ಗಂಗಾವತಿ ಸಂಗೀತ ಕಲಾವಿದರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಸಿರುಗುಪ್ಪದಲ್ಲಿ ನಡೆದ ಸರ್ವಧರ್ಮ ಸಮ್ಮೇಳನ ಹಾಗೂ ಸಾಂಸ್ಕೃತಿಕ ಕಲೋತ್ಸವ
ಗಂಗಾವತಿ: ಮಲ್ಲಾಪುರ ಹೆಚ್.ಎಂ. ಹಿರೇಮಠ ಸಾರಥ್ಯದಲ್ಲಿ ಶ್ರೀ ಪುಟ್ಟರಾಜ ಸಾಂಸ್ಕೃತಿಕ ಕಲಾ ಬಳಗ ಸಿರುಗುಪ್ಪ ಇವರಿಂದ ಸೆಪ್ಟೆಂಬರ್-೨೯ ಭಾನುವಾರ ಸಿರುಗುಪ್ಪ ಪಟ್ಟಣದ ಬಳ್ಳಾರಿ ರಸ್ತೆಯ ವಿಜಯಮೇರಿ ಶಾಲೆಯ ಹತ್ತಿರದಲ್ಲಿ ಸರ್ವಧರ್ಮ ಸಮ್ಮೇಳನ ಹಾಗೂ ಸಾಂಸ್ಕೃತಿಕ ಕಲೋತ್ಸವ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸಾಧಕ-ಸಾಧಕಿಯರಿಗೆ ೨೦೨೪ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಗಂಗಾವತಿಯ ಮಹಮ್ಮದ್ ರಿಜ್ವಾನ್ ಮುದ್ದಾಬಳ್ಳಿಯವರು ಕಳೆದ ಹದಿನೈದು ವರ್ಷಗಳಿಂದ ವಿವಿಧ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಬಲಾ ಸೇವೆ ನೀಡುತ್ತಾ ಬಂದಿದ್ದು, ಸರ್ಕಾರಿ ಕಾರ್ಯಕ್ರಮಗಳಲ್ಲಿಯೂ ತಬಲಾ ವಾದನ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರು ತಮ್ಮದೇ ಆದ ಸಂಗೀತ ಶಾಲೆಯನ್ನು ತೆರೆದು ಮಕ್ಕಳಿಗೆ ಸಂಗೀತ ಹಾಗೂ ತಬಲಾ ಶಿಕ್ಷಣ ನೀಡುತ್ತಿದ್ದು, ಅವರ ತಾತನವರಾದ ಡಾ. ಫಕೃದ್ದೀನ್‌ಸಾಬ್ ಮುದ್ದಾಬಳ್ಳಿ ಹಾಗೂ ತಂದೆಯವರಾದ ರಾಜಾಸಾಬ್ ಮುದ್ಧಾಬಳ್ಳಿಯವರ ಸಂಗೀತ ಕೊಡುಗೆ ನೀಡಿದಂತೆ, ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಇವರ ಸಂಗೀತ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ತಬಲಾ ಯುವ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಅದೇರೀತಿ ಖ್ಯಾತ ಭಾನ್ಸುರಿ ಹಾಗೂ ಸಂಗೀತ ಕಲಾವಿದರಾದ ದಿ|| ಗೋವಿಂದರಾಜ ಬೊಮ್ಮಲಾಪುರರವರ ಮಗನಾದ ಪಂಚಾಕ್ಷರ ಕುಮಾರರವರು ಸುಗಮ ಸಂಗೀತ, ದಾಸವಾಣಿ, ವಚನ ಸಂಗೀತಗಳಲ್ಲಿ ಪಾಲ್ಗೊಂಡು ನಾಡಿನ ಅನೇಕ ಕಡೆಗಳಲ್ಲಿ ಹಾಗೂ ಸರ್ಕಾರದ ಕಾರ್ಯಕ್ರಮಗಲ್ಲಿ ಸಂಗೀತ ಸೇವೆಯನ್ನು ಸಲ್ಲಿಸಿದ್ದನ್ನು ಪರಿಗಣಿಸಿ ಅವರಿಗೆ ನಾದ ಬ್ರಹ್ಮ ಪ್ರಶಸ್ತಿ ನೀಡಲಾಗಿದೆ. ಉಡುಮಕಲ್‌ನ ಶಿವಲಿಂಗಯ್ಯಶಾಸ್ತ್ರೀ ಹಿರೇಮಠರವರು ಒಬ್ಬ ಪುರಾಣ ಪ್ರವಚನಕಾರರಾಗಿ, ಸಂಗೀತ ಕಲಾವಿದರಾಗಿ ನಾಡಿನ ವಿವಿಧ ಭಾಗಗಳಲ್ಲಿ ಪುರಾಣ ಹಾಗೂ ಸಂಗೀತ ಸೇವೆ ನೀಡಿದ್ದಕ್ಕಾಗಿ ಅವರಿಗೆ ಪುರಾಣ ಪ್ರವಚನ ರತ್ನ ಪ್ರಶಸ್ತಿ ನೀಡಲಾಗಿದೆ, ಅದೇರೀತಿ ದೊಡ್ಡಬಸವರಾಜ್ ನಾಗಲೀಕರ್‌ರವರು ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ನಡೆಯುವ ಪುರಾಣ ಪ್ರವಚನ ಹಾಗೂ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದನ್ನು ಗುರುತಿಸಿ ಅವರಿಗೆ ಗಾನ ಯುವ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಗಂಗಾವತಿಯ ಸಂಗೀತ ಕಲಾವಿದರ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿದ ಶ್ರೀ ಪುಟ್ಟರಾಜ ಸಾಂಸ್ಕೃತಿಕ ಕಲಾ ಬಳಗ ಸಿರುಗುಪ್ಪ ಅಧ್ಯಕ್ಷರಾದ ಹೆಚ್.ಎಂ. ಮಹಾದೇವಯ್ಯಸ್ವಾಮಿ ಹಿರೇಮಠರವರಿಗೆ ಗಂಗಾವತಿ ಕಲಾಬಳಗ ಧನ್ಯವಾದಗಳನ್ನು ತಿಳಿಸಿದೆ.
Comments are closed.