ಜೆಡಿಎಸ್ ಮೊದಲು ಬಿಜೆಪಿ ವಿರುದ್ಧ ಹೋರಾಡಲಿ : ಜ್ಯೋತಿ ಎಂ. ಗೊಂಡಬಾಳ ಟಾಂಗ್
ಕೊಪ್ಪಳ : ಜೆಡಿಎಸ್ ನವರು ಕಾಂಗ್ರೆಸ್ ಸರಕಾರದ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡುತ್ತಿರುವದು ನಿಜಕ್ಕೂ ಹಾಸ್ಯಾಸ್ಪದ, ಅವರು ಮೊದಲು ಬೆಲೆ ಏರಿಕೆಯನ್ನು ಗಗನಕ್ಕೆ ತೆಗೆದುಕೊಂಡು ಹೋಗಿರುವದಕ್ಕೆ ಬಿಜೆಪಿ ವಿರುದ್ಧ ಪ್ರತಿಭಟಿಸಲಿ ಎಂದು ಗ್ಯಾರಂಟಿ ಸಮಿತಿ ಸದಸ್ಯೆ, ಕಾಂಗ್ರೆಸ್ ಮುಖಂಡರಾದ ಜ್ಯೋತಿ ಎಂ. ಗೊಂಡಬಾಳ ಅವರು ವ್ಯಂಗ್ಯವಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಇಡೀ ದೇಶದಲ್ಲಿ ಎಲ್ಲ ವಸ್ತುಗಳ ಬೆಲೆಯನ್ನು ಲೆಕ್ಕಕ್ಕೆ ಸಿಗದಂತೆ ಏರಿಸಿ, ಜಿಎಸ್‌ಟಿ ಬರೆ ಹಾಕಿ ಸಾಮಾನ್ಯ ಜನರ ಬದುಕನ್ನು ಮೂರಾಬಟ್ಟೆ ಮಾಡಿರುವ ಕೇಂದ್ರದ ಬಿಜೆಪಿ ಎನ್‌ಡಿಎ ಸರಕಾರದ ವಿರುದ್ಧ ಜೆಡಿಎಸ್‌ನವರು ಹೋರಾಟ ಮಾಡಲಿ, ಅವರ ಜೊತೆಗೆ ಅಧಿಕಾರಕ್ಕಾಗಿ ಸೇರಿಕೊಂಡು ಜನರಿಗೆ ಮಂಕು ಬೂದಿ ಎರಚಿರುವ ಕೇಂದ್ರದ ಪರವಾಗಿ ನಿಂತ ಜೆಡಿಎಸ್‌ಗೆ ಕಾಂಗ್ರೆಸ್‌ನ ಬಸ್ ದರ ಏರಿಕೆ ಕುರಿತು ಮಾತನಾಡುವ ನೈತಿಕತೆಯೇ ಇಲ್ಲ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಸರಕಾರ ಇದೇ ಅಶೋಕ ಅವರು ಸಾರಿಗೆ ಸಚಿವರಾಗಿ ೨೦೦೮ ರಿಂದ ೨೦೧೨ರವರೆಗೆ ಬರೋಬ್ಬರಿ ಏಳು ಬಾರಿ ಬೆಲೆ ಏರಿಕೆ ಮಾಡಿದ್ದರು, ೨೦೦೮ ಮತ್ತು ೨೦೧೨ ರಲ್ಲಿ ಎರಡು ಬಾರಿ ಶೇ. ೧೨ ರಷ್ಟು ದರ ಏರಿಸಿ ಒಟ್ಟು ಅವರ ಅವಧಿಯಲ್ಲಿ ೪೭.೮ ರಷ್ಟು ಬಸ್ ದರ ಹೆಚ್ಚಳ ಮಾಡಿದ್ದಾರೆ.
ಆದರೆ ಸಿದ್ದರಾಮಯ್ಯ ಡಿಕೆ ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರಕಾರ ಮಹಿಳೆಯರಿಗೆ ಉಚಿತ ಬಸ್ ಸೌಕರ್ಯ ಶಕ್ತಿಯನ್ನು ಕೊಟ್ಟಿದೆ, ಕೇಂದ್ರ ಬಿಜೆಪಿ ಡೀಸೆಲ್ ಬೆಲೆ ಏರಿಸಿದ್ದು ಮತ್ತು ಸಾರಿಗೆ ನೌಕರರ ಕುಟುಂಬದ ಆರೋಗ್ಯ ರಕ್ಷಣೆಗೆ ಹೊಸ ಯೋಜನೆ ಕೆಎಸ್‌ಆರ್‌ಟಿಸಿ ಆರೋಗ್ಯ ಯೋಜನೆ ಮೂಲಕ ನಗದು ರಹಿತ ತುರ್ತು ಚಿಕಿತ್ಸೆ ಕೊಡಿಸುವ ಯೋಜನೆ ತಂದಿದ್ದಾರೆ. ಎಲ್ಲದರ ಬೆಲೆ ಹೆಚ್ಚಳ ಆಗಿರುವದರಿಂದ ಸಹಜವಾಗಿ ಬೆಲೆ ಏರಿಕೆಯಾಗಿದೆ ಎಂಬ ಸಾಮಾನ್ಯ ಜ್ಞಾನದ ಕೊರತೆ ಇದ್ದು, ಈ ಪ್ರತಿಭಟನೆಯ ಮೂಲಕ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಮತ್ತು ಯಾರೂ ಏನೇ ಅಂದರೂ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಬದುಕಿಗೆ ದೊಡ್ಡ ಆಸರೆಯಾಗಿವೆ ಎಂದು ಜ್ಯೋತಿ ಗೊಂಡಬಾಳ ಹೇಳಿದ್ದಾರೆ.