“ಶ್ರೀ ಗವಿಸಿದ್ಧೇಶ್ವರ ರೈಲು ನಿಲ್ದಾಣ” ಹೆಸರಿಡುವುದು ಬೇಡ -ಶ್ರೀ ಗವಿಮಠದ ಪ್ರಕಟಣೆ
ಈ ಮೂಲಕ ಸದ್ಭಕ್ತ ವೃಂದ ಹಾಗು ಸಂಘ-ಸಂಸ್ಥೆಗಳಿಗೆ ತಿಳಿಸುವುದೆನೆಂದರೆ ತಾವು ಕೊಪ್ಪಳ ರೈಲು ನಿಲ್ದಾಣಕ್ಕೆ “ಶ್ರೀ ಗವಿಸಿದ್ಧೇಶ್ವರ ರೈಲು ನಿಲ್ದಾಣ” ಎಂಬ ಹೆಸರನ್ನಿಡಬೇಕೆಂದು ಜನಪ್ರತಿನಿಧಿಗಳಿಗೆ, ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು ದಿನಾಂಕ 10/12/2024 ಮಂಗಳವಾರದ ಎಲ್ಲಾ ದಿನಪತ್ರಿಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುತ್ತದೆ. ತಮಗೆ ತಿಳಿದಿರುವಂತೆ 3 ವರ್ಷಗಳ ಹಿಂದೆಯೇ “ಶ್ರೀ ಗವಿಸಿದ್ಧೇಶ್ವರ ರೈಲು ನಿಲ್ದಾಣ” ಎಂದು ಕೊಪ್ಪಳ ರೈಲು ನಿಲ್ದಾಣಕ್ಕೆ ನಾಮಕರಣ ಮಾಡಬೇಕೆಂದು ಅಭಿಯಾನ ನಡೆಸಿದಾಗ, ಶ್ರೀಮಠದಿಂದ ದಿನಾಂಕ 16/03/2021 ರಲ್ಲಿಯೇ ಪತ್ರಿಕೆ ಹಾಗು ಸಾಮಾಜಿಕ ಜಾಲತಾಣಕ್ಕೆ ಮಾಹಿತಿ ನೀಡಿ, ಯಾವುದೇ ಕಾರಣಕ್ಕೂ ಸಾರ್ವಜನಿಕ ಸ್ಥಳ, ನಿಲ್ದಾಣ, ವಿಶ್ವ ವಿದ್ಯಾಲಯ, ಸರ್ಕಲ್‍ಗಳಿಗೆ ಶ್ರೀ ಗವಿಸಿದ್ಧೇಶ್ವರನ ಹೆಸರಿಡುವುದು ಬೇಡ ಏಕೆಂದರೆ ಗವಿಸಿದ್ಧೇಶ ನಿಮ್ಮ ಮನೆಯ ದೇವರು, ಮನದ ದೇವರು, ಎಲ್ಲರ ಹೃದಯದಲ್ಲಿಯೇ ಆತನಿರುವಾಗ ಮತ್ತೆ ಪದೇ-ಪದೇ ಬೇಡವಾದ ವಿಷಯವನ್ನು ಮೊದಲೇ ಪ್ರಕಟಣೆ ಮೂಲಕ ತಿಳಿಸಿದ ವಿಷಯವನ್ನು ಚರ್ಚಿಸುವುದು ಅರ್ಥವಿಲ್ಲದ್ದು. ಕೊಪ್ಪಳ ನಗರದ ಯಾವುದೇ ಸಾರ್ವಜನಿಕ ಸ್ಥಳಕ್ಕಾಗಿ, ಈ ನೆಲಕ್ಕಾಗಿ, ದುಡಿದ, ಮಡಿದ, ಸೇವೆಸಲ್ಲಿಸಿದ ಯಾವುದೇ ಮಹನೀಯರ ಹೆಸರನ್ನಾದರು ಇಡಿ. ಅವರೆಲ್ಲರ ಹೃದಯದಲ್ಲಿ ಗವಿಸಿದ್ಧೇಶ್ವರನೇ ಇರುವಾಗ ಪ್ರತ್ಯೇಕಿಸಿ ನೋಡುವ ದೃಷ್ಟಿಕೋನ ಒಳ್ಳೆಯದಲ್ಲ. ಮುಂದೆಯೂ ಸಹಿತ ಇಂತಹ ಯಾವುದೇ ಅನಗತ್ಯ ಕಾರ್ಯಗಳನ್ನು ಮಾಡಬೇಡಿ, ಸಮಾಜದಲ್ಲಿ ಮಾಡಲು ಸಾವಿರಾರು ಪುಣ್ಯದ ಕೆಲಸಗಳಿವೆ, ಅದು ಆತನ ಸೇವೆಯೆಂದೇ ಮಾಡೋಣ. “ಆತನ ಹೆಸರು ನಿಮ್ಮ ಉಸಿರಿನಲ್ಲಿರುವಾಗ ಮತ್ತೊಂದಕ್ಕೆ ಹೆಸರೇಕೆ?” ಇದು ಸಮಸ್ತ ಸದ್ಭಕ್ತರಲ್ಲಿ ವಿನಮ್ರ ವಿನಂತಿ ಎಂದು ಈ ಮೂಲಕ ಶ್ರೀಗವಿಮಠದ ಪ್ರಕಟಣೆ ತಿಳಿಸಿದೆ.