ಯಲಬುರ್ಗಾದ ಶ್ರೀ ಸಿದ್ದರಾಮೇಶ್ವರ ಸ್ವಾಮಿಗಳು ಪೀಠ ತ್ಯಾಗ ಮಾಡಲಿ : ಭಕ್ತರು
ಕೊಪ್ಪಳ : ಯಲಬುರ್ಗಾದ ಶ್ರೀ ಸಿದ್ದರಾಮೇಶ್ವರ ಹಿರೇಮಠದ ಸ್ವಾಮಿಗಳು ಮಠದ ಆಸ್ತಿಯನ್ನು ತಮ್ಮ ಪೂರ್ವಾಶ್ರಮದ ಸಹೋದರರ ಹೆಸರಿಗೆ ವರ್ಗಾಯಿಸಿದ್ದು ಆಸ್ತಿ ಮರಳಿ ಮಠಕ್ಕೆ ಕೊಟ್ಟು ಪೀಠತ್ಯಾಗ ಮಾಡಬೇಕು ಎಂದು ಮಠದ ಭಕ್ತರಾದ ಸುರೇಶಗೌಡರು ಆಗ್ರಹಿಸಿದರು.
ಅವರು ಶನಿವಾರದಂದು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಮಠದ ಆಸ್ತಿ ನೂರಾರು ಎಕರೆ ಇತ್ತು. ಅದರಲ್ಲಿ ಉಳಿದಿದ್ದು ಸುಮಾರು 250 ಎಕರೆ. ಅದರಲ್ಲಿ ಕಳೆದ ವರ್ಷ 70-80 ಎಕರೆ ತಮ್ಮ ಪೂರ್ವಾಶ್ರಮದ ಸಹೋದರರಾದ ವಾಗೀಶ್ ಪಂಡಿತ್ ,ಪ್ರಸನ್ನ ರೇಣುಕ ಅವರ ಹೆಸರಿಗೆ ವರ್ಗಾಯಿಸಿದ್ದಾರೆ.
ಇತ್ತೀಚಿಗೆ ಮಠದ ಸೇವಕ ಸಿದ್ದಯ್ಯ ಎಂಬುವವರನ್ನು ಮಠದಿಂದ ಹೊರಹಾಕಿದಾಗ ಭಕ್ತರು ಸೇರಿ ಪ್ರಶ್ನೆ ಮಾಡಲು ಮಠಕ್ಕೆ ಹೋಗಿದ್ದೇವು. ನಂತರ ಮಠದ ಆಸ್ತಿ ಬಗ್ಗೆ ಅನುಮಾನ ಬಂದು ಪರಿಶೀಲಿಸಿದಾಗ ಮಠದ ಆಸ್ತಿಯಲ್ಲಿ 70-80 ಎಕರೆ ಭೂಮಿ 2023 ರಲ್ಲಿ ಅವರ ಪೂರ್ವಾಶ್ರಮದ ಸಹೋದರರ ಹೆಸರಿಗೆ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ.
ಶ್ರೀ ಸಿದ್ದರಾಮೇಶ್ವರ ಸ್ವಾಮಿಗಳು ಮಠದ ಆಸ್ತಿ ಹೀಗೆ ಪರಭಾರೆ ಮಾಡಿ ಭಕ್ತರಿಗೆ ಮೋಸ ಮಾಡಿದ್ದಾರೆ. ಇದು ಧರ್ಮ ಬಾಹಿರ ಕಾರ್ಯ. ಕೂಡಲೇ ಸ್ವಾಮಿಗಳು ಆಸ್ತಿಯನ್ನು ಮಠಕ್ಕೆ ಮರಳಿಸಿ ಪೀಠ ತ್ಯಾಗ ಮಾಡಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ಅನಿವಾರ್ಯ.
ಶಿರಗುಂಪಿ ಗ್ರಾಮದ ಜಮೀನಿನಲ್ಲಿ ಕಳೆದ 70 ವರ್ಷಗಳಿಂದ ಕಬ್ಜಾ ವಹಿವಾಟು ಹೆುಾಂದಿ ಸಾಗುವಳಿ ಮಾಡಿಕೊಂಡು ಬಂದಿದ್ದು ಕುಟುಂಬ ನಿರ್ವಹಣೆಗೆ ಸಾಗುವಳಿ ಮಾಡುತ್ತಿರುವ ಗ್ರಾಮಸ್ಥರ ಹೆಸರಿಗೆ ಅಲಾಟ ಮಾಡಬೇಕು ಎಂದು ಒತ್ತಾಯಿಸಿದರು.
ಯಲಬುರ್ಗಾದ ಶ್ರೀ ಸಿದ್ದರಾಮೇಶ್ವರ ಹಿರೇಮಠ ಸ್ವಾಮೀಜಿ ಅವರು ಆಸ್ತಿ ಮಠಕ್ಕೆ ವಾಪಸ್ ಕೊಡಬೇಕು. ಆಸ್ತಿ ನಿರ್ವಹಣೆಗೆ ಮಠದ ಭಕ್ತರ ಸಮಿತಿ ರಚನೆಯಾಗಬೇಕು. ಇದಕ್ಕೆ ಒಪ್ಪದಿದ್ದಲ್ಲಿ ಕಾನೂನು ಹೋರಾಟಕ್ಕೂ ಮುಂದಾಗುತ್ತೇವೆ ಎಂದು ಅವರು ಹೇಳಿದರು.
ಮಠದ ಭಕ್ತರಾದ ವೀರನಗೌಡ ಬನ್ನಪ್ಪ ಗೌಡ್ರು,ಕಳಕಪ್ಪ ಹೂಗಾರ್ ಮಾತನಾಡಿ ಸ್ವಾಮಿಗಳ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಠದ ಭಕ್ತರಾದ ಸುಧಾಕರ್ ದೇಸಾಯಿ, ಬಸವರಾಜ್ ಅಧಿಕಾರಿ,ಶರಣಪ್ಪ ಗಾಂಜಿ, ಶಿವಪ್ಪ ಹಡಪದ, ಹನುಮಂತಪ್ಪ ಭಜಂತ್ರಿ, ದಲಿತ ಮುಖಂಡ ಬಸವರಾಜ್ ನಡವಲಮನಿ, ಯಮನೂರಪ್ಪ ಸಿರುಗುಂಪಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Comments are closed.