ಹಾಲು ಬೆಲೆ ಕಡಿತಕ್ಕೆ ತಡೆ ನೀಡಿ, ರೈತರಿಗೆ ನ್ಯಾಯ ಒದಗಿಸಿ: ಸಿವಿಸಿ

Get real time updates directly on you device, subscribe now.

ಕೊಪ್ಪಳ: ಬಳ್ಳಾರಿ, ವಿಜಯನಗರ, ರಾಯಚೂರು ಹಾಗೂ ಕೊಪ್ಪಳ ಹಾಲು ಒಕ್ಕೂಟ ಹಾಲು ಉತ್ಪಾದಕರಿಗೆ ನೀಡುವ ಹಣದಲ್ಲಿ ಕಡಿತ ಮಾಡಿರುವ ಆದೇಶವನ್ನು ಸರಕಾರ ಈ ಕೂಡಲೇ ಹಿಂದೆ ಪಡೆಯಬೇಕು. ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಜೆಡಿ (ಎಸ್) ರಾಜ್ಯ ಕೋರ್ ಕಮಿಟಿ ಸದಸ್ಯರಾದ  ಸಿ ವಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ.
ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಹಾಲು ಒಕ್ಕೂಟವು ನಷ್ಟ ಅನುಭವಿಸುತ್ತಿದೆ ಎಂಬ ಕಾರಣ ನೀಡಿ ರೈತರಿಗೆ ನೀಡುವ ಹಣದಲ್ಲಿ ಕಡಿತ ಮಾಡಿರುವುದು ಅಕ್ಷಮ್ಯ. ಒಕ್ಕೂಟಗಳು ಪ್ರತಿ ಲೀಟರ್ ಹಾಲಿಗೆ ಗರಿಷ್ಠ 30.50 ರೂ.ನೀಡಿ ಖರೀದಿ ಮಾಡುತ್ತಿದ್ದವು. ಆದರೀಗ 1.5 ರೂ. ಕಡಿತಗೊಳಿಸಿ ರೈತರಿಗೆ ಪ್ರತಿ ಲೀಟರ್ ಗೆ 28, 29 ರೂ. ನೀಡುತ್ತಿವೆ. ಕಳೆದ 10 ವರ್ಷಗಳ ಅವಧಿಯಲ್ಲಿ ಅನೇಕ ಸಲ ಒಂದು ಲೀಟರ್ ಹಾಲಿನ ಬೆಲೆ ಹೆಚ್ಚಿಸಲಾಗಿದೆ. ಬೆಲೆ ಹೆಚ್ಚಳದಿಂದ ಗ್ರಾಹಕರ ಮೇಲೆ ಹೊರೆ ಬಿದ್ದಿದೆ. ಇದೆ ಅವಧಿಯಲ್ಲಿ ರೈತರಿಗೆ ಸಿಗುತ್ತಿದ್ದ ಆದಾಯದಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ದರ ಹೆಚ್ಚಳದ ಲಾಭ ಸರಕಾರಕ್ಕೆ ಆಗಿದೆ. ವಾಸ್ತವದಲ್ಲಿ ರೈತರು ನಷ್ಟ ಅನುಭವಿಸುತ್ತಿದ್ದಾರೆಯೇ ಹೊರತು ಒಕ್ಕೂಟಗಳಲ್ಲ. ಹಾಗೆ ನೋಡಿದರೆ ರೈತರಿಗೆ ಸಿಗುತ್ತಿದ್ದ ಲಾಭಾಂಶದಲ್ಲಿ ಏರಿಕೆಯಾಗಬೇಕು. ಆದರೆ ರೈತ ವಿರೋಧಿ ಕಾಂಗ್ರೆಸ್ ಸರಕಾರದಿಂದ ಇದನ್ನು ನಿರೀಕ್ಷಿಸಲು ಸಾಧ್ಯವಿಲ್ಲ‌ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ಯಾರಂಟಿ, ಗ್ಯಾರಂಟಿ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಬೆಲೆ ಕಡಿತದ ಮೂಲಕ ‘ರೈತರ ಶೋಷಣೆ ಗ್ಯಾರಂಟಿ’ಯನ್ನು ಜಾರಿಗೊಳಿಸಿದೆ ಎಂದು ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ಸರಕಾರ ಇತ್ತೀಚೆಗೆ ಪ್ರತಿ ಲೀಟರ್ ಹಾಲಿನ ಬೆಲೆಯನ್ನು ಎರಡು ರೂಪಾಯಿ ಹೆಚ್ಚಳ ಮಾಡಿತು. ಇದರಿಂದ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬಿದ್ದಿತು. ಅಂದು ಗ್ರಾಹಕರನ್ನು ಶೋಷಿಸಿದ್ದ ಕಾಂಗ್ರೆಸ್ ಸರಕಾರ ಇಂದು ರೈತರ ಶೋಷಣೆಗೆ ಇಳಿದಿದೆ.
ಈ ಕೂಡಲೇ ಸರಕಾರ ಈ ನಿರ್ಧಾರವನ್ನು ಹಿಂಪಡೆಯಬೇಕು. ರೈತರಿಗೆ ಸಿಗುವ ಲಾಭಾಂಶದಲ್ಲಿ ಹೆಚ್ಚಳ ಮಾಡಬೇಕು. ಇಲ್ಲದಿದ್ದರೆ ರೈತರ ಪಕ್ಷವಾದ ಜೆಡಿ (ಎಸ್) ತೀವ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ ಎಂದು ಅವರು ಎಚ್ಚರಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!