ತುಂಗಭದ್ರಾ ಜಲಾಶಯದಿಂದ ವಿವಿಧ ಕಾಲುವೆಗಳಿಗೆ ನೀರು ಬಿಡುಗಡೆ

Get real time updates directly on you device, subscribe now.


ಕೊಪ್ಪಳ  : ಸರ್ಕಾರದ ನಿರ್ದೇಶನದಂತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರುಗಳ ನಿರ್ದೇಶನದಂತೆ ಮತ್ತು ಜನ ಪ್ರತಿನಿಧಿಗಳ ಕೋರಿಕೆಯ ಮೇರೆಗೆ 2023-24ನೇ ಸಾಲಿನ ಮುಂಗಾರು ಹಂಗಾಮಿಗೆ ತುಂಗಭದ್ರಾ ಜಲಾಶಯದಿಂದ ವಿವಿಧ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ನೀರಾವರಿ ನಿಗಮ ನಿಯಮಿತದಿಂದ ತುಂಗಭದ್ರಾ ಯೋಜನಾ ವೃತ್ತ ಮುನಿರಾಬಾದ್‌ನ ಅಧೀಕ್ಷಕ ಅಭಿಯಂತರರು ಹಾಗೂ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ಎಲ್.ಬಸವರಾಜ್ ಅವರು ತಿಳಿಸಿದ್ದಾರೆ.
ಪ್ರಸ್ತುತ ತುಂಗಭದ್ರಾ ಜಲಾಶಯದಲ್ಲಿ 83.18 ಟಿ.ಎಂ.ಸಿಯಷ್ಟು ನೀರು ಸಂಗ್ರಹ ಇದ್ದು, ಒಳ ಹರಿವು 21,492 ಕ್ಯೂಸೆಕ್ ಇರುತ್ತದೆ. ಜಲಾಶಯದ ನೀರಿನ ಲಭ್ಯತೆ ಆಧರಿಸಿ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ.
*ಕಾಲಾವಧಿ ಕಾಲುವೆವಾರು:* ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಆಗಸ್ಟ್ 03ರಿಂದ ಸರಾಸರಿ 3000 ಕ್ಯೂಸೆಕ್ಸ್ನಂತೆ (ಕುಡಿಯುವ ನೀರಿಗಾಗಿ ಗಣೇಕಲ್ ಜಲಾಶಯ ತುಂಬುವವರೆಗೆ) ಅಥವಾ ಕಾಲುವೆಯಡಿ ಲಭ್ಯತೆ ಇರುವವರೆಗೆ (ಇದರಲ್ಲಿ ಯಾವುದು ಮೊದಲು ಅದು ಅನ್ವಯ) ನೀರು ಹರಿಸಲಾಗುವುದು.
ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಆಗಸ್ಟ್ 03ರಿಂದ ಸರಾಸರಿ 1200 ಕ್ಯೂಸೆಕ್ಸನಂತೆ ಅಥವಾ ಕಾಲುವೆಯಡಿ ಲಭ್ಯತೆ ಇರುವವರೆಗೆ (ಇದರಲ್ಲಿ ಯಾವುದು ಮೊದಲು ಅದು ಅನ್ವಯ) ನೀರು ಹರಿಸಲಾಗುವುದು.
ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಆಗಸ್ಟ್ 03ರಿಂದ ಸರಾಸರಿ 650 ಕ್ಯೂಸೆಕನಂತೆ ಅಥವಾ ಕಾಲುವೆಯಡಿ ಲಭ್ಯತೆ ಇರುವವರೆಗೆ (ಇದರಲ್ಲಿ ಯಾವುದು ಮೊದಲು ಅದು ಅನ್ವಯ) ನೀರು ಹರಿಸಲಾಗುವುದು.
ರಾಯ ಬಸವಣ್ಣ ಕಾಲುವೆಗೆ ಜೂನ್ 01ರಿಂದ ಸರಾಸರಿ 250 ಕ್ಯೂಸೆಕ್ಸ್ ಅಥವಾ ಈ ಕಾಲುವೆಯಡಿ ನೀರು ಲಭ್ಯವಿರುವವರೆಗೆ (ಇದರಲ್ಲಿ ಯಾವುದು ಮೊದಲು ಅದು ಅನ್ವಯ) ನೀರು ಹರಿಸಲಾಗುತ್ತಿದೆ.
ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಆಗಸ್ಟ್ 03ರಿಂದ ಸರಾಸರಿ 25 ಕ್ಯೂಸೆಕನಂತೆ ಅಥವಾ ಕಾಲುವೆಯಡಿ ಲಭ್ಯತೆ ಇರುವವರೆಗೆ (ಇದರಲ್ಲಿ ಯಾವುದು ಮೊದಲು ಅದು ಅನ್ವಯ) ನೀರು ಹರಿಸಲಾಗುವುದು.
*ರೈತಭಾಂದವರಲ್ಲಿ ಮನವಿ:* ರೈತಭಾಂಧವರು ಅಧಿಕೃತ ಅಚ್ಚುಕಟ್ಟು ಪ್ರದೇಶದಲ್ಲಿ ನಿಗಧಿಪಡಿಸಿದ ಬೆಳೆಗಳನ್ನು ಮಾತ್ರ ಬೆಳೆಯಬೇಕು. ಬೆಳೆ ಉಲ್ಲಂಘನೆ ಮಾಡುವುದು, ಕಾಲುವೆ ಜಾಲದ ಗೇಟ್‌ಗಳನ್ನು ಹಾನಿ ಮಾಡುವುದು, ಎಸ್ಕೇಪ್‌ಗಳ ಮೂಲಕ ಹಳ್ಳಕ್ಕೆ ನೀರು ಹರಿಸುವುದು, ಸೈಫನ್‌ಗಳ ಮೂಲಕ ಪಂಪ್ ಸೆಟ್‌ಗಳ ಮೂಲಕ ಮತ್ತು ನಿರ್ಮಿಸಿರುವ ಬಾವಿಗಳ ಮೂಲಕ ನೀರು ಕೊಂಡೋಯ್ಯುವುದನ್ನು ಹಾಗೂ ಅನಧಿಕೃತ ಬೆಳೆ ಬೆಳೆಯುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ಈ ರೀತಿ ಉಲ್ಲಂಘನೆ ಮಾಡಿದಲ್ಲಿ ಅವರ ವಿರುದ್ಧ ಕಾನೂನಿನ ಕ್ರಮ ಜರುಗಿಸಲಾಗುವುದು. ಕಾರಣ ರೈತ ಬಾಂಧವರು ಸಮರ್ಪಕ ನೀರು ನಿರ್ವಹಣೆಗೆ ಇಲಾಖೆಯೊಡನೆ ಸಹಕರಿಸಲು ಈ ಮೂಲಕ ಕೋರಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!