ಅರಗ‌ ಜ್ಞಾನೇಂದ್ರರನ್ನು ಜೈಲಿಗಟ್ಟಬೇಕು: ಸಚಿವ‌ ತಂಗಡಗಿ

Get real time updates directly on you device, subscribe now.

  • ಆರಗ ಜ್ಞಾನೇಂದ್ರರನ್ನು ನಿಮ್ಹಾನ್ಸ್ ಗೆ ಸೇರಿಸಬೇಕು

* ಬಿಜೆಪಿ ಕಲ್ಯಾಣ ಕರ್ನಾಟಕ ಭಾಗದ ಜನತೆಯ ಕ್ಷಮೆಯಾಚಿಸಲಿ

ಕೊಪ್ಪಳ: ಜು.05

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಮಾಜಿ‌‌ ಸಚಿವ ಆರಗ ಜ್ಞಾನೇಂದ್ರ ಅವರಿಗೆ ತಲೆಕೆಟ್ಟಿದ್ದು, ಕೂಡಲೇ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಬೇಕು ಎಂದು ಕೊಪ್ಪಳ‌ ಜಿಲ್ಲಾ‌ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದ್ದಾರೆ.

ಶನಿವಾರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಗೃಹ ಸಚಿವರಾಗಿ ಕೆಲಸ‌ ಮಾಡಿದ‌ ಆರಗ ಜ್ಞಾನೇಂದ್ರ ಅವರಿಗೆ ಹೇಗೆ ಮಾತನಾಡಬೇಕು ಎಂಬ ಪರಿಜ್ಞಾನ ಇಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ 371 (ಜೆ) ಕಲಂ ಜಾರಿಗೆ ಬರಲು ಖರ್ಗೆ ಅವರ ಅವಿರತ ಶ್ರಮ ಕಾರಣ. ಇಂತಹ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಆರಗ ಜ್ಞಾನೇಂದ್ರ ಅವರನ್ನು ಜೈಲಿಗಟ್ಟಬೇಕು ಎಂದರು.

ಆರಗ ಜ್ಞಾನೇಂದ್ರ ಹಾಗೂ ಬಿಜೆಪಿ‌ ನಾಯಕರು, ಖರ್ಗೆ ಅವರಿಗೆ ಮಾತ್ರವಲ್ಲ. ಇಡೀ‌ ಕಲ್ಯಾಣ ಕರ್ನಾಟಕ ಭಾಗದ ಜನತೆಗೆ ಅಪಮಾನ‌ ಮಾಡಿದ್ದಾರೆ. ಹೀಗಾಗಿ ಇಡೀ ಕಲ್ಯಾಣ ಕರ್ನಾಟಕ ಭಾಗದ ಜನರ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಇಲ್ಲಿನ ಜನತೆ ಬಿಜೆಪಿಗರನ್ನು ಈ ಭಾಗದಲ್ಲಿ ಓಡಾಡದಂತೆ ಮಾಡಬೇಕು ಎಂದು ತಿಳಿಸಿದರು.

ಮೋದಿ ಉಪನಾಮದ ಬಗ್ಗೆ ರಾಹುಲ್ ಗಾಂಧಿ ಅವರ ಹೇಳಿಕೆ ಕುರಿತ ಪ್ರಕರಣದಲ್ಲಿ ಸೂರತ್ ನ್ಯಾಯಾಲಯ ವಿಧಿಸಿರುವ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಸತ್ಯಕ್ಕೆ ಸಿಕ್ಕ ಜಯ. ದ್ವೇಷ ರಾಜಕಾರಣ ಮಾಡುವ ಬಿಜೆಪಿಗರು ರಾಜಕೀಯವಾಗಿ ಹತ್ತಿಕ್ಕಲು ಏನು ಬೇಕಾದರು ಮಾಡುತ್ತಾರೆ. ನ್ಯಾಯಾಲಯ‌ ಎಂಬುದು ಈ ದೇಶದಲ್ಲಿ‌ ಇನ್ನು ಇದೆ ಎಂದು ಮಾರ್ಮಿಕವಾಗಿ ಹೇಳಿದರು.‌

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯದ ಹಣವನ್ನು ಎಲ್ಲೆಲ್ಲಿ ಬಳಕೆ ಮಾಡಬೇಕು ಎಂಬ ಅರಿವು ನಮ್ಮ ಸರ್ಕಾರಕ್ಕೆ ಇದೆ. ಈ ಎರಡು ಸಮುದಾಯಗಳ ಹಣ ಸದ್ಭಳಕೆ ಬಗ್ಗೆ ಸೂಕ್ತ ‌ಕಾನೂನನ್ನು ತಂದಿದ್ದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ತಮ್ಮ‌ ಆಡಳಿತಾವಧಿಯಲ್ಲಿ ಏನು ಮಾಡಲಾಗದ ಬಿಜೆಗರಿಗೆ ಮಾತನಾಡಲು ಯೋಗ್ಯತೆ ಇಲ್ಲ ಎಂದು ಛೇಡಿಸಿದರು.

