ಮನುವ್ಯಾದಿಗಳಿಗೆ ಶೋಷಿತರ ಮೀಸಲು ಕುರಿತು ಮಾತನಾಡುವ ನೈತಿಕತೆ ಇಲ್ಲ : ಜ್ಯೋತಿ ಗೊಂಡಬಾಳ
ಕೊಪ್ಪಳ : ರಾಜ್ಯ ಮತ್ತು ದೇಶದಲ್ಲಿರುವ ಸುಳ್ಳು ಭರವಸೆಗಳ ಮತ್ತು ಹುಸಿ ದೇಶ ಪ್ರೇಮಿಗಳ ಗ್ಯಾಂಗ್ ಮನುವ್ಯಾದಿಗಳಾಗಿದ್ದು ಅವರು ಶೋಷಿತರ ಮೀಸಲು ಕುರಿತು ಮಾತನಾಡುವ ನೈತಿಕತೆಯನ್ನೇ ಕಳೆದುಕೊಂಡಿದ್ದಾರೆ ಎಂದು ಗ್ಯಾರಂಟಿ ಸಮಿತಿ ಸದಸ್ಯೆ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಜ್ಯೋತಿ ಎಂ. ಗೊಂಡಬಾಳ ಟೀಕಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಬಿಜೆಪಿ ಸುಖಾಸುಮ್ಮನೆ ತಲೆಬುಡ ಇಲ್ಲದ ವಿಷಯಗಳನ್ನು ದೊಡ್ಡದಾಗಿಸುವ ಪ್ರಯತ್ನ ಮಾಡುತ್ತಲೇ ಇದ್ದು, ಕಾಂಗ್ರೆಸ್ ರಾಷ್ಟ್ರೀಯ ನೇತಾರರು, ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಮೀಸಲಾತಿ ಕುರಿತ ಹೇಳಿಕೆಯನ್ನು ದೊಡ್ಡದಾಗಿಸುತ್ತಿದ್ದಾರೆ.
ಬಿಜೆಪಿ ನಾಯಕರು ಸಂವಿಧಾನ ಬದಲಿಸುವ ಹೇಳಿಕೆ ನೀಡುತ್ತಲೇ ಅದನ್ನು ಬದಲಿಸಲು ಸಾಧ್ಯವಾಗದೇ ಅದರ ಅಸ್ತಿತ್ವವನ್ನು ಕಳೆಯುವ ಕೆಲಸ ಮಾತ್ರ ದಶಕದಿಂದ ನಿರಂತರವಾಗಿ ಸಾಗಿದೆ. ಸರಕಾರಿ ಕೆಲಸಗಳೇ ಇಲ್ಲವಾದ ಮೇಲೆ ಉದ್ಯೋಗ ಮೀಸಲಿಗೆ ಅರ್ಥವಿಲ್ಲ, ಸ್ಕಾಲರ್‌ಶಿಪ್ ತೀರಾ ಕಡಿಮೆ ಮಾಡಿದ ಮೇಲೆ ಅದಕ್ಕೆ ಬೆಲೆ ಇಲ್ಲ ಇನ್ನು ಅನೇಕ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗಾಗಿ ಮಾಡಿದ್ದ ಸಹಾಯಧನ (ಸಬ್ಸಿಡಿ) ಯೋಜನೆಗಳಿಗೆ ತಿಲಾಂಜಲಿ ಇಡಲಾಗಿದೆ, ಇರುವ ಯೋಜನೆಯ ಸಹಾಯಧನದ ಮೊತ್ತ ೧೦ ಲಕ್ಷದಿಂದ ಕೇವಲ ೧ ಲಕ್ಷಕ್ಕೆ ಇಳಿಸಲಾಗಿದೆ, ಇಂತಹ ಸಹಾಯಧನಕ್ಕೆ ಅರ್ಥವೇ ಇಲ್ಲ. ಇಂತಹ ಮೋಸದ ಆಟ ಆಡುತ್ತಿರುವ ಈ ಮನುವ್ಯಾದಿ ಬಿಜೆಪಿಗಳಿಗೆ ಪರಿಶಿಷ್ಟ ಜಾತಿ ಪಂಗಡದ ಜನರ ಬಗ್ಗೆ ಮಾತನಾಡುವ ಅರ್ಹತೆಯೂ ಇಲ್ಲವಾಗಿದೆ. ರಾಹುಲ್ ಗಾಂಧಿ ಅವರು ದಲಿತರಿಗೆ ಸಮಾನತೆ ಸಿಕ್ಕ ಮೇಲೆ ಮೀಸಲು ತೆಗೆಯುವ ಬಗ್ಗೆ ಯೋಚಿಸಬಹುದು ಎಂದಿದ್ದಾರೆ, ಇದೇ ಮಾತನ್ನು ಸ್ವತಃ ಅಂಬೇಡ್ಕರ್ ಅವರು ಹೇಳಿದ್ದರು. ಆದರೆ ಸಮಾನತೆ ಬರುವ ಪರಿಸ್ಥಿತಿ ಈಗ ಇನ್ನೂ ಕಾಣಿಸುತ್ತಿಲ್ಲ.
ವಿದ್ಯಾವಂತರೇ ಮುಂದೆ ನಿಂತು ಜಾತಿ ಮಾಡುತ್ತಿರುವಾಗ, ಮೀಸಲಿನ ಬಗ್ಗೆ ಕೊಂಕು ನುಡಿಯುತ್ತಿರುವಾಗ, ಸಮಾನತೆ ಬರುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ಈಗಲೂ ಅಂತರ್‌ಜಾತಿ ವಿವಾಹಕ್ಕೆ ವಿರೋಧಗಳು ಕಾಣಿಸುತ್ತಿದ್ದು, ಅನೇಕ ಕೊಲೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಸಾಮಾಜಿಕ ಸಮಾನತೆಯ ಮಾತೆಲ್ಲಿಂದ ಬಂತು. ಸಾವಿರಾರು ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬದೇ ದಶಕಗಳನ್ನು ದೂಡುತ್ತಿರುವಾಗ ಉದ್ಯೋಗ ಮೀಸಲಿಗೆ ಅರ್ಥವೇ ಇಲ್ಲ. ಹೀಗೆ ರಾಜಕೀಯ ಮೀಸಲಾತಿಯಲ್ಲಿ ಸಹ ನಿಜವಾದ ಶೋಷಿತರಿಗೆ ಅನ್ಯಾಯ ಆಗುತ್ತಲೇ ಇದೆ. ಹಾಗಾಗಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಸಮಾನತೆ ಬರುವ ಕಾಲ ಬಹಳ ದೂರವಿದ್ದು ಜನ ಬದಲಾಗದ ಹೊರತು ಸಮಾನತೆ ಸಾಧ್ಯವಿಲ್ಲ. ಬಿಜೆಪಿ ಕೆಲವು ಜನರನು ದಲಿತರ ವಿರುದ್ಧ ಕೆಲಸ ಮಾಡಲು ನೇಮಿಸಿಕೊಂಡಿದ್ದಾರೆ, ಅವರು ಜಾತಿಯಿಂದ ದಲಿತರಾಗಿದ್ದರೂ ಸಹ ಅಧಿಕಾರಕ್ಕಾಗಿ ದಲಿತರಿಗೆ ಮೋಸ ಮಾಡುತ್ತಿದ್ದು ಅವರ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಜ್ಯೋತಿ ಗೊಂಡಬಾಳ ಮನವಿ ಮಾಡಿದ್ದಾರೆ.
Comments are closed.