ್ರಿ ಎಂದೇ ಪ್ರಸಿದ್ಧವಾದ ಕೊಪ್ಪಳ ನಗರದ
ರೈಲು ನಿಲ್ದಾಣ ಮತ್ತು ಜಿಲ್ಲೆಯ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮುನಿರಾಬಾದ್(ಹುಲಗಿ) ರೈಲು ನಿಲ್ದಾಣಗಳು ಸೇರಿದಂತೆ ದೇಶದ ವಿವಿಧ 508 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಮಂತ್ರಿಗಳಾದ ಮಾನ್ಯ ನರೇಂದ್ರ ಮೋದಿಜಿಯವರು
ವಿಡಿಯೋ ಕಾನ್ಫರೆನ್ಸ್ ಮೂಲಕ ಆಗಸ್ಟ್ 06ರಂದು ಚಾಲನೆ‌ ನೀಡಿದರು.
ಈ ಕಾರ್ಯಕ್ರಮಕ್ಕಾಗಿ ಕೊಪ್ಪಳ ರೈಲ್ವೆ ನಿಲ್ದಾಣವನ್ನು ತಳಿರುತೋರಣಗಳಿಂದ ಶೃಂಗರಿಸಲಾಗಿತ್ತು. ಅಮೃತ ಭಾರತ ಸ್ಟೇಷನ್ ಯೋಜನೆಯಡಿ ರೈಲ್ವೆ ಸಚಿವಾಲಯದ ರೈಲ್ವೆ ಮಂಡಳಿಯ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅವರಿಂದ ಹಮ್ಮಿಕೊಂಡಿದ್ದ ಸಮಾರಂಭವನ್ನು ಕೊಪ್ಪಳ ಸಂಸದರಾದ ಕರಡಿ ಸಂಗಣ್ಣ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು,
ಯಾವ ರಾಷ್ಟ್ರವು ರೈಲ್ವೆ, ವಾಯು ವಲಯ, ರಾಷ್ಟೀಯ ಹೆದ್ದಾರಿಗಳು ಹಾಗೂ ಜಲ ಮಾರ್ಗಗಳನ್ನು ಹೆಚ್ಚಿಸುತ್ತದೆಯೋ ಆ ದೇಶವು ಜಗತ್ತಿನ ಮುಂದುವರೆದ ರಾಷ್ಟ್ರಗಳ ಪಟ್ಟಿಯಲ್ಲಿ ಬರುತ್ತದೆ. ಈ ದಿಶೆಯಲ್ಲಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜಿಯವರ ನೇತೃತ್ವದ ಕೇಂದ್ರ ಸರ್ಕಾರವು ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ದೇಶದ 508 ರೈಲು ನಿಲ್ದಾಣಗಳನ್ನು ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಆಯ್ಕೆ ಮಾಡಿ ರೈಲು ನಿಲ್ದಾಣಗಳಲ್ಲಿ ಆಸನಗಳು, ಲಿಫ್ಟ್ ವ್ಯವಸ್ಥೆ, ಪ್ರಯಾಣಿಕರಿಗೆ ಸುಸಜ್ಜಿತ ಸೌಲಭ್ಯಗಳ ಜೊತೆಗೆ, ಆಕರ್ಷಕ ವಾಸ್ತು ಶಿಲ್ಪ, ಪ್ರಯಾಣಿಕರ ಸ್ನೇಹಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದರು.
ಈ ಯೋಜನೆಯಡಿ ಜಿಲ್ಲೆಯ ಎರಡು ರೈಲು ನಿಲ್ದಾಣಗಳು ಆಯ್ಕೆಯಾಗಿದ್ದು ಕೊಪ್ಪಳ ರೈಲು ನಿಲ್ದಾಣವನ್ನು 21 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೆ ಮತ್ತು ಮುನಿರಾಬಾದ್ ರೈಲು ನಿಲ್ದಾಣವನ್ನು 20 ಕೋಟಿ ರೂ. ವೆಚ್ಚದಲ್ಲಿ ಪುನರಾಭಿವೃದ್ಧಿ ಗೊಳಿಸಲಾಗುತ್ತಿದೆ. ಹನುಮನ ಜನ್ಮ ಭೂಮಿ ಅಂಜನಾದ್ರಿಗೆ ಸುಲಭ ಸಂಪರ್ಕ ಕಲ್ಪಿಸಲು ಗಂಗಾವತಿ ರೈಲು ನಿಲ್ದಾಣದ ಅಭಿವೃದ್ಧಿಗಾಗಿ ಕೇಂದ್ರ ರೈಲ್ವೆ ಸಚಿವರಿಗೆ ಮನವರಿಕೆ ಮಾಡಲಾಗಿದೆ. ಆನೆಗುಂದಿಯಲ್ಲಿ ರೋಪ್‌ವೇ ನಿರ್ಮಾಣಕ್ಕೂ ಕ್ರಮ ವಹಿಸಲಾಗುತ್ತಿದೆ. ಬಾಣಾಪುರ ರೈಲ್ವೆ ಸೇತುವೆ ನಿರ್ಮಾಣ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಶೀಘ್ರದಲ್ಲಿ ಉದ್ಘಾಟನೆಗೆ ಕ್ರಮ ಕೈಗೊಳ್ಳಲಾಗುವುದು. ಅದರಂತೆ ಹುಲಿಗಿ ಸೇತುವೆ ನಿರ್ಮಾಣಕ್ಕೆ ಸಹ ಕ್ರಮವಹಿಸಲಾಗುತ್ತದೆ. ಕಿನ್ನಾಳ ರಸ್ತೆಯಲ್ಲಿ ಕೆಳಸೇತುವೆ, ಭಾಗ್ಯನಗರ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣ, ಕುಷ್ಟಗಿಗೆ ರೈಲು, ಮಳೆ ಮಾಪನಾ ಕೇಂದ್ರ ಮಂಜೂರು, ಪಾಸ್‌ಪೋರ್ಟ್ ಕಚೇರಿ ಆರಂಭ ಹೀಗೆ ನಮ್ಮ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಾಗಿವೆ. ಸೆಪ್ಟೆಂಬರ್ ತಿಂಗಳಲ್ಲಿ ಸಿಂಧನೂರಿಗೆ ರೈಲು ಬಿಡುವ ವ್ಯವಸ್ಥೆಯನ್ನು ಸಹ ಮಾಡಲಾಗುತ್ತಿದೆ. ಕೊಪ್ಪಳದಲ್ಲಿ ಎರಡು ರೈಲು ನಿಲ್ದಾಣಗಳ ಅವಶ್ಯಕತೆಯಿದ್ದು, ಈಗಾಗಲೇ ಬಸ್ಸಾಪುರ ಹತ್ತಿರ ಜಮೀನು ವೀಕ್ಷಣೆ ಮಾಡಲಾಗಿದೆ. ಕೊಪ್ಪಳದ ರೈಲು ನಿಲ್ದಾಣಕ್ಕೆ ಇನ್ನೊಂದು ದಿಕ್ಕಿನಲ್ಲಿ ಪ್ರವೇಶ ಮಾರ್ಗವನ್ನು ಸ್ಥಾಪಿಸುವ ಕುರಿತಂತೆ ಹಲವು ಮುಖಂಡರು ಮನವಿ ಸಲ್ಲಿಸಿದ್ದು, ಭಾಗ್ಯನಗರ ರಸ್ತೆ ಭಾಗದಲ್ಲಿ ಕೊಪ್ಪಳ ರೈಲು ನಿಲ್ದಾಣದ 2ನೇ ಪ್ರವೇಶ ಮಾರ್ಗ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಕೊಪ್ಪಳದಲ್ಲಿ ಏರ್ಪೋರ್ಟ್ ನಿರ್ಮಾಣ ಹಾಗೂ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಂಬaಧಿಸಿದಂತೆ ರಾಜ್ಯ ಸರ್ಕಾರಕ್ಕೂ ಮನವಿ ಮಾಡಲಾಗಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರಾಜ್ಯ ಸರ್ಕಾರದ ಪಾಲನ್ನು ಮುಂದುವರೆಸಲು ಸಹ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗಿದೆ ಎಂದು ಸಂಸದರು ಹೇಳಿದರು.
ಕುಷ್ಟಗಿ ಶಾಸಕರಾದ ದೊಡ್ಡನಗೌಡ ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಅವರು ಮಾತನಾಡಿದರು. ರೈಲ್ವೆ ಇಲಾಖೆಯ ಅಧಿಕಾರಿಗಳಾದ ಸಂಜಯ್ ಕುಮಾರ್ ಅವರು ಪ್ರಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಎಂ.ಸುದರೇಶ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಮಾಜಿ ಶಾಸಕರಾದ ಕೆ.ಶರಣಪ್ಪ, ಜಿ.ವೀರಪ್ಪ ಕೆಸರಟ್ಟಿ, ಪರಣ್ಣ ಮುನವಳ್ಳಿ ಹಾಗೂ ಬಸವರಾಜ ದಢೇಸೂಗುರು, ನಗರಸಭೆಯ ಸದಸ್ಯರಾದ ರಾಜಶೇಖರ ಆಡೂರು, ಸರ್ವೇಶಗೌಡ, ಉಮಾ ಪಾಟೀಲ್, ವಿದ್ಯಾ ಹೆಸರೂರು, ದೇವಕ್ಕ ಕಂದಾರಿ ಸೇರಿದಂತೆ ಹಲವು ಜನಪ್ರತಿನಿಧಿಗಳು, ಗಣ್ಯರು, ರೈಲ್ವೆ ಇಲಾಖೆ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: