ಗೃಹ ಜ್ಯೋತಿ ಫಲಾನುಭವಿಗಳಿಗೆ ಶೂನ್ಯ ಬಿಲ್ ವಿತರಣೆ

Get real time updates directly on you device, subscribe now.

* ಕೊಪ್ಪಳ ಜಿಲ್ಲೆಯಲ್ಲಿ 2,97,122 ಗೃಹ ಬಳಕೆಯ ಗ್ರಾಹಕರು

ಕೊಪ್ಪಳ: ಗೃಹ ಜ್ಯೋತಿ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರಿಂದ ಚಾಲನೆ

ಕೊಪ್ಪಳ ): ‘ಉಚಿತ ಬೆಳಕು ಸುಸ್ಥಿರ ಬದುಕು’ ಆಶಯದ, ರಾಜ್ಯ ಸರ್ಕಾರದ ಮಹತ್ವದ ಯೋಜನೆ ಗೃಹ ಜ್ಯೋತಿಗೆ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ
ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಆಗಸ್ಟ್ 05 ರಂದು ವಿದ್ಯುಕ್ತ್ ಚಾಲನೆ ನೀಡಿದರು.
ಗೃಹ ಜ್ಯೋತಿ ಫಲಾನುಭವಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನೆರದಿದ್ದ, ಗುಲ್ಬರ್ಗಾ ವಿದ್ಯುಚ್ಚಕ್ತಿ ಸರಬರಾಜು ಕಂಪನಿ ಅಚ್ಚುಕಟ್ಟಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಯೋಜನೆಯ ಫಲಾನುಭವಿಗಳಿಗೆ ಶೂನ್ಯ ಬಿಲ್ಲನ್ನು ವಿತರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.
ಶರಣಬಸಯ್ಯ ಹಿರೇಮಠ, ಸಾದಪ್ಪ, ಮೆಹಬೂಬಸಾಬ, ದ್ರಾಕ್ಷಾಯಣಮ್ಮ, ಆದಂಸಾಬ ಸೇರಿದಂತೆ ಸಾಂಕೇತಿಕವಾಗಿ ಸಚಿವರಿಂದ ಶೂನ್ಯ ಬಿಲ್ ಪಡೆದ ಏಳು ಜನ ಫಲಾನುಭವಿಗಳಿಗೆ ಇದೆ ವೇಳೆ ಪ್ರಮಾಣ ಪತ್ರವನ್ನು ಸಹ ವಿತರಿಸಲಾಯಿತು.
ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಸಚಿವರಾದ ಶಿವರಾಜ ತಂಗಡಗಿ ಅವರು ಮಾತನಾಡಿ, ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿ ಸಾರ್ವಜನಿಕರಿಗೆ ಅನುಕೂಲವಾಗಲು ಗೃಹಜ್ಯೋತಿ ಯೋಜನೆ ಜಾರಿಗೊಳಿಸಲಾಗಿದೆ. ಬೆಲೆ ಏರಿಕೆಯ ಈ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳ ಅವಶ್ಯಕತೆ ಇದೆ ಎಂಬಯದನ್ನರಿತು ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಒತ್ತು ಕೊಡುತ್ತಿದೆ ಎಂದು ತಿಳಿಸಿದರು.
ಕೊಪ್ಪಳ ಜಿಲ್ಲೆಯಲ್ಲಿ ಈ ಯೋಜನೆಯಡಿ 2,41,545 ಗ್ರಾಹಕರು ನೋಂದಾವಣೆ ಮಾಡಿಕೊಂಡು ಜುಲೈ 27ರ ಅಂತ್ಯಕ್ಕೆ ಶೇಕಡವಾರು ಪ್ರಗತಿ 81.29 ಆಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ
ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಆರ್ಥಿಕವಾಗಿ ದುರ್ಬಲರಾದವರಿಗೆ ಗ್ಯಾರಂಟಿ ಯೋಜನೆಗಳಿಂದ ಸಾಕಷ್ಟು ಅನುಕೂಲವಾಗುತ್ತಿದೆ. ಇದುವರೆಗೆ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಶಕ್ತಿ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ರಾಜ್ಯ ಸರ್ಕಾರವು ರಾಜ್ಯದಲ್ಲಿನ ಪ್ರತಿ ಮನೆಗೆ ತಿಂಗಳಿಗೆ ಗರಿಷ್ಠ 200 ಯುನಿಟಗಳವರೆಗೆ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ ಆರ್ಥಿಕ ವರ್ಷ 2022-23 ಬಳಕೆಯ ಆಧಾರದನ್ವಯ ಯೂನಿಟಗಳ ಮೇಲೆ ಜೊತೆಗೆ ಶೇ.10ರಷ್ಟು ಹೆಚ್ಚಿನ ಬಳಕೆಯ ಮಿತಿಯನ್ನು ಅನುಮತಿಸಿ ಗೃಹ ಬಳಕೆಯ ಗ್ರಾಹಕರಿಗೆ ಉಚಿತ ವಿದ್ಯುತ್ ನೀಡಲು ಅನುಮೋದಿಸಿದೆ. ಹೊಸ ಸಂಪರ್ಕ ಗ್ರಾಹಕರಿಗೆ ಬಳಕೆ ಇತಿಹಾಸ ಇಲ್ಲದಿರುವುದರಿಂದ ರಾಜ್ಯದ ಗೃಹಬಳಕೆಯದಾರರ ಸರಾಸರಿ ಬಳಕೆಯ ಮಾಸಿಕ 53 ಯೂನಿಟಗಳು ಉಚಿತ ವಿದ್ಯುತ್ ನೀಡಲು ಅನುಮೋದಿಸಿದೆ. ಬಳಕೆ ಇತಿಹಾಸ ಇಲ್ಲದಿರುವ ಬಳಕೆದಾರರಿಗೆ ಸರಾಸರಿ ಬಳಕೆಯ ಮಾಸಿಕ 53 ಯೂನಿಟಗಳು ಉಚಿತ ವಿದ್ಯುತ್‌ ನೀಡಲು ಅನುಮೋದಿಸಿದೆ. ಗೃಹ ವಿದ್ಯುತ್‌ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳಿದ್ದಲ್ಲಿ ಒಂದು ಸ್ಥಾವರಕ್ಕೆ ಮಾತ್ರ ಈ ಯೋಜನೆಯಡಿ ಸೌಲಭ್ಯಕ್ಕೆ ಅರ್ಹರಾಗುವರು.
ಭಾಗ್ಯ ಜ್ಯೋತಿ ಕುಟೀರಜ್ಯೋತಿ ಗ್ರಾಹಕರಿಗೆ ರಾಜ್ಯದ ಸರಾಸರಿ 53 ಯುನಿಟ್ ಬಳಕೆಯ ಮೇಲೆ ಜೊತೆಗೆ ಶೇ.10ರಷ್ಟು ಹೆಚ್ಚಿನ ಮಿತಿಯನ್ನು ಅನುಮತಿಸಿ ವಿದ್ಯುತ್ ಬಿಲ್ಲಿನ ಮೊತ್ತವನ್ನು ಉಚಿತವಾಗಿ ನೀಡಲು ಅನುಮೋದಿಸಿದೆ. ಅಮೃತಜ್ಯೋತಿ ಯೋಜನೆಯಡಿ ಸಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಗ್ರಾಹಕರಿಗೆ 75 ಯುನಿಟ್ ಬಳಕೆಯ ಮೇಲೆ ಜೊತೆಗೆ ಶೇ.10ರಷ್ಟು ಹೆಚ್ಚಿನ ಮಿತಿಯನ್ನು