ವಾಸವಿ ಯುವಜನ ಸಂಘ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದ ಅಧ್ಯಕ್ಷೆ ರೂಪ ರಾಣಿ
.
ಗಂಗಾವತಿ: ಇಲ್ಲಿನ ಆರ್ಯವೈಶ್ಯ ಸಮಾಜದ ವಾಸವಿ ಯುವಜನ ಸಂಘದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ರೂಪ ರಾಣಿ ಲಕ್ಷ್ಮಣ್ ಅವರು ಸೋಮವಾರದಂದು ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ನಗರೇಶ್ವರ ದೇವರ ಹೆಸರಿನಲ್ಲಿ ಪ್ರಮಾಣವಚನ ಬೋಧಿಸಿದರು.
ಬಳಿಕ ಮಾತನಾಡಿದ ಅವರು ಇಂದಿನ ಯುವಕರೇ ನಾಳಿನ ಸಮಾಜದ ಉಸ್ತುವಾರಿಯಾಗಲಿದ್ದು, ಈ ಹಿನ್ನೆಲೆಯಲ್ಲಿ ಯುವಕರಿಗೆ ಧಾರ್ಮಿಕ ಮನೋಭಾವನೆ ಬೆಳೆಸಿಕೊಳ್ಳುವುದರ ಜೊತೆಗೆ ಸಮಾಜದ ಸಂಘಟನೆ, ಸಮಾಜಮುಖಿ ಕಾರ್ಯಗಳಿಗೆ ಅವಕಾಶ ಕಲ್ಪಿಸುವುದರ ಮೂಲಕ ಅತ್ಯುತ್ತಮವಾದ ನಾಯಕತ್ವದ ಗುಣಲಕ್ಷಣಗಳನ್ನು ಬೆಳೆಸುವ ಉದ್ದೇಶದಿಂದ ವಾಸವಿ ಯುವಜನ ಸಂಘದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಸೇರಿದಂತೆ ಸದಸ್ಯರುಗಳಿಗೆ ಅವಕಾಶ ಹಾಗೂ ವೇದಿಕೆಯನ್ನು ಕಲ್ಪಿಸಿಕೊಡಲಾಗಿದೆ ಎಂದು ಸಮಗ್ರ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಯುವಜನ ಸಂಘದ ಅಧ್ಯಕ್ಷರಾದ ಪ್ರಸಾದ್ ಪಾನ್‌ಘಂಟೆ ಮಾತನಾಡಿ ಆರ್ಯವೈಶ್ಯ ಸಮಾಜದ ಸವಾಂಗಿಣ ಅಭಿವೃದ್ಧಿಗೆ ಹಿರಿಯರ ಮಾರ್ಗದರ್ಶನ, ಸಲಹೆ ಪಡೆದು, ತಮ್ಮ ತಂಡ ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಯುವಜನ ಸಂಘದ ಉಪಾಧ್ಯಕ್ಷ ಸಂದೀಪ್ ಇಂದರಗಿ, ಖಜಾಂಚಿ ವೀರೇಶ್ ಇಲ್ಲೂರ, ಕಾರ್ಯದರ್ಶಿ ಮಂಜುನಾಥ್ ಇಲ್ಲೂರ, ಸಹ ಕಾರ್ಯದರ್ಶಿ ಸೋಮರಾಜ್ ದರೋಜಿ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಪ್ರಮಾಣ ವಚನವನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಕಾರ್ಯದರ್ಶಿ ಈಶ್ವರ ಶೆಟ್ಟಿ, ಲಕ್ಷ್ಮಣ ರಾಯಚೂರು, ವಾಸು ಸೇರಿದಂತೆ ಸಮಾಜ ಬಾಂಧವರು ಪಾಲ್ಗೊಂಡಿದ್ದರು.