ನಿರಂತರವಾಗಿ ಕೆಲಸ ಮಾಡಿದಾಗ ಕಾಮಗಾರಿಗಳು ಮುಗಿಯುತ್ತವೆ- ಸಚಿವ ಎನ್.ಎಸ್. ಭೋಸರಾಜು
ಅವರು ಶುಕ್ರವಾರ ಕೊಪ್ಪಳ ತಾಲ್ಲೂಕಿನ ನಾರಾಯಣಪೇಟೆ ಗ್ರಾಮದ ಕೊಪ್ಪಳ-ಯಲಬುರ್ಗಾ ಕೆರೆ ತುಂಬಿಸುವ ಯೋಜನೆಯ ಮೊದಲ ಹಂತದ ಕಾಮಗಾರಿಯ ಜಾಕವೆಲ್ ಮತ್ತು ಪಂಪಹೌಸ್ ಪರಿವೀಕ್ಷಣೆ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಮಾತನಾಡಿದರು.
ಕೊಪ್ಪಳ-ಯಲಬುರ್ಗಾ ಕೆರೆ ತುಂಬಿಸುವ ಯೋಜನೆಯ ಮೊದಲ ಹಂತದ ಕಾಮಗಾರಿ ಇದಾಗಿದ್ದು 6 ಕೆರೆಗಳನ್ನು 2.83 ಕೋಟಿ ವೆಚ್ಚದಲ್ಲಿ ಮಾಡಲಾಗುತ್ತಿದೆ. ಈಗಾಗಲೇ ಈ ಭಾಗದಲ್ಲಿನ ಸಮಸ್ಯೆಗಳನ್ನು ರಿವ್ಹಿವ್ ಮಾಡಲು ಎರಡು ಸಲ ಸಭೆಗಳನ್ನು ಮಾಡಲಾಗಿದೆ. ಇದರ ಜೊತೆಗೆ ಕೊಪ್ಪಳ ಜಿಲ್ಲೆಯ ಹುಲಗಿ ಗ್ರಾಮದ ಹತ್ತಿರ ಇರುವ ಹಿರೇಹಳ್ಳ ಏತ ನೀರಾವರಿ ಯೋಜನೆ ಹಾಗೂ ಕೆರೆ ತುಂಬಿಸುವ ಕಾಮಗಾರಿಗಳು, ಭಾಣಾಪೂರ ಗ್ರಾಮದಲ್ಲಿ ಕೊಪ್ಪಳ-ಯಲಬುರ್ಗಾ ಕೆರೆ ತುಂಬಿಸುವ ಏತ ನೀರಾವರಿ ಯೋಜನೆ, ಕಡೆಕೊಪ್ಪ ಗ್ರಾಮದಲ್ಲಿ ಕುಷ್ಟಗಿ ಏತ ನೀರಾವರಿ ಯೋಜನೆ, ಈ ಎಲ್ಲಾ ಕಾಮಗಾರಿಗಳ ಪರಿವೀಕ್ಷಣೆ ನಂತರ ಶನಿವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದೆನೆ ಎಂದು ಹೇಳಿದರು.
ಕೃಷ್ಣ-ಕಾವೇರಿ ಬೇಸಿನ ಕಾಮಗಾರಿಗಳನ್ನು ಒಂದು ವರ್ಷದಲ್ಲಿ ಮುಗಿಸುವಂತೆ ಹಾಗೂ ಕೆಲಸದ ವೇಗ ಹೆಚ್ಚಿಸುವಂತೆ ಮಾಡಲಾಗುತ್ತಿದೆ. ನಮ್ಮ ಭಾಗದಲ್ಲಿಯ ಕಾಮಗಾರಿಗಳೂ ಕಾಲಮಿತಿಯಲ್ಲಿ ನಡೆಯಬೇಕು ಎಂಬ ಉದ್ದೇಶಕ್ಕಾಗಿ ವಿವಿಧ ಕಾಮಗಾರಿಗಳ ಪರಿವೀಕ್ಷಣೆಗೆ ಬಂದಿದ್ದೆನೆ. ಕಾಲಮಿತಿಯಲ್ಲಿ ಕೆಲಸ ಮಾಡದ ಗುತ್ತಿಗೆದಾರರಿಗೆ ಪೆನಾಲ್ಟಿ ಹಾಕಲಾಗುತ್ತದೆ. ಗುತ್ತಿಗೆದಾರರು ಕೆಲಸವನ್ನು ಕಾಲಮಿತಿಯಲ್ಲಿ ಮುಗಿಸಿದಾಗ ಯಾವುದೇ ಸಮಸ್ಯೆಗಳಾಗುವುದಿಲ್ಲ ವಿಳಂಬವಾದರೆ ಇನ್ನೂ ಬೇರೆ ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳಿದರು.
ಕೊಪ್ಪಳ-ಯಲಬುರ್ಗಾ ಕೆರೆ ತುಂಬಿಸುವ ಯೋಜನೆಯ ಮೊದಲ ಹಂತದ ಕಾಮಗಾರಿಯ ಜಾಕವೆಲ್ ಮತ್ತು ಪಂಪಹೌಸ್ ಪರಿವೀಕ್ಷಣೆ ಸಂದರ್ಭದಲ್ಲಿ ಸಚಿವರು ಯಾವ ತಿಂಗಳಲ್ಲಿ ಎಷ್ಟು ಕೆಲಸ ಮುಗಿಸಬೇಕು ಎಂದು ಮುಂಚಿತವಾಗಿ ತಮಲ್ಲಿ ಒಂದು ಯೋಜನೆ ಇರಬೇಕು. 18 ತಿಂಗಳಲ್ಲಿ ಮುಗಿಸುವ ಕೆಲಸವನ್ನು 6 ವರ್ಷ ಮಾಡಿದರೆ ಹೇಗೆ ಇದನ್ನು ಆದಷ್ಟು ಬೇಗನೆ ಮುಗಿಸಿ ವರದಿ ನೀಡುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ, ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ರಾಘವನ್, ಮುಖ್ಯ ಇಂಜಿನಿಯರ್ ಜಗದೀಶ್ ರಾಥೋಡ್, ಅಧೀಕ್ಷಕ ಇಂಜಿನಿಯರ್ ಲಿಂಗರಾಜ್, ಇಇ ಬಿ.ಎಸ್.ಪಾಟೀಲ್, ಇಇ ಶ್ರವಣಕುಮಾರ, ಎಇಇ.ಗಳಾದ ಜೆ.ಎನ್.ಜೋಳಗೊಂಡ, ದೇವೇಂದ್ರಪ್ಪ ಹಾಗೂ ರಷ್ಮೀ, ಜೂನಿಯರ್ ಇಂಜಿನಿಯರ್ ಪ್ರಕಾಶ ಪಾಟೀಲ್ ಸೇರಿದಂತೆ ಇತರೆ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.