*ಅಸಮಾಧಾನ ಇಲ್ಲ:* ರಾಯರೆಡ್ಡಿ ಅವರು ಹಿರಿಯರಾಗಿದ್ದು, ನಮ್ಮ ನಾಯಕರಾಗಿದ್ದಾರೆ. ಅವರು ಹತಾಶೆಯಿಂದ ಮಾತನಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅವರು ರಾಜಕಾರಣ ಮಾಡುವಾಗ ನಾವು ವಿದ್ಯಾರ್ಥಿ ಜೀವನದಲ್ಲಿದ್ದವು. ಅವರ ಸಲಹೆ, ಮಾರ್ಗದರ್ಶನದಲ್ಲಿಯೇ ಮುಂದುವರೆಯಲಿದ್ದೇವೆ. ರಾಯರೆಡ್ಡಿ ಅವರಿಗೆ ಯಾವುದೇ ಅಸಮಾಧಾನ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ನಾಯಕರು ಹೆದರಿದ್ದಾರೆ.‌ ವಿಧಾನಸಭೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಗಲ್ಲಿ, ಗಲ್ಲಿ ಅಲೆದಾಡಿದರೂ ಜನ ಅವರಿಗೆ ಮಣೆ ಹಾಕಲಿಲ್ಲ. ಇದೀಗ ನಮ್ಮ ಐದು ಯೋಜನೆಗಳಿಂದ‌ ಬಿಜೆಪಿ ರಾಷ್ಟ್ರೀಯ ನಾಯಕರು ಚಿಂತೆ ಮಾಡುವಂತಾಗಿದೆ ಎಂದು ಲೇವಡಿ ಮಾಡಿದರು.

ದೇಶದಲ್ಲಿ ಹೊಸ ಅಲೆ ಎದ್ದಿದ್ದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.‌ಕುಮಾರಸ್ವಾಮಿ ಅವರಿಗೆ ಸದ್ಯ ಯಾವುದೇ ಕೆಲಸ ಇಲ್ಲ. ಚು‌ನಾವಣಾ ಫಲಿತಾಂಶಕ್ಕೂ ಮುನ್ನ ಆಕಡೆ ಬಂದರೂ ನಾನೇ ಈಕಡೆ ಬಂದರೂ ನಾನೇ ಎಂದು ಕುಮಾರಸ್ವಾಮಿ‌ ಕನಸು ಕಂಡಿದ್ದರು. ಇದೀಗ ಯಾವ ಕಡೆನೂ ಆಗದಿದ್ದಕ್ಕೆ ಹತಾಶೆಗೊಳಗಾಗಿ ಕುಮಾರಸ್ವಾಮಿ ಮನಬಂದತೆ ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ವರ್ಗಾವಣೆ ದಂಧೆಯಲ್ಲಿ‌ ತೊಡಗಿದ್ದಾರೆ ಎಂಬ ಮಾಜಿ‌ ಶಾಸಕ ಬಸವರಾಜ ದಡೇಸಗೂರು ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿ ಸರ್ಕಾರದ ಐದು ವರ್ಷಗಳ ಅವಧಿಯನ್ನು ದಡೇಸಗೂರು ನೆನಪು ಮಾಡಿಕೊಳ್ಳುತ್ತಿದ್ದಾರೆ. ಕಾಗೆ, ಕೋಗಿಲೆ ನೋಡಿ ಕಾಗೆ ಎಷ್ಟು ಕಪ್ಪಾಗಿದೆ ಎಂದು ಹೇಳಿದಂತೆ ಆಯ್ತು. ಮೊದಲು ಆ ವ್ಯಕ್ತಿ ಸರಿಯಾಗಿ ಕನ್ನಡ ಮಾತನಾಡುವುದನ್ನು ಕಲಿಯಲಿ ಎಂದರು.‌

Get real time updates directly on you device, subscribe now.

Comments are closed.

error: Content is protected !!
%d bloggers like this: