ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ: ಬೃಹತ್ ಪ್ರತಿಭಟನೆ
ಸಿಐಡಿ ಬೇಡ ಸಿಬಿಐಗೆ ಕೊಡಿ:ಶ್ರೀ ನಾಗಮುರ್ತೇಂದ್ರ ಸ್ವಾಮಿಜೀ
ಕೊಪ್ಪಳ ಜನವರಿ 08: ಬೀದರ್ ಜಿಲ್ಲೆಯ ವಿಶ್ವಕರ್ಮ ಸಮಾಜದ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ ಪ್ರಕರಣ ಸಿಐಡಿಗೆ ವಹಿಸಿದ ರಾಜ್ಯ ಸರಕಾರದ ತೀರ್ಮಾನ ಸರಿಯಲ್ಲ. ಸಿಐಡಿ ತನಿಖೆ ಮೇಲೆ ನಮಗೆ ಹಾಗೂ ಸಮಾಜಕ್ಕೆ ವಿಶ್ವಾಸವಿಲ್ಲ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಕೊಡಿಸಬೇಕು ಎಂದು ವಿಶ್ವಕರ್ಮ ಸಮಾಜದ ನಾಗಮೂರ್ತೇಂದ್ರ ಮಹಾಸ್ವಾಮಿಗಳು ಆಗ್ರಹಿಸಿದ್ದಾರೆ.
ಮಂಗಳವಾರ ವಿಶ್ವಕರ್ಮ ಸಮಾಜ ಜಿಲ್ಲಾಧ್ಯಕ್ಷರಾದ ನಾಗೇಶ್ ಕುಮಾರ್ ಕಂಸಾಳ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ತಾಲೂಕಿನ ಲೇಬಿಗೇರಿ ಗ್ರಾಮದ ಮದಾನೆ ಗುಂದಿ ಸಂಸ್ಥಾನ ಸರಸ್ವತಿ ಪೀಠದ ಪೀಠಾಧ್ಯಕ್ಷರಾದ ಶ್ರೀ ನಾಗಮುರ್ತೇಂದ್ರ ಮಹಾಸ್ವಾಮಿಗಳು ಮಾತನಾಡಿ,ಸಚಿನ್ ಆತ್ಮಹತ್ಯೆ ಮಾಡಿಕೊಂಡು ಸುಮಾರು ದಿನ ಕಳೆದಿವೆ. ಆದರೆ, ಪ್ರಕರಣದ ತನಿಖೆ ಸರಿಯಾಗಿ ನಡೆಯುತ್ತಿಲ್ಲ. ರಾಜ್ಯ ಸರಕಾರದಿಂದ ನ್ಯಾಯ ಸಿಗುವ ಭರವಸೆ ನಮಗೆ ಇಲ್ಲ. ಹೀಗಾಗಿ ಸಿಬಿಐ ತನಿಖೆಗೆ ವಹಿಸಿದರೆ ಮಾತ್ರ ಸತ್ಯಾಂಶ ಹೊರಬರಲಿದೆ. ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದು ಸಾಮಾಜಿಕ ಜಾಲತಾಣದಲ್ಲಿ ಸಚಿನ್ ಹಾಕಿದ್ದನ್ನು ಗಮನಿಸಿ ಆತ್ಮಹತ್ಯೆ ಒಳಗಾದ ಸಚಿನ್ ಅವರ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದರೂ ಅಧಿಕಾರಿಗಳು ಸ್ಪಂದನೆ ನೀಡಿಲ್ಲ ಎಂದು ಆರೋಪ ಮಾಡಿದ್ದಾರೆ.ಸಚಿನ್ ಕುಟುಂಬಸ್ಥರ ದೂರಿಗೆ ಸ್ಪಂದಿಸಿದ್ದರೆ ಇಂದು ಸಚಿನ್ ಪಂಚಾಳ ಸಾವು ಆಗುತ್ತಿರಲಿಲ್ಲ.ಸಿಐಡಿ ತನಿಖೆ ಮಾಡುವುದು ಬೇಡ ಸಿಬಿಐಗೆ ಕೊಡಿ ಎಂದು ಶ್ರೀ ನಾಗಮುರ್ತೇಂದ್ರ ಸ್ವಾಮಿಜೀ ಸರ್ಕಾರಕ್ಕೆ ಒತ್ತಾಯಿಸಿದರು.
ನಂತರ ಜಿಲ್ಲಾಧ್ಯಕ್ಷರಾದ ನಾಗೇಶ್ ಕುಮಾರ್ ಕಂಸಾಳ ಮಾತನಾಡಿ,ಬಡ ವಿಶ್ವಕರ್ಮ ಸಮುದಾಯದಲ್ಲಿ ಜನಿಸಿದ ಸಚಿನ್ ಉಪಜೀವನಕ್ಕಾಗಿ ಮಾಡುತ್ತಿದ್ದ ವ್ಯವಹಾರದಲ್ಲಿ ಏರುಪೇರಾಗಿ ನಿಗೂಢ ಸಾವಿನಲ್ಲಿ ಅಂತ್ಯವಾಗಿದ್ದಾನೆ. ಸಚಿನ್ ಅವಲಂಬಿತ ಕುಟುಂಬದವರು ಅನಾಥರಾಗಿ ಬೀದಿ ಪಾಲಾಗುವ ಪರಿಸ್ಥಿತಿ ಬಂದಿದೆ. ಈ ಕುಟುಂಬಕ್ಕೆ ನ್ಯಾಯ ಕೊಡಬೇಕು, ಸಚಿನ್ ಪಂಚಾಳ ಆತ್ಮಹತ್ಯೆ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿದೆ. ಪೊಲೀಸರು ಹಾಗೂ ಸಿಐಡಿ ತನಿಖೆ ಮೇಲೆ ನಮಗೆ ವಿಶ್ವಾಸವಿಲ್ಲ. ಹೀಗಾಗಿ ಸಿಬಿಐ ತನಿಖೆ ವಹಿಸಿದರೆ ಮಾತ್ರ ಸತ್ಯಾಂಶ ಹೊರಬರಲಿದೆ. ಪಾಂಚಾಳ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ, ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು. ಸರಕಾರ ಕೂಡಲೇ ಆತ್ಮಹತ್ಯೆ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ನಂತರ ಕೊಪ್ಪಳ ಎಸಿ ಕ್ಯಾ. ಮಹೇಶ್ ಮಾಲಗಿತ್ತಿ ರವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಬೃಹತ್ ಪ್ರತಿಭಟನೆಯಲ್ಲಿ ನಾಗಲಿಂಗ ಮಹಾಸ್ವಾಮಿಗಳು, ಸಿರಸಪ್ಪಯ್ಯ ಸ್ವಾಮಿಗಳು, ಮುದ್ದಾಬಳ್ಳಿಯ ಗುರುನಾಥ ಸ್ವಾಮಿಗಳು, ಗಿಣಗೇರಿಯ ಶ್ರೀಕಂಠ ಸ್ವಾಮಿಗಳು ನೇತೃತ್ವದಲ್ಲಿ ವಿಶ್ವಕರ್ಮ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಈಶಪ್ಪ ಬಡಿಗೇರ, ಜಿಲ್ಲಾ ಕಾರ್ಯಾಧ್ಯಕ್ಷ ರುದ್ರಪ್ಪ ಬಡಿಗೇರ, ವಿವಿಧ ತಾಲೂಕು ಅಧ್ಯಕ್ಷರುಗಳಾದ ದೇವೇಂದ್ರಪ್ಪ ಬಡಿಗೇರ, ಶಂಕ್ರಪ್ಪ ಬಡಿಗೇರ, ಕಾಳೇಶ ಬಡಿಗೇರ, ದೇವಪ್ಪ ಬಡಿಗೇರ, ಸೂಗೂರೇಶ್ವರ ಅಕ್ಕಸಾಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಪ್ರಕಾಶ, ಸಮಾಜದ ಮುಖಂಡರಾದ ಪ್ರಭಾಕರ ಬಡಿಗೇರ, ಕಲ್ಲೇಶ ಬಡಿಗೇರ, ದೇವೇಂದ್ರಪ್ಪ ರಾಜೂರು, ಕೃಷ್ಣಾ ಬಡಿಗೇರ, ಮೌನೇಶ ಮಾದಿನೂರು, ಶರಣಪ್ಪ ಬಡಿಗೇರ, ವೀರಭದ್ರಪ್ಪ ಬಡಿಗೇರ, ಮಂಜುನಾಥ ಬಡಿಗೇರ, ಮೌನೇಶ ಕಿನ್ನಾಳ, ಬ್ರಹ್ಮಾನಂದ ಸೇರಿದಂತೆ ಇತರರು ಪಾಲ್ಗೊಂಡಿದ್ದರು.