ಭಾಗ್ಯನಗರಕ್ಕೆ ಬೇಕು ಸರ್ಕಾರಿ ಪದವಿ ಕಾಲೇಜು ಅಭಿಯಾನದ ಪೂರ್ವಭಾವಿ ಸಭೆ
ಪದವಿ ಕಾಲೇಜು ಪಡೆಯಲು ರೂಪರೇಷ ತಯಾರಿಸಿ: ಪಾನಘಂಟಿ
ಉದ್ಯೋಗ ಸೃಷ್ಟಿಸುವ ಕೋರ್ಸುಗಳನ್ನು ಮಾಡಬೇಕು-ಶ್ರೀನಿವಾಸ ಗುಪ್ತಾ
ಕೊಪ್ಪಳ: ಭಾಗ್ಯನಗರಕ್ಕೆ ಬೇಕು ಸರ್ಕಾರಿ ಪದವಿ ಕಾಲೇಜು ಅಭಿಯಾನ ಆರಂಭವಾಗಿದ್ದು, ಇದಕ್ಕೆ ರೂಪರೇಷಗಳನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಹಿರಿಯ ವಕೀಲ ರಾಘವೇಂದ್ರ ಪಾನಘಂಟಿ ಹೇಳಿದರು.
ನಗರ ಸಮೀಪದ ಭಾಗ್ಯನಗರದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಭಾಗ್ಯನಗರಕ್ಕೆ ಬೇಕು ಸರ್ಕಾರಿ ಪದವಿ ಕಾಲೇಜು ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಶೈಕ್ಷಣಿಕವಾದ ಹಿನ್ನಲೆ ಭಾಗ್ಯನಗರಕ್ಕಿದೆ. ಕೊಪ್ಪಳದಿಂದ ಭಾಗ್ಯನಗರಕ್ಕೆ ಓದಲು ವಿದ್ಯಾರ್ಥಿಗಳು ಬರುತ್ತಾರೆ. ಪಿಯು ನಂತರ ಓದುವವರ ಪ್ರಮಾಣ ಕ್ಷೀಣಿಸಿದೆ. ಶೈಕ್ಷಣಿಕ ಅವಶ್ಯಕತೆಗಳನ್ನು ಸರ್ಕಾರವೇ ಪೂರೈಸಬೇಕು. ಸರ್ಕಾರದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೇ ಮಾಡಬೇಕು. ಮುಂದಿನ ವರ್ಷವೇ ಆಗಬೇಕು. ಭಾಗ್ಯನಗರದವರು ಬೇಡುವುದಿಲ್ಲ, ಬೇಡಿದರೆ ಬಿಡುವುದೂ ಇಲ್ಲ ಎಂದರು.
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಮಾತನಾಡಿ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಮಾತನಾಡಿ, ಎಷ್ಟು ಜನ ಶ್ರೀಮಂತರಿದ್ದಾರೋ, ಅದಕ್ಕಿಂತಲೂ ಹೆಚ್ಚು ಜನ ಬಡವರು ಇದ್ದಾರೆ. ಪದವಿ ಕಾಲೇಜು ಮಾತ್ರವಲ್ಲ, ಉದ್ಯೋಗ ಸೃಷ್ಟಿಸುವ ಕೋರ್ಸುಗಳನ್ನು ಮಾಡಬೇಕು ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ರಾಜಶೇಖರ್ ಪಾಟೀಲ್ ಅಂಗಡಿ, ೨ ಪದವಿ ಪೂರ್ವ ಕಾಲೇಜುಗಳಲ್ಲಿ ಪರೀಕ್ಷಾ ಕೇಂದ್ರ ಮಾಡಿದ್ದೇವೆ. ಪಟ್ಟಣದ ಪಿಯು ಕಾಲೇಜಿನಲ್ಲಿ ಶೇ. ೭೫ರಷ್ಟು ಮಹಿಳೆಯರೇ ಓದುತ್ತಿದ್ದಾರೆ. ಕೊಪ್ಪಳಕ್ಕೆ ತೆರಳಿ, ಓದಲು ತೊಂದರೆ ಆಗುತ್ತಿದೆ ಎಂದರು.
ಅಭಿಯಾನದ ಕೃಷ್ಣ ಇಟ್ಟಂಗಿ ಪ್ರಾಸ್ತಾವಿಕ ಮಾತನಾಡಿ, ಪಟ್ಟಣದಲ್ಲಿ ನಾಲ್ಕು ಪದವಿ ಪೂರ್ವ ಕಾಲೇಜುಗಳಿವೆ. ೧,೫೦೦ ವಿದ್ಯಾರ್ಥಿಗಳು ಓದುತ್ತಿದ್ದಾರೆ. ತನ್ನಿಂದ ತಾನಾಗಿಯೇ ಯಾವುದೇ ಸೌಲಭ್ಯ ದೊರೆತಿಲ್ಲ. ಪಟ್ಟಣಕ್ಕೆ ಪಡೆದ ಸೌಲಭ್ಯಗಳೆಲ್ಲವನ್ನೂ ಪಟ್ಟಣ ಪಂಚಾಯಿತಿ, ಮೇಲ್ಸೇತುವೆ ಹೋರಾಟ ಮಾಡಿಯೇ ಪಡೆದಿದ್ದೇವೆ ಎಂದರು.
ಭಾಗ್ಯನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ತುಕಾರಾಮಪ್ಪ ಗಡಾದ ಅಧ್ಯಕ್ಷತೆ ವಹಿಸಿದ್ದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಹೊನ್ನುರಸಾಬ್ ಬೈರಾಪುರ, ಹಿರಿಯ ವಕೀಲ ರಾಘವೇಂದ್ರ ಪಾನಘಂಟಿ, ಶಿಕ್ಷಣ ಪ್ರೇಮಿ ದಾನಪ್ಪ ಜಿ. ಕವಲೂರು, ಸಾಹಿತಿ ಡಿ.ಎಂ.ಬಡಿಗೇರ್, ಪ.ಪಂ.ಸದಸ್ಯರಾದ ರಮೇಶ ಹ್ಯಾಟಿ, ಮೋಹನ ಅರಕಲ್, ವಾಸುದೇವ ಮೇಘರಾಜ್, ಮುಖಂಡರಾದ ಕೊಟ್ರೇಶ ಶೇಡ್ಮಿ, ಸುರೇಶ ದರಗದಕಟ್ಟಿ ಸಿರಾಜ್ ಬಿಸರಳ್ಳಿ, ಅನಿಲ್ ಬಾಚನಹಳ್ಳಿ, ಪ್ರಬು ಗಾಳಿ ಇದ್ದರು.
ಸಭೆಯ ನಿರ್ಣಯಗಳು
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ದಿನದಂದು ಸಚಿವ, ಶಾಸಕರು, ಸಂಸದರು, ವಿಧಾನ ಪರಿಷತ್ ಪರಿಷತ್ ಸದಸ್ಯರಿಗೆ ಪದವಿ ಕಾಲೇಜು ಮಂಜೂರಾತಿಗೆ ಒತ್ತಾಯಿಸಿ ಮನವಿ ಸಲ್ಲಿಸಬೇಕು. ಸರ್ಕಾರಿ ಪದವಿ ಕಾಲೇಜು ಬೇಕು ಎನ್ನುವ ಸಮಿತಿ ರಚನೆ ಮಾಡಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
Comments are closed.