ಅನುಮತಿಸಿ ವಿದ್ಯುತ್ ಬಿಲ್ಲಿನ ಮೊತ್ತವನ್ನು ಉಚಿತವಾಗಿ ನೀಡಲು ಅನುಮೋದಿಸಿದೆ. ಕೊಪ್ಪಳ ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಗೆ ನೋಂದಣಿ ಕಾರ್ಯವು ಜೂನ್ 18ರಿಂದ ಎಲ್ಲ ಶಾಖೆಗಳಲ್ಲಿ ಉಪ ವಿಭಾಗಗಳಲ್ಲಿ ಹಾಗೂ ವಿಭಾಗ ಕಚೇರಿಗಳಲ್ಲಿ ಆರಂಭಿಸಲಾಯಿತು. ಯೋಜನೆಯ ಅನುಷ್ಠಾನಕ್ಕೆ ಜೂನ್ 17ರಿಂದಲೇ ಅಚ್ಚುಕಟ್ಟಾಗಿ ಪ್ರಚಾರ ನಡೆಸಲಾಯಿತು. ಈ ಯೋಜನೆಯ ಲಾಭ ಪಡೆಯಲು ಗ್ರಾಹಕರಿಗೆ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಗೃಹ ಜ್ಯೋತಿ ಯೋಜನೆಯ ಬಗ್ಗೆ
ಜೆಸ್ಕಾಂನ ಕಾರ್ಯ ಮತ್ತು ಪಾಲನಾ ವೃತ್ತದ ಅಧೀಕ್ಷಕ ಅಭಿಯಂತರರಾದ ವೈ ಮೊಹಮ್ಮದ್ ಶರೀಫ್ ಅವರು ಮಾಹಿತಿ ನೀಡಿದರು.
ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ, ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಾಹುಲ್ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಜೆಸ್ಕಾಂನ ಕಾರ್ಯ ಮತ್ತು ಪಾಲನ ವೃತ್ತ ಕೊಪ್ಪಳದ ಕಾರ್ಯನಿರ್ವಾಹಕ ಅಭಿಯಂತರರಾದ ಮಹೇಶ, ಕೊಪ್ಪಳ ವಿಭಾಗದ ಜೆಸ್ಕಾಂ ಅಧಿಕಾರಿ ಫಣಿ ರಾಜೇಶ, ಗಂಗಾವತಿ ವಿಭಾಗದ ಜೆಸ್ಕಾಂ ಅಧಿಕಾರಿ ರಿಯಾಜ್ ಅಹ್ಮದ್ ಸೇರಿದಂತೆ ಜೆಸ್ಕಾಂನ ಇನ್ನೀತರ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
ನಿವೃತ್ತ ಅಧೀಕ್ಷಕ ಅಭಿಯಂತರರಾದ ಈ ಪ್ರಹ್ಲಾದ ಅವರು ನಿರೂಪಿಸಿದರು.
ಕಲಾವಿದರಿಂದ ಜಾಗೃತಿ ಗೀತೆ: ಕಾರ್ಯಕ್ರಮಕ್ಕೆ ಮೊದಲು, ಜಿಲ್ಲೆಯ ಹಿರಿಯ ಜಾನಪದ ಕಲಾವಿದ ಶರಣಪ್ಪ ಒಡಗೇರಿ ಅವರು ಗ್ಯಾರಂಟಿ ಯೋಜನೆಗಳ ಬಗ್ಗೆ ಹಾಡುಗಳನ್ನು ಹೇಳಿ ಜಾಗೃತಿ ಮೂಡಿಸಿದರು. ಮಾಪಕ ಓದುಗರಾದ ಸಂತೋಷಕುಮಾರ ಹಾಗೂ ವಾಜಿದ್ ಅವರು ಗೃಹ ಜ್ಯೋತಿ ಫಲಾನುಭವಿಗಳಿಗೆ ಶೂನ್ಯ ವಿದ್ಯುತ್ ಬಿಲ್ಲಗಳನ್ನು ವಿತರಿಸುವಲ್ಲಿ ತಾಂತ್ರಿಕ ಸಹಾಯ ಒದಗಿಸಿದರು.

Get real time updates directly on you device, subscribe now.

Comments are closed.

error: Content is protected !!