ಕಿಮ್ಸ್ ಮೆಡಿಕಲ್ ಕಾಲೇಜು ಸರಿಯಾಗಿ ನಡೆಯಬೇಕಾದರೆ ವಿವಿಧ ಸಮಿತಿಗಳ ಪಾತ್ರ ಮುಖ್ಯವಾಗಿದೆ – ಸಚಿವ ಶಿವರಾಜ ತಂಗಡಗಿ

0

Get real time updates directly on you device, subscribe now.


ಕೊಪ್ಪಳ   ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಸರಿಯಾಗಿ ನಡೆಯಬೇಕಾದರೆ ಇದರ ನಿರ್ವಹಣೆಯ ವಿವಿಧ ಸಮಿತಿಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್ ತಂಗಡಗಿ ಹೇಳಿದರು.
ಅವರು ಸೋಮವಾರ ಕೊಪ್ಪಳ ಕಿಮ್ಸ್ ನಿರ್ದೇಶಕರ ಕಛೇರಿಯಲ್ಲಿ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಕರೆದ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಜಿಲ್ಲೆಯ ಜನತೆಗೆ ಉತ್ತಮವಾದ ಆರೋಗ್ಯ ಸೌಕರ್ಯ ದೊರೆಯಬೇಕು. ಕಿಮ್ಸ್ ವೈದ್ಯರು ಜಿಲ್ಲಾ ಆಸ್ಪತ್ರೆಯ ಮೇಲುಸ್ತುವಾರಿ ವಹಿಸಿಕೊಳ್ಳಬೇಕು. ಜಿಲ್ಲಾ ಆಸ್ಪತ್ರೆಯ ಮುಖ್ಯಸ್ಥರಾಗಲು ಹಿಂಜರಿಯಬಾರದು. ಇದಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೆ, ನಮ್ಮ ಗಮನಕ್ಕೆ ತರಬೇಕು. ಜಿಲ್ಲಾ ಆಸ್ಪತ್ರೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಹಿಂದೆಟು ಹಾಕುತ್ತಿರುವ ಕಿಮ್ಸ್ ಹಿರಿಯ ವೈದ್ಯರ ಪಟ್ಟಿ ತಯಾರಿಸಿ, ಪ್ರತಿಯೊಬ್ಬರಿಗೂ ಕನಿಷ್ಠ ಎರಡು ವರ್ಷಗಳಂತೆ ನಿಯೋಜಿಸಲು ಕ್ರಮ ಕೈಗೊಳ್ಳಬೇಕು ಎಂದು ಕಿಮ್ಸ್ ನಿರ್ದೇಶಕರಿಗೆ ಸಚಿವರು ಸೂಚನೆ ನೀಡಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಸರಿಯಾದ ಚಿಕಿತ್ಸೆ ಸಿಗಬೇಕು. ವೈದ್ಯರು ತುರ್ತು ಸೇವೆಗೆ ಸದಾ ಸಿದ್ಧರಾಗಿರಬೇಕು. ತಾವು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು. ಚಿಕಿತ್ಸೆ ಲಭ್ಯವಿಲ್ಲ ಎಂದು ರೋಗಿಗಳನ್ನು ಬೇರೆಡೆ ಕಳುಹಿಸುವಂತಾಗಬಾರದು. ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನಾ ವ್ಯವಸ್ಥೆ ಕಲ್ಪಿಸಬೇಕು. ಖಾಲಿ ಇರುವ ಬೋಧಕರ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಪಡೆದುಕೊಳ್ಳಬೇಕು. ಕಿಮ್ಸ್ ಹಾಗೂ ಜಿಲ್ಲಾ ಆಸ್ಪತ್ರೆಯ ಎಲ್ಲಾ ವೈದ್ಯರು, ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಅಂದಾಗ ಮಾತ್ರ ಜನರಿಗೆ ಒಳ್ಳೆಯ ಸೇವೆ ನೀಡಬಹುದು. ಕಿಮ್ಸ್ ಸಂಸ್ಥೆಯಲ್ಲಿ ಈಗಾಗಲೇ ರಚನೆಯಾಗಿರುವ ಎಲ್ಲಾ ಸಮಿತಿಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು. ತಮ್ಮ ಯಾವುದೇ ಸಮಸ್ಯೆಗಳಿದ್ದರೆ, ನಮ್ಮ ಗಮನಕ್ಕೆ ತರಬೇಕು ಎಂದರು.
ಎಸ್ಸಿಪಿ ಟಿಎಸ್ಪಿ ಅನುದಾನವನ್ನು ಸಮರ್ಪಕವಾಗಿ ಬಳಕೆಯಾಗಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಬ್, ಪ್ರಿಂಟರ್, ಟ್ಯಾಬ್ ಹಾಗೂ ಅವರ ಕಲಿಕೆಗೆ ಅನುಕೂಲವಾಗಲು ಬೇಕಾಗುವ ಇತರೆ ವಸ್ತುಗಳನ್ನು ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಹೇಳಿದರು.
ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಜಿಲ್ಲಾ ಆಸ್ಪತ್ರೆ ಮತ್ತು ಕಿಮ್ಸ್ ನಂತಹ ದೊಡ್ಡ ಸಂಸ್ಥೆಗಳು ನಮ್ಮ ಜಿಲ್ಲೆಯಲ್ಲಿದ್ದು, ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಸಿಗಬೇಕು. ವೈದ್ಯರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಅಗತ್ಯ ಚಿಕಿತ್ಸೆ ಸಿಗಬೇಕು. ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಕಾರ್ಡ್ಗಳು ಅರ್ಹ ಫಲಾನುಭವಿಗಳಿಗೆ ಸರಿಯಾದ ಸಮಯದಲ್ಲಿ ಸಿಗುವಂತಾಗಬೇಕು ಎಂದರು.
ಈ ಸಭೆಯಲ್ಲಿ ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮಜದ್ ಪಟೇಲ್, ಜಿಲ್ಲಾಧಿಕಾರಿ ನಲಿನ್ ಅತುಲ್, ಕಿಮ್ಸ್ ನಿರ್ದೇಶಕರ ಡಾ.ವಿಜಯನಾಥ ಇಟಗಿ, ಕಿಮ್ಸ್ ಮುಖ್ಯ ಆಡಳಿತಾಧಿಕಾರಿ ಬಿ.ಕಲ್ಲೇಶ್, ನಾಮನಿರ್ದೇಶಿತ ಸದಸ್ಯರಾದ ಸಲೀಂ ಅಳವಂಡಿ, ಕಿಮ್ಸ್ ಅಧಿಕಾರೇತರ ಸದಸ್ಯರಾದ ವಿಜಯಲಕ್ಷ್ಮಿ ಸೇರಿದಂತೆ ಕಿಮ್ಸ್ನ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!