ಡಿ.17 ರಂದು ನಮ್ಮ ನಡಿಗೆ ಬೆಳಗಾವಿ ಕಡೆಗೆ : ಯಲ್ಲಪ್ಪ ಹಳೇಮನಿ
ಕೊಪ್ಪಳ : ಸಂವಿಧಾನಬದ್ಧ ಸಾಮಾಜಿಕ ನ್ಯಾಯಕ್ಕಾಗಿ ಹಾಗೂ ದಲಿತರಿಗೆ ಮೀಸಲಿಟ್ಟಿರುವ ಅನುದಾನ ಸಮರ್ಪಕ ಬಳಕೆಗಾಗಿ ಒತ್ತಾಯಿಸಿ ಇದೇ ಡಿಸೆಂಬರ್ 17ರಂದು ಮಂಗಳವಾರ ಬೆಳಿಗ್ಗೆ 11:30ಕ್ಕೆ ಬೆಳಗಾವಿಯ ಡಾ.ಬಿ.ಆರ್ .ಅಂಬೇಡ್ಕರ್ ಉದ್ಯಾನವನದಿಂದ ಸುವರ್ಣಸೌಧದವರೆಗೆ ಜನ ಜಾಗೃತಿ ಸಂಘರ್ಷ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ ) ರಾಜ್ಯ ಸಂಘಟನಾ ಸಂಚಾಲಕ ಯಲ್ಲಪ್ಪ ಹಳೇಮನಿ ಹೇಳಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಎಸ್ ಸಿಪಿ- ಟಿಎಸ್ ಪಿ ಅನುದಾನವನ್ನು ಅನ್ಯ ಯೋಜನೆಗಳಿಗೆ ಬಳಸದೆ ದಲಿತರ ಅಭಿವೃದ್ಧಿಗಾಗಿ ಬಳಸಬೇಕು ಹಾಗೂ ನಿರ್ಲಕ್ಷ ತೋರುವ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು,ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯುವಲ್ಲಿ ವಿಫಲವಾಗಿರುವ ಜಿಲ್ಲಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇರ ಹೊಣೆಗಾರನಾಗಿ ಮಾಡಿ ಕ್ರಮ ಕೈಗೊಳ್ಳಬೇಕು,ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಪ್ರಕಾರ ಸುಪ್ರೀಂಕೋರ್ಟ್ ತೀರ್ಪಿನಂತೆ ಕೂಡಲೇ ಒಳ ಮೀಸಲಾತಿ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು,ಪ್ರತಿನಿತ್ಯ ದಲಿತರ ಮೇಲೆ ದೌರ್ಜನ್ಯ ದಬ್ಬಾಳಿಕೆ ಅತ್ಯಾಚಾರ ಕೊಲೆ ಬಹಿಷ್ಕಾರದಂತ ಪ್ರಕರಣಗಳು ನಡೆಯುತ್ತಿರುವುದರಿಂದ ಕೊಪ್ಪಳ ಜಿಲ್ಲೆಯನ್ನು ಅಸ್ಪೃಶ್ಯತಾಚರಣೆ ಜಿಲ್ಲೆಯ ಎಂದು ಘೋಷಣೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ ) ಜಿಲ್ಲಾ ಸಂಚಾಲಕ ಸಿ.ಕೆ.ಮರಿಸ್ವಾಮಿ ಬರಗೂರು ಮಾತನಾಡಿ ನಮ್ಮ ನಡಿಗೆ ಬೆಳಗಾವಿ ಸುವರ್ಣಸೌಧದ ಕಡೆಗೆ ಜನಜಾಗೃತಿ ಸಂಘರ್ಷ ರ್ಯಾಲಿಗೆ ಪ್ರಗತಿಪರ ಚಿಂತಕರು, ಹೋರಾಟಗಾರರು, ಮಹಿಳಾ ಪಾದಾಧಿಕಾರಿಗಳು, ಸಂಘಟನೆಯ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ ) ಮುಖಂಡರಾದ ಪ್ರಕಾಶ್ ದೊಡ್ಡಮನಿ,ರಮೇಶ್ ,ರವಿಚಂದ್ರ,ಮಲ್ಲೇಶ್ ಬಂಡಿ ಉಪಸ್ಥಿತರಿದ್ದರು.