ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಅಭಿವೃದ್ಧಿ ಪಡಿಸಲು ಸಂಸದ ಸಂಗಣ್ಣ ಮನವಿ ಸಲ್ಲಿಕೆ
ಗಂಗಾವತಿ ರೈಲು ನಿಲ್ದಾಣ ಅಭಿವೃದ್ಧಿಗೆ ಮನವಿ
ಆ.6 ರಂದು ರೈಲು ನಿಲ್ದಾಣ ಅಭಿವೃದ್ಧಿಗೆ ಚಾಲನೆ:
ಕೊಪ್ಪಳ ಹಾಗೂ ಮುನಿರಾಬಾದ್ ರೈಲು ನಿಲ್ದಾಣಗಳು ಅಮೃತ ಭಾರತ ಸ್ಟೇಷನ್ ಯೋಜನೆಗೆ ಆಯ್ಕೆಯಾಗಿದ್ದು, ಆ. 6 ರಂದು ರೈಲು ನಿಲ್ದಾಣಗಳ ಮರು ಅಭಿವೃದ್ಧಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚಾಲನೆ ನೀಡಲಿದ್ದಾರೆ. ದೀರ್ಘಾವಧಿಯ ದೃಷ್ಟಿಯೊಂದಿಗೆ ನಿರಂತರ ಆಧಾರದ ಮೇಲೆ ನಿಲ್ದಾಣಗಳ ಅಭಿವೃದ್ಧಿಯಾಗಲಿದೆ. ಮರು ಅಭಿವೃದ್ಧಿ ಅಡಿಗಲ್ಲು ಕಾರ್ಯಕ್ರಮದಲ್ಲಿ ಸಂಸದ ಕರಡಿ ಸಂಗಣ್ಣ ಸೇರಿ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಕೊಪ್ಪಳ: ಭತ್ತದ ನಾಡು ಗಂಗಾವತಿ ರೈಲು ನಿಲ್ದಾಣವನ್ನು ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಅಭಿವೃದ್ಧಿ ಪಡಿಸಲು ಕೊಪ್ಪಳ ಲೋಕಸಭಾ ಸಂಸದ ಕರಡಿ ಸಂಗಣ್ಣ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.
ನವದೆಹಲಿಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾದ ಸಂಸದ ಕರಡಿ ಸಂಗಣ್ಣ ಅವರು, ಗಂಗಾವತಿ ರೈಲು ನಿಲ್ದಾಣ ಅಭಿವೃದ್ಧಿ ಯಿಂದ ಅಂಜನಾದ್ರಿಗೆ ತೆರಳುವ ಭಕ್ತರ ಸಂಖ್ಯೆ ಅಧಿಕವಾಗಲಿದೆ ಎಂದು ಸಚಿವರ ಗಮನಕ್ಕೆ ತಂದಿದ್ದು, ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ. ಮನವಿ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು, ಸಂಸದ ಅಣ್ಣಸಾಹೇಬ್ ಜೊಲ್ಲೆ, ತೇಜಸ್ವಿ ಸೂರ್ಯ ಉಪಸ್ಥಿತರಿದ್ದರು.
ಈ ಕುರಿತು ಪ್ರಕಟಣೆ ನೀಡಿರುವ ಸಂಸದ ಸಂಗಣ್ಣ ಕರಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಕೊಪ್ಪಳ ಲೋಕಸಭಾ ಕ್ಷೇತ್ರದ ರೈಲ್ವೆ ಯೋಜನೆಗಳಿಗೆ ಬುಲೆಟ್ ಟ್ರೈನ್ ವೇಗ ದೊರೆತಿದೆ. ನನ್ನ ಮನವಿ ಮೇರೆಗೆ ಕೊಪ್ಪಳ ಹಾಗೂ ಮುನಿರಾಬಾದ್ ರೈಲು ನಿಲ್ದಾಣಗಳು ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಆಯ್ಕೆಯಾಗಿವೆ. ಇವುಗಳ ಜತೆಗೆ ಗಂಗಾವತಿ ರೈಲು ನಿಲ್ದಾಣ ಸೇರ್ಪಡೆಗೊಳಿಸಲು ಮನವಿ ಸಲ್ಲಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಕಳೆದ 70 ವರ್ಷದಿಂದ ಆಗದ ರೈಲ್ವೆ ಯೋಜನೆಗಳನ್ನು ಕೇವಲ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಮಾಡಲಾಗಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಒಂದೇ ತಾಲೂಕಿಗೆ ಸೀಮಿತವಾಗಿದ್ದ ರೈಲ್ವೆ ಯೋಜನೆಯನ್ನು 6 ತಾಲೂಕಿಗೆ ವಿಸ್ತರಿಸಲಾಗಿದೆ. ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ರೈಲ್ವೆ ಯೋಜನೆ ವಿಸ್ತರಿಸಲಾಗಿದೆ. ಇದು ಬಿಜೆಪಿ ಸರ್ಕಾರದ ಬದ್ಧತೆಯಾಗಿದೆ. ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಕೊಪ್ಪಳ ಹಾಗೂ ಮುನಿರಾಬಾದ್ ರೈಲು ನಿಲ್ದಾಣಗಳಿಗೆ ತಲಾ 20 ಕೋಟಿ ರೂ. ಬಿಡುಗಡೆಯಾಗಲಿದೆ. ಈ ಭಾಗದ ಐತಿಹಾಸಿಕ ಸ್ಮಾರಕಗಳ ಚಿತ್ರದಂತೆ ರೈಲು ನಿಲ್ದಾಣದ ಮುಂಭಾಗ ಅಭಿವೃದ್ಧಿಯಾಗಲಿದೆ ಎಂದರು.
ರೈಲ್ವೆ ಗೇಟ್ ಗಳಲ್ಲಿ ವಾಹನ ದಟ್ಟಣೆ ಹೆಚ್ಚಳವಾಗುತ್ತಿದ್ದು, ಇದನ್ನು ತಡೆಯಲು ಮೇಲ್ಸೆತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡುತ್ತಿದೆ. ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ರೈಲ್ವೆ ಯೋಜನೆಗಳ ಬಗ್ಗೆ ಕೇಂದ್ರ ಸಚಿವರನ್ನು ಭೇಟಿಯಾದ ತಕ್ಷಣವೇ ಆ ಯೋಜನೆಗೆ ಅನುಮೋದನೆ ಸಿಗುತ್ತಿದೆ. ಸಚಿವರು ಜಿಲ್ಲೆಯ ಅಭಿವೃದ್ಧಿ ಗೆ ಸ್ಪಂದಿಸುತ್ತಿದ್ದಾರೆ. ಕೇಂದ್ರ ಸಚಿವರಿಗೆ ಜಿಲ್ಲೆಯ ಜನತೆ ಪರವಾಗಿ ಅಭಿನಂದನೆಗಳು. ಜನತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ಕೆಲಸಗಳನ್ನು ನೋಡಿದ್ದಾರೆ. ಮತ್ತೊಮ್ಮೆ ಆಶೀರ್ವಾದ ಮಾಡಲಿದ್ದಾರೆ ಎಂದರು.
ರೈಲ್ವೆ ನಿಲ್ದಾಣದಲ್ಲಿ ಏನೆಲ್ಲ ಅಭಿವೃದ್ಧಿ ಕಾಮಗಾರಿ:
ನಿಲ್ದಾಣದಲ್ಲಿ ರೂಫ್ ಪ್ಲಾಜಾವನ್ನು ರಚಿಸಲಾಗುವುದು. ಉಚಿತ ವೈಫೈ, 5G ಮೊಬೈಲ್ ಟವರ್‌ಗಳಿಗೆ ಸ್ಥಳಾವಕಾಶ, ರಸ್ತೆಗಳ ಅಗಲೀಕರಣ, ಅನಪೇಕ್ಷಿತ ರಚನೆಗಳನ್ನು ತೆಗೆಯುವುದು, ಸರಿಯಾಗಿ ವಿನ್ಯಾಸಗೊಳಿಸಿದ ಚಿಹ್ನೆಗಳ ಅಳವಡಿಕೆ, ಮೀಸಲಾದ ಪಾದಚಾರಿ ಮಾರ್ಗಗಳು, ಉತ್ತಮ ಪಾರ್ಕಿಂಗ್ ವ್ಯವಸ್ಥೆ, ಸುಧಾರಿತ ಬೆಳಕು, ಸುಗಮ ಪ್ರವೇಶ, ಕೆಫಟೇರಿಯಾ, ವೇದಿಕೆಗಳು, ವಿಶ್ರಾಂತಿ ಕೊಠಡಿಗಳು ಮತ್ತು ಕಚೇರಿಗಳು, ಅಂಗವಿಕಲರಿಗೆ ವಿಶೇಷ ಸೌಕರ್ಯಗಳು, ಉತ್ತಮ ಪೀಠೋಪಕರಣಗಳನ್ನು ಅಳವಡಿಸಲಾಗುವುದು ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಯಲಿದೆ.
ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಕೊಪ್ಪಳ ಹಾಗೂ ಮುನಿರಾಬಾದ್ ರೈಲು ನಿಲ್ದಾಣ ಆಯ್ಕೆಯಾಗಿದೆ. ಗಂಗಾವತಿ ರೈಲು ನಿಲ್ದಾಣದ ಪ್ರಸ್ತಾವನೆ ಕಳುಹಿಸಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಯೋಜನೆಯು ಹೊಸ ಸೌಕರ್ಯಗಳ ಪರಿಚಯ ಮತ್ತು ಅಸ್ತಿತ್ವದಲ್ಲಿರುವ ಸೌಕರ್ಯಗಳ ಉನ್ನತೀಕರಣ ಮಾಡಲಿದೆ.– ಸಂಗಣ್ಣ ಕರಡಿ, ಸಂಸದರು.
Comments are closed.