ಮಹಿಳೆಯರು, ದಲಿತರ ಅಸ್ಮಿತೆಗೆ ಎಂಬತ್ತರ ದಶಕ ಸಾಕ್ಷಿ: ಡಾ.ಹನುಮಂತಯ್ಯ
ರಾಜ್ಯೋತ್ಸವ, ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ರಂಗಸಿರಿ ಗೌರವ
ಹಾಸನ:ಎಂಬತ್ತರ ದಶಕ ಬಹು ಚಳವಳಿಗಳ ಪರ್ವಕಾಲ. ಈ ಕಾಲಘಟ್ಟದಲ್ಲಿ ಅನೇಕ ಪ್ರಗತಿಪರ ಹಾಗೂ ಜನಪರ ಚಳವಳಿಗಳು ಹುಟ್ಟಿ ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಅಪಾರ ಸಂಖ್ಯೆಯಲ್ಲಿ ಸಾಮಾಜಿಕ ಸ್ಪಂದನೆಯೊಂದಿಗೆ ಮೊದಲಬಾರಿಗೆ ಬರೆಯತೊಡಗಿದ್ದರಿಂದ ಇದು ತುಳಿತಕ್ಕೊಳಗಾದವರ ಅಸ್ಮಿತೆಯ ಕಾಲ ಎಂದು ರಾಜ್ಯಸಭಾ ಮಾಜಿ ಸದಸ್ಯ ಮತ್ತು ಚಿಂತಕ ಡಾ. ಎಲ್. ಹನುಮಂತಯ್ಯ ಹೇಳಿದರು.
ಎಂಬತ್ತರ ದಶಕ ಚಳವಳಿಗಳಿಗೆ ಹೇಗೋ, ಹೊಸ ದನಿಗೂ ಕಿವಿಗೊಟ್ಟ ಕಾಲ. ದಲಿತ – ಬಂಡಾಯ ಚಳವಳಿಗಳು ಹೊಸ ಆಶಯ ಹುಟ್ಟಿಸಿದ್ದವು. ಆ ಕಾಲಘಟ್ಟದಲ್ಲೇ ಹುಟ್ಟಿದ ಲಂಕೇಶ ಪತ್ರಿಕೆ ದಲಿತರು, ಮಹಿಳೆಯರಿಗೆ ದನಿಯಾಯಿತು ಎಂದರು.
ಹಾಸನದ ಗಾಂಧಿ ಭವನದಲ್ಲಿ ರಂಗಸಿರಿ ಹಾಸನ ಮತ್ತು ಕಾರ್ಯನಿರತ ಪತ್ರಕರ್ತರ ಸಂಘ ಸೋಮವಾರ ಏರ್ಪಡಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಚ್.ಆರ್. ಸ್ವಾಮಿ ಹಾಗೂ ಸುವರ್ಣ ಮಹೋತ್ಸವ ಪ್ರಶಸ್ತಿ ಪಡೆದ ಎಚ್.ಬಿ.ಮದನಗೌಡ, ಡಾ. ಬಾನು ಮುಷ್ತಾಕ್ ಅವರನ್ನು ಅಭಿನಂದಿಸಿ ಮಾತಾಡಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಚ್.ಆರ್.ಸ್ವಾಮಿ ಅವರು, ಸಮಾಜದಲ್ಲಿ ತೀರ ಅವಮಾನಕ್ಕೆ ಒಳಗಾದ, ನಿರ್ಲ್ಯಕ್ಷ್ಯಕ್ಕೆ ಗುರಿಯಾದ ಸಮುದಾಯದಿಂದ ಬಂದವರು. ಕೊರಚ ಸಮುದಾಯದಲ್ಲಿ ಮೊಟ್ಟ ಮೊದಲ ವಿದ್ಯಾವಂತ. ಇವತ್ತಿಗೂ ಅಲ್ಲಿ ಪಿಎಚ್ಡಿ ಮಾಡಿದವರು ಇಲ್ಲ. ಕನ್ನಡದಲ್ಲಿ ಎಂ.ಎ ಮಾಡಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ, ರಾಜ್ಯದಾದ್ಯಂತ ವೈಜ್ಞಾನಿಕ ಅರಿವು ಮೂಡಿಸುವ ಕೆಲಸ ಮಾಡಿ, ಪರಿಸರವಾದಿಯಾಗಿ, ಸಮಾಜದ ಸ್ವಾಸ್ಥ್ಯ ಕಾಪಾಡಿದ ಮಾನವೀಯ ವ್ಯಕ್ತಿ. ಸಮಾಜದ ಕಟ್ಟಕಡೆಯ ವ್ಯಕ್ತಿಯ ದ್ವನಿಯನ್ನು ಕೇಳಿಸಿಕೊಳ್ಳುವ ಮೂಲಕ ಅವರಿಗೆ ಆಸರೆಯಾಗಿ ಕೆಲಸ ಮಾಡಿದವರು ಸ್ವಾಮಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತರಾದ ಎಚ್.ಬಿ.ಮದನಗೌಡರು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಅಪಾರ ಕೆಲಸ ಮಾಡಿ, ಪತ್ರಕರ್ತರ ಸಂಘಟನೆಯಲ್ಲೂ ತೊಡಗಿದ್ದು, ಸಮಾಜಮುಖಿ ಚಟುವಟಿಕೆಯ ಮೂಲಕ ಮರೆಯದ ಕೆಲಸ ಮಾಡಿದ್ದಾರೆ. ಸದಾ ಕ್ರೀಯಾಶೀಲವಾಗಿರುವ ಸ್ನೇಹಜೀವಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಮೊದಲ ಬಾರಿಗೆ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ ಅನಾವರಣವಾಗಿದ್ದು ಬಾನು ಮುಷ್ತಾಕ್ ಅವರಿಂದ. ಸಂಪ್ರದಾಯ ಹಾಗೂ ಧರ್ಮದ ಚೌಕಟ್ಟಿನಲ್ಲಿ ಬಂಧಿತವಾಗಿದ್ದ ಮುಸ್ಲಿಂ ಮಹಿಳೆಯರು ಮುಕ್ತವಾಗಿ ಬರೆದು ತಮ್ಮ ಧರ್ಮದ ಒಳಗಿನ ವೈರುಧ್ಯಗಳನ್ನು, ಶೋಷಣೆಯನ್ನು ಮುಕ್ತವಾಗಿ ತೆರೆದಿಟ್ಟವರಲ್ಲಿ ಬಾನು ಪ್ರಮುಖರು ಎಂದು ಪ್ರಶಂಸಿದರು. ಅವರು ವೃತ್ತಿಯಲ್ಲಿ ವಕೀಲರಾಗಿ, ಕತೆ, ಲೇಖನ, ಕಾವ್ಯ, ಪತ್ರಿಕಾ ವರದಿ ಮೂಲಕ ಜೀವಂತವಾಗಿದ್ದಾರೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಹಾಸನದ ನೆಲೆಯಲ್ಲಿ ನಿಂತು ಕೆಲಸ ಮಾಡಿರುವ ಎಚ್.ಆರ್.ಸ್ವಾಮಿ, ಎಚ್.ಬಿ.ಮದನಗೌಡ ಮತ್ತು ಬಾನುಮುಷ್ತಾಕ್ ಅವರು ಅವರದೇ ಸಾಧನೆ ಮತ್ತು ಸೇವೆ ಮೂಲಕ ಗಮನ ಸೆಳೆದಿರುವುದನ್ನು ಸರ್ಕಾರ ಗುರುತಿಸಿದೆ. ಅದಕ್ಕಾಗಿ ಅವರಿಗೆ ಈ ವೇದಿಕೆಯಲ್ಲಿ ಅಭಿನಂದಿಸಲಾಗುತ್ತಿದೆ ಎಂದರು.
ಸಮಾರಂಭದಲ್ಲಿ ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್ ಅವರು ಮಾತನಾಡಿ ಮೂವರು ಸನ್ಮಾನಿತರಿಗೂ ಶುಭ ಹಾರೈಸಿದರು.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಹೊರ ತಂದಿರುವ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ವಿಶೇಷ ಸಂಚಿಕೆಯನ್ನು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜಿತಾ, ಜಿಲ್ಲಾ ವಾರ್ತಾಧಿಕಾರಿ ಮೀನಾಕ್ಷಮ್ಮ ಅವರು ಬಿಡುಗಡೆ ಮಾಡಿದರು.
ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಚ್.ವೇಣುಕುಮಾರ್, ಮಾಜಿ ಅಧ್ಯಕ್ಷ ರವಿ ನಾಕಲಗೂಡು, ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಚ್.ಟಿ.ಮೋಹನಕುಮಾರ್, ಕೆ.ಎಂ.ಹರೀಶ್, ಪ್ರಧಾನ ಕಾರ್ಯದರ್ಶಿ ಬಿ.ಸಿ.ಶಶಿಧರ್, ಹೆತ್ತೂರು ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು