ಮೃತರ ಕುಟುಂಬಗಳಿಗೆ ಸಚಿವರಿಂದ ಪರಿಹಾರದ ಚೆಕ್ ವಿತರಣೆ

Get real time updates directly on you device, subscribe now.

ಕನಕಗಿರಿ: ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟ ಕುಟುಂಬಗಳಿಗೆ ಸ್ಥಳೀಯ ಶಾಸಕರೂ ಆದ ಜಿಲ್ಲಾ ಉಸ್ತುವಾರಿ ಸಚಿವ‌ ಶಿವರಾಜ್ ತಂಗಡಗಿ ಅವರು ಶುಕ್ರವಾರ ಪರಿಹಾರದ‌ ಚೆಕ್‌ ವಿತರಿಸಿದರು.‌

ಬಸರಿಹಾಳ ಗ್ರಾಮದ ಹೊನ್ನಮ್ಮ (60) ಹಾಗೂ ಒಂಭತ್ತು ವರ್ಷದ ಮಗು ಶ್ರುತಿ ಅವರ ಪೋಷಕರಿಗೆ ಸಚಿವರು ತಲಾ ಎರಡು ಲಕ್ಷ ರೂ.ಗಳ ಪರಿಹಾರದ ಚೆಕ್ ವಿತರಿಸಿದರು.

ಇನ್ನೂ ಇತ್ತೀಚೆಗೆ ಕರಡಿಗುಡ್ಡ ಗ್ರಾಮದಲ್ಲಿ ವಿದ್ಯುತ್ ತಗುಲಿ‌ 14 ಕುರಿ, 2 ಎತ್ತು ಮೃತಪಟ್ಟಿದ್ದ ಘಟನೆಗೆ ಸಂಬಂಧಿಸಿದಂತೆ‌ ಸರ್ಕಾರದ ವತಿಯಿಂದ 2,14,000 ರೂ. ಪರಿಹಾರದ ಚೆಕ್ ವಿತರಿಸಲಾಯಿತು.

ಬಳಿಕ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಕಳೆದ‌ ಮೇ ತಿಂಗಳಿನಲ್ಲಿ ಕಲುಷಿತ ನೀರು ಸೇವಿಸಿ ಒಂದು ಮಗು ಸೇರಿ ಮೂವರು ಮೃತಪಟ್ಟಿದ್ದರು. ಈಗಾಗಲೇ ಒಂದು ಕುಟುಂಬಕ್ಕೆ ಪರಿಹಾರದ ಚೆಕ್ ನೀಡಲಾಗಿತ್ತು. ಇದೀಗ ಇನ್ನುಳಿದ ಎರಡು ಕುಟುಂಬಗಳಿಗೆ ಚೆಕ್ ವಿತರಿಸಲಾಗಿದೆ. ಈಗಾಗಲೇ ಪ್ರಕರಣಕ್ಕೆ‌ ಸಂಬಂಧಿಸಿದಂತೆ ನಿರ್ಲಕ್ಷ್ಯತನ ತೋರಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಇನ್ನು ಮುಂದೆ ಈ ರೀತಿಯಾದ ತಪ್ಪುಗಳಾಗದಂತೆ ಅತ್ಯಂತ ಜವಬ್ದಾರಿಯುತವಾಗಿ ಸಮಸ್ಯೆಗಳನ್ನು ಪರಿಹರಿಸಲು ಕಾರ್ಯನಿರ್ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಕ್ಷೇತ್ರಕ್ಕೆ ಹೊಸ ರೂಪ; ಈ‌ ಹಿಂದೆ‌‌ ಶಾಸಕರ ಅವಧಿಯಲ್ಲಿ‌‌ ಐದು ವರ್ಷಗಳ ಕಾಲ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಚರಂಡಿ ನಿರ್ಮಾಣ, ರಸ್ತೆ ಡಾಂಬರೀಕರಣ, ವಿದ್ಯುತ್ ಸಂಪರ್ಕ ಸೇರಿದಂತೆ ಯಾವುದೇ ಮೂಲ ಸೌಲಭ್ಯ‌ ಒದಗಿಸುವ ಕೆಲಸ ನಡೆದಿಲ್ಲ. ಎರಡು ತಿಂಗಳಲ್ಲಿ ರಸ್ತೆ ಸೇರಿದಂತೆ ಮೂಲ ಸೌಲಭ್ಯಕ್ಕೆ ಒತ್ತು ನೀಡಲಾಗಿದೆ. ಚರಂಡಿ‌ ನಿರ್ಮಾಣ ಹಾಗೂ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ರೂಪುರೇಷೆ‌ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಶೀಘ್ರದಲ್ಲೇ ಕ್ಷೇತ್ರಕ್ಕೆ ಹೊಸ ರೂಪ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಚಿವರು ಸ್ಥಳೀಯ ಸಾರ್ವಜನಿಕರ ಕೊಂದು ಕೊರತೆಗಳನ್ನು ಆಲಿಸಿ‌, ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿದರು.‌
ಈ ಸಂದರ್ಭದಲ್ಲಿ ತಹಸೀಲ್ದಾರ್ ವಿಶ್ವನಾಥ್ ಮುರುಡಿ ಸೇರಿದಂತೆ ಇನ್ನಿತರ ಅಧಿಕಾರಿಗಳು‌ ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: