ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಡಿ.ಸಿ. ನಲಿನ್ ಅತುಲ್ ಸಲಹೆ
ಕೊಪ್ಪಳ ಜಿಲ್ಲೆಯ ಶೈಕ್ಷಣಿಕ, ಆರೋಗ್ಯ ಕ್ಷೇತ್ರಗಳ ಬಲವರ್ಧನೆಗೆ ಶ್ರಮಿಸೋಣ
ಕೊಪ್ಪಳ ಜಿಲ್ಲೆಯಲ್ಲಿ ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಬಲವರ್ಧನೆಯಾಗಬೇಕಿದೆ. ಮಕ್ಕಳಲ್ಲಿ ಕಂಡು ಬರುತ್ತಿರುವ ಅಪೌಷ್ಠಿಕತೆಯನ್ನು ಹೋಗಲಾಡಿಸಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯಕ್ಷಮತೆ ಹೆಚ್ಚಬೇಕಿದೆ ಎಂದು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಹೇಳಿದರು.
77ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಸೆಪ್ಟೆಂಬರ್ 17ರಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸಂವಿಧಾನದ 371(ಜೆ) ವಿಶೇಷ ಸೌಲಭ್ಯ ದೊರೆತ ನಂತರ ಈ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೊಸ ಆಶಾಕಿರಣ ಮೂಡಿತು. 2013ರ ನಂತರ ಉದ್ಯೋಗ ಮತ್ತು ಶಿಕ್ಷಣದಲ್ಲಿ ವಿಶೇಷ ಮೀಸಲು ಸೌಲಭ್ಯ ದೊರೆಯಿತು. ಮೀಸಲು ಸೌಕರ್ಯ ಪಡೆದುಕೊಂಡು ಸಾವಿರಾರು ವಿದ್ಯಾರ್ಥಿಗಳು ನೌಕರಿ ಗಿಟ್ಟಿಸಿ ಅನೇಕ ಕುಟುಂಬಗಳು ನೆಮ್ಮದಿಯ ಬದುಕು ಕಾಣುವಂತಾಗಿದೆ ಎಂದು ತಿಳಿಸಿದರು.
ಕೊಪ್ಪಳ ಜಿಲ್ಲೆ ಸೇರಿದಂತೆ ಸುತ್ತಲಿನ ವಿವಿಧ ಜಿಲ್ಲೆಗಳನ್ನೊಳಗಂಡ ಈ ಕಲ್ಯಾಣ ಕರ್ನಾಟಕ ಪ್ರದೇಶವು ಶೈಕ್ಷಣಿಕ ಮತ್ತು ಔದ್ಯೋಗಿಕ ಸೇರಿದಂತೆ ಬೇರೆ ಬೇರೆ ರಂಗಗಳಲ್ಲಿ ದಿನೇದಿನೆ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎನ್ನುವ ಗಟ್ಟಿ ಸಂದೇಶ ರವಾನೆಯಾಗಬೇಕು. ಈ ನಿಟ್ಟಿನಲ್ಲಿ ನಾಗರಿಕರ ಬೆಳವಣಿಗೆಗೆ ಹಾಗೂ ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗವು ಪ್ರಾಮಾಣಿಕವಾಗಿ ಶ್ರಮಿಸಬೇಕು. ಜಿಲ್ಲೆಯ ಅಭಿವೃದ್ಧಿಗಾಗಿ ಅಧಿಕಾರಿಗಳು ಬದ್ಧತೆಯನ್ನು ಹೊಂದಬೇಕು. ಅಧಿಕಾರಿಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಮಲ್ಲಪ್ಪ ತೊದಲಬಾಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರೇಷ್ಮಾ ಹಾನಗಲ್, ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
Comments are closed.